ಜಲಿಕಟ್ಟು ವಿಶೇಷ ಕಾನೂನಿಗಾಗಿ ಮರೀನಾ ಬೀಚ್‍ನಲ್ಲಿ ಪ್ರತಿಭಟನೆ,ಲಾಠಿ ಚಾರ್ಜ್

Protest-Jallikattu

ಚೆನ್ನೈ, ಜ.23- ಜಲ್ಲಿಕಟ್ಟು ನಡೆಸಲು ಸುಗ್ರೀವಾಜ್ಞೆಗೆ ಸಮ್ಮತಿ ನೀಡಿದ್ದರೂ, ವಿಶೇಷ ಕಾನೂನು ರೂಪಿಸಬೇಕೆಂದು ಆಗ್ರಹಿಸಿ ರಾಜ್ಯದ ವಿವಿಧೆಡೆ ಇಂದೂ ಕೂಡ ಭಾರೀ ಪ್ರತಿಭಟನೆ ನಡೆಯಿತು. ಹೋರಾಟದ ಕೇಂದ್ರ ಬಿಂದುವಾದ ಚೆನ್ನೈನ ಮರೀನಾ ಬೀಚ್‍ನಲ್ಲಿ ಸಹಸ್ರಾರು ಸಂಖ್ಯೆಯ ಪ್ರತಿಭಟನಾನಿರತರನ್ನು ತೆರವುಗೊಳಿಸಲು ಪೊಲೀಸರು ಯತ್ನಿಸಿದಾಗ ಉದ್ವಿಗ್ನ ಸ್ಥಿತಿ ನಿರ್ಮಾಣವಾಯಿತು. ಉದ್ರಿಕ್ತರನ್ನು ಚದುರಿಸಲು ಪೊಲೀಸರು ಬಲಪ್ರಯೋಗ ಮಾಡಿದ ಕಾರಣ ಹಲವರಿಗೆ ಗಾಯಗಳಾಗಿವೆ. ತಮ್ಮನ್ನು ತೆರವುಗೊಳಿಸಿದರೆ ಸಾಮೂಹಿಕ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಯುವಕರ ಬೆದರಿಕೆವೊಡ್ಡಿದ್ದಾರೆ.

ಸುಗ್ರೀವಾಜ್ಞೆಗೆ ಅಂಕಿತ ಹಾಕಿ ಜಲ್ಲಿಕಟ್ಟು ಕ್ರೀಡೆಗೆ ಅವಕಾಶ ನೀಡಿದ್ದರೂ ನಿರ್ಬಂಧವನ್ನು ಶಾಶ್ವತವಾಗಿ ತೆರವುಗೊಳಿಸುವಂತೆ ಆಗ್ರಹಿಸಿ ಯುವಕರು ಮತ್ತು ವಿದ್ಯಾರ್ಥಿಗಳು ಚೆನ್ನೈ, ಮದುರೈ, ಕೊಯಮತ್ತೂರು ಸೇರಿದಂತೆ ವಿವಿಧೆಡೆ ಇಂದು ಸಹ ಪ್ರತಿಭಟನೆ ಮುಂದುವರಿಸಿದರು.  ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆ ಉಂಟಾಗುವ ಕಾರಣ ಮರೀನಾ ಬೀಚ್‍ನಲ್ಲಿ ಜಮಾಯಿಸಿದ್ದ ಪ್ರತಿಭಟನಕಾರರನ್ನು ತೆರವುಗೊಳಿಸಲು ಪೊಲೀಸರು ಇಂದು ಬೆಳಗ್ಗಯೇ ಮುಂದಾದರು. ಈ ಸಂದರ್ಭದಲ್ಲಿ ಸಾವಿರಾರು ಮಂದಿ ಪ್ರತಿರೋಧ ವ್ಯಕ್ತಪಡಿಸಿದರು. ಪೊಲೀಸರ ಬಲಪ್ರಯೋಗವನ್ನು ತಡೆಯಲು ಸಾಮೂಹಿಕ ರಾಷ್ಟ್ರಗೀತೆ ಹಾಡಿ ಪರಸ್ಪರ ಕೈಗಳನ್ನು ಹಿಡಿದುಕೊಂಡು ಒಗ್ಗಟ್ಟಿನ ಬಲ ಪ್ರದರ್ಶಿಸಿದರು. ಈ ಸಂದರ್ಭದಲ್ಲಿ ಲಾಠಿ ಪ್ರಹಾರ, ನೂಕಾಟ ಮತ್ತು ತಳ್ಳಾಟದಿಂದ ಹಲವರು ಗಾಯಗೊಂಡರು.

ಪೊಲೀಸರ ಉದ್ರಿಕ್ತರನ್ನು ಚದುರಿಸಲು ಲಾಠಿ ಪ್ರಹಾರ ಮಾಡಬೇಕಾಯಿತು. ಈ ಸಂದರ್ಭದಲ್ಲಿ ಸಮುದ್ರದತ್ತ ಓಡಿದ ಗುಂಪು ನೀರಿಗಿಳಿದು ಪ್ರತಿಭಟನೆ ನಡೆಸಿದ್ದೇ ಅಲ್ಲದೇ ನಮ್ಮನ್ನು ತೆರವುಗೊಳಿಸಲು ಪ್ರಯತ್ನಿಸಿದರೆ ಸಾಮೂಹಿಕ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದರು. ಮರೀನಾ ಬೀಚ್‍ನಲ್ಲಿ ಇದರಿಂದ ಗೊಂದಲ ಮತ್ತು ಪ್ರಕ್ಷುಬ್ಧ ಪರಿಸ್ಥಿತಿ ನಿರ್ಮಾಣವಾಯಿತು.   ಬೀಚ್‍ಗೆ ಸಂಪರ್ಕ ಕಲ್ಪಿಸುವ ರಾಜಾಜಿ ಮಾರ್ಗದಲ್ಲಿ ಭಾರೀ ಸಂಚಾರ ಒತ್ತಡ ಸೃಷ್ಟಿಯಾಗಿ ವಾಹನಗಳ ಪ್ರವೇಶವನ್ನು ನಿರ್ಬಂಧಿಸಿ ಬೇರೆ ಮಾರ್ಗಗಳಿಗೆ ಬದಲಿಸಲಾಯಿತು.  ಜಲ್ಲಿಕಟ್ಟು ಆಚರಣೆಗೆ ಅನುಮತಿ ನೀಡಿದ ನಂತರ ತಮಿಳುನಾಡಿನ ವಿವಿಧೆಡೆ ನಡೆದ ಕ್ರೀಡೆಗಳಲ್ಲಿ ಗೂಳಿ ತಿವಿತದಿಂದ ಮೂವರು ಮೃತಪಟ್ಟು, ಅನೇಕರು ಗಾಯಗೊಂಡಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Sri Raghav

Admin