ಜಮೀನು ಮಾರಲು ಸಹಿ ಹಾಕದ ಪತ್ನಿ ಜೊತೆ ಮಗುವನ್ನು ಕೊಚ್ಚಿ ಕೊಂದ ಪಾಪಿಪತಿ

Murder

ಗೌರಿಬಿದನೂರು, ಆ.28- ಜಮೀನು ಮಾರುವ ವಿಚಾರದಲ್ಲಿ ಸಹಿ ಹಾಕಲ್ಲ ಎಂದ ಪತ್ನಿ ಹಾಗೂ ಮಗುವನ್ನು ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ತಾಲೂಕಿನ ಕಲ್ಲೂಡಿ ಸಮೀಪದ ಚನ್ನಬೈರೇನಹಳ್ಳಿ ಗ್ರಾಮದಲ್ಲಿ ಇಂದು ಬೆಳಗಿನ ಜಾವ ನಡೆದಿದೆ. ಸುಶೀಲಮ್ಮ(30) ಒಂದೂವರೆ ವರ್ಷದ ಮಗ ಚಿರಂತ್ ಬರ್ಬರವಾಗಿ ಕೊಲೆಯಾಗಿರುವ ದುರ್ದೈವಿಗಳು.   ನಡೆದಿದ್ದೇನು..? ಪಟ್ಟಣದ ಕೂಗಳತೆ ದೂರದಲ್ಲಿರುವ ಉತ್ತರ ಪಿನಾಕಿನಿ ನದಿ ದಡದಲ್ಲಿನ ಚನ್ನಭೈರೇನಹಳ್ಳಿ ಗ್ರಾಮದ ಗಂಗರತ್ನಮ್ಮ ಮತ್ತು ಲಕ್ಷ್ಮೀ ನರಸಪ್ಪ ಎಂಬುವರ ಪುತ್ರಿ ಸುಶೀಲಮ್ಮಳನ್ನು ಕಳೆದ ಮೂರು ವರ್ಷಗಳ ಹಿಂದೆಯಷ್ಟೇ ಚಿಕ್ಕಬಳ್ಳಾಪುರ ಜಿಲ್ಲೆಯ ನಂದಿ ಸಮೀಪದ ಕಾರಳ್ಳಿ ಬಳಿಯ ಕುಡುವತ್ತಿ ಗ್ರಾಮದ ರಾಮಕೃಷ್ಣಪ್ಪ ಮತ್ತು ಶಾಂತಮ್ಮ ಪುತ್ರ ಮುರಳಿಗೆ ಕೊಟ್ಟು ವಿವಾಹ ಮಾಡಿಕೊಡಲಾಗಿತ್ತು.

ಕಿರುಕುಳ: ಮದುವೆಯಾದಾಗಿನಿಂದಲೂ ಮುರಳಿ ಪ್ರತಿನಿತ್ಯ ಕುಡಿದು ಬಂದು ಹೆಂಡತಿಗೆ ಕಿರುಕುಳವನ್ನು ನೀಡುತ್ತಿದ್ದ. ಅಗಾಗ್ಗೆ ಮನೆಯಿಂದ ಹಣ ತರುವಂತೆ ತರವರಿಗೆ ಕಳುಹಿಸುತ್ತಿದ್ದ. ಮುರಳಿ ತಂದೆ ಜಮೀನೊಂದನ್ನು ಮಾರಾಟ ಮಾಡಿದ್ದು, ಇದಕ್ಕೆ ಸಾಕ್ಷಿಯಾಗಿ ಸುಶೀಲಮ್ಮಳನ್ನು ಸಹಿ ಹಾಕುವಂತೆ ಒತ್ತಾಯಿಸಿದ್ದ. ಇದಕ್ಕೆ ಸುಶೀಲಮ್ಮ ನಿರಾಕರಿಸಿದ್ದರಿಂದ ಗಂಡ-ಹೆಂಡತಿ ನಡುವೆ ಗಲಾಟೆಯಾಗಿ ನಂದಿ ಪೊಲೀಸ್ ಠಾಣೆ ಮೆಟ್ಟಲೇರಿತ್ತು. ನ್ಯಾಯಾ ಪಂಚಾಯಿತಿ ಮಾಡಿ , ಸುಶೀಲಮ್ಮಳನ್ನು ಪೋಷಕರು ತವರಿಗೆ ಮೂರು ತಿಂಗಳ ಹಿಂದೆಯಷ್ಟೇ ಕರೆತಂದಿದ್ದಾರೆ. ಎರಡು ತಿಂಗಳಿಂದಲೂ ಗಂಡ ಮುರಳಿ ಸುಶೀಲಮ್ಮಳ ಜತೆ ಅತ್ತೆ ಮನೆಯಲ್ಲಿ ವಾಸವಾಗಿದ್ದಾನೆ.

