ಜಲಮೂಲ ಶೋಧನೆಗೆ ಉಪಗ್ರಹ ಆಧಾರಿತ ತಂತ್ರಜ್ಞಾನ : ಇಸ್ರೋ ಅಧ್ಯಕ್ಷ ಕಿರಣ್‍ಕುಮಾರ್

ISRo-01

ಬೆಂಗಳೂರು, ಡಿ.10- ಬರಗಾಲದಿಂದ ತತ್ತರಿಸುತ್ತಿರುವ ಕರ್ನಾಟಕಕ್ಕೆ ನೀರಿನ ಕೊರತೆ ನೀಗಿಸಲು ಅನುವಾಗುವಂತೆ ಕರಾರುವಕ್ಕಾದ ಜಲಮೂಲವನ್ನು ಗುರುತಿಸಲು ಉಪಗ್ರಹ ಆಧಾರಿತ ತಂತ್ರಜ್ಞಾನ ಹೆಚ್ಚು ಉಪಯುಕ್ತವಾಗಲಿದೆ ಎಂದು ಇಸ್ರೋ ಅಧ್ಯಕ್ಷ ಕಿರಣ್‍ಕುಮಾರ್ ಅಭಿಪ್ರಾಯಪಟ್ಟರು. ನಗರದ ಸೋಫಿಯಾ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಚಾಟರ್ಡ್ ಅಕೌಂಟೆಂಟ್ ರಾಷ್ಟ್ರೀಯ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕರ್ನಾಟಕ ನೀರಿನ ಕೊರತೆಯಿಂದ ಸಾಕಷ್ಟು ತೊಂದರೆ ಎದುರಿಸುತ್ತಿದೆ. ತೊಂದರೆ ನಿವಾರಣೆಗೆ ಅಗತ್ಯವಿರುವ ನೀರಿಗಾಗಿ ಎಲ್ಲೆಂದರಲ್ಲಿ ಬೋರ್‍ವೆಲ್ ಕೊರೆಯುವ ಬದಲಿಗೆ ಬಾಹ್ಯಾಕಾಶ ನಿಗಾವಣೆ ತಂತ್ರಜ್ಞಾನದ ಮೂಲಕ ಯಾವ ಭಾಗದಲ್ಲಿ ಜಲಮೂಲವಿದೆ ಎಂಬುದನ್ನು ಕರಾರುವಕ್ಕಾಗಿ ಗುರುತಿಸಿ ಅಲ್ಲಿ ಬೋರ್‍ವೆಲ್ ಕೊರೆಸುವುದರಿಂದ ಹೆಚ್ಚಿನ ಅನುಕೂಲವಾಗಲಿದೆ ಎಂದು ಮಾಹಿತಿ ನೀಡಿದರು.

ಉಪಗ್ರಹ ಆಧಾರಿತ ತಂತ್ರಜ್ಞಾನದ ಮೂಲಕ ಬೋರ್‍ವೆಲ್ ಹಾಕಿಸುವುದರಿಂದ ದೇಶದ ಶೇ.90ರಷ್ಟು ಬೋರ್‍ವೆಲ್‍ಗಳು ನೀರಿನ ಸೆಲೆಯಲ್ಲೇ ಕೊರೆಯಲ್ಪಟ್ಟು ನೀರು ಸಿಗದಿರುವ ಸಂದರ್ಭದಿಂದ ಹೊರಬರಬಹುದಾಗಿದೆ. ಈ ತಂತ್ರಜ್ಞಾನದಡಿ ಗುರುತಿಸಿ ದೇಶಾದ್ಯಂತ ನಾಲ್ಕು ಲಕ್ಷಕ್ಕೂ ಹೆಚ್ಚು ಬೋರ್‍ವೆಲ್‍ಗಳನ್ನು ಕೊರೆಸಲಾಗಿದೆ. ಇದರಿಂದ ಜನ, ಜಾನುವಾರುಗಳ ನೀರಿನ ಸಮಸ್ಯೆ ನೀಗುತ್ತಿದೆ ಎಂದು ಹೇಳಿದರು.   ನೀರಿನ ಸಮಸ್ಯೆ ಇತ್ತೀಚಿನ ದಿನಗಳಲ್ಲಿ ಭೀಕರವಾಗುತ್ತಿದೆ. ನೀರಿನ ಪೂರೈಕೆಗೆ ಅವಲಂಬಿಸಿರುವ ತಂತ್ರಜ್ಞಾನದಲ್ಲಿ ಆಧುನಿಕತೆ ಸ್ಪರ್ಶವಾಗಬೇಕಾಗಿದೆ. ಜೊತೆಗೆ ಉಪಗ್ರಹ ಆಧಾರಿತದಂತಹ ಹೆಚ್ಚು ಸುಧಾರಿತ ತಂತ್ರಜ್ಞಾನಗಳು ಬಳಕೆಯಾಗಬೇಕು. ಇದರಿಂದ ಅನಗತ್ಯ ವೆಚ್ಚ, ಶ್ರಮ ತಪ್ಪಲಿದೆ ಎಂದು ಅಭಿಪ್ರಾಯಪಟ್ಟರು.

