ಜೇಟ್ಲಿ ಬಜೆಟ್ ಬಗ್ಗೆ ನೀವು ತಿಳಿದುಕೊಳ್ಳಲೇಬೇಕಾದ 15 ಪ್ರಮುಖ ಅಂಶಗಳು

Spread the love

Union-Budget2017-1

ನವದೆಹಲಿ, ಫೆ.1– ನೋಟು ರದ್ದತಿಯ ಲಾಭಗಳನ್ನು ಬಡಜನತೆ ವರ್ಗಾವಣೆಗೆ ನಿರ್ಧಾರ, ಗ್ರಾಮೀಣಾಭಿವೃದ್ದಿಗೆ ಅದರ ಪ್ರಯೋಜನವನ್ನು ಹೂಡಿಕೆ ರೂಪದಲ್ಲಿ ವಿನಿಯೋಗಿಸಲು ತೀರ್ಮಾನ, 10 ಲಕ್ಷ ಕೋಟಿ ರೂ ಕೃಷಿ ಸಾಲ ನೆರವು, ರೈತರ ಬೆಳೆ ವಿಮೆ ಯೋಜನೆಗೆ 9 ಸಾವಿರ ಕೋಟಿ ರೂ.ಗಳು ಸಾಲ ಸೌಲಭ್ಯ, ಗ್ರಾಮೀಣರಿಗೆ 1 ಕೋಟಿ ಮನೆ ನಿರ್ಮಾಣ, 1 ಕೋಟಿ ಕುಟುಂಬಗಳಿಗೆ ಅಂತ್ಯೋದಯ ಯೋಜನೆ ಫಲಾನುಭವ, ಆದಾಯ ತೆರಿಗೆ ದರ ಇಳಿಕೆ, ರೈಲ್ವೆ ಇಲಾಖೆಗೆ 1.31 ಲಕ್ಷ ಕೋಟಿ ರೂ. ನಿಗದಿ, ಹೆದ್ದಾರಿಗಳ ಪ್ರಗತಿಗಾಗಿ 64,000 ಕೋಟಿ ರೂ.ಗಳ ಮೀಸಲು-ಇವು ಇವು ಹಣಕಾಸು ಸಚಿವ ಅರುಣ್ ಜೇಟ್ಲಿ ಇಂದು ಮಂಡಿಸಿದ 2017-18ನೇ ಸಾಲಿನ ಬಜೆಟ್‍ನ ಮುಖ್ಯಾಂಶಗಳಾಗಿವೆ.

ಬಡತನ ನಿರ್ಮೂಲನೆ, ಸಣ್ಣ ಮತ್ತು ಮಧ್ಯಮ ವರ್ಗದ ರೈತರು ಹಾಗೂ ಗ್ರಾಮೀಣಾಭಿವೃದ್ದಿಗೆ ನೆರವು. ಯುವಶಕ್ತಿ ಬಲವರ್ಧನೆಗೆ ಒತ್ತು, ಮಹಿಳಾ ಸಬಲೀಕರಣ, ಉದ್ಯೋಗ ಸೃಷ್ಟಿಗೆ ಆದ್ಯತೆ, ಮೂಲ ಸೌಕರ್ಯಾಭಿವೃದ್ದಿಗೆ ಕ್ರಮಗಳ ಮೇಲೂ ಬಜೆಟ್‍ನಲ್ಲಿ ಬೆಳಕು ಚೆಲ್ಲಲಾಗಿದೆ.   ಗ್ರಾಮೀಣಾಭಿವೃದ್ಧಿಗೆ 1 ಲಕ್ಷ 87 ಸಾವಿರ 223 ಕೋಟಿ ರೂ.ಗಳನ್ನು ನಿಗದಿಗೊಳಿಸಲಾಗಿದೆ. 2019ರ ವೇಳೆಗೆ ಭಾರತವನ್ನು ಬಡತನ ಮುಕ್ತವಾಗಿಸಲು ಉದ್ದೇಶಿಸಲಾಗಿದೆ. ನಬಾರ್ಡ್ ನಿಧಿಗಾಗಿ 40,000 ಕೋಟಿ ರೂ. ನೆರವು ನೀಡಲಾಗಿದೆ. ಎಂಎನ್‍ನರೇಗಾ ಯೋಜನೆಯಡಿ 10 ಲಕ್ಷ ಕೆರೆಗಳ ಅಭಿವೃದ್ದಿಗೆ ಕ್ರಮ ಕೈಗೊಳ್ಳಲಾಗಿದೆ. ಮಹಾತ್ಮಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಅನುದಾನವನ್ನು 48,000 ಕೋಟಿ ರೂ.ಗಳಿಗೆ ಹೆಚ್ಚಿಸಲಾಗಿದೆ. ಪ್ರತಿ ಹಳ್ಳಿಗೂ ವಿದ್ಯುತ್ ಸಂಪರ್ಕ ಕಲ್ಪಿಸುವ ಗುರಿ ಹೊಂದಲಾಗಿದೆ.

ನೋಟು ಅಮಾನ್ಯ ನಂತರದ ಅನಿರೀಕ್ಷಿತ ಬೆಳೆವಣಿಗೆಗಳು ಹಾಗೂ ಪಂಚ ರಾಜ್ಯಗಳ ಚುನಾವಣೆ ಹಿನ್ನೆಲೆಯಲ್ಲಿ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಜಾಣ ನಡೆ ಅನುಸರಿಸಿರುವ ವಿತ್ತ ಸಚಿವರು ನಿರೀಕ್ಷೆಯಂತೆ ಜನಸ್ನೇಹಿ ಮತ್ತು ಸರ್ವಜನರ ಶ್ರೇಯೋಭಿವೃದ್ದಿಯ ಬಜೆಟ್ ಮಂಡಿಸಿದ್ದಾರೆ.   ಪ್ರಮುಖವಾಗಿ ಕೃಷಿ, ಗ್ರಾಮೀಣ ಕ್ಷೇತ್ರಕ್ಕೆ ಬಜೆಟ್‍ನಲ್ಲಿ ಆದ್ಯತೆ ನೀಡಲಾಗಿದ್ದು, ವಿದ್ಯುತ್ ವಿವಿಧ 10 ಕ್ಷೇತ್ರಗಳಲ್ಲಿ ಪ್ರಗತಿ ಸಾಧಿಸುವ ಗುರಿಯುಳ್ಳ ಟೆಕ್ ಇಂಡಿಯಾ ಯೋಜನೆಯನ್ನೂ ಅವರು ಪ್ರಕಟಿಸಿದರು.   ಭಾರತವು ಜಗತ್ತಿನ ಬೆಳವಣಿಗೆಯ ಯಂತ್ರವೆಂದೇ ಪರಿಗಣಿಸಲ್ಪಟ್ಟಿದೆ ಎಂದು ತಮ್ಮ ಬಜೆಟ್ ಭಾಷಣದಲ್ಲಿಹೆಮ್ಮೆಯಿಂದ ಹೇಳಿಕೊಂಡ ಅವರು, ಆರ್ಥಿಕ ಬೆಳವಣಿಗೆಯಲ್ಲಿ ಕ್ಷಿಪ್ರ ಪ್ರಗತಿ ಸಾಧಿಸಿ. ವಿದೇಶಿ ಬಂಡವಾಳ ಹೂಡಿಕೆಯಲ್ಲೂ ಗಮನಾರ್ಹ ಸುಧಾರಣೆ ಕಂಡುಬಂದಿದೆ. ಇದನ್ನು ಇಂಟರ್‍ನ್ಯಾಷನಲ್ ಮಾನಿಟರಿ ಫಂಡ್(ಐಎಂಎಫ) ದೃಢಪಡಿಸಿದೆ ಎಂದು ತಿಳಿಸಿದರು.

ವಿಶ್ವ ಅರ್ಥಿಕತೆಯ ಅನಿಶ್ಚಿತ ಸ್ಥಿತಿಯಲ್ಲಿ ಮುಂದುವರಿದಿರುವಾಗಲೇ ಎರಡಂಕಿ ಹಣದುಬ್ಬರವನ್ನು ಕೇಂದ್ರ ಸರ್ಕಾರವು ಯಶಸ್ವಿಯಾಗಿ ನಿಯಂತ್ರಿಸಿದ್ದು, ಆರ್ಥಿಕ ಸ್ಥಿತಿಯನ್ನು ಪ್ರಗತಿಪಥದತ್ತ ತರುವಲ್ಲಿ ಸಫಲವಾಗಿದೆ. ಆರ್ಥಿಕ ಅಭಿವೃದ್ಧಿಗೆ ನೋಟು ಅಪನಗದೀಕರಣ ಪೂರಕವಾಗಿದೆ. ನೋಟು ಬ್ಯಾನ್ ನಿರ್ಧಾರದಿಂದ ಬ್ಯಾಂಕಿನ ಸಾಲ ಕಡಿಮೆಯಾಗಲಿದೆ ಎಂದು ಅವರು ಹೇಳಿದರು.
ಸಾರ್ವಜನಿಕ ಹಣವನ್ನು ಸದುಪಯೋಗಪಡಿಸಿಕೊಳ್ಳಲು ಕ್ರಮ ಕೈಗೊಳ್ಳಲಾಗಿದೆ. ಕೇಂದ್ರ ಸರ್ಕಾರವು ಸಾರ್ವಜನಿಕರ ಹಣದ ಸುರಕ್ಷಿತ ಅಭಿರಕ್ಷಕ ಬಿಂಬಿಸಲ್ಪಟ್ಟಿದೆ ಎಂಧು ವಿತ್ತ ಸಚಿವರು ಪ್ರಸಕ್ತ ಸಾಲಿನ ಮುಂಗಡ ಪತ್ರದಲ್ಲಿ ತಿಳಿಸಿದ್ದಾರೆ.

