ಟಿಆರ್‍ಪಿಗಾಗಿ ಕೆಲವು ದೃಶ್ಯಮಾಧ್ಯಮಗಳಲ್ಲಿ ಶಾಸಕರ ತೇಜೋವಧೆ : ಪಕ್ಷಬೇಧ ಮರೆತು ಆಕ್ರೋಶ

Spread the love

Session-Protet

ಬೆಂಗಳೂರು,ಮಾ.22- ಕೆಲವು ದೃಶ್ಯಮಾಧ್ಯಮಗಳು ಪ್ರಸಾರ ಸಂಖ್ಯೆ ಹೆಚ್ಚಳ (ಟಿಆರ್‍ಪಿ)ಕ್ಕೆ ಸಾರ್ವಜನಿಕ ಜೀವನದಲ್ಲಿರುವ ಶಾಸಕರ ತೇಜೋವದೆ ಮಾಡುವುದಕ್ಕೆ ಕಡಿವಾಣ ಹಾಕಬೇಕೆಂದು, ಪಕ್ಷಬೇಧ ಮರೆತು ಶಾಸಕರು ಆಕ್ರೋಶ ವ್ಯಕ್ತಪಡಿಸಿದರು. ನಿಯಮ 69ರಡಿ ಸಾರ್ವಜನಿಕರ ವಿಷಯದ ಅಲ್ಪ ಕಾಲಾವಧಿ ಚರ್ಚೆಯಲ್ಲಿ, ದೃಶ್ಯಮಾಧ್ಯಗಳು ಶಾಸಕರ ವ್ಯಕ್ತಿತ್ವಕ್ಕೆ ಚ್ಯುತಿ ತರುವಂತಹ ಅವಹೇಳನಕಾರಿ ಸುದ್ದಿಗಳನ್ನು ಪ್ರಸಾರ ಮಾಡುತ್ತಿರುವುದಕ್ಕೆ ಪಕ್ಷಬೇಧ ಮರೆತು ಶಾಸಕರು ಅಸಮಾಧಾನ ವ್ಯಕ್ತಪಡಿಸಿದರು.

ಹಿರಿಯ ಶಾಸಕ ಬಿ.ಆರ್.ಪಾಟೀಲ್ ಮಾತನಾಡಿ, ಟಿಆರ್‍ಪಿಗಾಗಿ ಸಾರ್ವಜನಿಕ ಜೀವನದಲ್ಲಿ ಶಾಸಕರ ಘನತೆ, ಗೌರವ ಹಾಳು ಮಾಡುವ ಕೆಲ ದೃಶ್ಯ ಮಾಧ್ಯಮಗಳಿಗೆ ಕಡಿವಾಣ ಹಾಕಬೇಕು, ನಮಗೆ ರಕ್ಷಣೆ ನೀಡಬೇಕೆಂದು ಅವರು ಆಗ್ರಹಿಸಿದರು. ರಾಜ್ಯದಲ್ಲಿ ಬರ, ಕುಡಿಯುವ ನೀರಿನ ಸಮಸ್ಯೆ ಸೇರಿದಂತೆ ಹತ್ತು ಹಲವು ಸಮಸ್ಯೆಗಳ ಬಗ್ಗೆ ಮಾಧ್ಯಮಗಳು ಬೆಳಕು ಚೆಲ್ಲಲಿ, ಶಾಸಕರು ಎಡವಿದಾಗ ತಿದ್ದಲ್ಲಿ ಆದರೆ ಕೆಲವು ಶಬ್ದಗಳನ್ನು ಬಳಸಿ ಶಿಕ್ಷೆ ಕೊಡುವವರು ಕೂಡ ಮಾಧ್ಯಮಗಳೇ ಆಗುತ್ತಿವೆ. ಇವರಿಗೆ ಅಂಥ ಪದಬಳಕೆ ಮಾಡಲು ಅಧಿಕಾರ ಕೊಟ್ಟವರು ಯಾರು ಎಂದು ಪ್ರಶ್ನಿಸಿದರು.

ಕೌಟುಂಬಿಕ ನೆಮ್ಮದಿ ಹಾಳು ಮಾಡುವುದು ಮಾಧ್ಯಮಗಳ ಜವಾಬ್ದಾರಿಯೇ ಎಂದು ಆಕ್ರೋಶ ವ್ಯಕ್ತಪಡಿಸಿದ ಶಾಸಕರು, ಮಾಧ್ಯಮಗಳು ಸ್ವಯಂ ನಿಯಂತ್ರಣ ಹಾಕಿಕೊಳ್ಳಬೇಕು, ಹೋರಾಟದ ಹಿನ್ನೆಲೆಯಲ್ಲಿ ಸರ್ವಜನಿಕ ಜೀವನಕ್ಕೆ ಬಂದಿದ್ದೇನೆ. ವಾಸ್ತವಿಕ ಅಲ್ಲದ ವಿಚಾರಗಳನ್ನು ಸ್ಟುಡಿಯೋದಲ್ಲಿ ಕುಳಿತು ಚರ್ಚಿಸಲು ಇವರೇನೂ ಬಾಹುಬಲಿಗಳೇ ಎಂದು ಹರಿಹಾಯ್ದರು.    ಮಾಧ್ಯಮಗಳು ಕೂಡ ಪ್ರಜಾಪ್ರಭುತ್ವದಲ್ಲಿ ಪ್ರಮುಖವಿದ್ದು , ಅನೇಕ ಬದಲಾವಣೆಗಳಾಗಿವೆ. ಹಗರಣಗಳು ಬಯಲಾಗಿವೆ. ಸತ್ಯಾಸತ್ಯತೆ ಅರಿಯದೆ ಘನತೆ ಹಾಳು ಮಾಡುವ ರೀತಿಯಲ್ಲಿ ಮಾಧ್ಯಮಗಳಲ್ಲಿ ಬಿಂಬಿಸುವುದು ಸರಿಯಲ್ಲ ಎಂದು ಸುದೀರ್ಘ ವಾಗ್ದಾಳಿ ನಡೆಸಿದರು.

