ಚೇತರಿಕೆ ಕಾಣದೆ ದುರ್ಬಲಗೊಂಡ ಮುಂಗಾರು, ಜಲಾಶಯಗಳಿಗೆ ಬಂದಿಲ್ಲ ನೀರು

Spread the love

Rain--001

ಬೆಂಗಳೂರು, ಜೂ.18- ರಾಜ್ಯದಲ್ಲಿ ನೈರುತ್ಯ ಮುಂಗಾರು ತಡವಾಗಿ ಆರಂಭವಾದರೂ ಚೇತರಿಕೆ ಕಾಣದೆ ದುರ್ಬಲಗೊಂಡಿದೆ. ರಾಜ್ಯದ ಹಲವು ಭಾಗಗಳಲ್ಲಿ ಚದುರಿದಂತೆ ಆಗಾಗ್ಗೆ ಮಳೆಯಾಗುತ್ತಿದ್ದರೂ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗುತ್ತಿಲ್ಲ. ಇನ್ನು ಒಂದು ವಾರಗಳ ಕಾಲ ಇದೇ ಪರಿಸ್ಥಿತಿ ಮುಂದುವರೆಯುವ ಸಾಧ್ಯತೆಗಳಿವೆ. ಸತತ ಬರಗಾಲಕ್ಕೆ ತುತ್ತಾಗಿದ್ದ ರಾಜ್ಯದಲ್ಲಿ ಈ ಬಾರಿಯ ಮುಂಗಾರು ಆರಂಭದಲ್ಲೇ ನಿರೀಕ್ಷೆಗೆ ತಣ್ಣೀರು ಎರಚಿಸಿದೆ.

ಕಳೆದ ಮೂರು ವಾರಗಳಲ್ಲಿ ಲಿಂಗಮಕ್ಕಿ, ಸೂಪ, ಕೆಆರ್‍ಎಸ್ ಜಲಾಶಯಗಳನ್ನು ಹೊರತುಪಡಿಸಿದರೆ ಉಳಿದ್ಯಾವ ಜಲಾಶಯಗಳಿಗೂ ಒಂದು ಸಾವಿರ ಕ್ಯೂಸೆಕ್ಸ್‍ಗಿಂತ ಹೆಚ್ಚು ಒಳ ಹರಿವಿಲ್ಲ. ಅಲ್ಲದೆ, ಪ್ರಮುಖ ಜಲಾಶಯಗಳಲ್ಲೂ ಕಳೆದ ವರ್ಷಕ್ಕಿಂತ ನೀರಿನ ಸಂಗ್ರಹಣೆ ಕಡಿಮೆಯಿದೆ. ಲಿಂಗನಮಕ್ಕಿ ಜಲಾಶಯದಲ್ಲಿ 4803 ಕ್ಯೂಸೆಕ್ಸ್ ಒಳ ಹರಿವಿದ್ದರೆ, ಕಳೆದ ವರ್ಷಕ್ಕಿಂತ 16 ಅಡಿಗಿಂತ ಹೆಚ್ಚು ಕಡಿಮೆ ಸಂಗ್ರಹವಾಗಿದೆ. ಸೂಪಾ ಜಲಾಶಯದಲ್ಲಿ 1422 ಕ್ಯೂಸೆಕ್ಸ್ ಒಳ ಹರಿವಿದೆ. ಹಾರಂಗಿ ಜಲಾಶಯಕ್ಕೆ 251 ಕ್ಯೂಸೆಕ್ಸ್, ಹೇಮಾವತಿ ಜಲಾಶಯಕ್ಕೆ 842 ಕ್ಯೂಸೆಕ್ಸ್, ಕೆಆರ್‍ಎಸ್ 1397 ಕ್ಯೂಸೆಕ್ಸ್ ಹಾಗೂ ಕಬಿನಿ ಜಲಾಶಯಕ್ಕೆ 522 ಕ್ಯೂಸೆಕ್ಸ್ ಒಳ ಹರಿವಿದೆ. ಇವು ಬೆಂಗಳೂರಿನ ಕುಡಿಯುವ ನೀರನ್ನು ಒದಗಿಸುವ ಪ್ರಮುಖ ಜಲ ಮೂಲಗಳಾಗಿವೆ.
ಕೆಆರ್‍ಎಸ್‍ನಲ್ಲಿ ಕಳೆದ ವರ್ಷಕ್ಕಿಂತ ಎರಡು ಟಿಎಂಸಿಯಡಿ ನೀರು ಕಡಿಮೆ ಇದೆ. ಕಳೆದ ವರ್ಷ 73.46 ಅಡಿಯಷ್ಟು ನೀರಿನ ಸಂಗ್ರಹವಿತ್ತು. ಪ್ರಸ್ತುತ 67.86 ಅಡಿಯಷ್ಟು ಮಾತ್ರ ನೀರಿದೆ.

