ಜಾತಿ, ಧರ್ಮ,ಇಂದಿನ ವ್ಯವಸ್ಥೆ ಕುರಿತ ಪ್ರಸ್ತುತ ಸನ್ನಿವೇಶವನ್ನು ಪರಿಷತ್‍ನಲ್ಲಿ ತೆರೆದಿಟ್ಟ ರಮೇಶ್ ಕುಮಾರ್ ..!

Ramesh-Kumar--01

ಬೆಂಗಳೂರು, ಮಾ.22- ಇಂದಿನ ವ್ಯವಸ್ಥೆ ಬಹಳಷ್ಟು ಹಾಳಾಗಿದೆ. ಒಬ್ಬರನ್ನು ಮುಟ್ಟಲು ಸಾಧ್ಯವಿಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಅದರಲ್ಲೂ ಭ್ರಷ್ಟರನ್ನು ಮುಟ್ಟಿದರೆ ಜಾತಿ, ಧರ್ಮ, ಪಕ್ಷ ಅಡ್ಡಬರುತ್ತದೆ. ನಾವು ಸರ್ಕಾರ ನಡೆಸಬೇಕೆ ಹೊರತು ಆಡಳಿತ ನಡೆಸಿದರೆ ಪರಿಸ್ಥಿತಿ ಹೀಗಾಗುತ್ತದೆ…  ಪ್ರಸ್ತುತ ಸನ್ನಿವೇಶವನ್ನು ವಿಧಾನ ಪರಿಷತ್‍ನಲ್ಲಿ ಹೀಗೆ ತೆರೆದಿಟ್ಟಿದ್ದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಕೆ.ಆರ್.ರಮೇಶ್ ಕುಮಾರ್ ಪ್ರಶ್ನೋತ್ತರ ಅವಧಿಯಲ್ಲಿ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಸದಸ್ಯ ರಮೇಶ್ ಬಾಬು ಅವರ ಪ್ರಶ್ನೆಗೆ ಉತ್ತರಿಸುತ್ತಿದ್ದ ವೇಳೆ, ಮಧ್ಯ ಪ್ರವೇಶಿಸಿದ ರಮೇಶ್ ಕುಮಾರ್ ಇಂದಿನ ವ್ಯವಸ್ಥೆಯನ್ನು ಸದನದ ಮುಂದೆ ತೆರೆದಿಟ್ಟರು.

ಅಧಿಕಾರಿಗಳ ಮೇಲೆ ಹಿಡಿತ ಇಟ್ಟುಕೊಳ್ಳಿ ಎಂದು ರಮೇಶ್ ಬಾಬು ಹೇಳಿದಾಗ, ಅಧಿಕಾರಿಗಳಿಗೆ ಬಾರ್ ಕೋಲಿನಿಂದ ಬಾರಿಸಿದರೂ ಸರಿಹೋಗುವುದಿಲ್ಲ. ಹಾಗಂತ ಅವರನ್ನು ಹೊಡೆಯಲು ಆಗುವುದಿಲ್ಲ. ನಮ್ಮ ಮೂಲದಲ್ಲೇ ವ್ಯವಸ್ಥೆ ಹಾಳಾಗಿದೆ. ಎಲ್ಲವೂ ಜಾತಿ, ಧರ್ಮಗಳ ಮೇಲೆ ನಡೆಯುತ್ತದೆ. ಅಧಿಕಾರಿಗಳ ಮೇಲೆ ಕ್ರಮಕೈಗೊಂಡರೆ, ಅವರ ಜಾತಿ, ಉಪಜಾತಿ ಯಾವುದು ಎಂದು ನೋಡುತ್ತಾರೆ. ಭ್ರಷ್ಟರನ್ನು ಮುಟ್ಟಿದರೆ ನಮ್ಮನ್ನೇ ಸಂಶಯದಿಂದ ನೋಡುವ ಪರಿಸ್ಥಿತಿ ಇದೆ, ಜನಪ್ರತಿನಿಧಿಗಳಾದ ನಾವು ಸರ್ಕಾರ ನಡೆಸಬೇಕು. ಅಧಿಕಾರಿಗಳು ಆಡಳಿತ ನಡೆಸಬೇಕು. ಆದರೆ ನಾವೇ ಆಡಳಿತದಲ್ಲಿ ಮೂಗು ತೂರಿಸುವುದರಿಂದ ಇಂತಹ ವ್ಯವಸ್ಥೆ ಸೃಷ್ಟಿಯಾಗುತ್ತದೆ ಎಂದು ವಿಷಾದಿಸಿದರು. ಆದರೂ ಸರ್ಕಾರ ನಿಸ್ಸಾಯಕ ಎಂದು ಯಾರೂ ಭಾವಿಸಬಾರದು ಎಂದು ಸೂಚ್ಯವಾಗಿ ಹೇಳಿದರು.

