ಜನ್ ಧನ್ ಖಾತೆದಾರರಿಗೆ ಆರ್’ಬಿಐ ಶಾಕ್

Jan-Dhan

ನವದೆಹಲಿ, ನ.30-ಬಡವರ ಆರ್ಥಿಕ ಸ್ಥಿತಿ ಸುಧಾರಣೆಗಾಗಿ ಅನುಷ್ಠಾನಗೊಳಿಸಿರುವ ಜನ್‍ಧನ್ ಖಾತೆಗಳಲ್ಲಿ ನೋಟು ಅಮಾನ್ಯದ ನಂತರ ಭಾರೀ ಪ್ರಮಾಣದ ಠೇವಣಿ ಸಂಗ್ರಹವಾಗುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‍ಬಿಐ) ಆ ಖಾತೆಯಿಂದ ಹಣ ಹಿಂಪಡೆಯುವ ಮಿತಿಯನ್ನು ಮಾಸಿಕ 10,000 ರೂ.ಗಳಿಗೆ ನಿರ್ಬಂಧಗೊಳಿಸಿದೆ. ಈ ಮೂಲಕ ಜನಧನ್‍ನಲ್ಲಿ ಅಕ್ರಮ ಠೇವಣಿ ಹೊಂದಿರುವ ಖಾತೆದಾರರಿಗೂ ದಿಢೀರ್ ಶಾಕ್ ನೀಡಿದೆ.  ಈ ಸಂಬಂಧ ಆರ್‍ಬಿಐ ಹೊಸ ಆದೇಶ ಹೊರಡಿಸಿದ್ದು, ಜನ್‍ಧನ್ ಖಾತೆಗಳಿಂದ ಮಾಸಿಕ 10,000 ರೂ.ಗಳನ್ನು ಮಾತ್ರ ವಿತ್‍ಡ್ರಾ ಮಾಡಲು ನಿರ್ಬಂಧ ಹೇರಿದೆ.

ಇಂದು ಈ ಕುರಿತು ದಿಢೀರ್ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಆರ್‍ಬಿಐ, ಕೆವೈಸಿ (ನೋ ಯುವರ್ ಕಸ್ಟಮರ್/ನಿಮ್ಮ ಗ್ರಾಹಕರನ್ನು ತಿಳಿಯಿರಿ) ವ್ಯಾಪ್ತಿಗೆ ಒಳಪಟ್ಟ ಜನ್‍ಧನ್ ಯೋಜನೆಯ ಖಾತೆದಾರರು ಪ್ರತಿ ತಿಂಗಳು 10,000 ರೂ.ಗಳ ಹಣವನ್ನು ಮಾತ್ರ ಪಡೆಯಲು ಅನುಮತಿ ನೀಡಿದೆ. ಕೆವೈಸಿ ಆಗಿರದ ಗ್ರಾಹಕರು ತಮ್ಮ ಖಾತೆಗಳಿಗೆ ಮಾಸಿಕ ಗರಿಷ್ಠ 5,000 ರೂ.ಗಳ ಹಣ ವಿತ್‍ಡ್ರಾ ಮಾಡಬಹುದಾಗಿದೆ ಎಂದು ತಿಳಿಸಿದೆ. ಇದೇ ವೇಳೆ ಠೇವಣಿ ಮತ್ತು ಜಮೆಗೆ ಸಂಬಂಧಪಟ್ಟಂತೆ, ಜನ್‍ಧನ್ ಖಾತೆದಾರರ ಠೇವಣಿ ಇಡುವ ಮೊತ್ತವನ್ನು 50,000 ರೂ.ಗಳಿಗೆ ಮಿತಿಗೊಳಿಸಲಾಗಿದೆ.

ತೀರಾ ಅನಿವಾರ್ಯ ಸನ್ನಿವೇಶಗಳಲ್ಲಿ ಈ ಮಿತಿಗಿಂತ ಹೆಚ್ಚು ಹಣ ಹಿಂಪಡೆಯಲು ಬೇಡಿಕೆ ಸಲ್ಲಿಕೆಯಾದಲ್ಲಿ, ಅಂಥ ವಿತ್‍ಡ್ರಾಗಳ ಅಸಲಿತನವನ್ನು ಪರಿಶೀಲಿಸಿ ಇದಕ್ಕೆ ಸಂಬಂಧಪಟ್ಟ ದಾಖಲೆಗಳನ್ನು ಪಡೆದು ಹಣ ನೀಡಲು ಬ್ಯಾಂಕ್‍ನ ವ್ಯವಸ್ಥಾಪಕರಿಗೆ ಅವಕಾಶ ನೀಡಲಾಗಿದೆ.  ಪ್ರಮುಖವಾಗಿ ನೋಟು ಅಮಾನ್ಯಗೊಂಡ ನ.8ರ ನಂತರ ಪಿಎಂಪಿಡಿವೈ ಖಾತೆಗಳಿಗೆ ಜಮೆಯಾದ ಹಣಕ್ಕೆ ಮಾತ್ರ ಈ ನಿಯಮ ಅನ್ವಯವಾಗುತ್ತದೆ ಎಂದು ಆರ್‍ಬಿಐ ಸ್ಪಷ್ಟಪಡಿಸಿದೆ.  ಜನ್‍ಧನ್ ಖಾತೆಗಳನ್ನು ಹೊಂದಿರುವ ಬಡವರು, ರೈತರು ಸಣ್ಣ ಪ್ರಮಾಣದ ವ್ಯಾಪಾರಿಗಳು ಕಾಳಧನಿಕರ ಕಮಿಷನ್ ಆಮಿಷಕ್ಕೆ ಬಲಿಯಾಗಿ ಕಾನೂನು ಕುಣಿಕೆಗೆ ಸಿಲುಕುವುದನ್ನು ತಡೆಯಲು ಆರ್‍ಬಿಐ ಈ ಮಹತ್ವದ ಕ್ರಮ ಕೈಗೊಂಡಿದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ನ.8ರಂದು ಗರಿಷ್ಠ ಮುಖಬೆಲೆಯ ನೋಟುಗಳನ್ನು ಅಮಾನ್ಯಗೊಳಿಸಿದ ನಂತರ ಪ್ರಧಾನಮಂತ್ರಿ ಜನ್‍ಧನ್ ಯೋಜನೆ (ಪಿಎಂಜೆಡಿವೈ) ಬೇನಾಮಿ ಖಾತೆಗಳಲ್ಲಿ ಅಪಾರ ಪ್ರಮಾಣದ ಹಣ ಜಮೆಯಾಗಿದ್ದವು ಹಾಗೂ ಭಾರಿ ಮೊತ್ತದ ವಹಿವಾಟುಗಳು ನಡೆದಿದ್ದವು.