ಉತ್ತಮ ಉದ್ದೇಶದ ಪ್ರಯತ್ನ ಎಂದಿಗೂ ವೈಫಲ್ಯವಾಗುವುದಿಲ್ಲ ಎಂಬ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಮಾತನ್ನು ತಮ್ಮ ಬಜೆಟ್ ಭಾಷಣದಲ್ಲಿ ಅವರು ಉಲ್ಲೇಖಿಸಿದರು.
ಹೊಸ ಸಂಪ್ರದಾಯಗಳಿಗೆ ಮುನ್ನುಡಿ. ಈ ಬಾರಿಯ ಬಜೆಟ್ ಹಲವು ಪ್ರಥಮಗಳ ವಿಶೇಷತೆಯನ್ನೂ ಒಳಗೊಂಡಿದೆ. ಅಲ್ಲದೇ ಹೊಸ ಸಂಪ್ರದಾಯಗಳಿಗೂ ಮುನ್ನುಡಿಯಾಗಿದೆ. ಸಂಸತ್ತಿನ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ತಿಂಗಳ ಮೊದಲ ದಿನವೇ (ಫೆ.1) ಬಜೆಟ್ ಮಂಡಿಸಿ ಹಳೆ ಸಾಂಪ್ರದಾಯಕ್ಕೆ ತಿಲಾಂಜಲಿ ನೀಡಲಾಗಿದೆ. 82 ವರ್ಷಗಳ ಬಳಿಕ ಸಾಮಾನ್ಯ ಬಜೆಟ್‍ನೊಂದಿಗೆ ರೈಲ್ವೆ ಮುಂಗಡಪತ್ರ ಮಂಡನೆಯಾಗಿದೆ. ಚುನಾವಣೆ ಹೊಸ್ತಿಲಿನಲ್ಲಿರುವಾಗಲೇ ಬಜೆಟ್ ಮಂಡನೆಯಾಗಿರುವುದೂ ಇದೆ ಮೊದಲು.

 


 1.  ಆದಾಯ ತೆರಿಗೆ ವಿನಾಯ್ತಿ ಮಿತಿ ಏರಿಕೆ : ಯಾರಿಗೆ ಎಷ್ಟು ಟ್ಯಾಕ್ಸ್..?  :  ಆದಾಯ ತೆರಿಗೆ ವಿನಾಯ್ತಿ ಮಿತಿಯನ್ನು ಎರಡೂವರೆ ಲಕ್ಷದಿಂದ ಮೂರು ಲಕ್ಷಕ್ಕೆ ಏರಿಕೆ ಮಾಡಿರುವ ಅರ್ಥ ಸಚಿವರು, ಶೇ.50ರಷ್ಟು ತೆರಿಗೆ ಕಡಿತ ಮಾಡುವ ಮೂಲಕ ತೆರಿಗೆ ಪಾವತಿದಾರರಿಗೆ ಉತ್ತೇಜನ ನೀಡಿದ್ದಾರೆ. ಮೂರು ಲಕ್ಷದವರೆಗಿನ ವಹಿವಾಟಿಗೆ ಯಾವುದೇ ರೀತಿಯ ತೆರಿಗೆ ಪಾವತಿಸುವಂತಿಲ್ಲ. ಮೂರರಿಂದ ಐದು ಲಕ್ಷದವರೆಗಿನ ಆದಾಯ ಹೊಂದಿರುವವರು ಶೇ.5ರಷ್ಟು ತೆರಿಗೆ ಪಾವತಿಸಬೇಕು. 5ರಿಂದ 10 ಲಕ್ಷ ವರಮಾನ ಹೊಂದಿರುವವರು ಶೇ.20ರಷ್ಟು, 10 ಲಕ್ಷಕ್ಕೂ ಹೆಚ್ಚು ವರಮಾನ ಹೊಂದಿರುವವರು ಶೇ.30ರಷ್ಟು ತೆರಿಗೆ ಪಾವತಿಸಬೇಕಾಗಿದೆ.50 ಲಕ್ಷದಿಂದ ಒಂದು ಕೋಟಿ ವಹಿವಾಟು ನಡೆಸಿದರೆ ಶೇ.10ರಷ್ಟು ಸರ್‍ಚಾರ್ಜ್ ವಿಧಿಸುವುದಾಗಿ ಹಣಕಾಸು ಸಚಿವ ಅರುಣ್ ಜೇಟ್ಲಿ ಸಂಸತ್‍ನಲ್ಲಿಂದು ಘೋಷಿಸಿದ್ದಾರೆ. ಹಿರಿಯ ನಾಗರಿಕರ ತೆರಿಗೆ ವಿನಾಯಿತಿಯನ್ನು ಮೂರುವರೆ ಲಕ್ಷಗಳಿಗೆ ಏರಿಕೆ ಮಾಡಲಾಗಿದೆ. ಅದೇ ರೀತಿ ಮಹಿಳೆಯರ ತೆರಿಗೆ ವಿನಾಯ್ತಿ ಮಿತಿಯನ್ನು 3ರಿಂದ 3.50 ಲಕ್ಷಕ್ಕೆ ಏರಿಕೆ ಮಾಡುವುದರ ಮೂಲಕ ನಾರಿಯರ ಮನಗೆಲ್ಲಲು ಜೇಟ್ಲಿ ಕಸರತ್ತು ನಡೆಸಿದ್ದಾರೆ
 2. 92 ವರ್ಷದ ನಂತರ ಸಾಮಾನ್ಯ ನಜೆಟ್ ನಲ್ಲಿ ವಿಲೀನಗೊಂಡ ರೈಲ್ವೆ ಬಜೆಟ್  :  ಸಾಮಾನ್ಯ ಮತ್ತು ರೈಲ್ವೆ ಬಜೆಟ್‍ನ್ನು ವಿಲೀನಗೊಳಿಸಿ ಮಂಡಿಸುವ ಮೂಲಕ ಹಣಕಾಸು ಸಚಿವ ಅರುಣ್‍ಜೇಟ್ಲಿ ಹೊಸ ದಾಖಲೆ ಬರೆದಿದ್ದಾರೆ. ಸ್ವಾತಂತ್ರ್ಯ ನಂತರದ ಬಜೆಟ್‍ಗಳಲ್ಲಿ ರೈಲ್ವೆ ಇಲಾಖೆಗೆ ಪ್ರತ್ಯೇಕ ಲೆಕ್ಕಪತ್ರಗಳನ್ನು ಸಂಸತ್‍ನಲ್ಲಿ ಮಂಡಿಸುವ ಪರಿಪಾಠ ಬೆಳೆದುಬಂದಿತ್ತು. ಸುಮಾರು 92 ವರ್ಷಗಳ ಹಿಂದೆ ಬ್ರಿಟಿಷರ ಆಡಳಿತದಲ್ಲಿ ರೈಲ್ವೆ ಬಜೆಟ್‍ನ್ನು ಸಾಮಾನ್ಯ ಬಜೆಟ್‍ನಿಂದ ಪ್ರತ್ಯೇಕಿಸಲಾಗಿತ್ತು. ಈ ಸಂಪ್ರದಾಯವನ್ನು ತೆಗೆದು ಹಾಕಿರುವ ಅರುಣ್ ಜೇಟ್ಲಿ ಸಾಮಾನ್ಯ ಬಜೆಟ್ ಹಾಗೂ ರೈಲ್ವೆ ಬಜೆಟ್ ಎರಡನ್ನೂ ಅಡಕಗೊಳಿಸುವ ಮೂಲಕ ಹೊಸ ಭಾಷ್ಯ ಬರೆದಿದ್ದಾರೆ.  ಸಾಮಾನ್ಯವಾಗಿ ಮಾರ್ಚ್ ತಿಂಗಳಿನಲ್ಲಿ ಕೇಂದ್ರ ಸರ್ಕಾರ ಬಜೆಟ್ ಮಂಡಿಸುವ ಪರಿಪಾಠ ಬೆಳೆಸಿಕೊಂಡಿತ್ತು. ಇದೇ ಮೊದಲ ಬಾರಿಗೆ ಒಂದು ತಿಂಗಳ ಮೊದಲು ಫೆ.1 ರಂದೇ ಬಜೆಟ್ ಮಂಡಿಸಲಾಗಿದೆ..
 3. ರಾಜಕೀಯ ಪಕ್ಷಗಳಿಗೆ ಬಜೆಟ್ ನಲ್ಲಿ ಶಾಕ್ ನೀಡಿದ ಜೇಟ್ಲಿ ..! :  ಇನ್ನು ಮುಂದೆ ರಾಜಕೀಯ ಪಕ್ಷಗಳಿಗೆ ಎರಡು ಸಾವಿರ ರೂ. ಮೇಲ್ಪಟ್ಟು ಯಾರೇ ದೇಣಿಗೆ ನೀಡಿದರೂ ಕಡ್ಡಾಯವಾಗಿ ಅವರ ಸಂಪೂರ್ಣ ಮಾಹಿತಿ ಸಲ್ಲಿಸಬೇಕಾಗುತ್ತದೆ ಎಂದು ಹೇಳುವ ಮೂಲಕ ರಾಜಕೀಯ ಪಕ್ಷಗಳಿಗೆ ಜೇಟ್ಲಿ ಶಾಕ್ ನೀಡಿದ್ದಾರೆ. ಸಂಸತ್‍ನಲ್ಲಿ ಇಂದು ಪ್ರಸಕ್ತ ಸಾಲಿನ ಆಯ-ವ್ಯಯ ಮಂಡಿಸಿದ ಜೇಟ್ಲಿ ಎರಡು ಸಾವಿರ ರೂ. ಮೇಲ್ಪಟ್ಟು ದೇಣಿಗೆ ನೀಡಿದರೆ ಅಂಥವರ ಹೆಸರನ್ನು ಬಹಿರಂಗಪಡಿಸುವುದಾಗಿ ಘೋಷಣೆ ಮಾಡಿದರು.   ಯಾವುದೇ ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡುವವರು ನಗದು ರೂಪದಲ್ಲಿ ಕೇವಲ ಎರಡು ಸಾವಿರ ರೂ. ಮಾತ್ರ ದೇಣಿಗೆ ನೀಡಬಹುದಾಗಿದೆ. ಅದರ ಮೇಲ್ಪಟ್ಟು ದೇಣಿಗೆ ನೀಡುವವರು ಆನ್‍ಲೈನ್ ಮೂಲಕವೇ ಪಾವತಿಸಬೇಕಾಗಿದೆ. ಇತ್ತೀಚೆಗೆ ಕೇಂದ್ರ ಚುನಾವಣಾ ಆಯೋಗ ರಾಜಕೀಯ ಪಕ್ಷಗಳಿಗೆ ಹರಿದುಬರುತ್ತಿರುವ ದೇಣಿಗೆ ಬಗ್ಗೆ ಸಾರ್ವಜನಿಕರಿಗೆ ಬಹಿರಂಗಪಡಿಸಬೇಕೆಂದು ಸುಪ್ರೀಂಕೋರ್ಟ್ ಕೂಡ ಇದರ ಬಗ್ಗೆ ಕಿಡಿಕಾರಿತ್ತು.

