ಜೆನರಿಕ್ ಔಷಧ ಮಳಿಗೆ ತೆರೆಯಲು ಸೂಚನೆ

vijayapura

ವಿಜಯಪುರ, ಫೆ.7-ಸಾರ್ವಜನಿಕರಿಗೆ ಹಾಗೂ ಬಡವರಿಗೆ ಅನುಕೂಲವಾಗುವ ದೃಷ್ಟಿಯಿಂದ ವಿಜಯಪುರ ಪಟ್ಟಣದ ಸರಕಾರಿ ಆಸ್ಪತ್ರೆ ಆವರಣದಲ್ಲಿ ಜನರಿಕ್ ಔಷಧ ಮಳಿಗೆ ತೆರೆಯಲು ಈಗಾಗಲೇ ಸೂಚಿಸಲಾಗಿದ್ದು, ಶೀಘ್ರವೇ ಕಾರ್ಯಾರಂಭಗೊಳ್ಳಲಿದೆ ಎಂದು ಬೆಂ.ಗ್ರಾಜಿಲ್ಲಾ ಆರೋಗ್ಯಾಧಿಕಾರಿ ರಾಜೇಶ್ ತಿಳಿಸಿದರು.ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರದಲ್ಲಿ ದಾನಿಗಳಾದ ರೇಷ್ಮೆ ವ್ಯಾಪಾರಿ ಅಶ್ವತ್ಥಪ್ಪರವರಿಂದ ನಿರ್ಮಿಸಿದ ಮಹಿಳಾ ವಿಭಾಗದ ಪ್ರತ್ಯೇಕ ವಾರ್ಡ್‍ಅನ್ನು ಉದ್ಘಾಟಿಸಿ, ಮಾತನಾಡುತ್ತಿದ್ದರು. ಸರಕಾರದೊಂದಿಗೆ ಹೆಚ್ಚು-ಹೆಚ್ಚಾಗಿ ಸಾರ್ವಜನಿಕರೂ ಆರೋಗ್ಯ ಕೇಂದ್ರದ ಅಭಿವೃದ್ದಿಗೆ ಹಾಗೂ ಕೊರತೆಗಳ ನಿವಾರಣೆಗೆ ಕೈಜೋಡಿಸಿದಲ್ಲಿ ಇನ್ನು ಉತ್ತಮ ಸೇವೆ ನೀಡಲು ಸಾಧ್ಯವಾಗುವುದೆಂದು ತಿಳಿಸಿದರು.
ಲಸಿಕೆ ಹಾಕಿಸಿ: ಇಂದಿನಿಂದ 22 ನೇ ತಾರೀಖಿನವರೆಗೆ 9 ತಿಂಗಳಿನಿಂದ 15 ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ದಡಾರ ವiತ್ತು ರುಬೆಲ್ಲ ರೋಗಗಳ ವಿರುದ್ದ ಲಸಿಕೆಯನ್ನು ಸರಕಾರಿ ಆಸ್ಪತ್ರೆಗಳಲ್ಲಿ ಹಾಗೂ ಶಾಲಾ/ಕಾಲೇಜುಗಳಲ್ಲಿ ಮತ್ತು ಅಂಗನವಾಡಿ ಕೇಂದ್ರಗಳಲ್ಲಿ ಆರೋಗ್ಯ ಇಲಾಖೆಯ ವತಿಯಿಂದ ನೀಡಲಾಗುತ್ತಿದ್ದು, ಪೋಷಕರು ಹಾಗೂ ಸಾರ್ವಜನಿಕರು ತಮ್ಮ ಮಕ್ಕಳನ್ನು ಸರಕಾರಿ ಆರೋಗ್ಯ ಕೇಂದ್ರಗಳಿಗೆ ಕರೆದುಕೊಂಡು ಹೋಗಿ, ಉಚಿತವಾಗಿ ಲಸಿಕೆ ಪಡೆಯಬೇಕೆಂದು ಸೂಚಿಸಿದರು.

ಆತಂಕ ಬೇಡ: ಲಸಿಕೆ ಹಾಕಿಸಿಕೊಳ್ಳುವುದರಿಂದ ಯಾವುದೇ ಪ್ರತಿಕೂಲ ಪರಿಣಾಮ ಸಂಭವಿಸುವುದಿಲ್ಲವೆಂದು, ಆದಾಗ್ಯೂ ಲಕ್ಷಕ್ಕೊಬ್ಬರಿಗೆ ತೊಂದರೆಯುಂಟಾಗುವ ಸಂಭವಿರುವ ಬಗ್ಗೆ ಇಲಾಖೆಯಿಂದ ಸಂಪೂರ್ಣ ಎಚ್ಚರಿಕೆ ವಹಿಸಲಾಗಿದ್ದು, ಪ್ರತಿ ಕೇಂದ್ರಗಳಲ್ಲಿಯೂ ಲಸಿಕೆಯಿಂದ ಏನಾದರೂ ತೊಂದರೆಯುಂಟಾದಲ್ಲಿ ನೀಡಬೇಕಾದ ಅವಶ್ಯಕ ಚಿಕಿತ್ಸೆಗೆ ಮುನ್ನೆಚ್ಚರಿಕಾ ಕ್ರಮವಾಗಿ ಸಿದ್ದತೆ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು. ಸಮುದಾಯ ಆರೋಗ್ಯ ಕೇಂದ್ರದ ಆಡಳಿತಾಧಿಕಾರಿ ಮಂಜುಳಾ ಮಾತನಾಡಿ, ಪಟ್ಟಣದ 28 ಅಂಗನವಾಡಿ ಕೇಂದ್ರಗಳು, 33 ಶಾಲೆಗಳನ್ನೊಳಗೊಂಡಂತೆ ಒಟ್ಟಾರೆ 11500 ಕ್ಕೂ ಹೆಚ್ಚು ಮಕ್ಕಳಿಗೆ ವ್ಯಾಕ್ಸಿನೇಷನ್ ಮಾಡಲಾಗುತ್ತಿದೆ ಎಂದು ತಿಳಿಸಿದರು. ತಾಲ್ಲೂಕು ಆರೋಗ್ಯಾಧಿಕಾರಿ ಡಾ.ರಶ್ಮಿ, ಡಾ.ಉದಯ್, ಪ್ರಸನ್ನ ,ಮುನಿರೆಡ್ಡಿ ಉಪಸ್ಥಿತರಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Sri Raghav

Admin