ಚೇತರಿಕೆ ಕಾಣದ ಮುಂಗಾರು, ಆತಂಕದಲ್ಲಿ ರಾಜ್ಯದ ರೈತರು
ಬೆಂಗಳೂರು, ಜು.10- ರಾಜ್ಯದಲ್ಲಿ ನೈರುತ್ಯ ಮುಂಗಾರು ದುರ್ಬಲಗೊಳ್ಳುತ್ತಲೇ ಇದ್ದು, ಜುಲೈ ಮೊದಲ ವಾರದಲ್ಲಿ ಶೇ.46ರಷ್ಟು ಮಳೆ ಕೊರತೆ ಉಂಟಾಗಿದೆ. ಬಿತ್ತನೆ ಕಾಲದಲ್ಲೇ ಶೇ.50ರಷ್ಟು ಮಳೆ ಕೊರತೆ ರಾಜ್ಯದಲ್ಲಿ ಉಂಟಾಗಿರುವುದು ರೈತ ಸಮುದಾಯವನ್ನು ಆತಂಕಕ್ಕೀಡುಮಾಡಿದೆ. ಜೂನ್ ತಿಂಗಳಲ್ಲೂ ರಾಜ್ಯದ ದಕ್ಷಿಣ ಒಳನಾಡಿನಲ್ಲಿ ಶೇ.37ರಷ್ಟು, ಮಲೆನಾಡಿನಲ್ಲಿ ಶೇ.17ರಷ್ಟು ಮಳೆ ಕೊರತೆ ಉಂಟಾಗಿದ್ದು, ಒಟ್ಟಾರೆ ರಾಜ್ಯದಲ್ಲಿ ಶೇ.5ರಷ್ಟು ಮಳೆ ಕೊರತೆ ಕಂಡು ಬಂದಿತ್ತು.
ಜುಲೈ ತಿಂಗಳ ಮೊದಲ ವಾರದಲ್ಲಿ ಮುಂಗಾರು ಚೇತರಿಕೆಯಾಗಿಲ್ಲ. ಎರಡನೇ ವಾರದಲ್ಲಿ ಮುಂಗಾರು ಚುರುಕಾಗುವ ಮುನ್ಸೂಚನೆಗಳು ಕಂಡು ಬರುತ್ತಿಲ್ಲ. ಕರ್ನಾಟಕ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮಾಹಿತಿ ಪ್ರಕಾರ ಜೂನ್ ತಿಂಗಳಿನಲ್ಲಿ ರಾಜ್ಯದಲ್ಲಿ 195 ಮಿಲಿಮೀಟರ್ನಷ್ಟು ಮಳೆಯಗಬೇಕಿತ್ತು. ಆದರೆ, 185 ಮಿಲಿಮೀಟರ್ನಷ್ಟು ಮಳೆ ಆಗಿತ್ತು.
ದಕ್ಷಿಣ ಒಳನಾಡಿನಲ್ಲಿ 64 ಮಿಲಿಮೀಟರ್ನಷ್ಟು ವಾಡಿಕೆ ಮಳೆ ಜೂನ್ ತಿಂಗಳಿನಲ್ಲಿ ಬೀಳಬೇಕಿತ್ತು. ಆದರೆ, 41ಮಿಮೀನಷ್ಟು ಮಳೆಯಾಗಿದೆ. ಇನ್ನು ಜುಲೈ ತಿಂಗಳ ಮೊದಲ ವಾರದಲ್ಲೂ ಕೂಡ ಮಳೆ ಚೇತರಿಕೆ ಕಂಡಿಲ್ಲ. ದಕ್ಷಿಣ ಒಳನಾಡಿನ ವಾಡಿಕೆ ಪ್ರಮಾಣ 17ಮಿಮೀ ಇದ್ದರೆ ಬಿದ್ದಿರುವುದು ಕೇವಲ 7 ಮಿಮೀನಷ್ಟು.
ಇದರಿಂದ ಶೇ.56ರಷ್ಟು ಮಳೆ ಕೊರತೆ ಉಂಟಾಗಿದೆ. ಉತ್ತರ ಒಳನಾಡಿನಲ್ಲಿ ವಾಡಿಕೆ ಮಳೆ ಪ್ರಮಾಣ 26ಮಿಮೀ ಇದ್ದರೆ, ಬಿದ್ದಿರುವುದು ಕೇವಲ 9ಮಿಮೀನಷ್ಟು ಮಾತ್ರ. ಇಲ್ಲೂ ಕೂಡ ಶೇ.65ರಷ್ಟು ಮಳೆ ಕೊರತೆ ಕಂಡು ಬಂದಿದೆ. ಹೆಚ್ಚು ಮಳೆ ಆಗುತ್ತಿದ್ದ ಕರಾವಳಿಯಲ್ಲೂ ಶೇ.28ರಷ್ಟು ಹಾಗೂ ಮಲೆನಾಡು ಭಾಗದಲ್ಲಿ 149 ಮಿಮೀ ವಾಡಿಕೆ ಮಳೆಗೆ 69ಮಿಮೀನಷ್ಟು ಮಾತ್ರ ಮಳೆಯಾಗಿದ್ದು, ಶೇ.54ರಷ್ಟು ಕೊರತೆ ಉಂಟಾಗಿದೆ.
