ಚುನಾವಣೆಯಲ್ಲಿ ಮುಸ್ಲಿಂ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಬಿಜೆಪಿ ಮಾಸ್ಟರ್ ಪ್ಲ್ಯಾನ್..!

Spread the love

Amith-Shah--01

ಬೆಂಗಳೂರು, ಜ.16- ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಬಲ್ಲ ಕ್ಷೇತ್ತಗಳನ್ನು ಗುರುತಿಸಿರುವ ಬಿಜೆಪಿ ಇದೇ ಕಾರಣಕ್ಕಾಗಿ ನೂರಕ್ಕೂ ಹೆಚ್ಚು ವಿಧಾನಸಭಾ ಕ್ಷೇತ್ರಗಳಲ್ಲಿ ಪಕ್ಷೇತರ ಮುಸ್ಲಿಂ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ನಿರ್ಧರಿಸಿದೆ. ಉನ್ನತ ಮೂಲಗಳು ಈ ವಿಷಯವನ್ನು ತಿಳಿಸಿದ್ದು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅವರು ಕೇಂದ್ರ ಸಚಿವ ಮುಕ್ತಾರ್ ಅಬ್ಬಾಸ್ ನಕ್ವಿ ಹಾಗೂ ಶಾ ನವಾಜ್ ಹುಸೇನ್ ಅವರಿಗೆ ಈ ಕುರಿತು ಸಂಪೂರ್ಣ ಜವಾಬ್ದಾರಿ ವಹಿಸಿದ್ದಾರೆ ಎಂದಿವೆ.

ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ವತಿಯಿಂದ ಮುಸ್ಲಿಂ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗದಿದ್ದರೂ ಕಾಂಗ್ರೆಸ್ ಪಕ್ಷವನ್ನು ಮಣಿಸುವ ದೃಷ್ಟಿಯಿಂದ ಪ್ರಬಲ ಪಕ್ಷೇತರ ಅಭ್ಯರ್ಥಿಗಳನ್ನು ಗುರುತಿಸುವಂತೆ ಅಮಿತ್ ಷಾ ಅವರು ಸೂಚನೆ ನೀಡಿದ್ದಾರೆ ಎಂದು ಮೂಲಗಳು ವಿವರ ನೀಡಿವೆ. ಹಳೆ ಮೈಸೂರು,ಹೈದ್ರಾಬಾದ್ ಕರ್ನಾಟಕ, ಕರಾವಳಿ ಪ್ರದೇಶ ಹಾಗೂ ಮುಂಬಯಿ ಕರ್ನಾಟಕ ಪ್ರದೇಶಗಳಲ್ಲಿ ನೂರಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷ ಪ್ರಬಲವಾಗಿರುವುದನ್ನು ಗುರುತಿಸಿರುವ ಅಮಿತ್ ಷಾ ಅಲ್ಲೆಲ್ಲ ಸ್ವಯಂ ಬಲದ ಮೇಲೆ ಐದರಿಂದ ಹತ್ತು ಸಾವಿರ ಮತಗಳನ್ನು ಗಳಿಸಬಲ್ಲ ಮುಸ್ಲಿಂ ಕ್ಯಾಂಡಿಡೇಟುಗಳನ್ನು ಗುರುತಿಸುವಂತೆ ಸೂಚನೆ ನೀಡಿದ್ದಾರೆ.

ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ಪಡೆಯಲಾಗದವರು ಮತ್ತು ಆಯಾ ಪ್ರದೇಶಗಳಲ್ಲಿ ಜನಪ್ರಿಯರಾಗಿರುವವರನ್ನು ಗುರುತಿಸಲು ಅಮಿತ್ ಷಾ ಅವರು ಸೂಚನೆ ನೀಡಿದ್ದಾರೆ ಎಂದು ಮೂಲಗಳು ಸ್ಪಷ್ಟ ಪಡಿಸಿವೆ. ಎಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳಿಗಿಂತ ಕಾಂಗ್ರೆಸ್ ಬಲ ಹೆಚ್ಚಿದೆಯೋಅಲ್ಲಿ ಕೈ ಪಾಳೆಯವನ್ನು ಅಸ್ಥಿರಗೊಳಿಸಲು ಈ ಮಾರ್ಗವೇ ಅತ್ಯುತ್ತಮ ಎಂದು ನಿರ್ಧರಿಸಿರುವ ಅಮಿತ್ ಷಾ, ಪಕ್ಷೇತರರಾಗಿ ಕಣಕ್ಕಿಳಿಯುವ ಅಭ್ಯರ್ಥಿಗಳ ಪಟ್ಟಿಯನ್ನು ಮಾರ್ಚ್ ಅಂತ್ಯದ ವೇಳೆಗೆ ಸಿದ್ದಪಡಿಸಲಿದ್ದಾರೆ.

