ಚಂಪಾರಣ್ ಚಳವಳಿಗೆ 100 ವರ್ಷ :`ಮಹಾತ್ಮ’ನಾದ ತುಂಡು ಬಟ್ಟೆಯ ಫಕೀರ

gandhi
ಭಾರತದ ಮಹಾ ಸ್ವಾತಂತ್ರ್ಯ ಸಂಗ್ರಾಮಕ್ಕೆ ಪ್ರೇರಕ ಶಕ್ತಿಯಾದ ಬಿಹಾರದ ಚಂಪಾರಣ್ ಚಳುವಳಿಗೆ ಇಂದಿಗೆ 100 ವರ್ಷ. ಈ ಸತ್ಯಾಗ್ರಹದ ಸಾಫಲ್ಯತೆಯೇ ಗಾಂಧೀಜಿಯನ್ನು ಸ್ವಾತಂತ್ರ್ಯ ಹೋರಾಟಕ್ಕೆ ಹುರಿದುಂಬಿಸಿತು. ಆ ಸಂದರ್ಭದ ಸವಿನೆನಪಿಗಾಗಿ ಈ ಲೇಖನ.

ಭಾರತ ಸ್ವಾತಂತ್ರ್ಯ ಸಂಗ್ರಾಮದ ಮುಖ್ಯ ಘಟ್ಟಗಳಲ್ಲಿ ಒಂದಾದ ಚಂಪಾರಣ್ಯ ಸತ್ಯಾಗ್ರಹಕ್ಕೆ ಈಗ 100 ವರ್ಷ. ಗಾಂಧೀಜಿಯವರ ಸ್ವಾತಂತ್ರ್ಯ ಹೋರಾಟಕ್ಕೆ ದೊಡ್ಡ ಮಟ್ಟದ ಪ್ರೇರಣೆ ನೀಡಿದ್ದೇ ಈ ಚಳವಳಿ.ಗಾಂಧೀಜಿಯವರ ಸ್ವಾತಂತ್ರ್ಯ ಹೋರಾಟವು ಸತ್ಯಾಗ್ರಹ, ಸ್ವದೇಶಿ ಮಂತ್ರ. ಸತ್ಯ ಮತ್ತು ಅಹಿಂಸೆಯ ತತ್ವವಾಗಿತ್ತು. ಹಿಂಸೆಗೆ ಚಿಕ್ಕ ಗುಂಪು ಸಿದ್ದವಾದರೆ, ಚಳವಳಿಯಲ್ಲಿ ಭಾಗವಹಿಸಲು ಜನಸಮೂಹವೇ ಸಿದ್ದವಾಗುತ್ತದೆ ಎಂಬುದು ಇವರ ತತ್ವದ ಸಾರವಾಗಿತ್ತು. ಸ್ವದೇಶಿ ಮಂತ್ರ ಗಾಂಧೀಜಿಯವರ ಒಂದು ರಾಷ್ಟ್ರೀಯ ಅಸ್ತ್ರವಾಗಿತ್ತು.

ಗಾಂಧೀಜಿಯವರು ಅಲಹಾಬಾದ್‍ಗೆ ತೆರಳಿ ಬಟ್ಟೆ ಗಿರಣಿ ಕಾರ್ಮಿಕರ ಮತ್ತು ಮಾಲೀಕರ ನಡುವೆ ಉಂಟಾಗಿದ್ದ ಬಿಕ್ಕಟ್ಟನ್ನು ಬಗೆಹರಿಸಿದರು. ಸಮಸ್ಯೆ ಪರಿಹಾರಕ್ಕೆ ಅವರು ಕಂಡುಕೊಂಡ ಮಾರ್ಗ ಅಮರಣಾಂತ ಉಪವಾಸ. 21 ದಿನ ಮುಷ್ಕರ ಹೂಡಿ ಬಿಕ್ಕಟ್ಟನ್ನು ಬಗೆಹರಿಸುವಲ್ಲಿ ಯಶಸ್ವಿಯಾದರು. ಬಿಹಾರದ ಚಂಪಾರಣ್ಯದಲ್ಲಿ ಕರಭಾರದಿಂದ ತತ್ತರಿಸುತ್ತಿದ್ದ ಕಡು ಬಡವರಾದ ಕೃಷಿಕರು, ತಿನ್ನುವ ಧಾನ್ಯವನ್ನೇ ಮಾರಿ ವಾಣಿಜ್ಯ ಬೆಳೆ ತೆಗೆಯಲು ಒತ್ತಾಯಕ್ಕೆ ಒಳಗಾದ ಭೂಮಿ ಇಲ್ಲದ ರೈತರ ಹಾಗೂ ತಿನ್ನಲೂ ಸಾಲದಷ್ಟು ಸಂಬಳ ಪಡೆಯುತ್ತಿದ್ದವರ ಪರವಾಗಿ ಗಾಂಧಿ ನಿಂತರು. 1917ರ ಏಪ್ರಿಲ್ ಎರಡನೇ ವಾರದಲ್ಲಿ ಆರಂಭವಾದ ಈ ಹೋರಾಟ ಗಾಂಧೀಜಿಯವರಿಗೆ ದೊಡ್ಡ ಯಶಸ್ಸನ್ನು ತಂದುಕೊಟ್ಟಿತು. ಇದು ಅವರ ಸ್ವಾತಂತ್ರ್ಯ ಸಂಗ್ರಾಮಕ್ಕೆ ನವೋಲ್ಲಾಸದ ಸ್ಫೂರ್ತಿ ನೀಡಿತು. ಚಂಪಾರಣ್ಯದ ಅವರ ಗೆಲುವಿನೊಂದಿಗೆ ಗಾಂಧಿಯವರಿಗೆ ಮಹಾತ್ಮ ಎಂದು ಜನರು ಅಭಿಮಾನದಿಂದ ಕರೆಯಲಾರಂಭಿಸಿದರು.