ಕೊಡಲಿಯಿಂದ ಕತ್ತು ಸೀಳಿ ಕೊಲೆ:

ಜಮೀನು ಮಾರಾಟ ಮಾಡಿದ್ದು, ಇದಕ್ಕೆ ನಿನ್ನ ಸಹಿ ಹಾಕಬೇಕು, ಇಲ್ಲವಾದರೆ ಸಾಯಿಸುವುದಾಗಿ ಬೆದರಿಸಿದ್ದಾನೆ. ನಂತರ ಇಬ್ಬರ ನಡುವೆ ಗಲಾಟೆಯಾಗಿ , ಇಂದು ಬೆಳಗಿನ ಜವ 4.30ರಲ್ಲಿ ಗಲಾಟೆ ಮಾಡಿಕೊಂಡು ಕೊಡಲಿಯಿಂದ ಕುತ್ತಿಗೆ, ಮುಖಕ್ಕೆ ಹೊಡೆದು ಸಾಯಿಸಿದ್ದಾನೆ ಎನ್ನಲಾಗಿದೆ. ಇದನ್ನು ಕಂಡ ಒಂದೂವರೆ ವರ್ಷದ ಚಿರಂತ್ ಚೀರಿಕೊಳ್ಳುತ್ತಿದ್ದಂತೆಯೇ ಪಕ್ಕದಲ್ಲಿದ್ದ ರುಬ್ಬು ಗುಂಡು ಮುಖದ ಮೇಲೆ ಎತ್ತಿಹಾಕಿ ಮಗುವನ್ನೂ ಸಹ ಕೊಂದಿದ್ದಾನೆ.

ಚೀರಾಟ:

ಮನೆ ಹೊರಗೆ ಮಲಗಿದ್ದ ಸುಶೀಲ ತಂದೆ-ತಾಯಿ ಒಳಗಡೆ ಮಗಳ ಚೀರಾಟ ಕೇಳಿ ಕೂಗಿಕೊಳ್ಳುತ್ತಿದ್ದಂತೆಯೇ ಅಕ್ಕ ಪಕ್ಕದ ಜನರು ಬಾಗಿಲು ತಳ್ಳಲು ಯತ್ನಿಸುತ್ತಿದ್ದಂತೆಯೇ ಯಾರಾದರೂ ಒಳಗಡೆ ಬಂದರೆ ನಿಮ್ಮನ್ನೂ ಮುಗಿಸುತ್ತೇನೆ ಎಂದು ಬೆದರಿಸಿ ಮನೆಯ ಮೇಲ್ಚಾವಣಿಯಿಂದ ಪರಾರಿಯಾಗಲು ಯತ್ನಿಸುತ್ತಿದ್ದಂತೆಯೇ ಗ್ರಾಮಸ್ಥರು ಮುರಳಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಸುದ್ದಿ ತಿಳಿದ ತಕ್ಷಣ ವೃತ್ತ ನಿರೀಕ್ಷಕ ಎಂ.ವಿ.ಶೇಷಾದ್ರಿ, ಎಸ್ಐ ಅವಿನಾಶ್ ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿ ಆರೋಪಿಯನ್ನು ವಶಕ್ಕೆ ಪಡೆದುಕೊಂಡು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

► Follow us on –  Facebook / Twitter  / Google+

Sri Raghav

Admin