‘ಜನತಾ ಜನಾರ್ದನ’ ಪ್ರಣಾಳಿಕೆ ಸಿದ್ಧಪಡಿಸುವಂತೆ ರಾಜ್ಯದ ವರಿಷ್ಠರಿಗೆ ರಾಹುಲ್ ಸೂಚನೆ

Rahul--01
ನವದೆಹಲಿ, ಜ.27-ಕರ್ನಾಟಕದಲ್ಲಿ ಏಪ್ರಿಲ್ ಅಥವಾ ಮೇನಲ್ಲಿ ವಿಧಾನಸಭಾ ಚುನಾವಣೆಗಳು ನಡೆಯಲಿರುವ ಹಿನ್ನೆಲೆಯಲ್ಲಿ ಜನತಾ ಜನಾರ್ದನ ಪ್ರಣಾಳಿಕೆ ಸಿದ್ಧಪಡಿಸುವಂತೆ ಎಐಎಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ರಾಜ್ಯದ ಕಾಂಗ್ರೆಸ್ ವರಿಷ್ಠರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಗುಜರಾತ್ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಜನರನ್ನು ತಲುಪಲು ಕಾಂಗ್ರೆಸ್ ಕೈಗೊಂಡಿದ್ದ ವ್ಯಾಪಕ ಕಾರ್ಯಕ್ರಮಗಳ ವಿಧಾನ(ಟೆಲಿಕಾಂ ಉದ್ಯಮಿ ಸ್ಯಾಮ್ ಪಿತ್ರೋಡಾ ಮಾದರಿ) ಅನುಸರಿಸುವಂತೆ ಅವರು ಸಲಹೆ ಮಾಡಿದ್ದಾರೆ.

ಮಾಜಿ ಮುಖ್ಯಮಂತ್ರಿ ಹಾಗೂ ಪಕ್ಷದ ಹಿರಿಯ ಧುರೀಣ ಡಾ.ಎಂ.ವೀರಪ್ಪ ಮೊಯ್ಲಿ ಅವರ ನೇತೃತ್ವದ ತಂಡವು ಈಗಾಗಲೇ ಈ ಪ್ರಕ್ರಿಯೆ ಆರಂಭಿಸಿದೆ. ಶೀಘ್ರದಲ್ಲೇ ಎಲ್ಲ ಪ್ರಮುಖ ವಿಷಯಗಳನ್ನು ಒಳಗೊಂಡ ಜನತಾ ಜನಾರ್ದನ ಪ್ರಣಾಳಿಕೆಯನ್ನು ಬಿಡುಗಡೆ ಮಾಡುವ ನಿರೀಕ್ಷೆ ಇದೆ. ಕರ್ನಾಟಕದ ಜನರ ನಿರೀಕ್ಷೆಗಳು ಮತ್ತು ಆಶೋತ್ತರಗಳನ್ನು ಬಿಂಬಿಸುವ ರೀತಿಯಲ್ಲಿ ಜನತಾ ಪ್ರಣಾಳಿಕೆಯನ್ನು ತಯಾರಿಸುವಂತೆ ಪಕ್ಷದ ಅಧ್ಯಕ್ಷರು ಸೂಚಿಸಿದ್ದಾರೆ. ಈ ನಿಟ್ಟಿನಲ್ಲಿ ಕಾಂಗ್ರೆಸ್ ಸಂಬಂಧಪಟ್ಟವರಿಂದ ಮಾಹಿತಿಯನ್ನು ಪಡೆಯುವ ಪ್ರಕ್ರಿಯೆ ಆರಂಭಿಸಲಿದೆ ಎಂದು ಕರ್ನಾಟಕಕ್ಕೆ ಎಐಸಿಸಿ ಕಾರ್ಯದರ್ಶಿ ಉಸ್ತುವಾರಿ ಮಧು ಘವಡ್ ಯಕ್ಷಿ ತಿಳಿಸಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರವು ಕೃಷಿ ಭಾಗ್ಯ, ಕ್ಷೀರ ಭಾಗ್ಯ, ಅನ್ನಭಾಗ್ಯ, ಇಂದಿರಾ ವಸ್ತ್ರಭಾಗ್ಯ, ಇಂದಿರಾ ಕ್ಯಾಂಟೀನ್ ಸೇರಿದಂತೆ ಅನೇಕ ಜನಪರ ಕಾರ್ಯಕ್ರಮಗಳು ಮತ್ತು ಯೋಜನೆಗಳನ್ನು ಅನುಷ್ಠಾನಗೊಳಿಸಿದೆ. ಅವುಗಳ ಬಗ್ಗೆ ರಾಜ್ಯದಾದ್ಯಂತ ದೊಡ್ಡ ಮಟ್ಟದಲ್ಲಿ ಪ್ರಚಾರ ಮಾಡುವಂತೆಯೂ ಸೂಚಿಸಲಾಗಿದೆ ಎಂದು ಅವರು ವಿವರಿಸಿದ್ದಾರೆ. ಕಳೆದ ವರ್ಷ ಗುಜರಾತ್‍ನಲ್ಲಿ ನಡೆದ ಎರಡು ಹಂತಗಳ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಖ್ಯಾತ ಟೆಲಿಕಾಂ ಉದ್ಯಮಿ ಸ್ಯಾಮ್ ಪಿತ್ರೋಡಾ ಅವರು ಆ ರಾಜ್ಯದ ವಡೋದರಾ, ಅಹಮದಾಬಾದ್, ರಾಜ್‍ಕೋಟ್, ಜಾಮ್‍ನಗರ್ ಮತ್ತು ಸೂರತ್-ಈ ಐದು ನಗರಗಳಲ್ಲಿ ಜನರನ್ನು ತಲುಪುವ ಕಾರ್ಯಕ್ರಮವನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿದ್ದರು.