ಈ ಚಳವಳಿಯ ಮುಖ್ಯ ಉದ್ದೇಶ ಬ್ರಿಟಿಷರು ಭಾರತೀಯರಿಗೆ ತೆರಿಗೆ ವಿನಾಯಿತಿ ನೀಡಲು ನಿರಾಕರಿಸಿದ್ದು. ರೈತರು ಸರ್ಕಾರಕ್ಕೆ ಯಾವುದೇ ತೆರಿಗೆಯನ್ನು ನೀಡುವುದಿಲ್ಲವೆಂದು ಪ್ರತಿಭಟಿಸಿದ ಸತ್ಯಾಗ್ರಹವೇ ಚಂಪಾರಣ್ಯ ಮತ್ತು ಖೈಡಾ ಚಳವಳಿ. ಪಟ್ಟಿದಾರರು ಸತ್ಯಾಗ್ರಹ ಹೂಡುವಂತೆ ಗಾಂಧೀಜಿ ಸಲಹೆ ಮಾಡಿದರು. ಚಂಪಾರಣ್ಯ ಮತ್ತು ಖೈಡಾ ಜಿಲ್ಲೆಯ ಸ್ವಯಂ ಸೇವಕರ ಜೊತೆಗೆ ಈ ಹೋರಾಟದಲ್ಲಿ ವಲ್ಲಭ ಬಾಯಿ ಪಟೇಲ್, ಮಹದೇವ ದೇಸಾಯಿ, ಶಂಕರ್ ಲಾಲ್ ಬ್ಯಾಂಕರ್, ಇಂದುಲಾಲ್ ಯಜ್ಞಿಕ್, ಅನಸೂಯ ಬೆಹನ್ ಗಾಂಧೀಜಿ ಅವರಿಗೆ ಬೆಂಬಲವಾಗಿ ನಿಂತರು. 3000ಕ್ಕೂ ಅಧಿಕ ಸತ್ಯಾಗ್ರಹಿಗಳ ರೈತರ ಗುಂಪು ಈ ಚಳವಳಿಯಲ್ಲಿ ಭಾಗವಹಿಸಿತ್ತು. ಅತ್ಯಂತ ಶ್ರೀಮಂತ ವೃತ್ತಿಯಾದ ಬ್ಯಾರಿಸ್ಟರ್ ಪದವಿಯನ್ನು ತೊರೆದು ವಲ್ಲಭ ಬಾಯಿ ಪಟೇಲ್ ಗಾಂಧೀಜಿಯವರ ಅನುಯಾಯಿಯಾದರು.

