ಚೀನಾ ಕಲ್ಲಿದ್ದಲು ಗಣಿಯೊಂದರಲ್ಲಿ ಸ್ಫೋಟ : 33 ಕಾರ್ಮಿಕರ ದುರಂತ ಸಾವು
ಬೀಜಿಂಗ್, ನ.2-ವಾಯುವ್ಯ ಚೀನಾದ ಕಲ್ಲಿದ್ದಲು ಗಣಿಯಲ್ಲಿ ಸೋಮವಾರ ಸಂಭವಿಸಿದ ಭೀಕರ ಸ್ಫೋಟದ ನಂತರ ಭೂಗರ್ಭದಲ್ಲಿ ಸಿಲುಕಿದ್ದ ಎಲ್ಲ 33 ಕಾರ್ಮಿಕರು ದುರಂತ ಸಾವಿಗೀಡಾಗಿದ್ದಾರೆ ಎಂದು ಸರ್ಕಾರ ಘೋಷಿಸಿದೆ. ಈ ದುರಂತದಲ್ಲಿ ನಾಪತ್ತೆಯಾಗಿದ್ದ 15 ಕಾರ್ಮಿಕರ ಮೃತದೇಹಗಳನ್ನು ಇಂದು ಮುಂಜಾನೆ ಗಣಿಯಿಂದ ಹೊರತೆಗೆಯಲಾಗಿದೆ.
ಯಾಂಗ್ಚುವಾನ್ ಜಿಲ್ಲೆಯ ಚೊಂಗ್ ಮುನ್ಸಿಪಾಲಿಟಿಯ ಲೈಸು ಪಟ್ಟಣದ ಜಿನ್ಶಾಗೊವು ಎಂಬ ಖಾಸಗಿ ಕಲ್ಲಿದ್ದಲು ಗಣಿಯಲ್ಲಿ 35 ಕಾರ್ಮಿಕರು ಕೆಲಸ ಮಾಡುತ್ತಿದ್ದಾಗ ಸೋಮವಾರ ಬೆಳಿಗ್ಗೆ 11.30ರಲ್ಲಿ ಸ್ಫೋಟ ಸಂಭವಿಸಿತು.
ಈ ದುರಂತದಲ್ಲಿ ಇಬ್ಬರು ಅಶ್ಚರ್ಯಕರ ರೀತಿಯಲ್ಲಿ ಪಾರಾಗಿದ್ದರು. ಗಣಿಯ ಒಳಗೆ ಸಿಲುಕಿದ್ದ 33 ಕಾರ್ಮಿಕರ ರಕ್ಷಣೆಗಾಗಿ 80 ಜನರ ತಂಡ ಕಾರ್ಯಾಚರಣೆ ಮುಂದುವರಿದಿತ್ತು. ಇಂದು ನಸುಕಿನಲ್ಲಿ 15 ಶವಗಳು ಪತ್ತೆಯಾಗಿದ್ದು, ಎಲ್ಲರೂ ದುರಂತ ಸಾವಿಗೀಡಾಗಿದ್ದಾರೆ ಎಂದು ರಾಜ್ಯ ಆಡಳಿತ ಘೋಷಿಸಿದೆ. ಗಣಿ ದುರ್ಘಟನೆ ಬಗ್ಗೆ ತನಿಖೆ ನಡೆಯುತ್ತಿದೆ. ವಿಶ್ವದ ಬೃಹತ್ ಪ್ರಮಾಣದಲ್ಲಿ ಕಲ್ಲಿದ್ದಲು ಉತ್ಪಾದಿಸುವ ಮತ್ತು ಬಳಸುವ ಚೀನಾದ ವಿವಿಧೆಡೆ ಗಣಿಯಲ್ಲಿ ಸ್ಫೋಟ ಪ್ರಕರಣಗಳು ಅಗಾಗ ಸಂಭವಿಸುತ್ತಲೇ ಇವೆ. ಈ ಉದ್ಯಮವು ಅತ್ಯಂತ ಅಪಾಯಕಾರಿಯಾಗಿದ್ದರೂ ಸೂಕ್ತ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವಲ್ಲಿ ಬಹುತೇಕ ಎಲ್ಲ ಗಣಿಗಳು ವಿಫಲವಾಗಿವೆ.