ಸ್ಯಾಮ್ ನೇತೃತ್ವದ ತಂಡವು ಶಿಕ್ಷಣ, ಆರೋಗ್ಯ, ಸಣ್ಣ ಮತ್ತು ಮಧ್ಯಮ ಉದ್ಯಮಗಳು, ಉದ್ಯೋಗ ಸೃಷ್ಟಿ ಮತ್ತು ಪರಿಸರ ಸಂರಕ್ಷಣೆ ವಿಷಯಗಳಿಗೆ ಆದ್ಯತೆ ನೀಡಿದ್ದವು. ಅದೇ ವಿಧಾನವನ್ನು ಕರ್ನಾಟಕದಲ್ಲೂ ಅನುಸರಿಸಿ ಜನರ ಮನಗೆಲ್ಲಲು ಅನುಸರಿಸಬೇಕಾದ ಪೂರಕ ಕ್ರಮಗಳನ್ನು ಕೈಗೊಳ್ಳುವಂತೆ ರಾಹುಲ್ ಸೂಚಿಸಿದ್ದಾರೆ. ಇದೊಂದು ಉತ್ತಮ ವಿಧಾನ. ಜನರಿಗೆ ಏನು ಬೇಕು. ಅವರ ನಾಡಿ ಮಿಡಿತವೇನು ಎಂಬುದನ್ನು ತಿಳಿಯಲು ಇದರಿಂದ ಸಹಕಾರಿಯಾಗುತ್ತದೆ. ನಾಯಕರು ಕಚೇರಿಗಳಲ್ಲಿ ಕುಳಿತು ಚರ್ಚಿಸಿ ಪ್ರಣಾಳಿಕೆಗಳನ್ನು ಸಿದ್ಧಪಡಿಸುವುದಕ್ಕಿಂತ ಈ ವಿಧಾನ ಉತ್ತಮ ಎಂದು ಮತ್ತೊಬ್ಬ ಹಿರಿಯ ನಾಯಕರು ಹೇಳಿದ್ದಾರೆ.

ಅಭಿವೃದ್ದಿಗೆ ಸಂಬಂಧಪಟ್ಟ ಸಾಮಾಜಿಕ-ಆರ್ಥಿಕ ಅಂಶಗಳ ಕಡೆಗೂ ಕೆಪಿಸಿಸಿ ಗಮನಹರಿಸಲಿದೆ ಎಂದು ಅವರು ಹೇಳಿದ್ದಾರೆ. ರಾಜ್ಯದ 224 ವಿಧಾನಸಭಾ ಕ್ಷೇತ್ರಗಳ ಚುನಾವಣೆಗೆ ದಿನಾಂಕ ಪ್ರಕಟಗೊಳ್ಳಬೇಕಿದ್ದು, ಈಗಾಗಲೇ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ನಾಯಕರು ಹೈವೋಲ್ಟೇಜ್ ಚುನಾವಣೆಗಾಗಿ ಈಗಿನಿಂದಲೇ ಪ್ರಚಾರ ಕಾರ್ಯ ಆರಂಭಿಸಿದ್ದಾರೆ.

Sri Raghav

Admin