ಚುನಾವಣಾ ಸಮರಕ್ಕೆ ‘ಸುರಾಜ್ಯ ಸಮಾವೇಶ’ದಲ್ಲಿ ರಣಕಹಳೆ ಮೊಳಗಿಸಿದ ಕಾಂಗ್ರೆಸ್

Spread the love

Surajya-01 ಬೆಂಗಳೂರು, ಅ.27- ಮುಂದಿನ ವಿಧಾನಸಭೆ ಚುನಾವಣೆಗೆ ಹಂತ ಹಂತವಾಗಿ ಸಿದ್ಧತೆ ಕೈಗೊಂಡಿರುವ ಕಾಂಗ್ರೆಸ್ ಇಂದು ಎರಡನೇ ಹಂತದ ಸುರಾಜ್ಯ ಸಮಾವೇಶದ ಮೂಲಕ ರಣಕಹಳೆ ಮೊಳಗಿಸಿದೆ. ಈ ಮೊದಲು ಅಕ್ಟೋಬರ್ 2ರಂದು ಗೌರಿಬಿದನೂರಿನಲ್ಲಿ ಮೊದಲ ಹಂತದ ಸುರಾಜ್ಯ ಸಮಾವೇಶ ನಡೆಸಲಾಗಿತ್ತು. ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಅವರು ಅಧ್ಯಕ್ಷರಾಗಿ 6 ವರ್ಷ ಪೂರೈಸುತ್ತಿರುವ ಅಂಗವಾಗಿ ಇಂದು ನಗರದ ಅರಮನೆ ಮೈದಾನದಲ್ಲಿ ಎರಡನೇ ಹಂತದ ಸುರಾಜ್ಯ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಈ ಮೂಲಕ ವಿಧಾನಸಭೆ ಚುನಾವಣೆಗೆ ಸಕಲ ತಯಾರಿಗಳಿಗೆ ಚಾಲನೆ ದೊರೆತಿದ್ದು, ಜಿಲ್ಲಾಧ್ಯಕ್ಷರು ಸಂಘನೆಯಲ್ಲಿ ಹೆಚ್ಚು ಸಕ್ರಿಯರಾಗಲು ತಾಕೀತು ಮಾಡಲಾಗುತ್ತಿದೆ.

ಬಿಜೆಪಿ ಮಿಷನ್ 150 ಮೂಲಕ ಅಧಿಕಾರದ ಗದ್ದುಗೆ ಹಿಡಿಯಲು ಹಾತೊರೆಯುತ್ತಿರುವ ಸಂದರ್ಭದಲ್ಲಿ ತಕ್ಕ ಪ್ರತ್ಯುತ್ತರ ನೀಡಲು ಕಾಂಗ್ರೆಸ್ ಸುರಾಜ್ ಸಮಾವೇಶದ ಮೊರೆ ಹೋಗುತ್ತಿದೆ.
ಮುಂದಿನ ಹಂತದಲ್ಲಿ ವಿಭಾಗ ಮತ್ತು ಜಿಲ್ಲಾ ಮಟ್ಟದಲ್ಲೂ ಸುರಾಜ್ಯ ಸಮಾವೇಶಗಳು ನಡೆಯಲಿವೆ. ತಾಲ್ಲೂಕು ಹಾಗೂ ವಿಧಾನಸಭಾ ಕ್ಷೇತ್ರಗಳ ಮಟ್ಟದಲ್ಲಿ ಸಮಾವೇಶಗಳನ್ನು ನಡೆಸಿ ಕಾಂಗ್ರೆಸ್ ಸರ್ಕಾರದ ಸಾಧನೆಗಳನ್ನು ಜನರಿಗೆ ತಲುಪಿಸುವುದು ಮತ್ತು ಸಂಘಟನೆಗೆ ಕಾರ್ಯಕರ್ತರನ್ನು ಹುರಿದುಂಬಿಸುವುದು ಸಮಾವೇಶದ ಮೂಲ ಉದ್ದೇಶವಾಗಿದೆ.
ಕಾಂಗ್ರೆಸ್ ಸರ್ಕಾರದಲ್ಲಿ ನಿಗಮ ಮಂಡಳಿ ನೇಮಕಾತಿ ಸೇರಿದಂತೆ ಹಲವಾರು ಸಂದರ್ಭಗಳಲ್ಲಿ ಅವಕಾಶ ಸಿಗದೆ ನಿರಾಸರಾಗಿ ನಾಯಕರು ಅನ್ಯಪಕ್ಷದತ್ತ ವಲಸೆ ಆರಂಭಿಸಿದ್ದಾರೆ. ಕೆಲವು ದಿನಗಳಿಂದ ಕಾಂಗ್ರೆಸ್ ಸಂಘಟನೆ ಕೂಡ ತಟಸ್ಥವಾಗಿದೆ. ಇದರಿಂದಾಗಿ ಮುಂದಿನ ದಿನಗಳಲ್ಲಿ ಪಕ್ಷ ಮರಳಿ ಅಧಿಕಾರಕ್ಕೆ ಬರಲಿದೆಯೋ ಇಲ್ಲವೋ ಎಂಬ ಅನುಮಾನಗಳು ಸೃಷ್ಟಿಯಾಗಿದ್ದು, ಕಾರ್ಯಕರ್ತರಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾಗಿದೆ.

