ಜೆಡಿಎಸ್ ಅಧಿಕಾರಕ್ಕೆ ಬಂದರೆ 24 ಗಂಟೆಯಲ್ಲಿ ರೈತರ ಸಾಲ ಮನ್ನಾ

Spread the love

Kumaraswamy-021

ಬೆಂಗಳೂರು, ಡಿ.9- ಜೆಡಿಎಸ್ ಪಕ್ಷ ಅಧಿಕಾರ ಪಡೆದ 24 ಗಂಟೆಯೊಳಗೆ ರೈತರ ಸಾಲ ಮನ್ನಾ ಮಾಡುವ ಸವಾಲು ಸ್ವೀಕರಿಸಿದ್ದೇವೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಇಂದಿಲ್ಲಿ ಪುನರುಚ್ಚರಿಸಿದರು. ನಗರದ ಅರಮನೆ ಮೈದಾನದಲ್ಲಿ ನಡೆದ ಜೆಡಿಎಸ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಮತ್ತೊಮ್ಮೆ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾದ ಅವರು ಕಾರ್ಯಕರ್ತರಿಗೆ ಅಭಿನಂದನೆ ಸಲ್ಲಿಸಿ ಮಾತನಾಡಿದರು.  ಕಾವೇರಿ ಹಾಗೂ ಮಹದಾಯಿ ನದಿ ನೀರು ವಿಚಾರದಲ್ಲಿ ರಾಜ್ಯಕ್ಕೆ ಅನ್ಯಾಯವಾಗಿರುವುದರಿಂದ ಜನರು ಆಕ್ರೋಶಗೊಂಡಿದ್ದಾರೆ. ರೈತರು ನೀರಿಗಾಗಿ ಪರಿತಪಿಸುತ್ತಾ ದಿನಗಳೆಯುತ್ತಿದ್ದಾರೆ. ಬರದ ನಡುವೆ ಸಂಕಷ್ಟ ಎದುರಿಸುತ್ತಿರುವ ರೈತರಿಗೆ ಸಾಲ ಮನ್ನಾ ಮಾಡಲು ಕೇಂದ್ರ ಸರ್ಕಾರ ನೆರವನ್ನು ಕೋರಿರುವ ಮುಖ್ಯಮಂತ್ರಿಗಳು ಅವರು ಸಹಾಯ ಮಾಡಿದರಷ್ಟೆ ಸಾಲ ಮನ್ನಾ ಮಾಡುವುದಾಗಿ ಹೇಳುತ್ತಿದ್ದಾರೆ.

ನಾವು ಅಧಿಕಾರ ಪಡೆದ 24 ಗಂಟೆಯೊಳಗೆ ಸಾಲ ಮನ್ನಾ ಮಾಡಿ ರೈತರ ದುಸ್ಥಿತಿ ನಿವಾರಣೆಗೆ ಎಲ್ಲಾ ರೀತಿಯ ಕ್ರಮಕೈಗೊಳ್ಳಲು ಬದ್ದರಾಗಿದ್ದೇವೆ. ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬರುವುದಿಲ್ಲ ಎಂದು ಹೇಳುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಮೊದಲು ರೈತರ ಸಮಸ್ಯೆ ನಿವಾರಣೆಗೆ ಮುಂದಾಗಲಿ ಎಂದು ತಿರುಗೇಟು ನೀಡಿದರು. ಅಧಿಕಾರಿಗಳ ಭ್ರಷ್ಟಾಚಾರ ರಾಜಾರೋಷವಾಗಿ ನಡೆಯುತ್ತಿದೆ. ಎರಡೂ ರಾಷ್ಟ್ರೀಯ ಪಕ್ಷಗಳು ಭ್ರಷ್ಟಾಚಾರದಲ್ಲಿ ಮುಳುಗಿವೆ. ರಾಜ್ಯದಲ್ಲಿ ಹೋರಾಟ ಮಾಡಲು ಸಾಕಷ್ಟು ವಿಚಾರಗಳಿವೆ. ಆದರೆ ಭ್ರಷ್ಟಾಚಾರ ಎಲ್ಲವನ್ನೂ ನುಂಗಿ ಹಾಕುತ್ತಿದೆ. ರೆವಿನ್ಯೂ ಇನ್ಸ್‍ಪೆಕ್ಟರ್ ಮನೆಯಲ್ಲಿ 10 ಕೋಟಿ, ಐಎಎಸ್ ಅಧಿಕಾರಿ ಬಳಿ 5 ಕೋಟಿ ಹಣ ದೊರೆತಿದೆ. ಸರ್ಕಾರ ಯವುದೇ ಕ್ರಮಕೈಗೊಂಡಿಲ್ಲ. ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದ ಅವಧಿಯಲ್ಲಿ ಟೆಂಡರ್ ಪಡೆಯಲು ಆರಂಭವಾದ ಕಮೀಷನ್ ದಂಧೆ ಕಾಂಗ್ರೆಸ್ ಸರ್ಕಾರದಲ್ಲೂ ಮುಂದುವರೆದಿದೆ. ಇದರಿಂದ ಭ್ರಷ್ಟಾಚಾರ ತಾರಕಕ್ಕೇರುತ್ತಿದೆ ಎಂದು ಗಂಭೀರ ಆರೋಪ ಮಾಡಿದರು.

