‘ಜೆಪಿ ಭವನ’ನಾಮಕರಣ : ಸ್ವಾಭಿಮಾನಿ ಸಮಾನತೆ ಸಮಾವೇಶದಲ್ಲಿ ಜೆಡಿಎಸ್ ಶಕ್ತಿ ಪ್ರದರ್ಶನ

Spread the love

JDS-JPBhavan

ಬೆಂಗಳೂರು,ಮಾ.23– ದೇಶಕ್ಕೆ ಮಾರ್ಗದರ್ಶನ ಮಾಡುವ ಶಕ್ತಿ ಕರ್ನಾಟಕದಿಂದ ಬರಲಿದೆ ಎಂದು ಜೆಡಿಎಸ್ ವರಿಷ್ಠ ಮತ್ತು ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಅವರು ಹೇಳಿದರು.  ಜೆಡಿಎಸ್ ವತಿಯಿಂದ ಅರಮನೆ ಮೈದಾನದಲ್ಲಿ ಆಯೋಜಿದ್ದ ಪಕ್ಷದ ನೂತನ ಕಚೇರಿಗೆ ಜೆಪಿ ಭವನ ಎಂಬ ನಾಮಕರಣ ಸಮಾರಂಭ ಹಾಗೂ ಸ್ವಾಭಿಮಾನಿ ಸಮಾನತೆ ಸಮಾವೇಶದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಪಕ್ಷವನ್ನು ಶಿಸ್ತಿನಿಂದ ಕಟ್ಟಿ ಬೆಳೆಸೋಣ. ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್, ಬಿಜೆಪಿಗೆ ಸಮಾನಾಂತರವಾಗಿ ಬೆಳೆಸಿ ರೈತರ ಮತ್ತು ಜನಪರ ಸಮಸ್ಯೆಗಳಿಗೆ ಸ್ಪಂದಿಸಿ ಪಕ್ಷ ಬಲಗೊಳಿಸಬೇಕೆಂದು ಕಾರ್ಯಕರ್ತರಿಗೆ ಕರೆ ನೀಡಿದರು.

ಲೋಕ ನಾಯಕ ಜಯಪ್ರಕಾಶ್ ನಾರಾಯಣ್ ಕುರಿತ ಪುಸ್ತಕವನ್ನು ಎಲ್ಲ ಜಿಲ್ಲೆಯ ನಾಯಕರಿಗೂ ಕಳಿಸಿಕೊಡಲಾಗುವುದು. ಈ ಮೂಲಕ ಕಾರ್ಯಕರ್ತರು ಮತ್ತು ಯುವ ಪೀಳಿಗೆಗೆ ಜೆಪಿ ಅವರ ವಿಚಾರಧಾರೆಗಳನ್ನು ಪರಿಚಯಿಸಬೇಕಿದೆ ಎಂದರು. ಪ್ರಾಸ್ತಾವಿಕವಾಗಿ ಮಾತನಾಡಿದ ಜೆಡಿಎಸ್ ಶಾಸಕಾಂಗ ಪಕ್ಷದ ಉಪನಾಯಕ ವೈಎಸ್‍ವಿ ದತ್ತ, ಇದೊಂದು ಐತಿಹಾಸಿಕ ಮತ್ತು ಕ್ರಾಂತಿಕಾರಿ ಸಮಾವೇಶವಾಗಿದೆ. ಜೆಡಿಎಸ್ ಪಕ್ಷಕ್ಕೆ ಮಣ್ಣಿನಿಂದ ಮೇಲೆದ್ದು ಬೆಳೆವ ಜಾಯಮಾನವಿದೆ. ಇದಕ್ಕೆ ಈ ಹಿಂದಿನ ಚುನಾವಣೆಗಳು ಸಾಕ್ಷಿ ಎಂದರು.