ದಕ್ಷಿಣ ಒಳನಾಡಿನ ಪ್ರಮುಖ ಜಲಾಶಯಗಳಾದ ಹಾರಂಗಿಯಲ್ಲಿ ಕಳೆದ ವರ್ಷಕ್ಕಿಂತ 17 ಅಡಿಯಷ್ಟು ಕಡಿಮೆ ನೀರಿನ ಸಂಗ್ರಹವಿದೆ. ಒಳ ಹರಿವು ಕೇವಲ 467 ಕ್ಯೂಸೆಕ್ಸ್ ಇದೆ.
ಹೇಮಾವತಿ ಜಲಾಶಯದಲ್ಲೂ ಕಳೆದ ವರ್ಷಕ್ಕಿಂತ 11 ಅಡಿ ಕಡಿಮೆ ನೀರಿದ್ದು, ಒಳ ಹರಿವು ಕೂಡ 1262 ಕ್ಯೂಸೆಕ್ಸ್ ಇದೆ. ಪ್ರಮುಖ ಜಲಾಶಯವಾದ ಕೆಆರ್ಎಸ್ನಲ್ಲಿ 74.15 ಅಡಿಯಷ್ಟು ಮಾತ್ರ ನೀರಿದ್ದು, ಕಳೆದ ವರ್ಷಕ್ಕಿಂತ 10 ಅಡಿಯಷ್ಟು ಕಡಿಮೆ ನೀರಿನ ಸಂಗ್ರಹವಿದೆ. ಒಳ ಹರಿವು 5468 ಕ್ಯೂಸೆಕ್ಸ್ ಇದೆ. ಕಬಿನಿ ಜಲಾಶಯದಲ್ಲೂ ಕಳೆದ ವರ್ಷಕ್ಕಿಂತ ಕಡಿಮೆ ಇದ್ದು, 3842 ಕ್ಯೂಸೆಕ್ ಒಳ ಹರಿವಿದ್ದು, ಕೆಆರ್ಎಸ್ ಮತ್ತು ಕಬಿನಿ ಜಲಾಶಯಗಳಿಂದ 4ಸಾವಿರ ಕ್ಯೂಸೆಕ್ಗೂ ಹೆಚ್ಚು ನೀರನ್ನು ಹೊರ ಬಿಡಲಾಗುತ್ತಿದೆ.
ಮೋಡಕವಿದ ಹಾಗೂ ಮೇಲ್ಮೈ ಗಾಳಿ ಬೀಸುವ ವಾತಾವರಣ ಎಲ್ಲೆಡೆ ಕಂಡು ಬರುತ್ತಿದೆಯಾದರೂ ಭಾರೀ ಮಳೆಯಾಗುತ್ತಿಲ್ಲ. ಕರ್ನಾಟಕ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ನಿರ್ದೇಶಕ ಡಾ.ಶ್ರೀನಿವಾಸರೆಡ್ಡಿ ಅವರ ಪ್ರಕಾರ, ಸದ್ಯಕ್ಕೆ ವಾತಾವರಣದಲ್ಲಿ ಯಾವುದೇ ಬದಲಾವಣೆ ಕಂಡು ಬರುತ್ತಿಲ್ಲ. ಮುಂಗಾರು ದುರ್ಬಲವಾಗಿಯೇ ಕಂಡುಬರುತ್ತಿದೆ . ಎಲ್ಲೂ ಕೂಡ ಭಾರೀ ಮಳೆ ಹಾಗೂ ವ್ಯಾಪಕ ಮಳೆಯಾಗುತ್ತಿಲ್ಲ.
ಕರಾವಳಿ ಹಾಗೂ ಮಲೆನಾಡು ಭಾಗದಲ್ಲೂ ಮಳೆ ಪ್ರಮಾಣ ಇಳಿಮುಖವಾಗಿದೆ. ಸರಿಸುಮಾರು ಈ ತಿಂಗಳಾಂತ್ಯದವರೆಗೂ ಇದೇ ಪರಿಸ್ಥಿತಿ ಮುಂದುವರೆಯುವ ಸಾಧ್ಯತೆಗಳನ್ನು ತಳ್ಳಿಹಾಕುವಂತಿಲ್ಲ. ಜುಲೈ 12ರ ನಂತರ ಮುಂಗಾರಿನಲ್ಲಿ ಚೇತರಿಕೆ ನಿರೀಕ್ಷಿಸಲಾಗಿದ್ದು, ಎಷ್ಟರ ಮಟ್ಟಿಗೆ ಮಳೆ ಪ್ರಮಾಣ ಹೆಚ್ಚಳವಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ.
ಒಟ್ಟಾರೆ ಈ ಭಾರಿಯ ಮುಂಗಾರು ವಿಳಂಬವಾಗಿದ್ದಲ್ಲದೆ ದುರ್ಬಲವಾಗಿರುವುದರಿಂದ ಸತತ ಬರಕ್ಕೆ ತುತ್ತಾಗಿದ್ದ ರಾಜ್ಯದಲ್ಲಿ ಸಂಕಷ್ಟ ಪರಿಸ್ಥಿತಿ ಮುಂದುವರೆಯುವಂತಾಗಿದೆ ಎಂದು ಹೇಳಿದರು. ರಾಜ್ಯ ಸರ್ಕಾರ ಮೋಡ ಬಿತ್ತನೆಗೆ ಮುಂದಾಗಿದ್ದು, ಆಗಸ್ಟ್ನಲ್ಲಿ ಮೋಡ ಬಿತ್ತನೆ ಮಾಡಿ ಕೃತಕ ಮಳೆ ತರಿಸುವ ಪ್ರಯತ್ನ ನಡೆಯಬಹುದಾಗಿದೆ.
< Eesanje News 24/7 ನ್ಯೂಸ್ ಆ್ಯಪ್ >
Click Here to Download : Android / iOS