  ಕೆಲದಿನಗಳ ಹಿಂದೆ ಬಹಿರಂಗಗೊಂಡಂತೆ ರಾಷ್ಟ್ರೀಯ ಪಕ್ಷಗಳೆನಿಸಿಕೊಂಡಿರುವ ಬಿಜೆಪಿ, ಕಾಂಗ್ರೆಸ್, ಸಮಾಜವಾದಿ ಪಕ್ಷ, ಬಿಎಸ್‍ಪಿ, ಎನ್‍ಸಿಪಿ, ಜೆಡಿಯು ಸೇರಿದಂತೆ ಅನೇಕ ಪಕ್ಷಗಳಿಗೆ ಸಾವಿರಾರು ಕೋಟಿ ಲೆಕ್ಕದಲ್ಲಿ ದೇಣಿಗೆ ಸಂದಾಯವಾಗಿತ್ತು. ಕೆಲವು ಕಪ್ಪು ಕುಬೇರುದಾರರು ಹಾಗೂ ತೆರಿಗೆ ವಂಚಿಸುವವರು ರಾಜಕೀಯ ಪಕ್ಷಗಳಿಗೆ ವಾಮ ಮಾರ್ಗದಲ್ಲಿ ದೇಣಿಗೆ ನೀಡುತ್ತಿದ್ದುದು ಹಲವು ವರ್ಷಗಳಿಂದ ನಡೆಯುತ್ತಿತ್ತು. ಈ ಅಕ್ರಮ ದಂಧೆಗೆ ಜೇಟ್ಲಿ ಇಂದು ಕಡಿವಾಣ ಹಾಕುವುದರ ಮೂಲಕ ಕಾಳಕುಬೇರರಿಗೆ ಮತ್ತೆ ಶಾಕ್ ನೀಡಿದ್ದಾರೆ.

 4. ಬಜೆಟ್ ನಲ್ಲಿ ಅರುಣ್ ಜೇಟ್ಲಿ ರೈಲ್ವೆಗೆ ಕೊಟ್ಟಿದ್ದೇನು..? :  ಇತಿಹಾಸದಲ್ಲಿ ಇದೆ ಮೊದಲ ಬಾರಿಗೆ ರೈಲ್ವೆ ಬಜೆಟ್ ನ್ನು ಕೇಂದ್ರ ಬಜೆಟ್ ಜೊತೆಯಲ್ಲಿ ಮಾಡಿಸಲಾಗಿದ್ದು ಸುಮಾರು 3500 ಕಿಲೋ ಮೀಟರ್ ಹೊಸ ರೈಲ್ವೆ ಮಾರ್ಗ, ರೈಲು ನಿಲ್ದಾಣಗಳಲ್ಲಿ ಸೋಲಾರ್ ವಿದ್ಯುತ್ ಅಳವಡಿಕೆ, 2019ರ ವೇಳೆಗೆ ಎಲ್ಲ ರೈಲು ನಿಲ್ದಾಣ ಹಾಗೂ ರೈಲ್ವೆ ಕೋಚ್‍ಗಳಲ್ಲಿ ಜೈವಿಕ ಶೌಚಾಲಯಗಳನ್ನು ಅಳವಡಿಸುವುದು ಸೇರಿದಂತೆ ವಿವಿಧ ರೈಲ್ವೆ ಯೋಜನೆಗಳಿಗೆ ಪ್ರಸಕ್ತ ಸಾಲಿನಲ್ಲಿ ಒಂದು ಲಕ್ಷ ಕೋಟಿ ಅನುದಾನ ಮೀಸಲಿರಿಸಲಾಗಿದೆ. ಸ್ವಾತಂತ್ರ್ಯ ನಂತರ ಪ್ರಪ್ರಥಮ ಬಾರಿಗೆ ಬಜೆಟ್‍ನಲ್ಲಿ ರೈಲ್ವೆ ಬಜೆಟ್‍ಅನ್ನು ವಿಲೀನಗೊಳಿಸಿ ಬಜೆಟ್ ಮಂಡಿಸಿದ ಹಣಕಾಸು ಸಚಿವ ಅರುಣ್ ಜೇಟ್ಲಿ, ರೈಲ್ವೆ ಸುರಕ್ಷತೆಗೆ ಒಂದು ಲಕ್ಷ ಕೋಟಿ ರೂ.ಗಳನ್ನು ಮೀಸಲಿರಿಸುವುದಾಗಿ ಹೇಳಿದರು.

  2020ರೊಳಗೆ ಮಾನವ ರಹಿತ ಲೆವೆಲ್ ಕ್ರಾಸಿಂಗ್‍ಗಳನ್ನು ಅಳವಡಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.  ಆನ್‍ಲೈನ್ ರೈಲ್ವೆ ಟಿಕೆಟ್ ಸೇವಾದರ ವಾಪಸ್ ಪಡೆಯುವ ಬಗ್ಗೆ ನಿರ್ಧರಿಸಿದ್ದಾರೆ. 2019ರೊಳಗೆ ಎಲ್ಲ ರೈಲ್ವೆ ಕೋಚ್‍ಗಳಿಗೆ ಜೈವಿಕ ಶೌಚಾಲಯಗಳನ್ನು ಅಳವಡಿಸಲು ತೀರ್ಮಾನಿಸಲಾಗಿದೆ ಎಂದು ಹೇಳಿದರು. ೫೦೦ ರೈಲ್ವೆ ನಿಲ್ದಾಣಗಳಲ್ಲಿ ದಿವ್ಯಾಂಗರಿಗೆ ಲಿಫ್ಟ್ ಮತ್ತು ಎಕ್ಸಲೇಟರ್‍ಗಳ ವ್ಯವಸ್ಥೆ ಕಲ್ಪಿಸಲು ತೀರ್ಮಾನಿಸಲಾಗಿದೆ. ಪ್ರಯಾಣಿಕರ ಸುರಕ್ಷತೆ, ಮಹಿಳೆಯರ ರಕ್ಷಣೆಗೆ ಹೆಚ್ಚಿನ ಆದ್ಯತೆ, ಸಾರ್ವಜನಿಕರಿಗೆ ಸುಲಭ ದರದಲ್ಲಿ ರೈಲ್ವೆ ವ್ಯವಸ್ಥೆ ಕಲ್ಪಿಸುವುದು ಸೇರಿದಂತೆ ನಾಲ್ಕು ಪ್ರಮುಖ ಉದ್ದೇಶಗಳೊಂದಿಗೆ ಬಜೆ ಟ್‍ನಲ್ಲಿ ರೈಲ್ವೆ ಅನುದಾನವನ್ನು ಅರುಣ್ ಜೈಟ್ಲಿ ಪ್ರಸ್ತಾಪಿಸಿದ್ದಾರೆ.