ಕರ್ನಾಟಕದಲ್ಲಿ ದಲಿತರ ನಂತರ ಮುಸ್ಲಿಮರೇ ಅಧಿಕ ಸಂಖ್ಯೆಯಲ್ಲಿದ್ದು ಸುಮಾರು ಎಪ್ಪತ್ತೈದು ಲಕ್ಷ ಜನರಿದ್ದಾರೆ.ಆ ಪೈಕಿ ಶೇ.60ರಷ್ಟು ಮತದಾರರು ಪಟ್ಟಿಯಲ್ಲಿದ್ದಾರೆ ಎಂದರೂ ನಲವತ್ತು ಲಕ್ಷಕ್ಕಿಂತ ಅಧಿಕ ಮತದಾರರು ಇದ್ದಾರೆ. ಬಿಜೆಪಿಯ ವಿರುದ್ಧ ಒಂದಾಗುವಂತೆ ಮುಸ್ಲಿಂ ಮತಕೋಟೆಯ ಪ್ರಮುಖರು ಈಗಾಗಲೇ ಸೂಚನೆ ನೀಡಿದ್ದು ಉತ್ತರ ಪ್ರದೇಶ ಮತ್ತಿತರ ರಾಜ್ಯಗಳಲ್ಲಿ ಆದಂತೆ ಮುಸ್ಲಿಂ ಮತಗಳು ಒಡೆಯದಂತೆ ನೋ ಡಿಕೊಳ್ಳಬೇಕೆಂದು ಹೇಳಿರುವುದಾಗಿ ತಿಳಿದು ಬಂದಿದೆ.ಈ ಸಂಬಂಧ ಕರ್ನಾಟಕದಲ್ಲಿ ಕಾರ್ಯಾಚರಣೆ ನಡೆಸುತ್ತಿರುವ ತಮ್ಮ ಪಡೆ ಹಲವು ವಿವರಗಳನ್ನು ನೀಡಿದ್ದು ಇದೇ ಕಾರಣಕ್ಕಾಗಿ ಬಿಜೆಪಿ ಕೊಂಚ ಮೈ ಮರೆತರೂ ಗಣನೀಯವಾಗಿ ಕ್ಷೇತ್ರಗಳು ನಮ್ಮ ಕೈ ತಪ್ಪಲಿವೆ.

ಹೀಗಾಗಿ ಶತಾಯಗತಾಯ ಮುಸ್ಲಿಂ ಮತಗಳನ್ನು ಒಡೆಯಲೇಬೇಕು ಎಂದು ಹಿರಿಯ ನಾಯಕರಿಗೆ ಅಮಿತ್ ಷಾ ಹೇಳಿದ್ದು ಈ ಹಿನ್ನೆಲೆಯಲ್ಲಿಯೇ ಮುಕ್ತಾರ್ ಅಬ್ಬಾಸ್ ನಕ್ವಿ,ಶಾ ನವಾಜ್ ಹುಸೇನ್ ಅವರು ಕರ್ನಾಟಕದ ಮುಸ್ಲಿಂ ಮತದಾರರ ಮೇಲೆ ಪ್ರಭಾವ ಬೀರುವಂತಹ ವ್ಯಕ್ತಿಗಳನ್ನು ಆರಿಸಲು ಶುರು ಮಾಡಿದ್ದಾರೆ.
ಮುಸ್ಲಿಂ ಮತಗಳು ಛಿದ್ರವಾದರೆ ಕಾಂಗ್ರೆಸ್ ಪಕ್ಷ ಗಣನೀಯ ಕ್ಷೇತ್ರಗಳಲ್ಲಿ ಸೋಲು ಕಾಣಲಿದ್ದು ಇದೇ ಕಾರಣಕ್ಕಾಗಿ ತೆರೆಯ ಹಿಂದಿನಿಂದ ಬಿಜೆಪಿ ಬೆಂಬಲಿಸುವ ಮುಸ್ಲಿಂ ಅಭ್ಯರ್ಥಿಗಳು ಪಕ್ಷೇತರರಾಗಿ ಕಣಕ್ಕಿಳಿಯುವಂತೆ ನೋಡಿಕೊಳ್ಳಲೇಬೇಕು ಎಂದವರು ಲೆಕ್ಕ ಹಾಕತೊಡಗಿದ್ದಾರೆ. ಇದೇ ಕಾರಣಕ್ಕಾಗಿ ತಮಗೆ ಆಪ್ತರಾದವರ ಮೂಲಕ ಆಯಾ ವಿಧಾನಸಭಾ ಕ್ಷೇತ್ರಗಳಲ್ಲಿ ಐದರಿಂದ ಹತ್ತು ಸಾವಿರ ಮುಸ್ಲಿಂ ಮತಗಳನ್ನು ಸೆಳೆಯಬಲ್ಲವರನ್ನು ಸೆಳೆಯಲು ಅವರು ಮುಂದಾಗಿದ್ದು ಈ ಬೆಳವಣಿಗೆ ತೀವ್ರ ಕುತೂಹಲಕ್ಕೆ ಕಾರಣವಾಗಿದೆ.

Facebook Comments

Sri Raghav

Admin