ಜಿ-ಸ್ಯಾಟ್9 ಉಪಗ್ರಹ ಯಶಸ್ವಿ ಉಡಾವಣೆ : ಇಸ್ರೋ ಮತ್ತೊಂದು ಮೈಲಿಗಲ್ಲು

Spread the love

Isro--01

ಶ್ರೀಹರಿಕೋಟಾ(ಆಂಧ್ರಪ್ರದೇಶ), ಮೇ 5-ನೆರೆಹೊರೆ ದೇಶಗಳಿಗೆ ಭಾರತದ ಅತ್ಯಮೂಲ್ಯ ಕೊಡುಗೆ ಎಂದೇ ಪರಿಗಣಿಸಲಾಗಿರುವ 450 ಕೋಟಿ ರೂ. ವೆಚ್ಚದ ದಕ್ಷಿಣ ಏಷ್ಯಾ ಉಪಗ್ರಹ-ಜಿಸ್ಯಾಟ್ 9 ಆಂಧ್ರಪ್ರದೇಶದ ಶ್ರೀಹರಿ ಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಅಂತರಿಕ್ಷಕ್ಕೆ ಯಶಸ್ವಿಯಾಗಿ ಉಡಾವಣೆ ಮಾಡಲಾಯಿತು. ಇದರೊಂದಿಗೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ-ಇಸ್ರೋ ಹಿರಿಮೆಗೆ ಮತ್ತೊಂದು ಗರಿ ಸೇರ್ಪಡೆಯಾಯಿತು. ಸೌತ್ ಏಷ್ಯಾ ಸ್ಯಾಟಲೈಟ್ 2,230 ಕೆಜಿ ತೂಕವಿದ್ದು, ಪಿಎಸ್‍ಎಲ್‍ವಿ-ಎಫ್‍ಒ 9 ರಾಕೆಟ್ ಮೂಲಕ ನಭಕ್ಕೆ ಚಿಮ್ಮಿತು.ದಕ್ಷಿಣ ಏಷ್ಯಾ ದೇಶಗಳಿಗೆಂದೇ ಇಸ್ರೋ ಅಭಿವೃದ್ದಿಗೊಳಿಸಿರುವ ಜಿ-ಸ್ಯಾಟ್9 ಸಂವಹನ, ಹವಾಮಾನ, ಪ್ರಕೃತಿ ವಿಕೋಪ ನಿರ್ವಹಣೆ, ಟೆಲಿ ಮೆಡಿಸಿನ, ಕೃಷಿ, ಡಿಟಿಎಚ್, ದೂರಸಂಪರ್ಕ, ಟೆಲಿವಿಷನ್ ಬ್ರಾಡ್‍ಕಾಸ್ಟಿಂಗ್ ಇತ್ಯಾದಿ ಅಭಿವೃದ್ದಿ ಕಾರ್ಯಗಳಿಗೆ ಉಪಗ್ರಾಹ ಆಧಾರಿತ ಮಾಹಿತಿಯನ್ನು ಸದಸ್ಯ ರಾಷ್ಟ್ರಗಳಿಗೆ ಒದಗಿಸುತ್ತದೆ. ಎಂಟು ಸಾರ್ಕ್ ದೇಶಗಳಲ್ಲಿ ಏಳು ದೇಶಗಳು ಈ ಮಹತ್ವಾಕಾಂಕ್ಷಿ ಯೋಜನೆಯಲ್ಲಿ ಪಾಲ್ಗೊಂಡಿವೆ. ಆದರೆ, ಕ್ಯಾತೆ-ತಗಾದೆಗೆ ಕುಖ್ಯಾತಿ ಪಡೆದಿರುವ ಪಾಕಿಸ್ತಾನ ಮಾತ್ರ ಭಾರತದ ಈ ಕೊಡುಗೆಯನ್ನು ತಾನು ಬಯಸುವುದಿಲ್ಲ ಎಂದು ಹೇಳಿ ಯೋಜನೆಯಿಂದ ದೂರು ಉಳಿದಿದೆ.

