ಜಂಬೂಸವಾರಿಯಲ್ಲಿ ಅಂಬಾರಿ ಹೊತ್ತು ಹೆಜ್ಜೆ ಹಾಕಿದ್ದ ದಸರಾ ಗಜಪಡೆ ಶಿಬಿರಗಳಿಗೆ ವಾಪಸ್

Spread the love

Dasara

ಮೈಸೂರು, ಅ.13- ದಸರಾ ಮಹೋತ್ಸವವನ್ನು ಯಶಸ್ವಿಯಾಗಿ ನಡೆಸಿಕೊಟ್ಟ ಗಜಪಡೆಗಳು ಇಂದು ಸ್ವಸ್ಥಾನಕ್ಕೆ ಪ್ರಯಾಣ ಬೆಳೆಸಿದವು. ಜಂಬೂಸವಾರಿ ಮೆರವಣಿಗೆ ಸಂದರ್ಭದಲ್ಲಿ ಗಜ ಗಾಂಭೀರ್ಯದಿಂದ ಹೆಜ್ಜೆ ಹಾಕಿ ಲಕ್ಷಾಂತರ ಮುಂದಿಯ ಮೆಚ್ಚುಗೆಗೆ ಪಾತ್ರವಾಗಿದ್ದ ಕ್ಯಾಪ್ಟನ್ ಅರ್ಜುನ ನೇತೃತ್ವದ ಗಜ ಪಡೆ ಮೈಸೂರು ಅರಮನೆ ಆವರಣದಿಂದ ಇಂದು ತೆರಳಿತು.
ತಿಂಗಳ ಹಿಂದೆ ಕಾಡಿನಿಂದ ನಾಡಿಗೆ ಆಗಮಿಸಿದ್ದ ಆನೆಗಳು ಮತ್ತೆ ಇಂದು ಕಾಡಿಗೆ ತೆರಳಿದವು. ಎರಡು ತಂಡಗಳಲ್ಲಿ 12 ಆನೆಗಳು ದಸರಾ ಉತ್ಸವದಲ್ಲಿ ಪಾಲ್ಗೊಂಡಿದ್ದವು. ಈ ಪೈಕಿ ಕ್ಯಾಪ್ಟನ್ ಅರ್ಜುನ ಅ.11ರಂದು 750 ಕೆಜಿ ತೂಕದ ಚಿನ್ನದ ಅಂಬಾರಿಯನ್ನು ಎರಡೂವರೆ ಗಂಟೆಗೂ ಹೆಚ್ಚು ಸಮಯ ಹೊತ್ತುಕೊಂಡು ಜಂಬೂಸವಾರಿ ಮೆರವಣಿಗೆ ಯಶಸ್ವಿಗೊಳಿಸಿದ್ದು, ಉಳಿದ ಆನೆಗಳು ಸಾಥ್ ನೀಡಿದ್ದವು.

ಅರ್ಜುನ ಸೇರಿದಂತೆ ಎಲ್ಲ ಆನೆಗಳಿಗೂ ನಿನ್ನೆ ಬಿಸಿ ನೀರಿನ ಮಜ್ಜನ ಮಾಡಿಸಲಾಗಿತ್ತು. ಕಾಡಿನಿಂದ ನಾಡಿಗೆ ಬಂದಿದ್ದ ಆನೆಗಳಿಗೆ ಪೌಷ್ಠಿಕಾಂಶವುಳ್ಳ ಆಹಾರವನ್ನು ನಿತ್ಯ ನೀಡಿ ಸತ್ಕರಿಸಲಾಗುತ್ತಿತ್ತು. ಇಂದು ಅವುಗಳನ್ನು ಶಿಬಿರಕ್ಕೆ ಹಿಂದಿರುಗಿಸಲಾಯಿತು. ಅರ್ಜುನ ಬೀದಿಕುಟ್ಟೆ ವಲಯದ ಬಳ್ಳೆ ಆನೆ ಶಿಬಿರಕ್ಕೆ, ಬಲರಾಮ ಮತ್ತಿಗೋಡು ವಲಯದ ಗಾಳಿಪಾಳ್ಯ ಆನೆ ಶಿಬಿರಕ್ಕೆ, ಅಭಿಮನ್ಯು ಮೂಡ್ಕಲ್ ಆನೆ ಶಿಬಿರಕ್ಕೆ, ಗಜೇಂದ್ರ ಕೆ.ಗುಡಿ ಆನೆ ಶಿಬಿರಕ್ಕೆ, ಕಾವೇರಿ ಮತ್ತು ವಿಜಯ ದುಬಾರೆ ಆನೆ ಶಿಬಿರಕ್ಕೆ ಪಯಣ ಬೆಳೆಸಿದವು. ಎರಡನೇ ತಂಡದ ಆನೆಗಳಾದ ಗೋಪಿ, ಹರ್ಷ, ಪ್ರಶಾಂತ್, ವಿಕ್ರಮ ದುಬಾರೆ ಆನೆ ಶಿಬಿರಕ್ಕೆ, ಗೋಪಾಲಸ್ವಾಮಿ ಮೂಡ್ಕಲ್ ಆನೆ ಶಿಬಿರಕ್ಕೆ, ದುರ್ಗಾಪರಮೇಶ್ವರಿ ಕೆ.ಗುಡಿ ಆನೆ ಶಿಬಿರಕ್ಕೆ ತೆರಳಿದವು.

ಇಂದು ಬೆಳಗ್ಗೆ ಮೈಸೂರು ಅರಮನೆ ಆವರಣದಲ್ಲಿ ಮಾವುತರು ಹಾಗೂ ಕವಾಡಿಗಳಿಗೆ ಗೌರವಧನ, ಉಪಹಾರ ನೀಡಿ ಸತ್ಕರಿಸಿ ಜಿಲ್ಲಾಡಳಿತದ ವತಿಯಿಂದ ಬೀಳ್ಕೊಡಲಾಯಿತು.

► Follow us on –  Facebook / Twitter  / Google+

Facebook Comments

Sri Raghav

Admin