  ಹೊಸ ಮಾರ್ಗಗಳ ನಿರ್ಮಾಣ, ರೈಲ್ವೆ ನಿಲ್ದಾಣಗಳಲ್ಲಿ ಇಂಟರ್‍ನೆಟ್ ಮತ್ತು ವೈ-ಫೈ ಸೇವೆ ಅಳವಡಿಕೆ, ಆಧುನಿಕತೆಗೆ ಒತ್ತು, ಪ್ರಯಾಣಿಕರಿಗೆ ಕುಡಿಯುವ ನೀರು, ಪ್ರಯಾಣ ಸಂದರ್ಭದಲ್ಲಿ ಗುಣಮಟ್ಟದ ತಿಂಡಿ ಪದಾರ್ಥಗಳ ವಿತರಣೆಗೆ ಹೆಚ್ಚು ಆದ್ಯತೆ ನೀಡಲಾಗಿದೆ. ರೈಲ್ವೆ ಟಿಕೆಟ್ ಬುಕ್ಕಿಂಗ್‍ಗಾಗಿ ಗ್ರಾಹಕ ಸಹಕಾರಿ ಯೋಜನೆ, ಐಆರ್‍ಸಿಟಿಸಿಯನ್ನು ಶೇರು ಮಾರುಕಟ್ಟೆಗೆ ಸೇರ್ಪಡೆಗೊಳಿಸಲು ತೀರ್ಮಾನ ಮಾಡಲಾಗಿದೆ.  ಎಲ್ಲ ರೈಲು ಬೋಗಿಗಳಲ್ಲಿ ಶುಚಿತ್ವಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ನಾಗರಿಕ ಹಿರಿಯ ಪ್ರಯಾಣಿಕರಿಗೆ ವಿಶೇಷ ಆದ್ಯತೆ ವಿಷಯಗಳನ್ನು ಬಜೆಟ್‍ನಲ್ಲಿ ಪ್ರಸ್ತಾಪಿಸಲಾಗಿದೆ.

 5. ಅನ್ನದಾತನ ಮೊಗದಲ್ಲಿ ಮಂದಹಾಸ ಮೂಡಿಸಿರುವ ಜೇಟ್ಲಿ ಬಜೆಟ್  : ದೇಶದ ಅನ್ನದಾತನ ಮೊಗದಲ್ಲಿ ಮಂದಹಾಸ ಮೂಡಿಸಿರುವ ಹಣಕಾಸು ಸಚಿವ ಅರುಣ್ ಜೇಟ್ಲಿ ಪ್ರಸಕ್ತ ಸಾಲಿನಲ್ಲಿ ಕೃಷಿ ಸಾಲದ ಗುರಿಯನ್ನು ಒಂದು ಲಕ್ಷ ಕೋಟಿಯಿಂದ 10 ಲಕ್ಷ ಕೋಟಿ ಏರಿಕೆ ಮಾಡಿದ್ದಾರೆ. ಮುಂದಿನ ಐದು ವರ್ಷಗಳಲ್ಲಿ ರೈತರ ವರಮಾನ ದುಪ್ಪಟ್ಟು ಮಾಡುವ ನಿಟ್ಟಿನಲ್ಲಿ ಸಾಲದ ಪ್ರಮಾಣವನ್ನು ಒಂದು ಲಕ್ಷ ಕೋಟಿಯಿಂದ 10 ಲಕ್ಷ ಕೋಟಿಗೆ ಏರಿಕೆ ಮಾಡಿರುವುದಾಗಿ ಘೋಷಣೆ ಮಾಡಿದರು.

  2017-18ನೇ ಸಾಲಿನಲ್ಲಿ ಕೃಷಿ ಸಾಲದ ಪ್ರಮಾಣವನ್ನು 10 ಲಕ್ಷ ಕೋಟಿಗೆ ಹೆಚ್ಚಳ ಮಾಡಲಾಗಿದೆ. ಇದು ಇತ್ತೀಚಿನ ವರ್ಷಗಳಲ್ಲಿ ಇದೊಂದು ದಾಖಲೆಯ ಕ್ರಮ ಎಂದು ಬಣ್ಣಿಸಿದರು. ಇದೇ ರೀತಿ ಪೂರ್ವ ರಾಜ್ಯಗಳು ಮತ್ತು ಜಮ್ಮುಕಾಶ್ಮೀರ ರಾಜ್ಯಗಳಿಗೆ ಸಾಲ ವಸೂಲಾತಿಗೆ ಕೆಲವು ವಿಶೇಷ ಪ್ರಯತ್ನಗಳನ್ನು ಸಹ ಮಾಡುವುದಾಗಿ ತಿಳಿಸಿದ್ದಾರೆ.  ಮಧ್ಯಮಾವಧಿ ಸಾಲದ ಪ್ರಮಾಣದಲ್ಲಿ ಮೂರು ಲಕ್ಷ ಸಾಲ ಪಡೆದರೆ ಶೇ. 7ರಷ್ಟು ಬಡ್ಡಿ ವಿಧಿಸಲಾಗುವುದು. ಪ್ರಮಾಣಿಕವಾಗಿ ಬ್ಯಾಂಕ್‍ಗಳಿಗೆ ಸಾಲ ಹಿಂದಿರುಗಿಸಿದರೆ ಶೇ.3ರಷ್ಟು ಬಡ್ಡಿಯನ್ನು ಕಡಿತ ಮಾಡಲಾಗುವುದು. ಒಂದು ವೇಳೆ ನಿಗದಿತ ಅವಧಿಯೊಳಗೆ ಸಾಲ ಮರುಪಾವತಿಸದೆ ಬಾಕಿ ಉಳಿಸಿಕೊಂಡರೆ ಸಾಲದ ಮೇಲಿನ ಬಡ್ಡಿ ಪ್ರಮಾಣವನ್ನು ಶೇ.4ರಷ್ಟು ಏರಿಕೆ ಮಾಡುವುದಾಗಿ ತಿಳಿಸಿದ್ದಾರೆ.

  ಈ ಬಾರಿ ದೇಶದ ಕೆಲವು ಭಾಗಗಳಲ್ಲಿ ಭೀಕರ ಬರಗಾಲ ಉಂಟಾದರೆ ಇನ್ನು ಕೆಲವು ಕಡೆ ಪ್ರವಾಹ ಉಂಟಾಗಿ ಬೆಳೆ ಹಾನಿ ಉಂಟಾಯಿತು. ಈ ಬಾರಿ ಕೃಷಿ ವಲಯ ಶೇ.4.1ರಷ್ಟು ಬೆಳವಣಿಗೆಯಾಗಿದೆ. ಮುಂದಿನ ದಿನಗಳಲ್ಲಿ ದೇಶಾದ್ಯಂತ ಉತ್ತಮ ಹಿಂಗಾರು-ಮುಂಗಾರು ಬಂದರೆ ಇನ್ನು ಏರಿಕೆ ಪ್ರಮಾಣ ಹೆಚ್ಚಾಗಲಿದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.
  ಕಳೆದ ವರ್ಷ ರೈತರಿಗಾಗಿ ಘೋಷಣೆ ಮಾಡಲಾಗಿದ್ದ ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆಗೆ ಈ ವರ್ಷ 13,240 ಕೋಟಿ ಅನುದಾನ ಒದಗಿಸಲಾಗುವುದು. ಹೊಸ ಬೆಳೆ ವಿಮೆ ಯೋಜನೆಗೆ ದೇಶಾದ್ಯಂತ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕಳೆದ ವರ್ಷ ಈ ಯೋಜನೆಗೆ ಐದೂವರೆ ಸಾವಿರ ಕೋಟಿ ನೀಡಲಾಗಿತ್ತು ಎಂದು ನುಡಿದರು.   2016-17ನೇ ಸಾಲಿನಲ್ಲಿ ಈ ಯೋಜನೆಯಡಿ ಶೇ.30ರಷ್ಟು ಬೆಳೆ ವಿಮೆಯನ್ನು ಸೇರ್ಪಡೆ ಮಾಡಲಿದೆ. 2017-18ನೇ ಸಾಲಿನಲ್ಲಿ ಶೇ.50ರಷ್ಟು ಗುರಿ ಹೊಂದುವ ಯೋಜನೆ ರೂಪಿಸುವುದಾಗಿ ತಿಳಿಸಿದರು.
  ಹನಿ ನೀರಾವರಿ ಯೋಜನೆಗೆ 5 ಸಾವಿರ ಕೋಟಿ ಅನುದಾನ ಒದಗಿಸಿರುವ ಜೇಟ್ಲಿ ಹೈನುಗಾರಿಕೆಗೆ ಎಂಟು ಸಾವಿರ ಕೊಟಿ ನೀಡಿದ್ದಾರೆ.