ಗ್ರಾಮಾಂತರ ಪ್ರದೇಶಗಳ ರೈತರ ಖಾತೆಗಳು ಮತ್ತು ಬಡವರ ಖಾತೆಗಳಲ್ಲಿ ಜಮೆ ಮೊತ್ತ ಗಣನೀಯವಾಗಿ ಏರಿಕೆಯಾಗಿತ್ತು. ಅನೇಕ ಕಡೆ ಜೀರೋ ಬ್ಯಾಲೆನ್ ಇದ್ದ ಖಾತೆಗಳಿಗೆ ಭರ್ತಿ ಹಣ ಸಂದಾಯವಾಗಿದ್ದವು.  ದೇಶದ ಜನ್‍ಧನ್ ಖಾತೆಗಳಲ್ಲಿ ಈವರೆಗೆ ಒಟ್ಟು 73,000 ಕೋಟಿ ರೂ.ಗಳಿಗೂ ಹೆಚ್ಚು (ನ.23ರ ವೇಳೆಗೆ 72,834.72 ಕೋಟಿ ರೂ.ಗಳ ಜಮೆ) ಠೇವಣಿ ಸಂಗ್ರಹಗೊಂಡಿದ್ದು ಕೇಂದ್ರ ಸರ್ಕಾರದ ಹುಬ್ಬೇರುವಂತೆ ಮಾಡಿತ್ತು. ಪಿಎಂಜೆಡಿವೈ ಯೋಜನೆಯಡಿ ಸಂಗ್ರಹವಾದ ಠೇವಣಿ ಮೊತ್ತಗಳ ಪ್ರಮಾಣದಲ್ಲಿ ಪಶ್ಚಿಮ ಬಂಗಾಳ ಮತ್ತು ಕರ್ನಾಟಕ ಕ್ರಮವಾಗಿ ಪ್ರಥಮ ಮತ್ತು ದ್ವಿತೀಯ ಸ್ಥಾನದಲ್ಲಿತ್ತು.

ಮನ್‍ಕೀ ಬಾತ್ ಕಾರ್ಯಕ್ರಮದಲ್ಲೂ ಕೂಡ ಪ್ರಧಾನಿ ಮೋದಿ, ಜನ್‍ಧನ್ ಖಾತೆಗಳಲ್ಲಿ ಹಣ ಜಮೆ ಮಾಡುವ ಮೂಲಕ ಬಡವರಿಗೆ ಕಾಟ ಕೊಡಬೇಡಿ ಮತ್ತು ಅವರ ಜೀವನದೊಂದಿಗೆ ಚೆಲ್ಲಾಟವಾಡಬೇಡಿ ಎಂದು ಕಾಳಧನಿಕರಿಗೆ ಎಚ್ಚರಿಕೆ ನೀಡಿದ್ದರು.  ಕಾಳಧನಿಕರು ಮತ್ತು ಅಕ್ರಮ ಹಣ ಸಂಪಾದಿಸಿರುವ ಕುಳಗಳು ಈ ಖಾತೆಗಳನ್ನು ಉಪಯೋಗಿಸಿಕೊಂಡು ತಮ್ಮ ಬ್ಲ್ಯಾಕ್‍ಮನಿಯನ್ನು ವೈಟ್ ಮಾಡಿಕೊಳ್ಳುತ್ತಿದ್ದಾರೆ ಎಂಬ ಗಂಭೀರ ಆರೋಪಗಳು ಕೇಳಿಬಂದಿದ್ದವು. ಈಗ ಜನ್‍ಧನ್ ಖಾತೆದಾರರಿಗೆ ಆರ್‍ಬಿಐ ಜಾಪಾಳ ನೀಡಿದೆ.

> ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… :  Eesanje News 24/7 ನ್ಯೂಸ್ ಆ್ಯಪ್ –  Click Here to Download 

Sri Raghav

Admin