ಇದಕ್ಕೆ ಶಾಸಕರಾದ ಸುರೇಶ್ ಗೌಡ, ರಾಜು ಕಾಗೆ, ಪುಟ್ಟಣ್ಣಯ್ಯ, ನರೇಂದ್ರ ಸ್ವಾಮಿಯವರು ಧ್ವನಿಗೂಡಿಸಿ ತಮಗಾದ ಘಟನೆಗಳನ್ನು ಉಲ್ಲೇಖಿಸಿ ಅನಗತ್ಯ ಚಾರಿತ್ರ್ಯ ಹರಣ ಮಾಡುವ ಮಾಧ್ಯಮಗಳಿಗೆ ಕಡಿವಾಣ ಹಾಕಿ ಎಂದು ಅವರು ಒತ್ತಾಯಿಸಿದರು.   ಶಾಸಕ ರಾಜು ಕಾಗೆ ಮಾತನಾಡಿ, ಪ್ರಕರಣವೊಂದರಲ್ಲಿ ತಾವು ನಾಲ್ಕು ದಿನ ಜೈಲಿಗೆ ಹೋಗಿ ಜಾಮೀನು ಪಡೆದು ಬಂದಿರುವುದಾಗಿ ತಿಳಿಸಿ, ಆ ಸಂದರ್ಭದಲ್ಲಿ ಕೆಲ ಮಾಧ್ಯಮಗಳು ಬಳಸಿದ ಶಬ್ದಗಳು ಅವಮಾನಕರವಾಗಿದೆ. ಇಷ್ಟಾದರೂ ನಾವು ಸುಮ್ಮನಿರಬೇಕೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಶಾಸಕ ಸುರೇಶ್ ಗೌಡ ಮಾತನಾಡಿ, ಟೋಲ್ ವಿಚಾರಕ್ಕೆ ಸಂಬಂಧಿಸಿದಂತೆ ತಮ್ಮನ್ನು ಶಾಸಕರ ಗೂಂಡಾಗಿರಿ ಎಂಬಂತೆ ಮಾಧ್ಯಮಗಳು ಬಿಂಬಿಸಿದರು ಎಂದು ಬೇಸರ ವ್ಯಕ್ತಪಡಿಸಿ ವಾಗ್ದಾಳಿ ನಡೆಸಿದರು.   ಶಾಸಕ ಕೆ.ಎಸ್.ಪುಟ್ಟಣ್ಣಯ್ಯ ಮಾತನಾಡಿ, ಮಾಧ್ಯಮಗಳು ಚುನಾಯಿತ ಪ್ರತಿನಿಧಿಗಳ ಘನತೆ ಗೌರವ ಎತ್ತಿಹಿಡಿಯಬೇಕೆ ಹೊರತು ತೇಜೋವಧೆ ಮಾಡಬಾರದು. ಬಳಸುವ ಶಬ್ದಗಳ ಮೇಲೆ ನಿಯಂತ್ರಣವಿರಬೇಕು, ಸಾಮಾಜಿಕ ಕಳಕಳಿ ಇರಬೇಕು, ಜನರ ಸಮಸ್ಯೆ ಮೇಲೆ ಬೆಳಕು ಚೆಲ್ಲಬೇಕು, ಮಾಧ್ಯಮಗಳಲ್ಲಿ ಗುಣಾತ್ಮಕ ನಿಯಂತ್ರಣ ತರಲು ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಹೇಳಿದರು.   ಇದಕ್ಕೆ ಶಾಸಕ ನರೇಂದ್ರ ಸ್ವಾಮಿ ಧ್ವನಿಗೂಡಿಸಿ ಕೆಲವು ಮಾಧ್ಯಮಗಳಿಂದ ಆಗುತ್ತಿರುವ ಅಪಮಾನಗಳನ್ನು ವಿರೋಧಿಸಿ ಕಡಿವಾಣ ಹಾಕಬೇಕೆಂದು ಸರ್ಕಾರವನ್ನು ಒತ್ತಾಯಿಸಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Sri Raghav

Admin