 6. ಅಂಚೆ ಕಚೇರಿಗಳಲ್ಲೂ ಪಾಸ್‍ಪೋರ್ಟ್  :  ಇನ್ನು ಮುಂದೆ ಅಂಚೆ ಕಚೇರಿಗಳಲ್ಲೂ ಪಾಸ್‍ಪೋರ್ಟ್ ಪಡೆಯಬಹುದಾಗಿದೆ. ಪ್ರಸಕ್ತ ಸಾಲಿನಲ್ಲಿ ವಿತ್ತ ಸಚಿವ ಅರುಣ್ ಜೇಟ್ಲಿ ಮಂಡಿಸಿದ ಬಜೆಟ್‍ನಲ್ಲಿ ಈ ವಿಷಯ ಪ್ರಸ್ತಾಪಿಸಿದ್ದಾರೆ. ಪಾಸ್‍ಪೋರ್ಟ್‍ಗಳನ್ನು ಪಡೆಯಲು ಪಾಸ್‍ಪೋರ್ಟ್ ಕಚೇರಿಗಳಿಗೆ ಅಲೆಯುವ ವ್ಯವಸ್ಥೆಯನ್ನು ತಪ್ಪಿಸುವ ನಿಟ್ಟಿನಲ್ಲಿ ಅಂಚೆ ಕಚೇರಿಗಳಲ್ಲಿ ಪಾಸ್‍ಪೋರ್ಟ್ ಪಡೆಯುವ ವ್ಯವಸ್ಥೆ ಕಲ್ಪಿಸಲು ಬಜೆಟ್‍ನಲ್ಲಿ ಪ್ರಸ್ತಾಪಿಸಲಾಗಿದೆ.
 7. ಮೋದಿ ತವರು ಗುಜರಾತ್ ಮತ್ತು ಜಾರ್ಖಂಡ್‍ಗೆ ಏಮ್ಸ್ ಘೋಷಣೆ  : ಪ್ರಧಾನಿ ನರೇಂದ್ರ ಮೋದಿ ಅವರ ತವರು ರಾಜ್ಯ ಗುಜರಾತಿಗೆ ಪ್ರಸಕ್ತ ಸಾಲಿನ ಬಜೆಟ್‍ನಲ್ಲಿ ಅಖಿಲ ಭಾರತೀಯ ವೈದ್ಯಕೀಯ ಮಹಾವಿದ್ಯಾಲಯ(ಏಮ್ಸ್) ಘೋಷಣೆ ಮಾಡಲಾಗಿದೆ. ಗುಜರಾತ್ ಹಾಗೂ ಜಾರ್ಖಂಡ್‍ಗಳಿಗೆ ಮಾತ್ರ ಪ್ರಸಕ್ತ ಸಾಲಿನ ಬಜೆಟ್‍ನಲ್ಲಿ ಎರಡು ಏಮ್ಸ್ ಸ್ಥಾಪನೆ ಮಾಡುವುದಾಗಿ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಘೋಷಿಸಿದ್ದಾರೆ.  ಕಳೆದ ಸಾಲಿನ ಬಜೆಟ್‍ನಲ್ಲಿ ಒಟ್ಟು ಆರು ಏಮ್ಸ್ ಸ್ಥಾಪನೆಗೆ ಅನುಮೋದನೆ ನೀಡಲಾಗಿತ್ತು. ಈಗಾಗಲೇ ಇವುಗಳು ಕಾರ್ಯೋನ್ಮುಖವಾಗಿರುವುದರಿಂದ ಈ ಬಾರಿ ಎರಡು ಏಮ್ಸ್ ಸ್ಥಾಪನೆ ಮಾಡುವುದಾಗಿ ಅವರು ತಿಳಿಸಿದರು. ದೇಶಾದ್ಯಂತ 600 ಕೌಶಲ್ಯ ಅಭಿವೃದ್ದಿ ಕೇಂದ್ರಗಳನ್ನು ಸ್ಥಾಪನೆ ಮಾಡುವುದರ ಜೊತೆಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗೂ ಅನುದಾನವನ್ನು ದುಪ್ಪಟ್ಟು ಮಾಡಿದ್ದಾರೆ.
 8. ಅಂತ್ಯೋದಯ ಯೋಜನೆಯಡಿ ಮಹತ್ವಾಕಾಂಕ್ಷೆ ಯೋಜನೆ :  ಅಂತ್ಯೋದಯ ಯೋಜನೆಯಡಿ ಒಂದು ಕೋಟಿ ಕುಟುಂಬಗಳನ್ನು ಬಡತನ ರೇಖೆಯಿಂದ ಮೇಲೆತ್ತಲು ಮಹತ್ವಾಕಾಂಕ್ಷೆ ಯೋಜನೆಯನ್ನು ಪ್ರಸಕ್ತ ಸಾಲಿನ ಬಜೆಟ್‍ನಲ್ಲಿ ಪ್ರಸ್ತಾಪಿಸಲಾಯಿತು. ಕೇಂದ್ರ ಸಚಿವ ಅರುಣ ಜೈಟ್ಲಿ ಇಂದು ಮಂಡಿಸಿದ ಬಜೆಟ್‍ನಲ್ಲಿ ಗ್ರಾಮೀಣ ಪ್ರದೇಶದ ಪರಿಸ್ಥಿತಿ ಸುಧಾರಿಸಲು ಹಲವು ಯೋಜನೆಗಳನ್ನು ಪ್ರಕಟಿಸಿದ್ದಾರೆ. ರೈತರಿಗೆ ನಿರಂತರ ವಿದ್ಯುತ್ ಮತ್ತು ನೀರಾವರಿ ಯೋಜನೆಗಳು ಸೇರಿದಂತೆ ಹಲವು ಯೋಜನೆಗಳನ್ನು ಪ್ರಕಟಿಸಿ ಬಹುತೇಕ ಗ್ರಾಮೀಣಾಭಿವೃದ್ಧಿಗೆ ಹೆಚ್ಚು ಒತ್ತು ನೀಡಲಾಗಿದೆ.
 9. 600 ಜಿಲ್ಲೆಗಳಲ್ಲಿ ಪ್ರಧಾನಿ ಕೌಶಲ್ಯ ಅಭಿವೃದ್ಧಿ ಕೇಂದ್ರ ಸ್ಥಾಪನೆ :  ಪ್ರಧಾನಿ ಕೌಶಲ್ಯ ಅಭಿವೃದ್ಧಿ ಕೇಂದ್ರಗಳನ್ನು ದೇಶದ 600 ಜಿಲ್ಲೆಗಳಿಗೆ ವಿಸ್ತರಿಸಲು ನಿರ್ಧರಿಸಲಾಗಿದೆ.  ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಇಂದು ಮಂಡಿಸಿದ ಬಜೆಟ್‍ನಲ್ಲಿ 100 ಅಂತಾರಾಷ್ಟ್ರೀಯ ಕೌಶಲ್ಯ ಅಭಿವೃದ್ಧಿ ಕೇಂದ್ರಗಳನ್ನು ಸ್ಥಾಪಿಸಲು ನಿರ್ಧರಿಸ ಲಾಗಿದ್ದು, ಹಂತ ಹಂತವಾಗಿ ಎಲ್ಲ ಜಿಲ್ಲಾ ಕೇಂದ್ರಗಳಿಗೂ ವಿಸ್ತರಿಸಲಾಗುವುದು ಎಂದು ತಿಳಿಸಿದ್ದಾರೆ.
 10. ವಿಜಯ್‍ಮಲ್ಯ-ಲಲಿತ್‍ಮೋದಿ ಆಸ್ತಿ ಮುಟ್ಟುಗೋಲು : ದೇಶದ ವಿವಿಧ ಬ್ಯಾಂಕ್‍ಗಳಲ್ಲಿ ಸಾಲ ಪಡೆದು ತಲೆಮರೆಸಿಕೊಂಡಿರುವ ವಂಚಕರ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳುವುದಾಗಿ ಕೇಂದ್ರ ಸರ್ಕಾರ ಇಂದು ಎಚ್ಚರಿಸಿದೆ. ಹೆಂಡದ ದೊರೆ ವಿಜಯ್ ಮಲ್ಯ, ಐಪಿಎಲ್ ಹಗರಣದ ರೂವಾರಿ ಲಲಿತ್ ಮೋದಿ ಸೇರಿದಂತೆ ಯಾರೇ ಆಗಲಿ ದೇಶಕ್ಕೆ ವಂಚನೆ ಮಾಡಿರುವವರ ವಿರುದ್ದ ಕಾನೂನು ಪ್ರಕಾರವೇ ಕ್ರಮ ಕೈಗೊಳ್ಳುವುದಾಗಿ ಅರುಣ್ ಜೇಟ್ಲಿ ತಮ್ಮ ಬಜೆಟ್‍ನಲ್ಲಿ ಪ್ರಸ್ತಾಪಿಸಿದ್ದಾರೆ.

