ಜಪಾನ್ ನಲ್ಲಿ 7.3 ತೀವ್ರತೆಯ ಪ್ರಬಲ ಭೂಕಂಪ : ಅಬ್ಬರಿಸಿದ ಸುನಾಮಿ ಅಲೆಗಳು

Japan

ಟೋಕಿಯೊ, ನ.22-ಪದೇ ಪದೇ ನೈಸರ್ಗಿಕ ವಿಕೋಪಗಳಿಗೆ ತುತ್ತಾಗುತ್ತಲೇ ಇರುವ ಜಪಾನ್‍ನ ಉತ್ತರ ಭಾಗದಲ್ಲಿ ಇಂದು ಮುಂಜಾನೆ ಭಾರೀ ಭೂಕಂಪ ಸಂಭವಿಸಿದ್ದು, ಅದರ ಹಿಂದೆಯೇ ದೊಡ್ಡ ಸುನಾಮಿ ಅಲೆ ಅಪ್ಪಳಿಸಿದೆ. ಇದರಿಂದಾಗಿ ಆ ಭಾಗದಲ್ಲಿ ತೀವ್ರ ಆತಂಕ ಸೃಷ್ಟಿಯಾಗಿದೆ.  ಇಂದು ಬೆಳಿಗ್ಗೆ 5.59ರಲ್ಲಿ ರಿಕ್ಟರ್ ಮಾಪಕದಲ್ಲಿ 7.4ರಷ್ಟು ತೀವ್ರತೆಯ ಪ್ರಬಲ ಭೂಕಂಪ ದಾಖಲಾಗಿದೆ. ಫುಕುಶಿಮಾ ಮುಖಜಭೂಮಿ ಕರಾವಳಿ ಪ್ರದೇಶದ 10 ಕಿ.ಮೀ. ಆಳದಲ್ಲಿ ಭೂಕಂಪ ಕೇಂದ್ರ ಬಿಂದು ಇತ್ತು. ಭೂಕಂಪ ಸಂಭವಿಸಿದ ಕೆಲ ನಿಮಿಷಗಳ ನಂತರ ಸಾಗದಲ್ಲಿ ದೈತ್ಯಾಕಾರದ ಅಲೆಗಳು ಎದ್ದು ಕರಾವಳಿ ಪ್ರದೇಶವನ್ನು ಅಪ್ಪಳಿಸಿತು.

ಇದೇ ಸ್ಥಳದಲ್ಲಿದ್ದ ಪರಮಾಣು ಸ್ಥಾವರಗಳ ಮೇಲೂ ಒಂದು ಮೀಟರ್ ಎತ್ತರದ ಅಲೆ ಬಂದೆರಗಿ ಕಾರ್ಯನಿರ್ವಹಣೆಗೆ ಅಡಚಣೆ ಉಂಟು ಮಾಡಿತು. ಯಾವುದೇ ಸಾವು-ನೋವು ಮತ್ತು ಆಸ್ತಿ ನಷ್ಟದ ಬಗ್ಗೆ ವರದಿಯಾಗಿಲ್ಲ. ಆದರೂ ಮತ್ತೆ ಯಾವುದೇ ಕ್ಷಣದಲ್ಲಿ ಸಂಭವಿಸಬಹುದಾದ ವಿಕೋಪ ಪರಿಸ್ಥಿತಿಯನ್ನು ಎದುರಿಸಲು ರಕ್ಷಣಾ ಪಡೆಗಳು ಸನ್ನದ್ಧವಾಗಿವೆ. ಇದೇ ಪ್ರದೇಶದಲ್ಲಿ 2011ರಲ್ಲಿ ಭಾರೀ ಭೂಕಂಪ, ಸುನಾಮಿ ಮತ್ತು ಅಣು ದುರಂತ ಸಂಭವಿಸಿ ಅಪಾರ ಸಾವು-ನೋವು ಉಂಟಾಗಿತ್ತು. ಈ ಹಿನ್ನೆಲೆಯಲ್ಲಿ ಸ್ಥಳೀಯ ಜನರು ಭಯಭೀತರಾಗಿದ್ದಾರೆ.
ಸಾಗರ ಗರ್ಭದಲ್ಲಿ ಭಾರೀ ಭೂಕಂಪ ಸಂಭವಿಸಿರುವುದರಿಂದ ಫುಕುಶಿಮಾ ಮೇಲೆ ದೊಡ್ಡ ಸುನಾಮಿ ಅಲೆಗಳು ಬಂದೆರಗುವ ಸಾಧ್ಯತೆ ಇದೆ ಎಂದು ಜಪಾನ್ ಭೂಕಂಪ ಮಾಪನ ಸಂಸ್ಥೆ ಈ ಮೊದಲೇ ಎಚ್ಚರಿಕೆ ನೀಡಿತ್ತು. ಈ ಹಿನ್ನೆಲೆಯಲ್ಲಿ ನಿವಾಸಿಗಳು ಸುರಕ್ಷಿತ ಸ್ಥಳಗಳತ್ತ ಪಲಾಯನ ಮಾಡುತ್ತಿದ್ದಾರೆ. ಸುನಾಮಿ ಆತಂಕದ ಎಚ್ಚರಿಕೆ ಸಂದೇಶದ ನಂತರ ಈ ಸಾಗರದ ಪ್ರದೇಶದಲ್ಲಿನ ನೌಕೆಗಳು ತ್ವರಿತವಾಗಿ ಬೇರೆ ದಿಕ್ಕಿನತ್ತ ಸಾಗಿವೆ.

ಭೂಕಂಪ ಮತ್ತು ಸುನಾಮಿಯಿಂದಾಗಿ ಫುಕುಶಿಮಾದಲ್ಲಿನ ಪರಮಾಣು ಸ್ಥಾವರಗಳಿಗೆ ಕೆಲಕಾಲ ಅಡಚಣೆಯಾಗಿತ್ತು. ಟೋಕಿಯೋ ಎಲೆಕ್ಟ್ರಿಕ್ ಪವರ್ ಕಂಪನಿ ತಪಾಸಣೆ ನಡೆಸಿ ದೋಷವನ್ನು ಸರಿಪಡಿಸಿದೆ. ಈ ಪ್ರದೇಶ ಅನ್ಯರಿಗೆ ನಿಷಿದ್ಧವಾದ ಕಾರಣ ಹೆಚ್ಚಿನ ವಿವರಗಳು ಲಭಿಸಿಲ್ಲ.  ರಾಜಧಾನಿ ಟೋಕಿಯೋ ಮತ್ತು ಸುತ್ತಮುತ್ತ ಪ್ರದೇಶಗಳಲ್ಲೂ ಭೂಮಿ ನಡುಗಿದ ಅನುಭವವಾಗಿದೆ. ಐದು ವರ್ಷಗಳ ಹಿಂದೆ ಸಂಭವಿಸಿದ ಭೀಕರ ನೈಸರ್ಗಿಕ ವಿಕೋಪ ಮತ್ತೆ ಮರುಕಳಿಸಲಿದೆ ಎಂಬ ಆತಂಕ ಜಪಾನಿಯರನ್ನು ಕಾಡುತ್ತಿದೆ.

► Follow us on –  Facebook / Twitter  / Google+

Sri Raghav

Admin