ಜೆಪಿ ವಿಚಾರಧಾರೆಗಳನ್ನು ಕಾರ್ಯಕರ್ತರು ಮತ್ತು ಯುವ ಪೀಳಿಗೆಗೆ ತಿಳಿಸುವುದು ಪ್ರಸ್ತುತ ಸಂದರ್ಭ ಅಗತ್ಯವಿದೆ. ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಸರ್ವಾಧಿಕಾರಿ ಧೋರಣೆ ವಿರುದ್ಧ ಹೋರಾಟ ನಡೆಸಿದವರು ಜೆಪಿ. ಅವರ ಕರ್ಮಭೂಮಿಯಾದ ಗುಜರಾತ್ ಮತ್ತು ಬಿಹಾರ್‍ನಲ್ಲೂ ಸ್ಮರಿಸಲಿಲ್ಲ. ಕರ್ನಾಟಕದಲ್ಲಿ ಜೆಡಿಎಸ್ ಕಚೇರಿಗೆ ಅವರ ಹೆಸರಿಟ್ಟಿರುವುದು ಎಲ್ಲರಿಗೂ ಸ್ಫೂರ್ತಿದಾಯಕವಾಗಿದೆ ಎಂದು ಹೇಳಿದರು.  ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್ ಕನ್ನಡಿಗರ ಅಭಿಮಾನವನ್ನು ಹೈಕಮಾಂಡ್ ಬಳಿ ಅಡವಿಟ್ಟಿದ್ದಾರೆ. ಕನ್ನಡಿಗರ ಜಾಯಮಾನಕ್ಕೆ ಸಮೃದ್ಧವಾದ ಸ್ವಾಭಿಮಾನದ ನಾಡನ್ನು ನಿರ್ಮಿಸೋಣ ಎಂದು ಸಲಹೆ ನೀಡಿದರು.

ಕಾರ್ಯಕರ್ತರು ಭೌತಿಕ ಮತ್ತು ವೈಚಾರಿಕ ಸಂಘಟನೆಗೆ ಮುಂದಾಗಬೇಕಿದೆ. ಏಕೆಂದರೆ ಪ್ರಧಾನ ಮಂತ್ರಿ ನರೇಂದ್ರ ಮೊದಿ ಅವರು  ಸರ್ವಾಧಿಕಾರಿಯಾಗಿರುವುದು ಅಪಾಯಕಾರಿ ಎಂದು ಜನರು ಮಾತಾಡಿಕೊಳ್ಳುತ್ತಿದ್ದಾರೆ ಎಂದರು. ಕಾವೇರಿ-ಮಹದಾಯಿ ಯೋಜನೆಯನ್ನು ಮರೆಯಬೇಕೆ ಎಂದ ದತ್ತ ಅವರು, ಮಾಜಿ ಪ್ರಧಾನಿ ದೇವೇಗೌಡರು ಮತ್ತು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ತಮ್ಮ ಆಡಳಿತಾವಧಿಯಲ್ಲಿ ನಾಡಿಗೆ ನೀಡಿರುವ ಕೊಡುಗೆಗಳನ್ನು ಜನರಿಗೆ ತಿಳಿಸಬೇಕು ಮತ್ತು ಜೆಪಿ ಸ್ಮರಣೆ ಮಾಡಬೇಕು. ಸ್ವಾಭಿಮಾನಿ ನಾಡನ್ನು ಕಟ್ಟಿ ರಾಷ್ಟ್ರೀಯ ಪಕ್ಷಗಳಿಂದ ಆಗಿರುವ ಅನ್ಯಾಯವನ್ನು ಜನತೆಗೆ ತಿಳಿಸಿ. ಮುಂದೆ ಜೆಡಿಎಸ್ ಅಧಿಕಾರಕ್ಕೆ ಬಂದರೆ ಮಾಡಬೇಕಿರುವ ಕೆಲಸಗಳ ಬಗ್ಗೆ ಜನರಿಗೆ ಭರವಸೆ ನೀಡಿ ಪಕ್ಷವನ್ನು ಬಲಗೊಳಿಸಬೇಕೆಂದು ಅವರು ಹೇಳಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin