ಜಾರ್ಜ್ ಜೈಲು ಸೇರೋದು ಗ್ಯಾರಂಟಿ : ಆರ್. ಅಶೋಕ್

Ashok--01

ಬೆಂಗಳೂರು, ಅ.28- ಡಿವೈಎಸ್‍ಪಿ ಎಂ.ಕೆ.ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ದಾಖಲೆ ತಿದ್ದಿದ ಆರೋಪದಲ್ಲಿ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ಅವರಿಗೆ ಶಿಕ್ಷೆ ಖಚಿತ ಎಂದು ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್ ಇಂದಿಲ್ಲಿ ಭವಿಷ್ಯ ನುಡಿದಿದ್ದಾರೆ. ಯಡಿಯೂರು ವಾರ್ಡ್‍ನಲ್ಲಿ ನಿರ್ಮಿಸಲಾಗಿರುವ ವಾಯುವಿಹಾರ ಮಾರ್ಗ ಮತ್ತು ಚರಕ ಔಷಧಿ ಮಳಿಗೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸುಪ್ರೀಂಕೋರ್ಟ್ ನಿರ್ದೇಶನದಂತೆ ಸಿಬಿಐ ಎಫ್‍ಐಆರ್ ದಾಖಲಿಸಿರುವುದರಿಂದ ಜಾರ್ಜ್ ಅವರು ರಾಜೀನಾಮೆ ನೀಡಲೇಬೇಕು. ಹಿಂದೆ ಸ್ಥಳೀಯ ನ್ಯಾಯಾಲಯ ನೀಡಿದ ತೀರ್ಪಿನಲ್ಲಿ ಗೃಹ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಆದರೆ, ಈಗ ಎಫ್‍ಐಆರ್ ದಾಖಲಾದ್ರೂ ರಾಜೀನಾಮೆ ನೀಡದಿರುವುದು ನಾಚಿಕೆಗೇಡಿನ ಸಂಗತಿ ಎಂದರು.

ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದು, ಜಾರ್ಜ್ ಅವರು ರಾಜೀನಾಮೆ ನೀಡಿದರೆ ಸರ್ಕಾರ ಎಲ್ಲಿ ಪಥನವಾಗುತ್ತದೆಯೋ ಎಂಬ ಹಿನ್ನೆಲೆಯಲ್ಲಿ ಇಡೀ ಸಚಿವ ಸಂಪುಟವೇ ಅವರ ಬೆಂಬಲಕ್ಕೆ ನಿಂತಿದೆ. ಪ್ರಕರಣದಲ್ಲಿ ತಪ್ಪಿಸಿಕೊಳ್ಳಬಹುದು. ಆದರೆ, ದಾಖಲೆ ತಿದ್ದಿರುವುದು ವಿಧಿವಿಜ್ಞಾನ ಪ್ರಯೋಗಾಲಯದ ವರದಿಯಲ್ಲಿ ಸಾಬೀತಾಗಿರುವುದರಿಂದ ಶಿಕ್ಷೆ ಖಚಿತ ಎಂದರು. ಆರೋಪಕ್ಕೆ ಗುರಿಯಾಗಿರುವ ಜಾರ್ಜ್ ಅವರು ರಾಜೀನಾಮೆ ನೀಡಲೇಬೇಕು. ಇಲ್ಲವಾದಲ್ಲಿ ಬಿಜೆಪಿ ಉಗ್ರ ಹೋರಾಟ ಮಾಡಲಿದೆ ಎಂದು ಎಚ್ಚರಿಕೆ ನೀಡಿದರು.

