ಗ್ರಾಮೀಣ ಪ್ರದೇಶಗಳಲ್ಲಿ ಬಯಲು ಬಹಿರ್ದೆಸೆ ಮುಕ್ತಗೊಳಿಸಬೇಕು

Spread the love

chintamani--panchayath

ಚಿಂತಾಮಣಿ, ಸೆ.22- ಗ್ರಾಮೀಣ ಪ್ರದೇಶಗಳಲ್ಲಿ ಬಯಲು ಬಹಿರ್ದೆಸೆ ಇನ್ನೂ ಕೂಡ ಜೀವಂತವಾಗಿರುವುದು ಪ್ರಜ್ಞಾವಂತ  ಸಮಾಜವು ಮತ್ತು ನಾಗರಿಕರು ತಲೆ ತಗ್ಗಿಸಬೇಕಾದ ದುಸ್ಥಿತಿಯೆಂದು ತಾಲೂಕು ಪಂಚಾಯ್ತಿ ಕಾರ್ಯ ನಿರ್ವಹಣಾಧಿಕಾರಿ ಸಿ.ಶ್ರೀನಿವಾಸ್ ಕಳವಳ ವ್ಯಕ್ತಪಡಿಸಿದರು.  ಅವರು ಜಿಲ್ಲಾ ಪಂಚಾಯತ್ ಮತ್ತು ತಾಲ್ಲೂಕು ಪಂಚಾಯತ್ ಹಾಗೂ ಕೋಟಗಲ್ ಗ್ರಾಮ ಪಂಚಾಯ್ತಿ ಸಂಯುಕ್ತಾಶ್ರಯದಲ್ಲಿ 2016-17ನೇ ಸಾಲಿನ ವಸತಿ ಯೋಜನೆಗಳ ಫಲಾನುಭವಿಗಳ ಆಯ್ಕೆ ಮತ್ತು ಸಾಮಾಜಿಕ ಲೆಕ್ಕ ಪರಿಶೋಧನಾ ಸಭೆ ಸೇರಿದಂತೆ ಗ್ರಾಮ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.

ಅಂಬೇಡ್ಕರ್ ವಸತಿ ಯೋಜನೆ ಹಾಗೂ ಪ್ರಧಾನಮಂತ್ರಿ ಆವಾಜ್ ಯೋಜನೆ ಸೇರಿದಂತೆ ವಸತಿ ಯೋಜನೆಗಳಡಿಯಲ್ಲಿ ಮನೆಗಳನ್ನು ನಿರ್ಮಿಸಿಕೊಳ್ಳುವ ಪ್ರತಿ ಫಲಾನುಭವಿಯು ಕಡ್ಡಾ ಯವಾಗಿ ಶೌಚಾಲಯನ್ನು ನಿರ್ಮಿಸಿಕೊಳ್ಳಬೇಕು ಅದನ್ನು ಸ್ವಚ್ಛವಾಗಿಟ್ಟುಕೊಂಡು ನೈರ್ಮಲ್ಯವನ್ನು ಕಾಪಾಡಿಕೊಳ್ಳುತ್ತಾ ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಮುಂದಾಗಿ ಬಯಲು ಬಹಿರ್ದೆಸೆ ಮುಕ್ತ ಗ್ರಾಮಗಳನ್ನಾಗಿಸಲು ಅಧಿಕಾರಿಗಳು ಸೇರಿದಂತೆ ಸ್ಥಳೀಯ ಜನಪ್ರತಿನಿಧಿಗಳು ಪಣ ತೊಡಬೇಕೆಂದು ಕರೆ ನೀಡಿದರು. ವಸತಿ ಯೋಜನೆಗಳ ಫಲಾನುಭವಿಗಳಿಗೆ ಕಾರ್ಯಾನುದೇಶ ಪತ್ರ ನೀಡಿದ ಮೂರು ತಿಂಗಳೊಳಗೆ ಮನೆಗಳನ್ನು ನಿರ್ಮಿಸಿಕೊಳ್ಳಬೇಕು ಹಾಗೂ ಕಡ್ಡಾಯವಾಗಿ ಶೌಚಾಲಯವನ್ನು ನಿರ್ಮಿಸಿಕೊಳ್ಳುವುದು ಸೇರಿದಂತೆ ಹಂತ ಹಂತವಾಗಿ ಸರಕಾರದಿಂದ ಬಿಡುಗಡೆಗೊಳ್ಳುವ ಅನುದಾನಗಳಮಾಹಿತಿ ಮತ್ತು ಶೌಚಾಲಯಗಳ ನಿರ್ಮಾಣಕ್ಕೆ ಸಿಗುವ ಅನುದಾನಗಳ ಕುರಿತು ಸಭೆಯಲ್ಲಿ ವಿವರವಾಗಿ ಮಂಡಿಸಿದರು.

ಎನ್.ಆರ್.ಎಲ್.ಎಂ. ಯೋಜನೆಯಡಿಯಲ್ಲಿ ಮೀಸಲಾತಿಯಂತೆ ಸ್ತ್ರೀ-ಶಕ್ತಿ ಮತ್ತು ಸ್ವ-ಸಹಾಯ ಸಂಘಗಳಿಗೆ ಸುತ್ತು ನಿಧಿ ಸೇರಿದಂತೆ ಸಾಲ ಮತ್ತು ಸಹಾಯ ಧನದ ಕುರಿತು ಹೇಳಿದರು.ತಾಪಂ ಅಧ್ಯಕ್ಷಣಿ ಶಾಂತಮ್ಮ ವರದರಾಜ್, ಜಿಪಂ ಸದಸ್ಯ ಶ್ರೀನಿವಾಸ್, ತಾಪಂ ಉಪಾಧ್ಯಕ್ಷ ಪಿ.ಶ್ರೀನಿವಾಸ್, ಸದಸ್ಯ ವೆಂಕಟಪತಿ, ನೋಡಲ್ ಅಧಿಕಾರಿ ಸಿದ್ಧನಾರಾಯಣಸ್ವಾಮಿ, ವಸತಿ ನೋಡಲ್ ಅಧಿಕಾರಿ ವೆಂಕಟೇಶ್, ಪಿ.ಡಿ.ಓ. ಎಸ್.ಕೆ.ಭಾಗ್ಯಮ್ಮ ಉಪಸ್ಥಿತರಿದ್ದರು.

 

► Follow us on –  Facebook / Twitter  / Google+

Facebook Comments

Sri Raghav

Admin