ಚೆಕ್‍ಡ್ಯಾಂ ಕಾಮಗಾರಿ ಪರಿಶೀಲನೆ

kolara

ಕೋಲಾರ, ಅ.7- ಜಿಲ್ಲೆಯ ಮುಳಬಾಗಿಲು ತಾಲ್ಲೂಕಿನ ಹನುಮನಹಳ್ಳಿ ಗ್ರಾಮ ಪಂಚಾಯಿತಿಯ ಎಂ.ಅಗ್ರಹಾರದ ಬಳಿ ಇರುವ ಪಾಲಾರ್ ನದಿ ಸಂಪರ್ಕ ಕಾಲುವೆಗೆ ಅಡ್ಡಲಾಗಿ ನಿರ್ಮಿಸಲಾಗುತ್ತಿರುವ ಬಹು ಕಮಾನಿನ ಚೆಕ್‍ಡ್ಯಾಂ ಕಾಮಗಾರಿಯನ್ನು ಜಿಲ್ಲಾಧಿಕಾರಿ ಡಾ.ಕೆ.ವಿ.ತ್ರಿಲೋಕ ಚಂದ್ರ ಹಾಗೂ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಬಿ.ಕಾವೇರಿ ಪರಿಶೀಲಿಸಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ, ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆಯ ವತಿಯಿಂದ ಬಹುಕಮಾನಿನ ಚೆಕ್‍ಡ್ಯಾಂ ನಿರ್ಮಿಸಲಾಗುತ್ತಿದೆ. ಇದಕ್ಕೆ ಸುಮಾರು 9.95 ಲಕ್ಷ ರೂ ವೆಚ್ಚವಾಗಲಿದೆ.

ಇದೇ ರೀತಿ ಒಟ್ಟು 29 ಚೆಕ್‍ಡ್ಯಾಂಗಳನ್ನು ನಿರ್ಮಿಸಲು ಎಂಜಿಎನ್‍ಆರ್‍ಇಜಿಎ ಯೋಜನೆಯಡಿ ಅನುಮೋದನೆಯಾಗಿದೆ. ಈ ಆರ್ಥಿಕ ವರ್ಷದಲ್ಲಿ ಕನಿಷ್ಟ 100 ಚೆಕ್‍ಡ್ಯಾಂಗಳನ್ನು ನಿರ್ಮಿಸುವ ಗುರಿಯನ್ನು ಹೊಂದಲಾಗಿದೆ ಎಂದರು. ಚೆಕ್‍ಡ್ಯಾಂಗಳ ನಿರ್ಮಾಣದಿಂದ ಮಳೆ ನೀರು ಸಂಗ್ರಹಿಸಲಾಗುವುದು. ಈ ನೀರನ್ನು ಇಂಗಿಸುವುದರಿಂದ ಅಂತರ್ಜಲ ಮಟ್ಟ ವೃದ್ಧಿಯಾಗುತ್ತದೆ. ಹಾಗಾಗಿ ಚೆಕ್‍ಡ್ಯಾಂ ಸುತ್ತಲಿನ ಕೊಳವೆ ಬಾವಿಗಳು ಮರುಪೂರ್ಣಗೊಳ್ಳಲಿದೆ. ಅಷ್ಟೇ ಅಲ್ಲದೆ ಜಾನುವಾರುಗಳಿಗೆ ಹಾಗೂ ಕೃಷಿಗೆ ಅನುಕೂಲವಾಗಲಿದೆ ಎಂದು ಹೇಳಿದರು.
ಹನುಮನಹಳ್ಳಿ ಗ್ರಾಪಂ ಅಧ್ಯಕ್ಷೆ ಪಿಳ್ಳಮ್ಮ ವೆಂಕಟೇಶ್, ಉಪಾಧ್ಯಕ್ಷ ಸುಬ್ರಮಣಿ, ಜಿಪಂ ಇಂಜನಿಯರಿಂಗ್ ವಿಭಾಗದ ಕಾರ್ಯಪಾಲಕ ಅಭಿಯಂತರ ಹರೀಶ್‍ಬಾಬು, ಸಹಾಯಕ ಕಾರ್ಯಪಾಲಕ ಅಭಿಯಂತರ ರಾಮಾಂಜಪ್ಪ, ಸಹಾಯಕ ಇಂಜನಿಯರ್ ರಾಜೇಶ್, ಸೈಟ್ ಇಂಜನಿಯರ್ ಗಣೇಶ್ ಮುಂತಾದವರು ಉಪಸ್ಥಿತರಿದ್ದರು.

 

► Follow us on –  Facebook / Twitter  / Google+

 

Sri Raghav

Admin