ಕೇಂದ್ರ ಸಚಿವ ಅನಂತ್‍ಕುಮಾರ್ ಮಾತನಾಡಿ, ಯಡಿಯೂರು ವಾರ್ಡ್‍ನಲ್ಲಿ ಚರಕ ಔಷಧಿ ಮಳಿಗೆ ತೆರೆದಿರುವುದು ಸ್ವಾಗತಾರ್ಹ. ಇತ್ತೀಚೆಗೆ ಜನರು ಆಯುರ್ವೇದಿಕ್ ಔಷಧಿ ಪದ್ಧತಿಗೆ ಮರಳುತ್ತಿದ್ದಾರೆ. ಈ ಮಳಿಗೆಯಲ್ಲಿ 1830 ಕಾಯಿಲೆಗಳನ್ನು ಗುಣಪಡಿಸಬಹುದಾದ ಔಷಧಿಗಳು ದೊರೆಯುತ್ತವೆ. ಜನರು ಇದರ ಸದುಪಯೋಗ ಪಡಿಸಿಕೊಳ್ಳಬೇಕೆಂದು ಸಲಹೆ ನೀಡಿದರು. ಮೇಯರ್ ಸಂಪತ್‍ರಾಜ್ ಮಾತನಾಡಿ, ನಾನು ಮೇಯರ್ ಆಗಿ ಅಧಿಕಾರ ಸ್ವೀಕರಿಸಿದ ನಂತರ ಇದು ಮೊದಲ ಉದ್ಘಾಟನಾ ಸಮಾರಂಭ ಇದಾಗಿದೆ. ಈ ಭಾಗದ ಪಾಲಿಕೆ ಸದಸ್ಯರ ಕಾಳಜಿಯಿಂದ ವಾಯುವಿಹಾರ ಮಾರ್ಗ ಮತ್ತು ಚರಕ ಔಷಧಿ ಮಳಿಗೆ ನಿರ್ಮಾಣವಾಗಿದೆ. ಇದು ಉತ್ತಮ ಕೆಲಸ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಉಳಿದ ಸದಸ್ಯರು ಸಹ ಜನ ಮೆಚ್ಚುವ ಕೆಲಸ ಮಾಡಬೇಕೆಂದು ಸಲಹೆ ನೀಡಿದರು. ಬಿಜೆಪಿ ವಕ್ತಾರ ಎನ್.ಆರ್.ರಮೇಶ್ ಮಾತನಾಡಿ, ದನ್ವಂತರಿ ಮತ್ತು ಸಂಜೀವಿನಿ ವನಗಳ ನಡುವೆ ಚರಕ ಔಷಧಿ ಮಳಿಗೆಯನ್ನು ನಿರ್ಮಿಸಲಾಗಿದೆ. ಈ ಮಳಿಗೆಯಲ್ಲಿ ಕಡಿಮೆ ಬೆಲೆಗೆ ಔಷಧಿಗಳನ್ನು ವಿತರಿಸಲಾಗುವುದು. ಸುಮಾರು 250ಕ್ಕೂ ಹೆಚ್ಚು ಪ್ರಭೇದದ 1500ಕ್ಕೂ ಹೆಚ್ಚು ಅಮೂಲ್ಯ ಗಿಡಮೂಲಿಕಾ ಸಸಿಗಳನ್ನು ಒಳಗೊಂಡಿರುವ ಧನ್ವಂತರಿ ವನ ಮತ್ತು ಸಂಜೀವಿನ ವನಗಳ ನಡುವೆ ಸುಮಾರು 750ಮೀಟರ್ ಉದ್ದದ ವಾಯು ಮಾರ್ಗವನ್ನು ನಿರ್ಮಿಸಲಾಗಿದೆ. ಈ ಗಿಡಮೂಲಿಕ ಸಸಿಗಳು ಹೊರ ಹೊಮ್ಮುವ ಔಷಧಿಯುಕ್ತ ಸೇವನೆಯಿಂದ ಹಲವು ಕಾಯಿಲೆಗಳು ದೂರವಾಗಲಿವೆ ಎಂದರು. ಈ ಸಂದರ್ಭದಲ್ಲಿ ಪಾಲಿಕೆ ಸದಸ್ಯೆ ಪೂರ್ಣಿಮಾ ರಮೇಶ್ ಮತ್ತಿತರರಿದ್ದರು.

Sri Raghav

Admin