ನೋಟು ರದ್ದು ಮಾಡಿದ್ದರಿಂದ ಶ್ರೀಮಂತರು ಬಡವರ ಮನೆ ಕಾಯುವಂತಾಗಿದೆ ಎಂದು ಹೇ ಳುತ್ತಿದ್ದರು. ಆದರೆ ಯಾವ ಶ್ರೀಮಂತರು ಬಡವರ ಮನೆ ಬಾಗಿಲಿಗೆ ಹೋಗಿಲ್ಲ. ವಿಧಾನಸೌಧದ ಮೂರನೇ ಮಹಡಿಯಲ್ಲಿ ಆರಂಭವಾಗುವ ಭ್ರಷ್ಟಾಚಾರ ತಡೆಯುವ ಪ್ರಯತ್ನ ಮಾಡುತ್ತಿಲ್ಲ. ಅಧಿಕಾರಿಗಳಿಂದಲೇ ಎಲ್ಲವೂ ನಡೆಯುತ್ತಿದೆ ಎಂದು ದೂರಿದರು. ಮೋದಿ ಸರ್ಕಾರ ಕಪ್ಪು ಹಣವನ್ನು ಬಿಳಿ ಮಾಡಿಕೊಳ್ಳಲು ಅವಕಾಶ ಮಾಡಿಕೊಟ್ಟಿದೆ. ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿರುವ ಮೋದಿಯವರು ನೋಟ್ ಬ್ಯಾನ್ ಮಾಡಿ ಇಂತಹ ನಡೆಗೆ ಅವಕಾಶ ಕಲ್ಪಿಸಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ನಾನು ಪಕ್ಷ ಸಂಘಟನೆಯಿಂದ ದೂರ ಉಳಿದಿದ್ದೇನೆ. ಕಾರ್ಯಕರ್ತರು ಶ್ರಮಿಸುತ್ತಿಲ್ಲ. ದೇವೇಗೌಡರು 85ನೆ ಇಳಿವಯಸ್ಸಿನಲ್ಲೂ ಯುವಕರು ನಾಚುವಂತಹ ರೀತಿಯಲ್ಲಿ ಪಕ್ಷ ಸಂಘಟನೆಗೆ ನಿಂತಿದ್ದಾರೆ. 2018ರ ಚುನಾವಣೆ ಅಗ್ನಿಪರೀಕ್ಷೆಯಾಗಿದೆ. ನಮ್ಮ ಶಕ್ತಿ ನಮಗೆ ಗೊತ್ತಿದೆ. ವಿವಿಧ ಪಕ್ಷಗಳ ಮುಖಂಡರು ಪಕ್ಷ ಸೇರಲು ಮುಂದಾಗಿದ್ದಾರೆ. 2018ರ ಚುನಾವಣೆಯಲ್ಲಿ 113 ಸ್ಥಾನ ಪಡೆಯುವಲ್ಲಿ ಯಾವುದೇ ಸಂದೇಹವಿಲ್ಲ. 50-60 ಸ್ಥಾನ ಗೆದ್ದರೆ ಇನ್ನೊಂದು ಪಕ್ಷದೊಂದಿಗೆ ಅಧಿಕಾರ ಹಿಡಿಯಬೇಕಾಗುತ್ತದೆ. ಆದರೆ ಸ್ವಂತ ಬಲದ ಮೇಲೆ ಅಧಿಕಾರ ಹಿಡಿಯುವುದೇ ನಮ್ಮ ಗುರಿ ಎಂದು ತಿಳಿಸಿದರು.