ಭಾರತವು ಸ್ವರಾಜ್ಯವನ್ನು ಗಳಿಸುವಲ್ಲಿ ಸಂಪೂರ್ಣವಾಗಿ ತಮ್ಮದೇ ಆದ ಮಾರ್ಗದ ಆಯ್ಕೆ ಮಾಡುವಲ್ಲಿ ಬಹುಮಟ್ಟಿಗೆ ಮಹಾತ್ಮ ಗಾಂಧಿಯವರು ಕಾರಣ. ಇಂಗ್ಲೆಂಡ್‍ನಲ್ಲಿ ಶಿಕ್ಷಣ ಪಡೆದ ನಂತರ ಅವರು ದಕ್ಷಿಣ ಆಫ್ರಿಕಾದಲ್ಲಿ ವಕೀಲ ವೃತ್ತಿ ಆರಂಭಿಸಿದರು. ಅವರು ಆಫ್ರಿಕಾದಲ್ಲಿನ ಭಾರತೀಯ ಸಮಾಜದ ಪರವಾಗಿ ನ್ಯಾಯಬದ್ದ ಕಾರಣಗಳಿಗಾಗಿ ಹೋರಾಟವನ್ನು ಕೈಗೆತ್ತಿಕೊಂಡ ಕಾರಣ ಅವರ ವಕೀಲಿ ವೃತ್ತಿಯು ಅತಿ ಕಡಿಮೆ ಅವಧಿಯದ್ದಾಗಿತ್ತು. 1893ರಲ್ಲಿ ಗಾಂಧಿ ದಕ್ಷಿಣ ಆಫ್ರಿಕಾದಲ್ಲಿ ಒಪ್ಪಂದಕ್ಕೆ ಒಳಪಟ್ಟು ಕೆಲಸ ಮಾಡುವ ಭಾರತೀಯ ಕಾರ್ಮಿಕರನ್ನು ಪ್ರತಿನಿಧಿಸಲು ಬಂದ ಆಹ್ವಾನವನ್ನು ಒಪ್ಪಿಕೊಂಡರು. ಅಲ್ಲಿ ಅವರು 20ಕ್ಕೂ ಹೆಚ್ಚು ವರ್ಷಗಳ ಜನಾಂಗೀಯ ಪಕ್ಷಪಾತ ಮತ್ತು ವರ್ಣಬೇಧ ನೀತಿಯನ್ನು ವಿರೋಧಿಸುತ್ತ ಹೋರಾಟದ ಬದುಕು ನಡೆಸಿದರು.

ಗಾಂಧಿಯವರ ಹೋರಾಟವು ಕೇವಲ ಮೂಲಭೂತ ಪಕ್ಷಪಾತ ಮತ್ತು ಕಾರ್ಮಿಕರೊಂದಿಗೆ ದುವ್ರ್ಯವಹಾರಗಳ ವಿರುದ್ದ ಅಷ್ಟೇ ಅಗಿರದೆ ರೌಲತ್ ಕಾಯ್ದೆಗಳಂಥ ದಮನಕಾರಿ ಪೊಲೀಸ್ ಕ್ರಮಗಳ ವಿರುದ್ದವೂ ಆಗಿತ್ತು. ಅನೇಕ ತಿಂಗಳುಗಳ ಅಹಿಂಸಾತ್ಮಕ ಪ್ರತಿಭಟನೆ ಮತ್ತು ಸಾವಿರಾರು ಕರಾರು ಕೂಲಿಗಳ ಬಂಧನದ ನಂತರ ದಕ್ಷಿಣ ಆಫ್ರಿಕಾದ ಆಡಳಿತಗಾರ ಜನರಲ್ ಜನ್ ಸ್ಮಟ್ಸ್ ಎಲ್ಲ ಕೈದಿ ಗಳನ್ನು ಬಿಡುಗಡೆಗೊಳಿಸಿ ದಮನಕಾರಿ ಕಾನೂನನ್ನು ರದ್ದುಗೊಳಿಸಿ ದನು. ಇದು ಹೆದರಿಕೆಯನ್ನು ಓಡಿಸಿ ಧೈರ್ಯ ತುಂಬಿದ ಘಟನೆಯಾಗಿ ಪರಿಣಮಿಸಿ ಯುವಕ ಮೋಹನ್‍ದಾಸ್ ಕರಮ್‍ಚಂದ್ ಗಾಂಧಿಯ ಮೇಲೆ ಗಾಢವಾದ ಪರಿಣಾಮ ಬೀರಿತು. ಗಾಂಧಿಯವರ ದಕ್ಷಿಣಾ ಆಫ್ರಿಕಾದ ಈ ವಿಜಯ, ತಾಯ್ನಾಡಿನ ಜನರಲ್ಲಿ ಸಂತಸ ಮೂಡಿಸಿತು.

ಗಾಂಧಿ 1915ರಲ್ಲಿ ಭಾರತಕ್ಕೆ ಹಿಂದಿರುಗಿ ದೇಶಭಕ್ತಿಯ ನವಭಾರತದ ಕನಸೊಂದನ್ನು ಕಟ್ಟಿಕೊಂಡಿದ್ದರು. ವರ್ಷಗಟ್ಟಲೆ ದೇಶದ ಉದ್ದಗಲಕ್ಕೂ ಸಂಚರಿಸಿ ಭಾರತದ ರಾಜ್ಯಗಳು, ನಗರ ಪಟ್ಟಣಗಳು, ಹಳ್ಳಿಗಳನ್ನೆಲ್ಲ ಸುತ್ತುತ್ತಾ ದೇಶದ ಜನರ ಕುಂದು ಕೊರತೆಗಳ ಬಗ್ಗೆ ತಿಳಿಯಲಾರಂಭಿಸಿದರು. ಗಾಂಧಿಯವರ ಅಹಿಂಸಾತ್ಮಕ ನಾಗರಿಕ ಅಸಹಕಾರದ ತತ್ವಾದರ್ಶಗಳು ಮೊದಮೊದಲು ಕೆಲವು ಭಾರತೀಯರಿಗೆ ಹಾಗು ಧೀಮಂತ ಕಾಂಗ್ರೆಸ್ ನಾಯಕರಿಗೆ ಅಪ್ರಾಯೋಗಿಕ ಎನಿಸಿದ್ದವು. ನಾಗರಿಕ ಅಸಹಕಾರವೆಂದರೆ ಅನೈತಿಕ ಶಾಸನ ಆದೇಶಗಳ ಸಭ್ಯ ಖಂಡನೆ ಎಂದು ಗಾಂಧಿ ಹೇಳುತ್ತಿದ್ದರು. ಆದರೆ, ಅವರ ಯೋಚನೆಯಂತೆ ಅದನ್ನು ಅಹಿಂಸಾತ್ಮಕವಾಗಿ ಪಾಲಿಸಲು ಭ್ರಷ್ಟ ಆಡಳಿತಕ್ಕೆ ನೀಡಿದ್ದ ಸಹಕಾರವನ್ನು ಹಿಂದಕ್ಕೆ ಪಡೆಯಬೇಕಿತ್ತು.

