ಚಾಲಕನ ನಿಯಂತ್ರಣ ತಪ್ಪಿ ಬೋರ್ವೆಲ್ ಲಾರಿ ಪಲ್ಟಿ ಲಾರಿ ಪಲ್ಟಿ ಯಾಗಿ ಐವರ ಸಾವು
ಅರಕಲಗೂಡು,ನ.12-ಚಾಲಕನ ನಿಯಂತ್ರಣ ತಪ್ಪಿ ಬೋರ್ವೆಲ್ ಲಾರಿ ಪಲ್ಟಿಯಾದ ಪರಿಣಾಮ ಐವರು ಸಾವನ್ನಪ್ಪಿ , ಇಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ತಾಲ್ಲೂಕಿನ ಮುತ್ತಿಗೆ ಗ್ರಾಮದಲ್ಲಿ ಇಂದು ಬೆಳಗಿನ ಜಾವ 4.30ರಲ್ಲಿ ನಡೆದಿದೆ. ಜಾರ್ಖಂಡ್ ಮೂಲದ ಅನಂತ್(21), ಮುಚ್ಚಿರಾಮ್(60), ಭೀಮ್ಸಿಂಗ್(25), ಪುದುರಾಮ್(55) ಹಾಗೂ ಅನಿಲ್(60) ಸಾವನ್ನಪ್ಪಿರುವ ದುರ್ದೈವಿಗಳು. ಅರಕಲಗೂಡು ಬಳಿಯ ಗ್ರಾಮವೊಂದರ ಜಮೀನಿನಲ್ಲಿ ಕೊಳವೆ ಬಾವಿ ಕೊರೆಯಲು ಎರಡು ಲಾರಿಗಳಲ್ಲಿ ಸುಮಾರು 12 ಮಂದಿ ಕಾರ್ಮಿಕರು ಗುರುವಾರ ಇಲ್ಲಿಗೆ ಬಂದಿದ್ದರು. ಕೆಲಸ ಮುಗಿಸಿ ನಿನ್ನೆ ರಾತ್ರಿ 1 ಗಂಟೆ ನಂತರ ಅಲ್ಲಿಂದ ಬೆಂಗಳೂರು ಕಡೆಗೆ ಹೊರಟಿದ್ದರು ಎಂದು ಹೇಳಲಾಗಿದೆ.
ಎದುರಿನಿಂದ ಬರುತ್ತಿದ್ದ ವಾಹನಕ್ಕೆ ದಾರಿ ಮಾಡಿಕೊಡಲು ಬೋರ್ವೆಲ್ ಲಾರಿ ಚಾಲಕ ರಸ್ತೆಗೆ ಬದಿಗೆ ವಾಹನ ತರಲು ಮುಂದದಾಗ ಪಲ್ಟಿ ಹೊಡೆದಿದೆ ಎಂದು ತಿಳಿದುಬಂದಿದೆ. ಈ ಸಂದರ್ಭದಲ್ಲಿ ಅದರಲ್ಲಿದ್ದ ಪೈಪ್ಗಳು ಕಾರ್ಮಿಕರ ಮೇಲೆ ಉರುಳಿ ಬಿದ್ದಿದ್ದರಿಂದ ನಿದ್ದೆಯಲ್ಲಿದ್ದವರು ಪ್ರಾಣ ಬಿಟ್ಟಿದ್ದಾರೆ. ಕೆಲವರು ಗಾಯಗೊಂಡಿದ್ದಾರೆ. ಇನ್ನೊಂದು ಲಾರಿಯಲ್ಲಿದ್ದ ಸುಮಾರು 5 ಮಂದಿ ಅವರನ್ನು ರಕ್ಷಿಸಲು ಸಾಕಷ್ಟು ಪ್ರಯತ್ನಪಟ್ಟರು ಪ್ರಯೋಜನವಾಗಲಿಲ್ಲ. ಇದೇ ರಸ್ತೆಯಲ್ಲಿ ಹಾದು ಹೋಗುತ್ತಿದ್ದ ಕೆಲ ವಾಹನ ಸವಾರರು ಇದನ್ನು ಕಂಡು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಧಾವಿಸಿದ ಆ್ಯಂಬುಲೆನ್ಸ್ ಸಿಬ್ಬಂದಿಗಳು ಕೆಲವರಿಗೆ ತುರ್ತು ಚಿಕಿತ್ಸೆ ನೀಡಿ ನಂತರ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಕೆಲಕಾಲ ಇಲ್ಲಿ ವಾಹನ ಸಂಚಾರದಲ್ಲಿ ವ್ಯತ್ಯಯ ಉಂಟಾಗಿತ್ತು.