ಜಿಲ್ಲಾ, ತಾಲೂಕು ಹಾಗೂ ಗ್ರಾಮ ಪಂಚಾಯಿತಿ ಸದಸ್ಯರ ಗೌರವಧನ ಹೆಚ್ಚಳ

Gram-Panchayat

ಬೆಂಗಳೂರು, ಮಾ.15– ಪ್ರಸಕ್ತ ಸಾಲಿನ ಬಜೆಟ್‍ನಲ್ಲಿ ಜಿಲ್ಲಾ, ತಾಲೂಕು ಹಾಗೂ ಗ್ರಾಮ ಪಂಚಾಯಿತಿ ಸದಸ್ಯರ ಗೌರವಧನವನ್ನು ಹೆಚ್ಚಿಸುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಚುನಾಯಿತ ಪ್ರತಿನಿಧಿಗಳ ಮೂಗಿಗೆ ತುಪ್ಪ ಸವರಿದ್ದಾರೆ. ವಿಧಾನಸೌಧದಲ್ಲಿಂದು ಮಂಡನೆಯಾದ 2017-18ನೆ ಸಾಲಿನ ಬಜೆಟ್‍ನಲ್ಲಿ ಚುನಾಯಿತ ಸದಸ್ಯರ ಗೌರವಧನ ಹೆಚ್ಚಳ ಮಾಡುವುದಾಗಿ ಘೋಷಣೆ ಮಾಡಿದರು. ಈ ಪ್ರಕಾರ ಇನ್ನು ಮುಂದೆ ಜಿಪಂ ಸದಸ್ಯರ ಗೌರವ ಧನ  3000 ದಿಂದ 5000, ತಾಪಂ ಅಧ್ಯಕ್ಷರಿಗೆ 4500 ರಿಂದ 6000, ತಾಪಂ ಉಪಾಧ್ಯಕ್ಷರಿಗೆ 3000 ದಿಂದ 4000, ತಾಪಂ ಸದಸ್ಯರಿಗೆ 1500 ರಿಂದ 3000, ಗ್ರಾಪಂ ಅಧ್ಯಕ್ಷರಿಗೆ 1000 ದಿಂದ 3000, ಗ್ರಾಪಂ ಉಪಾಧ್ಯಕ್ಷರಿಗೆ 600 ರಿಂದ 2000 ಮತ್ತು ಸದಸ್ಯರಿಗೆ 500 ರಿಂದ 1000 ವೇತನ ಏರಿಕೆ ಮಾಡಲಾಗಿದೆ.
ಎಂಜಿಐಆರ್‍ಇಡಿ ಆವರಣದಲ್ಲಿ 3 ಕೋಟಿ ರೂ. ವೆಚ್ಚದಲ್ಲಿ ಒಂದು ಮಾದರಿ ಪಾರಂಪರಿಕ ಗ್ರಾಮ ಸ್ಥಾಪನೆ, ಜಿಲ್ಲಾ ಪಂಚಾಯತ್ ಅಭಿವೃದ್ಧಿ ಅನುದಾನವನ್ನು 2 ಕೋಟಿಯಿಂದ 4 ಕೋಟಿಗೆ ಹೆಚ್ಚಳ ಮಾಡಲಾಗಿದೆ.

ನಮ್ಮ ಗ್ರಾಮ ನಮ್ಮ ಯೋಜನೆಗಾಗಿ 20 ಕೋಟಿ ಅನುದಾನ ಒದಗಿಸಲಾಗಿದ್ದು, ಗ್ರಾಮೀಣ ನೀರು ಸರಬರಾಜು ಯೋಜನೆಗೆ 2200 ಕೋಟಿ ಅನುದಾನ ಮೀಸಲಿಡಲಾಗಿದೆ. ರಾಸಾಯನಿಕ ಕಲುಷಿತದಿಂದಾಗಿ ಗ್ರಾಮೀಣ ಜನರ ಆರೋಗ್ಯದ ಮೇಲೆ ಆಗುವ ದುಷ್ಪರಿಣಾಮ ತಪ್ಪಿಸಲು ಬಹುಗ್ರಾಮ ಕುಡಿಯುವ ನೀರು ಯೋಜನೆಗೆ ಆದ್ಯತೆ ನೀಡಲಾಗಿದ್ದು, ಈ ಬಾರಿ 2500 ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆ ಮಾಡುವುದಾಗಿ ತಿಳಿಸಿದರು.  ಗ್ರಾಮೀಣ ನೈರ್ಮಲ್ಯ ಕಾಪಾಡಲು ಹಾಗೂ ರಾಜ್ಯವನ್ನು ಬಹಿರ್ದೆಸೆ ಮುಕ್ತವಾಗಿಸಲು 1585 ಕೋಟಿ ರೂ. ಒದಗಿಸಲಾಗಿದೆ. ಇದರಲ್ಲಿ ಶೌಚಾಲಯ ರಹಿತ ಎಲ್ಲ ಗ್ರಾಮೀಣ ಕುಟುಂಬಗಳಿಗೆ ವೈಯಕ್ತಿಕ ಶೌಚಾಲಯಕ್ಕಾಗಿ ಪ್ರೋತ್ಸಾಹ ಧನ, ಸಮಸ್ಯೆ ಇರುವ ಕಡೆ ಸಾಮೂಹಿಕ ಶೌಚಾಲಯ ಸಂಕೀರ್ಣ, ಗ್ರಾಮ ಸ್ವಚ್ಛತೆ ಕಾಪಾಡಲು ಘನ ಮತ್ತು ದ್ರವ್ಯ ತ್ಯಾಜ್ಯಗಳ ನಿರ್ವಹಣೆ ಮಾಡುವುದಾಗಿ ತಿಳಿಸಿದರು.