ಕರ್ನಾಟಕ ನೈಸಗಿರ್ಕ ವಿಕೋಪ ಉಸ್ತುವಾರಿ ಕೇಂದ್ರದ ಮಾಹಿತಿ ಪ್ರಕಾರ ರಾಜ್ಯದ ಸರಾಸರಿ 1155ಮಿ.ಮೀ. ವಾಡಿಕೆ ಮಳೆಗೆ ಕಳೆದ ವರ್ಷ 831 ಮಿ.ಮೀ. ನಷ್ಟು ಮಳೆಯಾಗಿದ್ದು, ಶೇ.28ರಷ್ಟು ಮಳೆ ಕೊರತೆಯಾಗಿ ರಾಜ್ಯ ಬರದ ಛಾಯೆಗೆ ಸಿಲುಕಿತ್ತು. ಜನವರಿಯಿಂದ ಮೇ ಅಂತ್ಯದವರೆಗೆ ವಾಡಿಕೆ ಮಳೆ ಪ್ರಮಾಣ 129 ಮಿ.ಮೀ. ಇದ್ದು 126 ಮಿ.ಮೀ.ನಷ್ಟು ಮಳೆಯಾಗಿದೆ. ಕಳೆದ ಒಂದು ವಾರದಲ್ಲಿ ಶೇ.13ರಷ್ಟು ಮಳೆ ಕೊರತೆಯನ್ನು ರಾಜ್ಯ ನಿರ್ವಹಿಸುತ್ತಿದೆ. ಆದರೆ, ಜೂನ್‍ನಿಂದ ಇದುವರೆಗೆ ವಾಡಿಕೆ ಪ್ರಮಾಣದ ಮಳೆಯಾಗಿದೆ.

ನೈಸರ್ಗಿಕ ವಿಕೋಪ ಕೇಂದ್ರದ ಡಾ.ಜಿ.ಎಸ್.ಶ್ರೀನಿವಾಸ್‍ರೆಡ್ಡಿ ಪ್ರಕಾರ ಮೇ ತಿಂಗಳಲ್ಲಿ ಉತ್ತಮ ಮಳೆಯಾಗಿತ್ತು. ಆದರೆ, ಈಗ ಮುಂಗಾರು ಒಟ್ಟಾರೆ ರಾಜ್ಯದಲ್ಲಿ ದುರ್ಬಲಗೊಂಡಿದೆ. ಉತ್ತರ ಒಳನಾಡು, ದಕ್ಷಿಣ ಒಳನಾಡು, ಮಲೆನಾಡು ಹಾಗೂ ಕರಾವಳಿ ಭಾಗದಲ್ಲಿ ಮಳೆಯಾಗುತ್ತಿದ್ದರೂ ಭಾರೀ ಪ್ರಮಾಣದಲ್ಲಿ ಮಳೆಯಾಗುತ್ತಿಲ್ಲ. ಮುಂಗಾರು ದುರ್ಬಲಗೊಂಡಿರುವುದರಿಂದ ಜಲಾಶಯಗಳಿಗೆ ಹೆಚ್ಚಿನ ನೀರು ಹರಿದು ಬರುತ್ತಿಲ್ಲ ಎಂದು ಸ್ಪಷ್ಟಪಡಿಸಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin