‘ಜೆಡಿಎಸ್ ಅಧಿಕಾರಕ್ಕೆ ಬಂದರೆ 24 ಗಂಟೆಯೊಳಗೆ ರೈತರ, ಸ್ತ್ರೀಶಕ್ತಿ ಸಂಘಗಳ ಸಾಲ ಸಂಪೂರ್ಣ ಮನ್ನಾ’

Spread the love

JDS--01

ಕೊರಟಗೆರೆ, ಏ.2- ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬಂದ 24ಗಂಟೆಯೊಳಗೆ ರಾಷ್ಟ್ರೀಯ ಮತ್ತು ಪ್ರಾದೇಶಿಕ ಬ್ಯಾಂಕಿನಲ್ಲಿರುವ ರೈತರ 51ಸಾವಿರ ಕೋಟಿ ಮತ್ತು ಸ್ತ್ರೀಶಕ್ತಿ ಸಂಘದ 4300ಕೋಟಿ ಸಾಲವನ್ನು ಸಂಪೂರ್ಣವಾಗಿ ಮನ್ನಾ ಮಾಡುತ್ತೇನೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ. ಪಟ್ಟಣದಲ್ಲಿ ಜೆಡಿಎಸ್ ಪಕ್ಷದ ವತಿಯಿಂದ ಏರ್ಪಡಿಸಲಾಗಿದ್ದ ವಿಕಾಸಪರ್ವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳಿಂದ ರಾಜ್ಯದ ರೈತರ ಅಭಿವೃದ್ದಿ ಸಾಧ್ಯವಿಲ್ಲ. ರಾಜ್ಯದಲ್ಲಿ ಆರೋಪ, ಪ್ರತ್ಯಾರೋಪದಲ್ಲಿಯೇ ಕಾಲ ಕಳೆದಿರುವ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳ ಕೊನೆಗಾಲ ಹತ್ತಿರವಾಗಿದೆ ಎಂದು ಹೇಳಿದರು.

ವಿಕಾಸಪರ್ವ ಕಾರ್ಯಕ್ರಮಕ್ಕೆ ಜನರನ್ನು ಬರದಂತೆ ತಡೆಯಲು ಡಾ.ಜಿ.ಪರಮೇಶ್ವರ್ ಕೊರಟಗೆರೆ ಕ್ಷೇತ್ರದ ಪ್ರತಿ ಭೂತ್‍ಗೂ ತಲಾ 10ಸಾವಿರದಂತೆ 24ಲಕ್ಷಕ್ಕೂ ಅಧಿಕ ಹಣ ನೀಡಿದ್ದರೂ ಸಹ ಕಾರ್ಯಕ್ರಮಕ್ಕೆ 30ಸಾವಿರಕ್ಕೂ ಅಧಿಕ ಜನ ಆಗಮಿಸಿರುವುದೇ ಜೆಡಿಎಸ್ ಭದ್ರಕೋಟೆಗೆ ಸಾಕ್ಷಿಯಾಗಿದೆ ಎಂದರು.
ಶಾಸಕ ಪಿ.ಆರ್.ಸುಧಾಕರಲಾಲ್ ಮಾತನಾಡಿ, ಕ್ಷೇತ್ರದ ಮನೆಮಗನಾಗಿ ಪ್ರಾಮಾಣಿಕವಾಗಿ ಪ್ರತಿ ಗ್ರಾಮಕ್ಕೂ ಭೇಟಿ ನೀಡಿ ಕೆಲಸ ಮಾಡಿದ್ದೇನೆ. ಕ್ಷೇತ್ರದ ಜನತೆ ನನಗೆ ತೋರಿಸಿದ ಪ್ರೀತಿ, ವಿಶ್ವಾಸದ ಋಣವನ್ನು ನಾನು ಸಾಯುವವರೇಗೂ ಅವರ ಸೇವೆಗೆ ಮೀಸಲಿಡುವ ಮೂಲಕ ತೀರಿಸುತ್ತೇನೆ ಎಂದು ಹೇಳಿದರು.

ಜೆಡಿಎಸ್ ಯುವ ರಾಜ್ಯಧ್ಯಕ್ಷ ಮಧುಬಂಗಾರಪ್ಪ ಮಾತನಾಡಿ, 5 ವರ್ಷಕ್ಕೊಮ್ಮೆ ಕ್ಷೇತ್ರಕ್ಕೆ ಬರುವ ಧನನಾಯಕ ಬೇಕೋ.. ಕೊರಟಗೆರೆ ಕ್ಷೇತ್ರದಲ್ಲಿಯೇ ಹುಟ್ಟಿಬೆಳೆದು 3ಬಾರಿ ಜಿಪಂ ಸದಸ್ಯ ಮತ್ತು ಶಾಸಕನಾಗಿ ತಮ್ಮ ಗ್ರಾಮಕ್ಕೆ ಬಂದು ಬಡಜನರ ಸೇವೆ ಮಾಡುವ ಜನಸೇವಕ ಬೇಕೊ ಎಂಬುದನ್ನು ಕ್ಷೇತ್ರದ ಮತದಾರರು ನಿರ್ಧರಿಸಬೇಕು ಎಂದರು. ಕಾರ್ಯಕ್ರಮದಲ್ಲಿ ಶಾಸಕ ಪಿ.ಆರ್.ಸುಧಾಕರಲಾಲ್ ಮತ್ತು ಕುಮಾರಣ್ಣ ಯುವಪಡೆ ವತಿಯಿಂದ ಕುಮಾರಸ್ವಾಮಿಗೆ 50ಕೆಜಿಯ ಪಂಚಲೋಹದ ಜೆಡಿಎಸ್ ಪಕ್ಷದ ಚಿಹ್ನೆಯ ಕಾಣಿಕೆ ನೀಡಿ ಸನ್ಮಾನಿಸಿ ಗೌರವಿಸಲಾಯಿತು.   ಬಿಎಸ್‍ಪಿ ರಾಜ್ಯ ಕಾರ್ಯದರ್ಶಿ ರಾಜಸಿಂಹ, ಎಂಎಲ್‍ಸಿ ಬೆಮೇಲ್‍ಕಾಂತರಾಜು, ರಮೇಶ್‍ಬಾಬು, ಮಾಚಿ ಸಚಿವ ಸತ್ಯಾನಾರಾಯಣ್, ಪಾವಗಡ ಶಾಸಕ ತಿಮ್ಮರಾಯಪ್ಪ, ಜಿಪಂ ಅಧ್ಯಕ್ಷೆ ಲತಾರವಿಕುಮಾರ್, ಕುಸುಮಜಗನ್ನಾಥ್, ಜಿಪಂ ಸದಸ್ಯರು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Facebook Comments

Sri Raghav

Admin