ಚಂದ್ರನ ಮೇಲೆ ಕೊನೆಯ ಬಾರಿ ಕಾಲಿಟ್ಟಿದ್ದ ಗಗನಯಾತ್ರಿ ಯುಜೀನ್ ಸೆರ್ನನ್ ಇನ್ನಿಲ್ಲ

Spread the love

Moon-01

ವಾಷಿಂಗ್ಟನ್, ಜ.17– ಚಂದ್ರನ ಮೇಲೆ ಕೊನೆಯ ಬಾರಿ ಕಾಲಿಟ್ಟಿದ್ದ ಅಮೆರಿಕದ ಗಗನಯಾತ್ರಿ ಯುಜೀನ್ ಸೆರ್ನನ್ ಸಾವನ್ನಪ್ಪಿದ್ದಾರೆ. ಅಮೆರಿಕಾದ ಅಪೋಲೊ 17ನ ಬಾಹ್ಯಾಕಾಶ ಕಮಾಂಡರ್ ಆಗಿದ್ದ ಇವರು ಕಳೆದ 1972ರ ಡಿಸೆಂಬರ್‍ನಲ್ಲಿ ಮೂರು ಬಾರಿ ಬಾಹ್ಯಾಕಾಶ ಯಾನ ಕೈಗೊಂಡ ಕೀರ್ತಿ ಹೊಂದಿದ್ದರು. ಇತ್ತೀಚೆಗಷ್ಟೇ ತಮ್ಮ 82ನೇ ವರ್ಷದ ಹುಟ್ಟುಹಬ್ಬವನ್ನು ಸಂಭ್ರಮದಿಂದ ಆಚರಿಸಿಕೊಂಡಿದ್ದರು. ಅನಾರೋಗ್ಯ ಪೀಡಿದ್ದರಾಗಿದ್ದರೂ  ಲವಲವಿಕೆಯಿಂದಲೇ ಇದ್ದರು. ಆದರೆ, ಇಂದು ಬೆಳಗ್ಗೆ ನಿಧನರಾಗಿದ್ದಾರೆ.

ಚಂದ್ರನ ಮೇಲೆ ಕಾಲಿರಿಸಿದ ಗಗನಯಾತ್ರಿಗಳ ಪೈಕಿ ಇವರು (ಈವರೆಗಿನ) ಕೊನೆಯವರು. ಇವರಿಗೆ ಬಾಹ್ಯಾಕಾಶ ಯಾನದ ಬಗ್ಗೆ ಅಪಾರ ಉತ್ಸಾಹ ಹಾಗೂ ಒಲವಿತ್ತು. ಯುವಜನತೆ ಬಾಹ್ಯಾಕಾಶ ಕ್ಷೇತ್ರದಲ್ಲಿ ಮತ್ತಷ್ಟು ಸಾಧನೆ ಮಾಡಬೇಕೆಂದು ಅವರು ಬಯಸಿದ್ದರು ಎಂದು ನಾಸಾ ಬಾಹ್ಯಾಕಾಶ ಕೇಂದ್ರದ ವಿಜ್ಞಾನಿಗಳು ಹೇಳಿದ್ದಾರೆ. 1934ರಲ್ಲಿ ಚಿಕಾಗೋದಲ್ಲಿ ಜನಿಸಿದ್ದ ಅವರು ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ಪದವೀಧರರು. ವೈಮಾನಿಕ ಎಂಜಿನಿಯರಿಂಗ್‍ನಲ್ಲಿ ಉನ್ನತ ಶಿಕ್ಷಣ ಪಡೆದ ನಂತರ 1963ರಲ್ಲಿ ನಾಸಾ ಪ್ರವೇಶಕ್ಕೆ ಆಯ್ಕೆಯಾದ ಗಗನಯಾತ್ರಿಗಳಲ್ಲಿ ಯುಜೀನ್ ಕೂಡ ಒಬ್ಬರಾಗಿದ್ದರು.

566 ಗಂಟೆಗಳನ್ನು ಬಾಹ್ಯಾಕಾಶದಲ್ಲಿ ಕಳೆದಿರುವ ಯುಜೀನ್, ಚಂದ್ರನ ಮೇಲೆ 73 ಗಂಟೆಗಳ ಕಾಲ ಇದ್ದರು. ಅವರ ಬದುಕನ್ನು ಆಧರಿತ ಡಾಕ್ಯುಮೆಂಟರಿ ದಿ ಲಾಸ್ಟ್ ಮ್ಯಾನ್ ಆನ್ ದಿ ಮೂನ್ 2016ರಲ್ಲಿ ಬಿಡುಗಡೆಯಾಗಿತ್ತು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Sri Raghav

Admin