ರಾಷ್ಟ್ರೀಯ ಗ್ರಾಮೀಣ ರಸ್ತೆ ಅಭಿವೃದ್ಧಿ ಸಂಸ್ಥೆಗಳ ಮಾರ್ಗಸೂಚಿಯಂತೆ ಇನ್ನು ಮುಂದೆ ಗ್ರಾಮೀಣ ರಸ್ತೆ ನಿರ್ವಹಣಾ ನೀತಿ ಜಾರಿಗೊಳಿಸುವುದಾಗಿ ಪ್ರಕಟಿಸಿದ್ದಾರೆ.  ನಮ್ಮ ಹೊಲ ನಮ್ಮ ದಾರಿ ಯೋಜನೆಯಡಿ ರಾಜ್ಯದ ಪ್ರತಿ ಗ್ರಾಮೀಣ ವಿಧಾನಸಭಾ ಕ್ಷೇತ್ರದಲ್ಲಿ ಸುಮಾರು 25ಕಿಮೀ ಉದ್ದದ ಹೊಲಗಳಿಗೆ ಹೋಗುವ ಮಣ್ಣಿನ ರಸ್ತೆಯನ್ನು ನರೇಗ ವತಿಯಿಂದ ನಿರ್ಮಾಣ ಮಾಡಲಾಗುವುದು. ಇದಕ್ಕಾಗಿ 100 ಕೋಟಿ ಅನುದಾನ ಮೀಸಲಿಡಲಾಗಿದೆ.   ಮುಖ್ಯಮಂತ್ರಿಗಳ ಗ್ರಾಮ ವಿಕಾಸ ಯೋಜನೆಯಡಿ ಪ್ರತಿ ಗ್ರಾಮಕ್ಕೆ 21 ಕೋಟಿ ರೂ.ಗಳಂತೆ ನೀಡುವ ಅನುದಾನದ ಜತೆಗೆ ಮುಖ್ಯಮಂತ್ರಿಗಳ 21 ಅಂಶಗಳ ಕಾರ್ಯಕ್ರಮಗಳ ಒಗ್ಗೂಡಿಸಿ ಸಾವಿರ ಗ್ರಾಮಗಳನ್ನು ಸರ್ವತೋಮುಖವಾಗಿ ಎರಡು ವರ್ಷಗಳಲ್ಲಿ ಅಭಿವೃದ್ಧಿಪಡಿಸುವ ಪ್ರಸ್ತಾವನೆ ಮಾಡಲಾಗಿದೆ.  ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆಯಡಿ ಹಂತ-1V ಯನ್ನು ಪ್ರಸಕ್ತ ಸಾಲಿನಲ್ಲಿ ಪ್ರಾರಂಭಿಸಿ 4386 ಕಿಮೀ ರಸ್ತೆ ಅಭಿವೃದ್ಧಿಪಡಿಸಲು ಒಟ್ಟು 1765 ಕೋಟಿ ಅನುದಾನ ನೀಡಲಾಗಿದೆ.

ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ಪ್ರತಿ ತಾಲೂಕಿಗೆ ಕನಿಷ್ಠ 200 ತೋಟಗಾರಿಕಾ ಕ್ಷೇತ್ರಗಳ ಅಭಿವೃದ್ಧಿ ಕಾಮಗಾರಿ ಅನುಷ್ಠಾನ, ಪಶು, ಜಾನುವಾರುಗಳಿಗೆ ಅನುಕೂಲವಾಗುವಂತೆ ಗ್ರಾಮಗಳಲ್ಲಿ ಸಮುದಾಯ ದನದ ಕೊಟ್ಟಿಗೆ ನಿರ್ಮಾಣ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಜಾರಿಮಾಡುವುದಾಗಿ ತಿಳಿಸಿದ್ದಾರೆ. ಈ ಬಾರಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗೆ 14061 ಕೋಟಿ ಅನುದಾನ ನೀಡಲಾಗಿದೆ.

[ ರಾಜ್ಯ ಬಜೆಟ್ 2017-18  (Live Updates) ]


< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Sri Raghav

Admin