ಅಧಿಕಾರಿಗಳು ಬರೆದುಕೊಟ್ಟಿದ್ದನ್ನು ಓದುವ ಸಂಪ್ರದಾಯ ಹೋಗಬೇಕು, ತಾಂತ್ರಿಕ ಕಾರಣಗಳನ್ನು ಮುಂದಿಟ್ಟುಕೊಂಡು ಸದಸ್ಯರು ಕೇಳಿದ ಪ್ರಶ್ನೆಗೆ ಹಾರಿಕೆಯ ಉತ್ತರ ನೀಡಬಾರದು, ರಾಜ್ಯದಲ್ಲಿ ಉಂಟಾಗಿರುವ ಬರ ಪರಿಸ್ಥಿತಿಯನ್ನು ಸರ್ಕಾರ ಪ್ರಾಮಾಣಿಕವಾಗಿ ನಿಭಾಯಿಸುತ್ತದೆ, ಎಲ್ಲಾ ತಾಲೂಕುಗಳಲ್ಲಿ ಶಾಸಕರ ಅಧ್ಯಕ್ಷತೆಯಲ್ಲಿ ಕಾರ್ಯಪಡೆ ರಚಿಸಲಾಗಿದೆ. ಅಗತ್ಯವಿರುವ ಕಡೆ ಬೋರ್‍ವೆಲ್‍ಗಳನ್ನು ಕೊರೆಸಲಾಗಿದೆ. ಗೋವುಗಳಿಗೆ ಮೇವು ಒದಗಿಸಲು ಗೋಶಾಲೆಗಳನ್ನು ತೆರೆಸಲಾಗಿದೆ. ಸ್ವತಃ ನನ್ನ ಜಿಲ್ಲೆಯಲ್ಲೇ 2000 ಅಡಿ ಕೊರೆಸಿದರೂ ನೀರು ಸಿಗುವುದಿಲ್ಲ, ಇದಕ್ಕೆ ಯಾರನ್ನು ದೂಷಿಸಬೇಕು ಎಂದು ಪ್ರಶ್ನಿಸಿದರು.

ಇದಕ್ಕೂ ಮುನ್ನ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಮಾತನಾಡಿ,ರಾಜ್ಯದ ಯಾವುದೇ ಭಾಗದಲ್ಲೂ ಕುಡಿಯುವ ನೀರಿಗೆ ತೊಂದರೆಯಾಗದಂತೆ ಕಟ್ಟುನಿಟ್ಟಿನ ಕ್ರಮಕೈಗೊಳ್ಳಬೇಕೆಂದು ಸೂಚಿಸಲಾಗಿದೆ. ಜಿಲ್ಲಾಧಿಕಾರಿ ಅಗತ್ಯವಿರು ಕಡೆ ಭೇಟಿ ನೀಡಿ ಟ್ಯಾಂಕರ್‍ಗಳ ಮೂಲಕ ನೀರು ಪೂರೈಕೆ ಮಾಡಲು ನಿರ್ದೇಶನ ನೀಡಲಾಗಿದೆ. ಯಾವ ಕಡೆ ನೀರಿನ ಕೊರತೆ ಇದೆ ಎಂಬುದನ್ನು ಸೂಚಿಸಿದರೆ, ಗಮನ ಹರಿಸುವುದಾಗಿ ಹೇಳಿದರು. ಗೋವುಗಳಿಗೆ ಮೇವು ಪೂರೈಸಲು ಪಂಜಾಬ್ ಮತ್ತು ಹರ್ಯಾಣದಿಂದ ಹುಲ್ಲು ಖರೀದಿಸಿದ್ದೇವೆ. ರೈಲಿನ ಮೂಲಕ ಇದು ರಾಜ್ಯಕ್ಕೆ ಬರಲಿದ್ದು, ಅಗತ್ಯವಿರುವ ಕಡೆ ವಿತರಣೆ ಮಾಡಲಾಗುವುದು ಎಂದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Sri Raghav

Admin