ಜಲ್ಲಿಕಟ್ಟು ಪ್ರತಿಭಟನೆಗೆ 5ನೇ ದಿನಕ್ಕೆ : ಯುವಶಕ್ತಿಯ ಅಖಂಡ ಬೆಂಬಲ, ಡಿಎಂಕೆ ನಿರಶನ
ಚೆನ್ನೈ, ಜ.21-ಜಲ್ಲಿಕಟ್ಟು ಕ್ರೀಡೆಗೆ ಅನುಮತಿ ನೀಡುವಂತೆ ಆಗ್ರಹಿಸಿ ತಮಿಳುನಾಡಿನಾದ್ಯಂತ ಭುಗಿಲೆದ್ದಿರುವ ಭಾರೀ ಪ್ರತಿಭಟನೆ ಇಂದು 5ನೇ ದಿನಕ್ಕೆ ಕಾಲಿಟ್ಟಿದೆ. ಮದುರೈ, ತಿರುಚ್ಚಿ, ಕೊಯಮತ್ತೂರು ಸೇರಿದಂತೆ ರಾಜ್ಯದ ವಿವಿಧೆಡೆ ಅಹೋರಾತ್ರಿ ಧರಣಿ ನಡೆದಿದ್ದು, ಇಂದು ಪ್ರತಿಭಟನೆ ಕಾವು ಇನ್ನಷ್ಟು ಹೆಚ್ಚಾಗಿದೆ. ಈ ಮಧ್ಯೆ, ಡಿಎಂಕೆ ಕಾರ್ಯಾಧ್ಯಕ್ಷ ಎಂ.ಕೆ.ಸ್ಟಾಲಿನ್ ನೇತೃತ್ವದಲ್ಲಿ ಪಕ್ಷದ ಸಂಸದರು ಮತ್ತು ಶಾಸಕರು ಧರಣಿ ಆರಂಭಿಸಿದ್ದಾರೆ.
ಕಾರೈಕಲ್ -ಬೆಂಗಳೂರು ಎಕ್ಸ್ಪ್ರೆಸ್ ರೈಲನ್ನು ಪ್ರತಿಭಟನೆಕಾರರು ಸೇಲಂ ಬಳಿ ತಡೆದ ಕಾರಣ 20ಕ್ಕೂ ಹೆಚ್ಚು ರೈಲುಗಳ ಸಂಚಾರ ವ್ಯತ್ಯಯವಾಗಿದೆ. ರಾಜಧಾನಿ ಚೆನ್ನೈನ ಮರೀನಾ ಬೀಚ್ನಲ್ಲಿ ಇಂದೂ ಸಹ ಜನಸಾಗರದ ಬೆಂಬಲದೊಂದಿಗೆ ಐದನೆ ದಿನದ ಪ್ರತಿಭಟನೆ ಮುಂದುವರಿದಿದೆ. ಮದುರೈ, ತಿರುಚ್ಚಿ, ಕೊಯಮತ್ತೂರು ಸೇರಿದಂತೆ ಮೊದಲಾದ ಸ್ಥಳಗಳಲ್ಲಿಯೂ ಅಹೋರಾತ್ರಿ ಧರಣಿ ನಡೆದಿದ್ದು, ಇಂದು ಪ್ರತಿಭಟನೆ ಇನ್ನಷ್ಟು ತೀವ್ರಗೊಂಡಿದೆ. ಮುಖ್ಯಮಂತ್ರಿ ಪನ್ನೀರ್ ಸೆಲ್ವಂ ಅಧ್ಯಕ್ಷತೆಯಲ್ಲಿ ಇಂದು ಬೆಳಗ್ಗೆ ನಡೆದ ಸಚಿವ ಸಂಪುಟದಲ್ಲಿ ಜಲ್ಲಿಕಟ್ಟು ಮೇಲಿನ ನಿರ್ಬಂಧವನ್ನು ಕಾಯಂ ಆಗಿ ತೆಗೆದು ಹಾಕಲು ಕೇಂದ್ರದ ಮೇಲೆ ಒತ್ತಡ ಹೇರಲು ನಿರ್ಧರಿಸಲಾಯಿತು.
ಸ್ಟಾಲಿನ್ ನೇತೃತ್ವದಲ್ಲಿ ನಿರಶನ : ಜಲ್ಲಿಕಟ್ಟು ಕ್ರೀಡೆ ಮೇಲಿರುವ ನಿರ್ಬಂಧವನ್ನು ಶಾಶ್ವತವಾಗಿ ತೆಗೆದುಹಾಕಬೇಕೆಂದು ಆಗ್ರಹಿಸಿ ಡಿಎಂಕೆ ನಾಯಕ ಎಂ.ಕೆ.ಸ್ಟಾಲಿನ್ ನೇತೃತ್ವದಲ್ಲಿ ಪಕ್ಷದ ಸಂಸದರು, ಶಾಸಕರು, ಮುಖಂಡರು ಮತ್ತು ಕಾರ್ಯಕರ್ತರು ಉಪವಾಸ ಸತ್ಯಾಗ್ರಹ ನಡೆಸಿದರು. ವಿವಿಧ ಜಿಲ್ಲೆಗಳಲ್ಲೂ ಪಕ್ಷದಿಂದ ಪ್ರತಿಭಟನೆ ಮುಂದುವರಿದಿದೆ. ಜಲ್ಲಿಕಟ್ಟು ಮೇಲಿನ ನಿರ್ಬಂಧ ತೆರವುಗೊಳಿಸಲು ಸುಗ್ರೀವಾಜ್ಞೆಗೆ ಈಗಾಗಲೇ ಕೇಂದ್ರ ಸರ್ಕಾರ ಒಪ್ಪಿದ್ದು, ಸಂಜೆ ರಾಷ್ಟ್ರಪತಿ ಅಂಕಿತ ಹಾಕುವ ಸಾಧ್ಯತೆ ಇದೆ.