ಚಿತ್ರಮಂದಿರಗಳ ನಂತರ ಈಗ ಸಂಸತ್ ಮತ್ತು ಕೋರ್ಟ್’ಗಳಲ್ಲೂ ರಾಷ್ಟ್ರಗೀತೆ ಕಡ್ಡಾಯ..?
ನವದೆಹಲಿ, ಏ.19- ಸಿನಿಮಾ ಮಂದಿರಗಳಲ್ಲಿ ಕಡ್ಡಾಯವಾಗಿ ರಾಷ್ಟ್ರಗೀತೆ ಹಾಡಬೇಕೆಂಬ ಆದೇಶದ ಬೆನ್ನಲ್ಲೇ ಇದೀಗ ನ್ಯಾಯಾಲಯ ಮತ್ತು ಸಂಸತ್ಗಳಲ್ಲೂ ಜಾರಿ ಮಾಡಬೇಕೆಂಬ ಬಗ್ಗೆ ಸುಪ್ರೀಂಕೋರ್ಟ್ ತೀರ್ಪು ಕಾಯ್ದಿರಿಸಿದೆ. ದೆಹಲಿ ಮೂಲದ ಬಿಜೆಪಿ ವಕೀಲ ಹಾಗೂ ವಕ್ತಾರ ಅಶ್ವಿನಿ ಉಪಾಧ್ಯಾಯ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಿಚಾರಣೆಗೆ ಅಂಗೀಕರಿಸಿರುವ ಸುಪ್ರೀಂಕೋರ್ಟ್ ತನ್ನ ತೀರ್ಪನ್ನು ಕಾಯ್ದಿರಿಸಿದೆ. ನ್ಯಾಯಮೂರ್ತಿಗಳಾದ ದೀಪಕ್ ಮಿಶ್ರಾ, ಎ.ಎಂ.ಖನ್ವಿಲ್ಕರ್ ಹಾಗೂ ಎಂ.ಎಂ.ಶಾಂತನಗೌಡರ್ ಅವರನ್ನೊಳಗೊಂಡ ತ್ರಿಸದಸ್ಯ ಪೀಠ ಸಂಸತ್ ಮತ್ತು ನ್ಯಾಯಾಲಯಗಳಲ್ಲಿ ಕಡ್ಡಾಯವಾಗಿ ರಾಷ್ಟ್ರಗೀತೆ ಹಾಡಬೇಕೆಂದು ಅರ್ಜಿಯಲ್ಲಿ ಮನವಿ ಮಾಡಲಾಗಿತ್ತು.
ಅಲ್ಲದೆ ರಾಷ್ಟ್ರಗೀತೆಯನ್ನು ಪ್ರತಿ ದಿನ ಸಂಸತ್ತಿನ ಉಭಯ ಸದನಗಳು, ವಿಧಾನಸಭೆ, ವಿಧಾನ ಪರಿಷತ್, ನ್ಯಾಯಾಲಯದ ಆವರಣಗಳಲ್ಲಿ ಹಾಡಲು ರಾಷ್ಟ್ರೀಯ ನೀತಿ ರೂಪಿಸಬೇಕೆಂದು ಅರ್ಜಿದಾರರು ಕೋರಿಕೊಂಡಿದ್ದರು. ಈಗಾಗಲೇ ಸಿನಿಮಾ ಮಂದಿರಗಳಲ್ಲಿ ರಾಷ್ಟ್ರಗೀತೆ ಹಾಡುವುದನ್ನು ಕಡ್ಡಾಯ ಮಾಡಲಾಗಿದೆ. ಇದೇ ರೀತಿ ನ್ಯಾಯಾಲಯ ಹಾಗೂ ಸಂಸತ್ಗಳಲ್ಲೂ ಕಡ್ಡಾಯಗೊಳಿಸಲು ನ್ಯಾಯಾಲಯ ಆದೇಶ ನೀಡಬೇಕೆಂದು ಉಪಾಧ್ಯಾಯ ಮನವಿ ಮಾಡಿದ್ದಾರೆ.
ರಾಷ್ಟ್ರಗೀತೆ ದೇಶದ ಏಕತೆ, ಸಾರ್ವಭೌಮತೆ , ಸಹೋದರತೆ , ಭಾವೈಕ್ಯತೆಯನ್ನು ಎತ್ತಿ ಹಿಡಿಯಲಿದೆ. ಪ್ರತಿಯೊಬ್ಬ ನಾಗರೀಕನು ಇದನ್ನು ಹಾಡುವುದರಿಂದ ದೇಶಪ್ರೇಮ ಮೈಗೂಡಿಸಿಕೊಳ್ಳಲು ಸಹಾಯವಾಗುತ್ತದೆ ಎನ್ನುವುದು ಅರ್ಜಿದಾರರ ವಾದವಾಗಿದೆ. ನ್ಯಾಯಾಲಯ ಅರ್ಜಿಯನ್ನು ಸ್ವೀಕರಿಸಿದ್ದು, ಮುಂದಿನ ಆದೇಶವನ್ನು ಕಾಯ್ದಿರಿಸಿದೆ.
< Eesanje News 24/7 ನ್ಯೂಸ್ ಆ್ಯಪ್ >
Click Here to Download : Android / iOS