  ಬ್ಯಾಂಕ್‍ಗಳಿಂದ ಸಾಲ ಪಡೆದವರು ಎಲ್ಲೆ ಇರಲಿ ಅವರನ್ನು ಸ್ವದೇಶಕ್ಕೆ ಕರೆತರುವ ಪ್ರಕ್ರಿಯೆಗಳು ಆರಂಭವಾಗಿವೆ. ವಿಜಯ್ ಮಲ್ಯ, ಲಲಿತ್ ಮೋದಿಯೇ ಆಗಲಿ ಯಾರನ್ನೂ ಬಿಡುವ ಪ್ರಶ್ನೆಯೇ ಇಲ್ಲ. ಸಾಲ ವಸೂಲಾತಿ ಮಾಡುವ ಕ್ರಮದಲ್ಲಿ ಈಗಾಗಲೇ ಅವರ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳುವ ಪ್ರಕ್ರಿಯೆ ಆರಂಭವಾಗಿದೆ ಎಂದರು.  ಈಗಾಗಲೇ ಮಲ್ಯ ಮತ್ತು ಲಲಿತ್ ಮೋದಿಯನ್ನು ಸ್ವದೇಶಕ್ಕೆ ಕರೆತರಲು ಇಂಟರ್‍ಪೋಲ್ ಮೂಲಕ ಪ್ರಕ್ರಿಯೆಯನ್ನು ಆರಂಭಿಸಿದ್ದೇವೆ. ಒಂಭತ್ತು ಸಾವಿರ ಕೋಟಿ ಸಾಲ ಪಡೆದಿರುವ ವಿಜಯ್ ಮಲ್ಯ ಆಸ್ತಿಯನ್ನು ಜಾರಿ ನಿರ್ದೇಶನಾಲಯ, ಐಟಿ ಅಧಿಕಾರಿಗಳು ತಮ್ಮ ಸುಪರ್ದಿಗೆ ತೆಗೆದುಕೊಂಡಿದ್ದಾರೆ. ದೇಶದಲ್ಲಿ ಹೊಂದಿರುವ ಚರ-ಸ್ಥಿರಾಸ್ತಿಗಳನ್ನು ಸರ್ಕಾರ ತನ್ನ ವಶಕ್ಕೆ ತೆಗೆದುಕೊಳ್ಳಲಿದೆ.
  ದೇಶದ ಕಾನೂನಿನ ಮುಂದೆ ಯಾರೂ ದೊಡ್ಡವರಲ್ಲ. ಹೇಗೆ , ಯಾವ ರೀತಿಯಲ್ಲಿ ಸಾಲ ವಸೂಲಿ ಮಾಡಬೇಕೆಂಬುದು ನಮಗೂ ಗೊತ್ತಿದೆ. ಯಾರನ್ನು ರಕ್ಷಣೆ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.

 11. ಹೊಸ ಹೂಡಿಕೆ ನೀತಿ  :  ವಿದೇಶಿ ಹೂಡಿಕೆ ಉತ್ತೇಜನ ಮಂಡಳಿ (ಎಫ್‍ಐಐಟಿ) ರದ್ದುಗೊಳಿಸುವುದಾಗಿ ಪ್ರಕಟಿಸಿರುವ ಹಣಕಾಸು ಸಚಿವ ಅರುಣ್ ಜೇಟ್ಲಿ, ವಿದೇಶಿ ನೇರ ಹೂಡಿಕೆ ನೀತಿಯನ್ನು ಮತ್ತಷ್ಟು ಉದಾರೀಕರಣಗೊಳಿಸುವುದಾಗಿ ತಿಳಿಸಿದರು. ೨೦೧೭ -18ನೆ ಸಾಲಿನ ಬಜೆಟ್‍ನಲ್ಲಿ ಈ ವಿಷಯ ತಿಳಿಸಲಾಗಿದ್ದು, ನೂತನ ಹೂಡಿಕೆ ನೀತಿಯನ್ನು ಸಹ ಪ್ರಕಟಿಸಲಾಗಿದೆ.
 12. ನೋಟ್ ಅಮಾನೀಕರಣದಿಂದ ಭಾರತದ ಆರ್ಥಿಕತೆಯಲ್ಲಿ ಪಾರದರ್ಶಕತೆ :   ಭಾರತದ ಆರ್ಥಿಕತೆಯಲ್ಲಿನ ಪಾರದರ್ಶಕತೆಗೆ ನೋಟ್ ಅಮಾನೀಕರಣದಿಂದ ಸಾಧ್ಯವಾಗಿದೆ ಎಂದು ಹೇಳಿರುವ ಕೇಂದ್ರ ಸಚಿವ ಅರುಣ್ ಜೇಟ್ಲಿ. ಇದೊಂದು ಕೇಂದ್ರದ ಐತಿಹಾಸಿಕ ಹಾಗೂ ದಿಟ್ಟ ನಿರ್ಧಾರವಾಗಿತ್ತು ಎಂದು ತಿಳಿಸಿದ್ದಾರೆ. ಇಂದು ಬಜೆಟ್ ಮಂಡನೆ ವೇಳೆ ಈ ವಿಷಯ ಪ್ರಸ್ತಾಪಿಸಿದ ಅವರು, ನೋಟು ಅಮಾನೀಕರಣದಿಂದ ಆರ್ಥಿಕ ಕ್ಷೇತ್ರಕ್ಕೆ ಆಗಿರುವ ಲಾಭವನ್ನು ಬಡ ಜನರಿಗೆ ವರ್ಗಾವಣೆ ಮಾಡುವ ನಿರ್ಧಾರ ಕೈಗೊಂಡಿದ್ದು, ಈ ನಿಟ್ಟಿನಲ್ಲಿ ಮೂರು ಪ್ರಮುಖ ಸುಧಾರಣೆಗಳನ್ನು ತರಲಾಗಿದೆ. ಜೊತೆಗೆ 10 ಪ್ರಮುಖ ಗುರಿಗಳನ್ನು ಹೊಂದಲಾಗಿದೆ ಎಂದು ಹೇಳಿದರು. ಪ್ರಾಮಾಣಿಕವಾಗಿ ತೆರಿಗೆ ಸುಧಾರಣೆಗೆ ಕ್ರಮ ವಹಿಸಲಾಗಿದ್ದು, ನೋಟು ಅಮಾನೀಕರಣ ಸರ್ಕಾರದ ಒಂದು ಸಾಧನೆ. ಇದರ ಲಾಭ ಈಗಾಗಲೇ ಗೋಚರಿಸುತ್ತಿದೆ. ನೋಟು ಬ್ಯಾನ್‍ನಿಂದಾಗಿ ಬ್ಯಾಂಕ್‍ಗಳಲ್ಲಿ ಸಾಲದ ವಹಿವಾಟು ಕಡಿಮೆಯಾಗಿದೆ. ವಿದೇಶಿ ವಿನಿಮಯದಲ್ಲಿ ಭಾರೀ ಹೆಚ್ಚಳವಾಗಿರುವ ಬಗ್ಗೆ ಐಎಂಎಫ್ ಅಭಿಪ್ರಾಯಪಟ್ಟಿದೆ. ಒಟ್ಟಾರೆಯಾಗಿ ಜಿಡಿಪಿ ಹೆಚ್ಚಳವಾಗಿದ್ದು, ಹಣದುಬ್ಬರದಲ್ಲಿ ಇಳಿಕೆ ಕಂಡಿದೆ. ಇದರಿಂದ ಜನ ನಿಟ್ಟುಸಿರು ಬಿಡುವಂತಾಗಿದೆ ಎಂದರು.

  ಇದೇ ವೇಳೆ ಜಿಎಸ್‍ಟಿಗೆ ಸಹಕರಿಸಿದ ಎಲ್ಲಾ ರಾಜ್ಯಗಳಿಗೂ ಅಭಿನಂದನೆ ಸಲ್ಲಿಸಿದ ಅವರು, ಜಿಎಸ್‍ಟಿ ಜಾರಿ ಬಳಿಕ ದೇಶದ ಸಮಗ್ರ ಅಭಿವೃದ್ದಿ ವೇಗ ಪಡೆಯಲಿದೆ. ಈ ನಿಟ್ಟಿನಲ್ಲಿ ದೇಶಕ್ಕೆ ಅಗತ್ಯವಿರುವ ಗ್ರಾಮೀಣಾಭಿವೃದ್ಧಿ, ಯುವಶಕ್ತಿ ಬಲವರ್ಧನೆ, ಬಡತನ ನಿರ್ಮೂಲನೆ ಸೇರಿದಂತೆ ಶಿಕ್ಷಣ ಕ್ಷೇತ್ರದಲ್ಲೂ ಹೆಚ್ಚಿನ ಅನುಕೂಲ ಕಲ್ಪಿಸಲು ಶಾಲೆಗಳಲ್ಲಿ ಮಕ್ಕಳ ಕಲಿಕೆಗೆ ಸುಧಾರಿತ ವ್ಯವಸ್ಥೆ ಅಳವಡಿಸಲು ಇನ್ನೋವೇಟಿವ್ ಫಂಡ್ ಜಾರಿಗೊಳಿಸಲಾಗಿದೆ. ಪರೀಕ್ಷೆಗಳಲ್ಲಿ ಸುಧಾರಣೆ ತರಲು ರಾಷ್ಟ್ರೀಯ ಪರೀಕ್ಷಾ ಏಜೆನ್ಸಿಯನ್ನು ಜಾರಿಗೆ ತರಲಾಗುತ್ತಿದ್ದು, ಗ್ರಾಮೀಣ ಶಿಕ್ಷಣದಲ್ಲಿ ತಂತ್ರಜ್ಞಾನ ಅಳವಡಿಕೆಗೆ ಆದ್ಯತೆ ನೀಡಲಾಗಿದೆ ಎಂದು ವಿವರಿಸಿದರು.

 13. ಮೂಲ ಸೌಕರ್ಯಾಭಿವೃದ್ಧಿಗಾಗಿ 2,96,135 ಕೋಟಿ ರೂ. ಮಂಜೂರು  :  ಮೂಲ ಸೌಕರ್ಯಕ್ಕಾಗಿ ಈ ಸಾಲಿನ ಬಜೆಟ್‍ನಲ್ಲಿ 3,96,135 ಕೋಟಿ ರೂ.ಗಳ ದಾಖಲೆ ಪ್ರಮಾಣದ ಹಣ ಮಂಜೂರು ಮಾಡಲಾಗಿದೆ. ಗ್ರಾಮೀಣ, ಕೃಷಿ ಮತ್ತು ಸಂಬಂಧಪಟ್ಟ ಪೂರಕ ವಲಯಗಳಿಗಾಗಿ 2017-18ರಲ್ಲಿ 1,87,223 ಕೋಟಿ ರೂ.ಗಳ ಮಂಜೂರಾತಿ ನೀಡಲಾಗಿದ್ದು, ಇದು ಕಳೆದ ವರ್ಷಕ್ಕಿಂತ ಶೇ.24ರಷ್ಟು ಹೆಚ್ಚಳವಾಗಿದೆ. ರೈಲ್ವೆಗಾಗಿ 1.31 ಲಕ್ಷ ಕೋಟಿ ರೂ. ರಾಷ್ಟ್ರೀಯ ಹೆದ್ದಾರಿಗಳ ಅಭಿವೃದ್ಧಿಗಾಗಿ 64,000 ಕೋಟಿ ರೂ.ಗಳನ್ನು ತೆಗೆದಿರಿಸಲಾಗಿದೆ. ಪ್ರತಿವರ್ಷ ಹೆಚ್ಚುವರಿ ಗ್ರಾಮೀಣ ಆದಾಯ ಸೃಷ್ಟಿಗಾಗಿ 50,000 ಕೋಟಿ ರೂ. ಮೂಲ ಸೌಕರ್ಯ ನಿಧಿ ಸ್ಥಾಪಿಸಲಾಗಿದೆ.
 14. ತೆರಿಗೆ ವಂಚಿಸಿರುವ 8 ಲಕ್ಷ ಕಂಪೆನಿಗಳಿಂದ ತೆರಿಗೆ ವಸೂಲಿಗೆ ಕ್ರಮ :  ಕೋಟ್ಯಂತರ ರೂಪಾಯಿಗಳ ವ್ಯವಹಾರ ನಡೆಸಿದರೂ ಸರ್ಕಾರಕ್ಕೆ ತೆರಿಗೆ ಪಾವತಿಸದೆ ವಂಚಿಸುವವರ ಜನ್ಮ ಜಾಲಾಡಿದ್ದಾರೆ ಹಣಕಾಸು ಸಚಿವ ಅರುಣ್‍ಜೇಟ್ಲಿ. ದೇಶದಲ್ಲಿ 13.97 ಲಕ್ಷ ನೋಂದಾ ಯಿತ ಕಂಪೆನಿಗಳಿದ್ದರೂ ಇವರಲ್ಲಿ ಸರ್ಕಾರಕ್ಕೆ ತೆರಿಗೆ ಪಾವತಿಸುತ್ತಿರುವವರು ಕೇವಲ 5.97 ಲಕ್ಷ ಸಂಸ್ಥೆಗಳು ಮಾತ್ರ. ಉಳಿದ 8ಲಕ್ಷ ಕಂಪೆನಿಗಳು ಸರ್ಕಾರಕ್ಕೆ ತೆರಿಗೆ ಪಾವತಿಸದೆ ವಂಚಿಸುತ್ತಿವೆ. ಅಂತಹ ವಂಚಕ ಕಂಪೆನಿಗಳಿಂದ ತೆರಿಗೆ ವಸೂಲಿ ಮಾಡಲು ಜೇಟ್ಲಿ ಅಗತ್ಯ ಕ್ರಮಕೈಗೊಂಡಿದ್ದಾರೆ. ತೆರಿಗೆ ಪಾವತಿಸುವವರ ಸಂಖ್ಯೆ ಕಡಿಮೆಯಿದ್ದರೂ ಕಾರು ಕೊಳ್ಳುವವರ ಸಂಖ್ಯೆ ಹಾಗೂ ವಿದೇಶಕ್ಕೆ ತೆರಳುವವರ ಸಂಖ್ಯೆಯಲ್ಲಿ ಏರಿಕೆಯಾಗುತ್ತಿರುವುದನ್ನು ಜೇಟ್ಲಿ ಪ್ರಸ್ತಾಪಿಸುವ ಮೂಲಕ ತೆರಿಗೆ ವಂಚಕರ ವಿರುದ್ಧ ಹರಿಹಾಯ್ದಿದ್ದಾರೆ. ಎರಡೂವರೆ ಲಕ್ಷ ಮೇಲ್ಪಟ್ಟ ವ್ಯವಹಾರ ನಡೆಸುವವರು 99 ಲಕ್ಷ ಮಂದಿ ಇದ್ದರೆ, 10ಲಕ್ಷಕ್ಕೂ ಮೇಲ್ಪಟ್ಟ ವ್ಯವಹಾರ ನಡೆಸುವ 24 ಲಕ್ಷ ಮಂದಿ ಹಾಗೂ 50ಲಕ್ಷಕ್ಕೂ ಮೇಲ್ಪಟ್ಟು ವ್ಯವಹಾರ ನಡೆಸುವ 1.72 ಲಕ್ಷ ಮಂದಿ ಇದ್ದಾರೆ ಎಂದು ಅರ್ಥ ಸಚಿವರು ವಿವರಿಸಿದ್ದಾರೆ.
 15. ಯಾವ ವಸ್ತುಗಳ ಬೆಲೆ ಇಳಿಕೆಯಾಯಿತು..? ಯಾವುದು ಏರಿಕೆಯಾಯಿತು..?  : 

 

ಇಳಿಕೆ (ಶೇಕಡಾವಾರು)

♦ ಸರಕುಗಳು : ಪ್ರಸ್ತುತ-ಇಳಿಕೆ
♦ ಸಂಸ್ಕರಿತ ನೈಸರ್ಗಿಕ ಅನಿಲ :  5 ರಿಂದ 2.5
♦ ರಸಾಯನಿಕ ಮತ್ತು   ಪೆಟ್ರೋಲಿಯಂ ಉತ್ಪನ್ನಗಳು :  7.5 ರಿಂದ 5
♦ ನಿಕಲ್ ಲೋಹ  :  2.5 ರಿಂದ 0
♦ ಸಂಸ್ಕರಿತ ಚರ್ಮ ಉತ್ಪನ್ನ :  7.5 ರಿಂದ 2.5
♦ ನವೀಕೃತ ಇಂಧನ ಯಂತ್ರೋಪಕರಣಗಳು : 10 ರಿಂದ 7.5 5
♦ ಜೈವಿಕ ಇಂಧನ ಯಂತ್ರೋಪಕರಣಗಳು : 12.5 ರಿಂದ 6
♦ ಎಲ್‍ಇಡಿ ಬಲ್ಬ್‍ಗಳು : 6
♦ ನೈಲಾನ್ ಉತ್ಪನ್ನಗಳು : 7.5 ರಿಂದ 2
♦ ಸೌರಶಕ್ತಿ ಉತ್ಪಾದಿಸುವ ಗ್ಲಾಸ್ :  5 ರಿಂದ 0
♦ ಪವನವಿದ್ಯುತ್ ತೆರಿಗೆ ವಿನಾಯ್ತಿ

ಏರಿಕೆ : (ಶೇಕಡಾವಾರು) 