ಹೀಗಾಗಿ ಹಿರಿಯ ನಾಯಕರಷ್ಟೇ ಅಲ್ಲದೆ, ಕೆಳ ಹಂತದ ಕಾರ್ಯಕರ್ತರೂ ಕೂಡ ವಲಸೆ ಹೋಗುವ ಪರಿಪಾಠ ಹೆಚ್ಚುತ್ತಿದ್ದು, ಅವರನ್ನು ಹಿಡಿದಿಟ್ಟುಕೊಳ್ಳಲು ಸುರಾಜ್ಯ ಸಮಾವೇಶದ ಮೂಲ ಉದ್ದೇಶವಾಗಿದೆ. ಸಮಾರಂಭದಲ್ಲಿ ಮಾತನಾಡಿದ ನಾಯಕರು, ರಾಜ್ಯ ಸರ್ಕಾರದ ಸಾಧನೆಗಳನ್ನು ಎಳೆ ಎಳೆಯಾಗಿ ಬಿಡಿಸಿಟ್ಟರು. ಕೇಂದ್ರದ ಎನ್‍ಡಿಎ ಸರ್ಕಾರದ ವಿರುದ್ಧ ಹರಿಹಾಯ್ದರು.
ರಾಜ್ಯ ಸರ್ಕಾರ ಪ್ರಣಾಳಿಕೆಯಲ್ಲಿ ಪ್ರಕಟಿಸಿದ ಯೋಜನೆಗಳಲ್ಲಿ 125 ಯೋಜನೆಗಳನ್ನು ಪೂರೈಸಿದ್ದು, ಇನ್ನುಳಿದ ಅವಧಿಯಲ್ಲಿ ಎಲ್ಲಾ ಭರವಸೆಗಳನ್ನು ಈಡೇರಿಸಿ ಮತ್ತೆ ಜನರ ಮುಂದೆ ಹೋಗುತ್ತೇವೆ ಎಂದರು.

 

Surajya-02

ಅದ್ಧೂರಿ ಸಮಾವೇಶ:

ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಅವರ ಪಕ್ಷದ ಅಧಿಕಾರಾವಧಿ 6 ವರ್ಷ ತುಂಬುತ್ತಿರುವುದರಿಂದ ಅದ್ಧೂರಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ನಗರದ ಅರಮನೆ ಮೈದಾನದ ಸುತ್ತಮುತ್ತಲೂ ಕಾಂಗ್ರೆಸ್ ಬಾವುಟಗಳು ರಾರಾಜಿಸುತ್ತಿದ್ದವು. ನಗರದ ಎಲ್ಲೆಡೆ ಪ್ಲೆಕ್ಸ್, ಬ್ಯಾನರ್‍ಗಳ ಅಬ್ಬರ ಜೋರಾಗಿತ್ತು. ರಾಜ್ಯದ ಮೂಲೆ ಮೂಲೆಗಳಿಂದಲೂ ಸಾಗರೋಪಾದಿಯಲ್ಲಿ ಕಾರ್ಯಕರ್ತರು ಸಮಾವೇಶಕ್ಕೆ ಆಗಮಿಸಿದ್ದರು. ಮುಖ್ಯಮಂತ್ರಿ ಸಿದ್ದರಾಮಯ್ಯ, ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ದಿಗ್ವಿಜಯ್‍ಸಿಂಗ್, ಬಿ.ಕೆ.ಹರಿಪ್ರಸಾದ್, ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ, ಸಂಸದ ಕೆ.ಎಚ್.ಮುನಿಯಪ್ಪ, ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್‍ಗುಂಡೂರಾವ್, ಮಾಜಿ ಮುಖ್ಯಮಂತ್ರಿಗಳಾದ ವೀರಪ್ಪ ಮೊಯ್ಲಿ, ಧರ್ಮಸಿಂಗ್, ಬಿ.ಎಲ್.ಶಂಕರ್, ವೀರಣ್ಣ ಮತ್ತಿಕಟ್ಟಿ, ಪಕ್ಷದ ಉಸ್ತುವಾರಿ ಕಾರ್ಯದರ್ಶಿ ಚಲ್ಲರಾಮ್, ಶಾಂತಕುಮಾರ್, ರಾಜ್ಯ ಸರ್ಕಾರದ ಎಲ್ಲಾ ಸಚಿವರು, ಶಾಸಕರು, ಸಂಸದರು ಸೇರಿದಂತೆ ಹಲವಾರು ಗಣ್ಯರು ಸಮಾವೇಶದಲ್ಲಿ ಭಾಗವಹಿಸಿದ್ದರು.

► Follow us on –  Facebook / Twitter  / Google+

Facebook Comments

Sri Raghav

Admin