ಟೆಲಿಗ್ರಾಫ್‍ನಂತಹ ವ್ಯವಸ್ಥೆ ಬಂದ ನಂತರ ಒಂದು ಊರಿನಿಂದ ಮತ್ತೊಂದು ಊರಿನಲ್ಲಿರುವವರನ್ನು ಸಂಪರ್ಕಿಸಲು ಗಂಟೆಗಟ್ಟಲೇ ಕಾಯಬೇಕಾಗುತ್ತಿತ್ತು. ಆದರೆ ಈಗ ಶರವೇಗದಲ್ಲಿ ಪ್ರಪಂಚದ ಯಾವುದೇ ಮೂಲೆಯ ವ್ಯಕ್ತಿಯನ್ನು ಸಂಪರ್ಕಿಸಿ ಮಾಹಿತಿ ತಲುಪಿಸಬಹುದಾಗಿದೆ. ಹಿಂದೆಲ್ಲ ಟಿವಿಗಳು ಕೇವಲ ದೆಹಲಿ, ಮುಂಬೈ, ಚೆನ್ನೈನಂತಹ ನಗರ ಪ್ರದೇಶಗಳಲ್ಲಿ ಮಾತ್ರ ಕಾಣಸಿಗುತ್ತಿತ್ತು. ಆದರೆ ಇಂದು ಕುಗ್ರಾಮಗಳಲ್ಲೂ ಟಿವಿ ತಲುಪಿದೆ. ಇದಕ್ಕೆ ತಂತ್ರಜ್ಞಾನದ ಬೆಳವಣಿಗೆ ಕಾರಣ. ಈ ಬೆಳವಣಿಗೆಗೆ ಉಪಗ್ರಹ ಆಧಾರಿತ ತಂತ್ರಜ್ಞಾನ ಅಭಿವೃದ್ದಿ ಸಹಕಾರಿಯಾಗಿದೆ ಎಂದು ವಿವರಿಸಿದರು.

1957ರಲ್ಲಿ ರಷ್ಯಾ ಉಪಗ್ರಹ ಉಡಾವಣೆ ಮಾಡಿತ್ತು. ನಂತರ ರಷ್ಯಾ ಮತ್ತು ಅಮೆರಿಕ ನಡುವೆ ಪೈಪೋಟಿ ಏರ್ಪಟ್ಟಿದ್ದು , ಆ ಸಂದರ್ಭದಲ್ಲೇ ಭಾರತದ ವಿಜ್ಞಾನಿ ವಿಕ್ರಮ್ ಸಾರಾಬಾಯಿ ತಂತ್ರಜ್ಞಾನದ ಬಗ್ಗೆ ಅರಿತು ಅಧ್ಯಯನ ನಡೆಸಿ ಉಪಗ್ರಹದ ಆಲೋಚಿಸಿದ್ದರು. 1963 ನವೆಂಬರ್ 23ರಂದು ತ್ರಿವೇಡಂನಲ್ಲಿ ರಾಕೆಟ್ ಉಡಾಯಿಸಲಾಯಿತು.  ನಂತರ ಭಾರತದ ಬಾಹ್ಯಾಕಾಶ ಸಂಶೋಧನಾ ಕ್ಷೇತ್ರ ವಿಸ್ತಾರಗೊಂಡು ಕೇವಲ ನಮ್ಮ ದೇಶದ ಉಪಗ್ರಹ ಮಾತ್ರವಲ್ಲದೆ ಇತರೆ ದೇಶಗಳ 79 ಉಪಗ್ರಹಗಳನ್ನು ಉಡಾವಣೆ ಮಾಡುವ ಮೂಲಕ ಬಾಹ್ಯಾಕಾಶ ತಂತ್ರಜ್ಞಾನ ಕ್ಷೇತ್ರದಲ್ಲಿ ಯಶಸ್ವಿ ಹೆಜ್ಜೆಗಳನ್ನಿಟ್ಟಿದೆ.