ಈ ನಿಟ್ಟಿನಲ್ಲಿ ಜನಜಗೃತಿ ಮೂಡಿಸುವಲ್ಲಿ ಗಾಂಧಿಯವರು ಸಫಲರಾಗಿದ್ದು ರೌಲತ್ ಕಾಯ್ದೆಯ ವಿರುದ್ದ ಪಂಜಬ್‍ನಲ್ಲಿ ನಡೆಸಿದ ಸತ್ಯಾಗ್ರಹ ಚಳವಳಿಯ ಮೂಲಕ. ಈ ಹೊತ್ತಿಗಾಗಲೇ ಭಾರತದ ಮೈಯನ್ನು ಮುಚ್ಚುತ್ತಿದ್ದ ಐರೋಪ್ಯ ಬಟ್ಟೆಗಳನ್ನು ಅವರು ಕಿತ್ತೆಸೆದು, ನಾಡು ನೇಯ್ಗೆಯ ಖಾದಿ ಧೋತ್ರಗಳನ್ನು ಹಾಗೂ ಮೇಲು ಹೊದಿಕೆಯನ್ನೂ ಧರಿಸಲಾರಂಭಿಸಿದರು. ಇದಕ್ಕಾಗಿಯೇ ಗಾಂಧೀಜಿಯವರನ್ನು ತುಂಡು ಬಟ್ಟೆ ತೊಟ್ಟ ಫಕೀರ ಎಂದು ಕರೆಯಲಾಗುತ್ತದೆ. ಈ ಸರಳ ಗಾಂಧಿ ಜನಸಾಮಾನ್ಯರ ಕಣ್ಣಿಗೆ ಬೀಳುತ್ತಲೇ ಲಕ್ಷಾಂತರ ಬಡ ಶ್ರೀಸಾಮಾನ್ಯರಲ್ಲಿ ಮಿಂಚಿನ ಸಂಚಾರವಾಗುತ್ತಿತ್ತು. ವಿದೇಶದಲ್ಲಿ ಕಲಿತು ಹಿಂದಿರುಗಿದ ಇತರೆ ಬಿಂಕ ಕೊಂಕಿನ ದೊಡ್ಡ ಮನುಷ್ಯರಂತಾಗದೆ, ಬಡಜನರೊಳಗೊಬ್ಬರಾದರು. ಹೋದಲ್ಲೆಲ್ಲ ಗುಂಪು ಗುಂಪಾಗಿ ಜನಸಾಮಾನ್ಯರನ್ನು ಸೆಳೆಯುತ್ತಿದ್ದ ಗಾಂಧಿಯವರನ್ನು ಪೊಲೀಸರು ಬಂಧಿಸಿದಾಗ, ಎಲ್ಲೆಡೆ ತೀವ್ರ ಪ್ರತಿಭಟನೆಗಳು ಆರಂಭವಾದವು. ಅವರಿಗಿರುವ ಅಪಾರ ಜನಸ್ತೋಮದ ಬೆಂಬಲ ಕಂಡು ಬ್ರಿಟಿಷ್ ಆಡಳಿತ ಕಂಗೆಟ್ಟು ಅವರನ್ನು ಬಿಡುಗಡೆ ಮಾಡಲೇಬೇಕಾಗಿತ್ತು. ಚಂಪಾರಣ್ಯದ ಅವರ ಗೆಲುವಿನೊಂದಿಗೆ ಗಾಂಧಿಯವರಿಗೆ ಮಹಾತ್ಮ ಎಂಬ ಹೆಸರು ಜನರಿಟ್ಟ ಅನ್ವರ್ಥನಾಮವಾಯಿತು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Sri Raghav

Admin