ದೇವೇಗೌಡರು ಪ್ರಧಾನಿಯಾಗಿದ್ದಾಗಲೇ ಸ್ವಯಂ ಆಸ್ತಿ ಘೋಷಣೆಗೆ ಅವಕಾಶ ಕಲ್ಪಿಸಿದ್ದರು. ಆಗಿನ ಕಾಲದಲ್ಲೇ 30 ಸಾವಿರ ಕೋಟಿ ರೂ. ಆದಾಯ ಸರ್ಕಾರಕ್ಕೆ ಬಂದಿತ್ತು. ಆದರೆ ಇಂದಿನ ಪ್ರಧಾನಿಯವರು ಯಾವುದೇ ಪೂರ್ವ ಯೋಜನೆಯಿಲ್ಲದೆ ನೋಟ್‍ಬ್ಯಾನ್‍ನಂತಹ ಕ್ರಮಕೈಗೊಂಡಿದ್ದಾರೆ. ದೇಶಕ್ಕೆ ದೇವೇಗೌಡರ ಅಗತ್ಯವಿದೆ. ಪ್ರಾದೇಶಿಕ ಪಕ್ಷಗಳು ಒಗ್ಗೂಡಲು ಮುಂದಾಗಿರುವ ಈ ದಿನಗಳಲ್ಲಿ ಅವರ ಪಾತ್ರ ಮಹತ್ವದ್ದಾಗಿದೆ ಎಂದು ಹೇಳಿದರು. ಕಾವೇರಿ ವಿವಾದದಲ್ಲಿ ಮೇಲ್ಮನವಿ ಸಲ್ಲಿಸುವ ಅವಕಾಶವಿದೆ. ಇದರಿಂದ ಮತ್ತೆ ಆಸೆ ಮೂಡಿಸಿದೆ. ಇದೇ 15ರಂದು ನಡೆಯುವ ವಿಚಾರಣೆಯಲ್ಲಿ ರಾಜ್ಯಸರ್ಕಾರ ಸಮರ್ಥವಾಗಿ ವಾದ ಮಂಡಿಸಬೇಕು ಎಂದರು. ತಾವು ಮುಖ್ಯಮಂತ್ರಿಗಳಾಗಿದ್ದಾಗ ಕಾವೇರಿಗಾಗಿ ವಿಶೇಷ ಮೇಲ್ಮನವಿ ಸಲ್ಲಿಸಲಾಗಿತ್ತು ಎಂದು ಸ್ಮರಿಸಿದರು.

ಸಭೆಯಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಶಾಸಕರಾದ ಬಿ.ಬಿ.ನಿಂಗಯ್ಯ, ಅಪ್ಪಾಜಿಗೌಡ, ಶ್ರೀಕಂಠೇಗೌಡ, ಚೌಡರೆಡ್ಡಿ, ಶರವಣ, ರಾಜ್ಯಸಭಾ ಸದಸ್ಯ ಕುಪೇಂದ್ರರೆಡ್ಡಿ, ಬಸವರಾಜ ಹೊರಟ್ಟಿ, ಉಪಮೇಯರ್ ಆನಂದ್, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಡಾನಿಷ್ ಅಲಿ ಸೇರಿ ಕೇರಳ, ತಮಿಳುನಾಡು, ಕರ್ನಾಟಕ ಸೇರಿ ಇತರೆ ರಾಜ್ಯಗಳ ಮುಖಂಡರ ಭಾಗಿಯಾಗಿದ್ದರು.

ಆಯ್ಕೆ: ಕೇರಳ ಜೆಡಿಎಸ್ ರಾಜ್ಯಾಧ್ಯಕ್ಷರಾಗಿ ಕಿಶನ್‍ಕುಟ್ಟಿ, ಮಹಾರಾಷ್ಟ್ರದ ರಾಜ್ಯಾಧ್ಯಕ್ಷರಾಗಿ ಪಂಡಾರುಂ ಡೋಲೆ, ಪಂಜಾಬ್ ರಾಜ್ಯಾಧ್ಯಕ್ಷರಾಗಿ ಅವತಾರ್‍ಸಿಂಗ್, ತೆಲಂಗಾಣ ರಾಜ್ಯಾಧ್ಯಕ್ಷರಾಗಿ ಟಿ.ಜೆ.ಸೂರಿ ಆಯ್ಕೆಯಾದರು. ಅದೇ ರೀತಿ ಆಂಧ್ರ ಮತ್ತು ಉತ್ತರಪ್ರದೇಶದ ರಾಜ್ಯಾಧ್ಯಕ್ಷರನ್ನು ಆಯ್ಕೆ ಮಾಡಲಾಯಿತು.

> ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… :  Eesanje News 24/7 ನ್ಯೂಸ್ ಆ್ಯಪ್ –  Click Here to Download 

Sri Raghav

Admin