ಛೀಮಾರಿ ಹಾಕಿಸಿಕೊಂಡ ನಂತರ ಐವರು ನ್ಯಾಯಮೂರ್ತಿಗನ್ನು ನೇಮಿಸಿದ ಕೇಂದ್ರ ಸರ್ಕಾರ

Judge-02

ನವದೆಹಲಿ,ನ.11-ಸುಪ್ರೀಂಕೋರ್ಟ್‍ನಿಂದ ಛೀಮಾರಿ ಹಾಕಿಸಿಕೊಂಡ ನಂತರ ದೇಶದ ವಿವಿಧ ರಾಜ್ಯಗಳ ಹೈಕೋರ್ಟ್ ನ್ಯಾಯಮೂರ್ತಿಗಳ ನೇಮಕಾತಿ ಪ್ರಕ್ರಿಯೆಯನ್ನು ಚುರುಕುಗೊಳಿಸಿರುವ ಕೇಂದ್ರ ಸರ್ಕಾರ ಮೊದಲನೇ ಹಂತವಾಗಿ ಐವರು ನ್ಯಾಯಾಧೀಶರನ್ನು ನೇಮಕ ಮಾಡಿದೆ.  ಕರ್ನಾಟಕ ಹೈಕೋರ್ಟ್‍ನ ಮುಖ್ಯ ನ್ಯಾಯಮೂರ್ತಿ ಎಸ್.ಕೆ.ಮುಖರ್ಜಿಯವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಐವರ ಹೆಸರನ್ನು ಅಂತಿಮಗೊಳಿಸಿ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಿಗೆ ರವಾನಿಸಲಾಗಿತ್ತು.  ನ್ಯಾಯಮೂರ್ತಿಗಳಾದ ಕುನ್ಹಾ , ಬಿ.ಎ.ಪಾಟೀಲ್, ಹರೀಶ್‍ಕುಮಾರ್, ಮುದಗಲ್ ಮತ್ತು ಸೋಮಶೇಖರ್ ಅವರುಗಳನ್ನು ಕೇಂದ್ರ ಸರ್ಕಾರ ನೇಮಿಸಿದೆ. ಇದೇ ವೇಳೆ, ಕೊಲಿಜಿಯಂ(ಸುಪ್ರೀಂಕೋರ್ಟ್ ನ್ಯಾಯಾಧೀಶರುಗಳ ನೇಮಕಾತಿ ಮಂಡಳಿ ) ಶಿಫಾರಸು ಮಾಡಿದ್ದ 77 ನ್ಯಾಯಮೂರ್ತಿಗಳ ಪಟ್ಟಿಯಲ್ಲಿ 34 ನ್ಯಾಯಾಧೀಶರನ್ನು ನೇಮಕ ಮಾಡಲು ಸರ್ಕಾರ ಕ್ರಮ ಕೈಗೊಂಡಿದೆ ಎಂದು ಸರ್ಕಾರದ ಪರವಾಗಿ ಎಜಿ ಸುಪ್ರೀಂಕೋರ್ಟ್‍ಗೆ ತಿಳಿಸಿದ್ದಾರೆ.

ಉಳಿದ 43 ನ್ಯಾಯಾಧೀಶರ ನೇಮಕದ ಬಗ್ಗೆ ಸದ್ಯದಲ್ಲೇ ತೀರ್ಮಾನ ಕೈಗೊಳ್ಳುವುದಾಗಿ ಸರ್ಕಾರವು ಸುಪ್ರೀಂಕೋರ್ಟ್‍ಗೆ ತಿಳಿಸಿದೆ. ಆಗಸ್ಟ್ 3ರಂದು ಕೇಂದ್ರ ಸರ್ಕಾರವು ಈ ಸಂಬಂಧ ಸಲ್ಲಿಸಿದ್ದ ಕರಡಿನ ಬಗ್ಗೆ ಈವರೆಗೆ ಯಾವುದೇ ಪ್ರತ್ಯುತ್ತರ ಬಂದಿಲ್ಲ ಎಂದು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.  ನವೆಂಬರ್ 15ರಂದು ಕೊಲಿಜಿಯಂನ ಸಭೆ ನಡೆಯಲಿದ್ದು , ನವೆಂಬರ್ 18ರ ಮುಂದಿನ ವಿಚಾರಣೆಯಲ್ಲಿ ಈ ವಿಷಯದ ಬಗ್ಗೆ ಮತ್ತು ನ್ಯಾಯಾಧೀಶರ ಹುದ್ದೆಗಳ ನೇಮಕಾತಿ ಕುರಿತು ಕೇಂದ್ರ ಸರ್ಕಾರ ಪೂರ್ಣ ಮಾಹಿತಿ ನೀಡುವಂತೆ ಸುಪ್ರಿಂಕೋರ್ಟ್ ಮುಖ್ಯನ್ಯಾಯಮೂರ್ತಿ ಸಿ.ಎಸ್.ಠಾಕೂರ್ ಸೂಚಿಸಿದ್ದಾರೆ.

► Follow us on –  Facebook / Twitter  / Google+

Sri Raghav

Admin