ಜಿಲ್ಲಾಧಿಕಾರಿಗಳೊಂದಿಗೆ ನಾಳೆ ಸಿಎಂ ವೀಡಿಯೋ ಸಂವಾದ
ಬೆಂಗಳೂರು,ಏ.17- ಬರ ಪರಿಸ್ಥಿತಿ ಬಗ್ಗೆ ಸಮಗ್ರ ಮಾಹಿತಿ ಪಡೆಯಲು ಮುಖ್ಯಮಂತ್ರಿ ಸಿದ್ದರಾಮಯ್ಯ ನಾಳೆ ಇಡೀ ದಿನ ರಾಜ್ಯದ ಎಲ್ಲಾ ಜಿಲ್ಲಾಡಳಿತಗಳೊಂದಿಗೆ ವೀಡಿಯೋ ಸಂವಾದ ನಡೆಸಲಿದ್ದಾರೆ.ಗೃಹ ಕಚೇರಿ ಕೃಷ್ಣಾದಲ್ಲಿ ಸಿದ್ದರಾಮಯ್ಯ ಅವರು ಜಿಲ್ಲಾವಾರು ಬರ ಪರಿಸ್ಥಿತಿ ಕುರಿತಂತೆ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಲಿದ್ದಾರೆ. ಜಿಲ್ಲಾಧಿಕಾರಿ ಮತ್ತು ಸಿಇಒಗಳೊಂದಿಗೆ ಜಿಲ್ಲಾವಾರು ಬರ ಪರಿಸ್ಥಿತಿ ಮಾಹಿತಿ, ಕುಡಿಯುವ ನೀರು, ಜಾನುವಾರುಗಳ ಮೇವು, ಗುಳೆ ಹೋಗುವುದನ್ನು ತಪ್ಪಿಸಲು ಜನರಿಗೆ ಉದ್ಯೋಗ, ಬರ ಪರಿಹಾರ ವಿತರಣೆ ಹಾಗೂ ಪ್ರಗತಿ ಪರಿಶೀಲನೆ ಕೂಡ ಇದೇ ಸಂದರ್ಭದಲ್ಲಿ ಮಾಡಲಿದ್ದಾರೆ.
ಬೇಸಿಗೆ ಇರುವುದರಿಂದ ಕುಡಿಯುವ ನೀರಿನ ಸಮಸ್ಯೆ ತೀವ್ರ ಸ್ವರೂಪ ಪಡೆದಿರುವ ಗ್ರಾಮಗಳಿಗೆ ಟ್ಯಾಂಕರ್ ಮೂಲಕ ನೀರು ಒದಗಿಸಲು ಜಿಲ್ಲಾಡಳಿತಕ್ಕೆ ಸೂಚನೆ ನೀಡಲಿದ್ದಾರೆ. ಹೊರ ರಾಜ್ಯದಿಂದ ಮೇವು ತರಿಸುತ್ತಿದ್ದು, ಅಗತ್ಯವಿರುವ ಕಡೆಗಳಲ್ಲಿ ಗೋ ಶಾಲೆ, ಮೇವು ಬ್ಯಾಂಕ್ ತೆರೆಯುವಂತೆ ಸೂಚನೆ ನೀಡಲಿದ್ದಾರೆ.ರಾಜ್ಯ ಸರ್ಕಾರದಿಂದ ಬಿಡುಗಡೆಯಾಗಿರುವ ಅನುದಾನದಲ್ಲಿ ಜಿಲ್ಲಾವಾರು ಕುಡಿಯುವ ನೀರು, ಜಾನುವಾರುಗಳಿಗೆ ಮೇವು ಸೇರಿದಂತೆ ಖರ್ಚಾಗಿರುವ ಹಣ, ಬಾಕಿ ಉಳಿದಿರುವ ಹಣ ಹಾಗೂ ಮುಂದಿನ ಮೇ ಅಂತ್ಯದವರೆಗೂ ಹಣದ ಬೇಡಿಕೆ ಬಗ್ಗೆಯೂ ಜಿಲ್ಲಾಡಳಿತದಿಂದ ಮಾಹಿತಿ ಪಡೆಯಲಿದ್ದಾರೆ.
ಕೇಂದ್ರ ಸರ್ಕಾರದಿಂದ ಬಿಡುಗಡೆ ಮಾಡಿದ ಬೆಳೆ ಪರಿಹಾರ ಧನ, ರೈತರಿಗೆ ತಲುಪಿಸಿರುವ ಬಗ್ಗೆಯೂ ಮಾಹಿತಿ ಪಡೆಯಲಿದ್ದಾರೆ.
ಬುಧವಾರ ಸಚಿವ ಸಂಪುಟ ಸಭೆ ನಡೆಯಲಿದ್ದು, ಅದಕ್ಕೆ ಪೂರ್ವ ಭಾವಿಯಾಗಿ ಈ ವೀಡಿಯೋ ಸಂವಾದ ನಡೆಸಲಿದ್ದಾರೆ.ಬರ ಪರಿಸ್ಥಿತಿ ನಿಭಾಯಿಸಲು ಸರ್ಕಾರ ಕೈಗೊಂಡಿರುವ ಕ್ರಮಗಳು ಹಾಗೂ ಪ್ರಗತಿಯ ಬಗ್ಗೆ ಪೂರ್ಣ ಮಾಹಿತಿ ಜಿಲ್ಲಾವಾರು ಪಡೆಯಲಿದ್ದಾರೆ. ವೀಡಿಯೋ ಸಂವಾದದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು, ಕಾರ್ಯದರ್ಶಿಗಳು ಸೇರಿದಂತೆ ಮುಖ್ಯ ಅಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ.ಜತೆಗೆ ಬರ ಪೀಡಿತ ಪ್ರದೇಶಗಳ ಅಧ್ಯಯನಕ್ಕಾಗಿ ಸಚಿವರ ತಂಡಗಳನ್ನು ಕಳುಹಿಸುವ ಬಗ್ಗೆಯೂ ಈ ವೇಳೆ ತೀರ್ಮಾನಿಸಲಾಗುವುದು.
< Eesanje News 24/7 ನ್ಯೂಸ್ ಆ್ಯಪ್ >
Click Here to Download : Android / iOS