♦ ಸರಕುಗಳು  :   ಪ್ರಸ್ತುತ – ಏರಿಕೆ
♦ ಗೋಡಂಬಿ  :  30 ರಿಂದ 45
♦ ಮೊಬೈಲ್‍ನ ಪಿಸಿಬಿಗಳು  :  0 ರಿಂದ 2
♦ ವಾಟರ್‍ಫಿಲ್ಟರ್  :   7.5 ರಿಂದ 10
♦ ಅಲ್ಯೂಮಿನಿಯಂ ಅದಿರು ರಫ್ತು :  0 ರಿಂದ 15
♦ ಆಮದು ವಸ್ತುಗಳ ಮೇಲೆ :  3 ರಿಂದ 5
♦ ಬೆಳ್ಳಿ ಆಭರಣ-ನಾಣ್ಯಗಳು :  0 ರಿಂದ 12.5
♦ ಪಾನ್ ಮಸಾಲಾ :   6 ರಿಂದ 9
♦ ಅನುತ್ಪಾದಕ ತಂಬಾಕು  :  4.2 ರಿಂದ 8.3
♦ ತಂಬಾಕು ಸಹಿತ ಚೂಯಿಂಗ್‍ಗಮ್  :   6 ರಿಂದ12
♦ ತಂಬಾಕು ಸಹಿತ ಜರ್ದಾ   :  6 ರಿಂದ12
♦ ತಂಬಾಕು ಸಹಿತ ಪಾನ್‍ಮಸಾಲಾ  :  6ರಿಂದ 12

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

ಬಜೆಟ್ ಹೈಲೈಟ್ಸ್ : 

♦ ರಕ್ಷಣಾ ವೆಚ್ಚ 2,74,114 ಕೋಟಿ
♦ ಎಫ್‍ಡಿಐಗೆ ಇನ್ನಷ್ಟು ಉದಾರೀಕರಣ
♦ 10 ಲಕ್ಷ ಕೋಟಿ ಕೃಷಿ ಸಾಲದ ನೆರವು
♦ ಉತ್ಪಾದನಾ ಕ್ಷೇತ್ರದಲ್ಲಿ ಭಾರತಕ್ಕೆ 6ನೆ ಸ್ಥಾನ
♦ ಆರ್ಥಿಕತೆಯಲ್ಲಿ ಇಡೀ ವಿಶ್ವಕ್ಕೆ ಭಾರತ ಮಾದರಿ
♦ ಉದ್ಯೋಗಾವಕಾಶಕ್ಕೆ ಹೆಚ್ಚು ಒತ್ತು, ಕೈಗಾರಿಕೆಗೆ ನೆರವು
♦ ಜಿಎಸ್‍ಟಿಯಿಂದ ಆರ್ಥಿಕ ಅಭಿವೃದ್ಧಿ
♦ ಉದ್ಯಮಿಗಳಾದ ಮಲ್ಯ, ಲಲಿತ್ ಮೋದಿ ಅಂತಹವರ ಆಸ್ತಿ ಜಪ್ತಿಗೆ ಹೊಸ ಕಾನೂನು. ಸಾಲ ಹಿಂದಿರುಗಿಸದವರ ವಿರುದ್ಧ ಕ್ರಮ
♦ ಟೆಕ್ ಇಂಡಿಯಾ ಯೋಜನೆ
♦ ಬೆಳೆ ವಿಮೆಗೆ 9 ಸಾವಿರ ಕೋಟಿ ಮೀಸಲು
♦ ಕೃಷಿ ಅಭಿವೃದ್ಧಿ ಗುರಿ 4.1
♦ ಬಡವರ ಗೃಹ ನಿರ್ಮಾಣಕ್ಕೆ ನೆರವು
♦ ಕೋ ಆಪರೇಟಿವ್ ಬ್ಯಾಂಕ್‍ಗಳಲ್ಲಿ 50 ದಿನದ ಬಡ್ಡಿ ಮನ್ನಾ
♦ ಯುವಶಕ್ತಿ ಅಭಿವೃದ್ಧಿಗೆ ಆದ್ಯತೆ
♦ ಗುಡಿಸಲು ಮುಕ್ತ ಭಾರತ- ಗ್ರಾಮೀಣ ಪ್ರದೇಶದಲ್ಲಿ 1 ಕೋಟಿ ಮನೆ
♦ ಪ್ರತಿದಿನ 133 ಕಿ.ಮೀ. ರಸ್ತೆ ನಿರ್ಮಾಣ
♦ ಹೈನುಗಾರಿಕೆ ಅಭಿವೃದ್ಧಿಗೆ 8 ಸಾವಿರ ಕೋಟಿ
♦ ಒಂದು ಕೋಟಿ ಕುಟುಂಬಗಳಿಗೆ ಅಂತ್ಯೋದಯ ಯೋಜನೆ
♦ ಪ್ರತಿ ಹಳ್ಳಿಗೂ ವಿದ್ಯುತ್, ಶೇ.100ರಷ್ಟು ವಿದ್ಯುದ್ದೀಕರಣ ಗುರಿ
♦ ನರೇಗಾ ಯೋಜನೆಗೆ 48 ಸಾವಿರ ಕೋಟಿ ರೂ. ಏರಿಕೆ
♦ ಗ್ರಾಮೀಣ ಪ್ರದೇಶದಲ್ಲಿ 10 ಲಕ್ಷ ಕೆರೆಗಳ ನಿರ್ಮಾಣ
♦ 100 ಅಂತಾರಾಷ್ಟ್ರೀಯ ಕೌಶಲ್ಯ ಅಭಿವೃದ್ಧಿ ಕೇಂದ್ರಗಳ ಸ್ಥಾಪನೆ
♦ ಹಣಕಾಸು ಕ್ಷೇತ್ರದಲ್ಲಿ ಸೈಬರ್ ಭದ್ರತೆಗೆ ಕಂಪ್ಯೂಟರ್ ಎಮರ್ಜೆನ್ಸಿ ರೆಸ್ಪಾನ್ಸ್ ತಂಡಗಳ ರಚನೆ
♦ ಅಂಚೆ ಕಚೇರಿಗಳಲ್ಲಿ ಪಾಸ್‍ಪೋರ್ಟ್
♦ ಡೆಬಿಟ್-ಕ್ರೆಡಿಟ್ ಕಾರ್ಡ್ ಇಲ್ಲದವರಿಗೆ ಆಧಾರ್ ಸ್ವೈಪ್ ವ್ಯವಸ್ಥೆ
♦ ವಾರ್ಷಿಕ 50 ಕೋಟಿ ಆದಾಯವಿರುವ ಕಂಪೆನಿಗಳಿಗೆ ಶೇ.5ರಷ್ಟು ತೆರಿಗೆ ಕಡಿತ
♦ 3 ಲಕ್ಷಕ್ಕಿಂತ ಹೆಚ್ಚು ನಗದು ವಹಿವಾಟಿಗೆ ಅವಕಾಶವಿಲ್ಲ
♦ ಚಿಟ್‍ಫಂಡ್ ನಿಯಂತ್ರಣಕ್ಕೆ ಹೊಸ ಕಾಯ್ದೆ
♦ 2016-17ನೆ ಸಾಲಿಗೆ 50 ಲಕ್ಷಕ್ಕಿಂತ ಹೆಚ್ಚು ಆದಾಯ ಇರುವವರು 1.72 ಲಕ್ಷ ಜನ, 2.5 ಲಕ್ಷಕ್ಕಿಂತ ಕಡಿಮೆ ಆದಾಯ ಇರುವವರು 99 ಲಕ್ಷ ಜನ, 10 ಲಕ್ಷಕ್ಕಿಂತ ಹೆಚ್ಚು ಆದಾಯ ಇರುವ 24 ಲಕ್ಷ ಜನ ತೆರಿಗೆ ಘೋಷಣೆ ಮಾಡಿದ್ದಾರೆ.
♦ 50 ಲಕ್ಷಕ್ಕೂ ಹೆಚ್ಚು ಆದಾಯ ಹೊಂದಿರುವವರು ಶೇ.18 ಲಕ್ಷ
♦ ರಾಜಕೀಯ ಪಕ್ಷಗಳಿಗೆ 2000ಕ್ಕಿಂತ ಹೆಚ್ಚು ದೇಣಿಗೆ ಕೊಟ್ಟವರ ಮಾಹಿತಿ ಕಡ್ಡಾಯ, ಹೆಚ್ಚು ನೀಡಲು ಆನ್‍ಲೈನ್ ಮೂಲಕವೇ ಅವಕಾಶ
♦ ಧಾರ್ಮಿಕ ಕ್ಷೇತ್ರಗಳಿಗೆ ನೀಡುವ ದೇಣಿಗೆಗೂ ವಿನಾಯಿತಿ ಇಲ್ಲ
♦ ಹಿರಿಯ ನಾಗರಿಕರಿಗೆ ಆರೋಗ್ಯ ಕಾರ್ಡ್ ವಿತರಣೆ ಮತ್ತು ವಿಮಾ ವಿಶೇಷ ಯೋಜನೆ
♦ ಸಣ್ಣ ನಗರಗಳಿಗೂ ವಿಮಾನ ನಿಲ್ದಾಣ. ವಿಮಾನ ನಿಲ್ದಾಣ ಪ್ರಾಧಿಕಾರದ ಜಾಗ ವಾಣಿಜ್ಯ ಉದ್ದೇಶಕ್ಕೆ ಬಳಕೆ
♦ ಮಹಿಳೆಯರು ಮತ್ತು ಮಕ್ಕಳ ಕಲ್ಯಾಣಕ್ಕೆ 1,84,362 ಕೋಟಿ

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin