ಚುನಾವಣಾ ಆಯೋಗದ ಮೆಟ್ಟಿಲೇರಿದ ‘ಸೈಕಲ್’ಗಾಗಿ ಅಪ್ಪ ಮಗನ ಕಿತ್ತಾಟ

Cycle-01

ಲಕ್ನೋ ,ಜ.2-ಉತ್ತರ ಪ್ರದೇಶದಲ್ಲಿ ಆಡಳಿತಾರೂಢ ಸಮಾಜವಾದಿ ಪಕ್ಷದೊಳಗಿನ ಯಾದವೀ ಕಲಹದ ಹೈಡ್ರಾಮ ಮತ್ತಷ್ಟು ತಿರುವುಗಳನ್ನು ಪಡೆದುಕೊಂಡಿದೆ. ಈಗ ಪಕ್ಷದ ಎರಡು ಬಣಗಳ ನಡುವೆ ಸೈಕಲ್ ಚಿಹ್ನೆಗಾಗಿ ಕಿತ್ತಾಟ ಶುರುವಾಗಿದ್ದು , ವಿವಾದ ಚುನಾವಣಾ ಆಯೋಗದ ಮೆಟ್ಟಿಲೇರಿದೆ. ಇನ್ನೊಂದೆಡೆ ಸಮಾಜವಾದಿ ಪಕ್ಷದ ಪರಮೋಚ್ಛ ನಾಯಕ ಮುಲಾಯಂಸಿಂಗ್ ಯಾದವ್ ಜ.5ರಂದು ಕರೆದಿದ್ದ ರಾಷ್ಟ್ರೀಯ ಸಮಾವೇಶ ದಿಢೀರ್ ರದ್ದು ಮಾಡಿರುವುದು ಹಲವು ಊಹಾಪೋಹಗಳಿಗೆ ಎಡೆಮಾಡಿಕೊಟ್ಟಿದೆ.  ಮುಲಾಯಂ ಬಣ ಮತ್ತು ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿ ನೂತನವಾಗಿ ಆಯ್ಕೆಯಾದ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಬಣಗಳ ಅಂತಃಕಲಹ ಈಗ ತಾರಕಕ್ಕೇರಿದೆ. ಉಭಯ ಬಣಗಳ ನಡುವೆ ಸೈಕಲ್ ಚಿಹ್ನೆಗಾಗಿ ಕಿತ್ತಾಟ ತೀವ್ರಗೊಂಡಿದ್ದು , ಲಾಂಛನವನ್ನು ತಮ್ಮದಾಗಿಸಿಕೊಳ್ಳಲು ಚುನಾವಣಾ ಆಯೋಗದ ಮೆಟ್ಟಿಲೇರಿದ್ದಾರೆ.

ಈಗಾಗಲೇ ಅಖಿಲೇಶ್ ಬಣ ರಾಜ್ಯ ಚುನಾವಣಾ ಆಯೋಗಕ್ಕೆ ಮನವಿ ಮಾಡಿದ್ದು, ದೆಹಲಿಯಲ್ಲಿರುವ ಕೇಂದ್ರ ಚುನಾವಣಾ ಆಯೋಗಕ್ಕೆ ತಮ್ಮ ಹಕ್ಕು ಪ್ರತಿಪಾದನೆಗೆ ಸಜ್ಜಾಗಿದ್ದಾರೆ.
ಇನ್ನೊಂದೆಡೆ ಮುಲಾಯಂ ತಮ್ಮ ಸಹೋದರ ಶಿವಪಾಲ್ ಯಾದವರನ್ನು ದೆಹಲಿಗೆ ಕಳುಹಿಸಿ ಚಿಹ್ನೆ ತಮ್ಮದಾಗಬೇಕೆಂಬ ಹಕ್ಕು ಮಂಡಿಸಲಿದ್ದಾರೆ. ಲಕ್ನೋದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಮುಲಾಯಂ ಸಿಂಗ್ ಯಾದವ್, ಸೈಕಲ್ ಚಿಹ್ನೆ ನಮ್ಮದು ಎಂದು ಪ್ರತಿಪಾದಿಸಿದ್ದಾರೆ. ತಾವು ಯಾರಿಗೂ ಬೆನ್ನಿಗೆ ಚೂರಿ ಹಾಕಿಲ್ಲ ಅಥವಾ ಭ್ರಷ್ಟಾಚಾರ ಅವ್ಯವಹಾರದಲ್ಲಿ ಶಾಮೀಲಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಆದರೆ 5 ರಾಜ್ಯಗಳ ಚುನಾವಣೆಗಳು ಸಮೀಪಿಸುತ್ತಿರುವುದರಿಂದ ಸಮಾಜವಾದಿ ಪಕ್ಷದ ಸೈಕಲ್ ಚಿಹ್ನೆ ವಿವಾದದ ಬಗ್ಗೆ ತಲೆಕೆಡಿಸಿಕೊಳ್ಳುವ ವ್ಯವದಾನ ಚುನಾವಣಾ ಆಯೋಗಕ್ಕೆ ಇಲ್ಲ.
ಹೀಗಾಗಿ ಚಿಹ್ನೆಯನ್ನೇ ಮುಟ್ಟುಗೋಲು ಹಾಕಿಕೊಂಡು ಉಭಯ ಬಣಗಳಿಗೆ ಪ್ರತ್ಯೇಕ ಚಿಹ್ನೆ ನೀಡುವ ಬಗ್ಗೆ ಪರಿಶೀಲಿಸಲಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.  ಈ ನಡುವೆ ಮುಲಾಯಂಸಿಂಗ್ ಯಾದವ್ ಜ.5ರಂದು ಕರೆದಿದ್ದ ರಾಷ್ಟ್ರೀಯ ಸಮಾವೇಶ ದಿಢೀರ್ ರದ್ದಾಗಿದೆ. ಈ ಬಗ್ಗೆ ಶಿವಪಾಲ್ ಯಾದವ್ ಅಧಿಕೃತ ಮಾಹಿತಿ ನೀಡಿದ್ದಾರೆ.  ಸಭೆ ರದ್ದುಗೊಳಿಸಿದ ಬಗ್ಗೆ ನಿಖರ ಕಾರಣಗಳನ್ನು ತಿಳಿಸಿಲ್ಲ. ಜನವರಿ 5ರಂದು ರಾಷ್ಟ್ರೀಯ ಸಮಾವೇಶ ನಡೆದರೆ ಬೆಂಬಲವಿಲ್ಲದೆ ಮುಖಭಂಗ ಅನುಭವಿಸಬೇಕಾಗುತ್ತದೆ ಎಂಬ ಮುಂದಾಲೋಚನೆಯಿಂದ ಮುಲಾಯಂ ಸಮಾವೇಶವನ್ನು ರದ್ದು ಮಾಡಿದ್ದಾರೆ ಎಂಬ ವರದಿಗಳಿವೆ.

ನಿನ್ನೆ ರಾಮ್‍ಗೋಪಾಲ್ ಯಾದವ್ ಮೇಲಸ್ತುವಾರಿಯಲ್ಲಿ ನಡೆದ ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಗೆ ಭಾರೀ ಬೆಂಬಲ ವ್ಯಕ್ತವಾಗಿತ್ತು. ಅಲ್ಲದೆ ಅಖಿಲೇಶ್ ಪರ 200ಕ್ಕೂ ಹೆಚ್ಚು ಬೆಂಬಲ ದೊರೆತಿತ್ತು. ಈ ಸನ್ನಿವೇಶದಲ್ಲಿ ಪರ್ಯಾಯವಾಗಿ ಸಮಾವೇಶ ನಡೆಸಿದರೆ ಬೆಂಬಲಿಗರಿಲ್ಲದೆ ತೀವ್ರ ಪೇಚಿಗೆ ಸಿಲುಕಬೇಕಾಗುತ್ತದೆ ಎಂಬ ಕಾರಣದಿಂದ ಮುಲಾಯಂ ಸಭೆ ರದ್ದು ಮಾಡಿದ್ದಾರೆ ಎಂದು ಅಖಿಲೇಶ್ ಬಣದ ಮುಖಂಡರು ಲೇವಡಿ ಮಾಡಿದ್ದಾರೆ.

ಅತ್ತೆ-ಸೊಸೆ ಜಗಳವೇ ಕಲಹಕ್ಕೆ ಕಾರಣ?:

ಸಮಾಜವಾದಿ ಪಕ್ಷದಲ್ಲಿ ನಡೆಯುತ್ತಿರುವ ಕಿತ್ತಾಟಕ್ಕೆ ಅಧಿಕಾರದ ಲಾಲಸೆ ಕಾರಣ ಎಂಬುದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ಆದರೆ ಕೆಲವು ಮೂಲಗಳ ಪ್ರಕಾರ ಯಾದವ್ ಪರಿವಾರದ ಅತ್ತೆ-ಸೊಸೆ ನಡುವೆ ಆರಂಭವಾದ ಕಲಹ ಈಗ ಪಕ್ಷದಲ್ಲಿ ದೊಡ್ಡ ಮಟ್ಟದ ಬಿಕ್ಕಟ್ಟನ್ನು ಸೃಷ್ಟಿಸಿದೆ.   ಮುಲಾಯಂ ಪತ್ನಿ ಸಾಧನ ಮತ್ತು ಅಖಿಲೇಶ್ ಮಡದಿ ಡಿಂಪಲ್ ಸಿಂಗಲ್ ನಡುವಿನ ಕೌಟುಂಬಿಕ ಭಿನ್ನಾಭಿಪ್ರಾಯ ಈಗ ಪಕ್ಷದ ಮೇಲೆ ಗಾಢ ಪರಿಣಾಮ ಮೀರಿದೆ ಎಂಬ ಮಾತುಗಳು ಕೇಳಿಬರುತ್ತಿವೆ.   ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಉತ್ತರ ಪ್ರದೇಶದ ಆಡಳಿತಾರೂಢ ಸಮಾಜವಾದಿ ಪಕ್ಷದಲ್ಲಿ ಕಂಡುಬಂದಿರುವ ಅನಿರೀಕ್ಷಿತ ಮತ್ತು ಅತ್ಯಂತ ಕುತೂಹಲಕರ ವಿದ್ಯಮಾನ ದಿನಕ್ಕೊಂದು ಹೊಸ ಸ್ವರೂಪ ಪಡೆಯುತ್ತಿದ್ದು, ಮುಂದಿನ ಬೆಳವಣಿಗೆಯನ್ನು ಕಾಂಗ್ರೆಸ್ ಮತ್ತು ಬಿಜೆಪಿ ಕಾದು ನೋಡುವ ತಂತ್ರ ಅನುಸರಿಸುತ್ತಿವೆ.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Sri Raghav

Admin