ಪ್ರಧಾನಿ ನರೇಂದ್ರ ಮೋದಿ 2014ರಲ್ಲಿ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ಸಂದರ್ಭದಲ್ಲಿ ಸಾರ್ಕ್ ದೇಶಗಳ ಬಾಂಧವ್ಯದ ಪ್ರತೀಕವಾಗಿ ಸಾರ್ಕ್ ಸ್ಯಾಟಲೈಟ್ ಉಡುಗೊರೆ ನೀಡುವ ಪ್ರಸ್ತಾವ ಮಾಡಿದ್ದರು. ಆದರೆ ಪಾಕಿಸ್ತಾನ ಈ ಯೋಜನೆಯನ್ನು ನಿರಾಕರಿಸಿದ್ದರಿಂದ ದಕ್ಷಿಣ ಏಷ್ಯಾ ಉಪಗ್ರಹ ಯೋಜನೆ ಎಂದು ನಾಮಕರಣ ಮಾಡಲಾಗಿತ್ತು. ಇದರಲ್ಲಿ ಅಫ್ಘಾನಿಸ್ತಾನ, ನೇಪಾಳ, ಭೂತಾನ್, ಶ್ರೀಲಂಕಾ, ಬಾಂಗ್ಲಾದೇಶ, ಮತ್ತು ಮಾಲ್ಡಿವ್ಸ್ ದೇಶಗಳಿಗೆ ಉಪಗ್ರಹ ಸೇವೆಗಳು ಲಭ್ಯವಾಗಲಿದೆ. ಇದು 12 ವರ್ಷಗಳಿಗೂ ಹೆಚ್ಚು ಕಾಲ ಸಮರ್ಥವಾಗಿ ಕಾರ್ಯನಿರ್ವಹಿಸಲಿದೆ.

ಪ್ರಧಾನಿಯವರು ಈ ಯೋಜನೆ ಘೋಷಣೆ ಮಾಡಿದ ಬಳಿಕ ಬಹೃತ್ ಉಪಗ್ರಹ ತಯಾರಿಕೆ ಕೆಲಸ ಆರಂಭಿಸಲಾಯಿತು. ಇದನ್ನು ಪೂರ್ಣಗೊಳಿಸಲು ಮೂರು ವರ್ಷಗಳು ಬೇಕಾಯಿತು. ಜಿ-ಸ್ಯಾಟ್ 9 ಒಟ್ಟು 12 ಕ್ಯು-ಬ್ಯಾಂಡ್ ಟ್ರಾನ್ಸ್‍ಫಾಂಡರ್‍ಗಳನ್ನು ಒಳಗೊಂಡಿರುತ್ತದೆ. ಇದರಿಂದ ನೆರೆ ದೇಶಗಳು ತಮ್ಮ ಸಂವಹನ ಸಾಮರ್ಥ್ಯವನ್ನು ಇನ್ನಷ್ಟು ವೃದ್ಧಿಸಿಕೊಳ್ಳಲು ಸಾಧ್ಯವಾಗಲಿದೆ. ಪ್ರತಿಯೊಂದು ದೇಶವೂ ಒಂದೊಂದು ಟ್ರಾನ್ಸ್ ಫಾಂಡರ್ ಹೊಂದಲಿದೆ. ಅಲ್ಲದೇ ಈ ರಾಷ್ಟ್ರಗಳು ತಮ್ಮ ವ್ಯಾಪ್ತಿಯೊಳಗೆ ಉಪಗ್ರಹ ಸಂದೇಶಗಳನ್ನು ಪಡೆಯಲು ಮೂಲಸೌಕರ್ಯ ಅಭಿವೃದ್ದಿಗೊಳಿಸಲು ಅಗತ್ಯ ತಂತ್ರಜ್ಞಾನ ನೆರವು ನೀಡಲಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

 

Facebook Comments

Sri Raghav

Admin