1979ರಲ್ಲಿ ಪೀಣ್ಯಾದ ಕೈಗಾರಿಕಾ ಪ್ರದೇಶದಲ್ಲಿನ ಶೆಡ್‍ನಲ್ಲಿ ಉಪಗ್ರಹ ಉಡಾವಣೆ ಮಾಡಲಾಗಿತ್ತು. ಇಂದು ಈ ಕ್ಷೇತ್ರ ಸಾಕಷ್ಟು ಅಭಿವೃದ್ದಿಯಾಗಿದ್ದು , ಟೆಲಿ ಮೆಡಿಸಿನ್, ಟೆಲಿ ಎಜುಕೇಷನ್‍ನಂತಹ ಹಲವಾರು ಅಭಿವೃದ್ಧಿ ಕಾರ್ಯಕ್ರಮಗಳು ಜನರಿಗೆ ಪ್ರತ್ಯಕ್ಷ, ಪರೋಕ್ಷವಾಗಿ ಅನುಕೂಲವಾಗುತ್ತಿದೆ. ಇದಕ್ಕೆ ಸರ್ಕಾರದಿಂದಲೂ ಸೂಕ್ತ ಬೆಂಬಲ ದೊರೆತಿದೆ ಎಂದು ಹೇಳಿದರು.  ಈ ಮೊದಲೆಲ್ಲ ಹವಾಮಾನ ಕುರಿತಂತೆ ಕರಾರುವಕ್ಕಾದ ಪರಿಸ್ಥಿತಿ ತಿಳಿಯುತ್ತಿರಲಿಲ್ಲ. ಆದರೆ ಇಂದು 20 ಕಿ.ಮೀ ಅಂತರದಲ್ಲಿರುವ ಮೋಡದ ಸ್ಥಿತಿಯನ್ನು ಅರಿತು ಮೊದಲೇ ಜಾಗೃತರಾಗಬಹುದಾಗಿದೆ. ಅರ್ಧಗಂಟೆಗೂ ಮುನ್ನವೇ ಹವಾಮಾನದ ವೈಪರಿತ್ಯಗಳ ಬಗ್ಗೆ ತಿಳಿಯುವುದರಿಂದ ಎಚ್ಚೆತ್ತುಕೊಳ್ಳಲು ಸಾಧ್ಯವಿದೆ. ಇಂತಹ ಸುಧಾರಣಾ ಕ್ರಮಗಳಿಂದಾಗಿ ಸೈಕ್ಲೋನ್‍ನಿಂದಾಗಿ ಆಗುತ್ತಿದ್ದ ಪ್ರಾಣಹಾನಿ ಸಾಕಷ್ಟು ಕಡಿಮೆಯಾಗಿದೆ. 36 ಸಾವಿರ ಕಿಮೀ ದೂರದಿಂದಲೂ ಚಿತ್ರೀಕರಣ ಸಾಧ್ಯವಾಗುವಷ್ಟು ಎತ್ತರಕ್ಕೆ ಬೆಳೆದಿದ್ದೇವೆ ಎಂದು ತಂತ್ರಜ್ಞಾನದ ಮಜಲುಗಳನ್ನು ಪರಿಚಯಿಸಿದರು.

ದೇಶಾದ್ಯಂತ ಇರುವ 5 ಲಕ್ಷ ಅಂಚೆಕಚೇರಿಗಳಿಗೆ ಉಪಗ್ರಹ ತಂತ್ರಜ್ಞಾನಗಳನ್ನು ಅಳವಡಿಸುವ ಮೂಲಕ ರೈತರಿಗೆ ಆಧುನಿಕ ಮಾದರಿಯ ತಾಂತ್ರಿಕತೆ ಮೂಲಕ ಮಳೆ, ಬೆಳೆಯ ಮಾಹಿತಿ ಒದಗಿಸಿ ಯಾವ ಕಾಲಕ್ಕೆ ಬಿತ್ತನೆ ಮಾಡಬೇಕು. ಸುರಿಯುವ ವಿಚಾರ ಯಾವ ಬೆಳೆಗೆ ಎಷ್ಟು ಗೊಬ್ಬರ ಬಳಸಬೇಕು ಎಂಬೆಲ್ಲ ಮಾಹಿತಿಗಳನ್ನು ಸಕಾಲದಲ್ಲಿ ತಲುಪಿಸಿ ಆಹಾರ ಕ್ಷೇತ್ರದಲ್ಲೂ ಮತ್ತುಷ್ಟು ಸ್ವಾವಲಂಬನೆ ಸಾಧಿಸಲು ಮುಂದಾಗಬಹುದು ಎಂದು ತಿಳಿಸಿದರು.

> ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… :  Eesanje News 24/7 ನ್ಯೂಸ್ ಆ್ಯಪ್ –  Click Here to Download 

Sri Raghav

Admin