ಚುನಾವಣೆ ನಂತರ ಬಜೆಟ್ : ಜ.10ರೊಳಗೆ ಪ್ರತಿಕ್ರಿಯೆ ನೀಡಲು ಕೇಂದ್ರಕ್ಕೆ ಆಯೋಗ ಸೂಚನೆ
ನವದೆಹಲಿ,ಜ.7– ಉತ್ತರಪ್ರದೇಶ ಸೇರಿದಂತೆ ಐದು ರಾಜ್ಯಗಳ ಚುನಾವಣೆಗಳ ಹಿನ್ನೆಲೆಯಲ್ಲಿ ಕೇಂದ್ರ ಬಜೆಟ್ ಮುಂದೂಡುವಂತೆ ವಿರೋಧಪಕ್ಷಗಳು ಸಲ್ಲಿಸಿರುವ ಮನವಿಗೆ ಚುನಾವಣಾ ಆಯೋಗ ಸ್ಪಂದಿಸಿದೆ. ಈ ಕುರಿತು ಜನವರಿ 10ರೊಳಗೆ ಸರ್ಕಾರದ ನಿಲುವಿನ ಬಗ್ಗೆ ಪ್ರತಿಕ್ರಿಯೆ ನೀಡುವಂತೆ ಆಯೋಗವು ಕೇಂದ್ರಕ್ಕೆ ಇಂದು ಸೂಚನೆ ನೀಡಿದೆ. ಐದು ರಾಜ್ಯಗಳಿಗೆ ಈಗಾಗಲೇ ಚುನಾವಣೆ ದಿನಾಂಕಗಳು ಘೋಷಣೆಯಾಗಿವೆ. ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದೆ. ಕಾನೂನು-ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕಾಗುತ್ತದೆ. ಈ ಸಂಬಂಧ ಪ್ರತಿಪಕ್ಷಗಳು ಸಲ್ಲಿಸಿರುವ ಮನವಿಯನ್ನು ಪರಿಗಣಿಸಲಾಗಿದ್ದು, ಇನ್ನು ಮೂರು ದಿನಗಳಲ್ಲಿ ಸರ್ಕಾರದ ನಿಲುವಿನ ಬಗ್ಗೆ ಪ್ರತಿಕ್ರಿಯೆ ನೀಡುವಂತೆ ಸಂಪುಟ ಕಾರ್ಯದರ್ಶಿ ಪ್ರದೀಪ್ ಕುಮಾರ್ ಸಿನ್ಹಾ ಅವರಿಗೆ ಸೂಚನೆ ನೀಡಲಾಗಿದೆ ಎಂದು ಆಯೋಗದ ಉನ್ನತಾಧಿಕಾರಿಯೊಬ್ಬರು ತಿಳಿಸಿದ್ಧಾರೆ.
ಕೇಂದ್ರ ಸರ್ಕಾರ ಫೆ.1ರಂದು ಮಂಡಿಸಲು ಉದ್ದೇಶಿಸಿರುವ ಬಜೆಟ್ ಕಾನೂನು ಬಾಹಿರವಾಗಿದೆ. ಇದು ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆಯಾಗುತ್ತದೆ. ಆದ್ದರಿಂದ ಐದು ರಾಜ್ಯಗಳ ಚುನಾವಣೆಗಳ ನಂತರ ಬಜೆಟ್ ಮಂಡಿಸಲು ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡುವಂತೆ ವಿರೋಧ ಪಕ್ಷಗಳ ನಿಯೋಗ ಚುನಾವಣಾ ಆಯೋಗದಲ್ಲಿ ಮುಖ್ಯ ಆಯುಕ್ತರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದವು.
ಚುನಾವಣೆಗೂ ಮುನ್ನ ಬಜೆಟ್ ಮಂಡಿಸಲು ಕೇಂದ್ರ ಸರ್ಕಾರಕ್ಕೆ ಅವಕಾಶ ನೀಡಿದರೆ ಮುಂಗಡಪತ್ರದಲ್ಲಿ ಬಿಜೆಪಿ ತನ್ನ ಪ್ರಭಾವ ಬಳಸಿಕೊಂಡು ಮತದಾರರನ್ನು ತಪ್ಪು ದಾರಿಗೆ ಎಳೆಯುತ್ತದೆ. ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯಾಗುವುದನ್ನು ತಡೆಗಟ್ಟಲು ಮತದಾನದ ನಂತರ ಬಜೆಟ್ ಮಂಡಿಸಲು ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಬೇಕೆಂದು ಎಂಟು ವಿಪಕ್ಷಗಳು ಆಗ್ರಹಿಸಿದ್ದವು.
ಕಾಂಗ್ರೆಸ್, ತೃಣಮೂಲ ಕಾಂಗ್ರೆಸ್, ಸಮಾಜವಾದಿ ಪಕ್ಷ, ಬಹುಜನ ಸಮಾಜ ಪಕ್ಷ, ಸಂಯುಕ್ತ ಜನತಾದಳ ಮತ್ತು ರಾಷ್ಟ್ರೀಯ ಜನತಾದಳದ ಮುಖಂಡರು ನಿನ್ನೆ ಕೇಂದ್ರ ಚುನಾವಣಾ ಆಯೋಗಕ್ಕೆ ಮನವಿ ಸಲ್ಲಿಸಿದ್ದರು. ಕೇಂದ್ರ ಸಂಪುಟ ಸಮಿತಿ ಫೆ.1ರಂದು ಬಜೆಟ್ ಮಂಡಿಸಲು ತೀರ್ಮಾನಿಸಿತ್ತು. ಫೆ.4ರಿಂದ ಮಾ.8ರವರೆಗೆ ಏಳು ಹಂತಗಳಲ್ಲಿ ಐದು ರಾಜ್ಯಗಳಲ್ಲಿ ಮತದಾನ ನಡೆಯಲಿದೆ.