ಟಿಕೆಟ್’ಗಾಗಿ ತೆರೆಮರೆಯಲ್ಲಿ ಕಸರತ್ತು , ಸಕ್ರಿಯ ರಾಜಕಾರಣದತ್ತ ಗಣಿಧಣಿ ರೆಡ್ಡಿ

Spread the love

Janardhan-Reddy--01

ಬೆಂಗಳೂರು,ಜೂ.1- ಗಣಿಗಾರಿಕೆ ಮೂಲಕವೇ ಅಲ್ಪ ಕಾಲದಲ್ಲೇ ರಾಜ್ಯ ರಾಜಕಾರಣದಲ್ಲಿ ತಮ್ಮದೇ ಛಾಪು ಮೂಡಿಸಿ ನಂತರ ಜೈಲು ಪಾಲಾಗಿದ್ದ ಮಾಜಿ ಸಚಿವ ಬಳ್ಳಾರಿ ಗಣಿಧಣಿ ಗಾಲಿ ಜನಾರ್ಧನ ರೆಡ್ಡಿ ಮತ್ತೆ ಸಕ್ರಿಯ ರಾಜಕಾರಣಕ್ಕೆ ಮುಖ ಮಾಡಿದ್ದಾರೆ. ಮುಂಬರುವ 2018ರ ವಿಧಾನಸಭೆ ಚುನಾವಣೆಯಲ್ಲಿ ಜನಾರ್ದನ ರೆಡ್ಡಿ ತಮ್ಮ ತವರು ಜಿಲ್ಲೆ ಬಳ್ಳಾರಿ ಅಥವಾ ಗದಗ, ರಾಯಚೂರು ಇಲ್ಲವೇ ಕೋಲಾರ ಜಿಲ್ಲೆಯ ಯಾವುದಾದರೊಂದು ಕ್ಷೇತ್ರದಿಂದ ಕಣಕ್ಕಿಳಿಯಲು ಸಿದ್ಧತೆ ನಡೆಸಿದ್ದಾರೆ.ಬಿಜೆಪಿ ವರಿಷ್ಠರು ರೆಡ್ಡಿಗೆ ಟಿಕೆಟ್ ನೀಡುವ ಬಗ್ಗೆ ಈವರೆಗೂ ಸ್ಪಷ್ಟನೆ ನೀಡಿಲ್ಲವಾದರೂ ತೆರೆಮರೆಯಲ್ಲಿ ಈಗಾಗಲೇ ವೇದಿಕೆಯನ್ನು ಸೃಷ್ಟಿಸಿಕೊಂಡು ಕಾರ್ಯಕರ್ತರ ಪಡೆ ರಚಿಸಿದ್ದಾರೆ. ಸದ್ಯಕ್ಕೆ ತಮ್ಮ 25ನೇ ವಾರ್ಷಿಕ ವಿವಾಹ ಸಮಾರಂಭದಲ್ಲಿ ಪಾಲ್ಗೊಳ್ಳಲು ಬಳ್ಳಾರಿಗೆ ಆಗಮಿಸಿರುವ ಅವರು ತಮ್ಮ ಆಪ್ತರ ಬಳಿ ಚುನಾವಣೆಯಲ್ಲಿ ಸ್ಪರ್ಧಿಸುವ ಬಗ್ಗೆ ಮಾತುಕತೆ ನಡೆಸಿದ್ದಾರೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.   ಬಳ್ಳಾರಿ, ಗದಗ, ಕೊಪ್ಪಳ ಮತ್ತು ರಾಯಚೂರು ಜಿಲ್ಲೆಗಳ ಅಭ್ಯರ್ಥಿಗಳ ಆಯ್ಕೆ ಸೇರಿದಂತೆ ಇಡೀ ಚುನಾವಣಾ ಹೊಣೆಗಾರಿಕೆಯನ್ನು ತಮಗೆ ನೀಡಿದರೆ ತಮ್ಮದೆಂದು ಈಗಾಗಲೇ ತಮ್ಮ ಪರಮಾಪ್ತ ಹಾಗೂ ಸಂಸದ ಶ್ರೀರಾಮಲು ಬಳಿ ಹೇಳಿಕೊಂಡಿದ್ದಾರೆ.

ಸ್ನೇಹಿತನ ಸಂದೇಶವನ್ನು ರಾಮುಲು ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ , ಕೇಂದ್ರ ಸಚಿವರಾದ ಅನಂತಕುಮಾರ್, ಡಿ.ವಿ.ಸದಾನಂದಗೌಡ, ರಾಜ್ಯ ಉಸ್ತುವಾರಿ ಮುರುಳೀಧರ್ ರಾವ್ ಹಾಗೂ ವಿಧಾನಮಂಡಲದ ಉಭಯ ಸದನಗಳ ಪ್ರತಿಪಕ್ಷದ ನಾಯಕರಾದ ಜಗದೀಶ್ ಶೆಟ್ಟರ್, ಈಶ್ವರಪ್ಪ ಬಳಿಯೂ ಚರ್ಚಿಸಿದ್ದಾರೆ.   ಅತ್ತ ಕೇಂದ್ರದಲ್ಲಿ ಅಧಿಕಾರ ವಹಿಸಿರುವ ಪ್ರಧಾನಿ ನರೇಂದ್ರ ಮೋದಿ ಭ್ರಷ್ಟಾಚಾರದ ವಿರುದ್ದ ದಿನಕ್ಕೊಂದು ಅಸ್ತ್ರ ಬಳಸುತ್ತಿದ್ದಾರೆ. ಅಕ್ರಮ ಗಣಿಗಾರಿಕೆ ಮೂಲಕ ಜೈಲು ಪಾಲಾಗಿದ್ದ ರೆಡ್ಡಿಯನ್ನು ಪಕ್ಷಕ್ಕೆ ಕರೆತರುವ ಬಗ್ಗೆ ವರಿಷ್ಠರ ಬಳಿ ಹೇಗೆ ಪ್ರಸ್ತಾಪಿಸಬೇಕೆಂಬ ಜಿಜ್ಞಾಸೆ ರಾಜ್ಯ ನಾಯಕರನ್ನು ಕಾಡುತ್ತಿದೆ.

ಒಂದು ವೇಳೆ ರಾಜ್ಯ ನಾಯಕರ ಒತ್ತಡಕ್ಕೆ ಮಣಿದು ರೆಡ್ಡಿಯನ್ನು ಬಿಜೆಪಿಗೆ ಕರೆತಂದರೆ ಪ್ರತಿಪಕ್ಷಗಳು ಇದನ್ನೇ ಅಸ್ತ್ರವಾಗಿಸಿಕೊಂಡರೆ ಪಕ್ಷಕ್ಕೆ ಹಿನ್ನಡೆಯಾಗಬಹುದೆಂಬ ಆತಂಕ ವರಿಷ್ಠರದ್ದು. ಏಕೆಂದರೆ ರೆಡ್ಡಿ ಮೇಲೆ ದಾಖಲಾಗಿದ್ದ ಪ್ರಕರಣಗಳಿಗೆ ಸಂಬಂಧಿಸಿದಂತೆ ಈವರೆಗೂ ದೇಶದ ಯಾವುದೇ ನ್ಯಾಯಾಲಯಗಳು ಕ್ಲೀನ್ ಚೀಟ್ ಕೊಟ್ಟಿಲ್ಲ.  ಯಡಿಯೂರಪ್ಪ ವಿರುದ್ಧ ಕೇಳಿಬಂದಿದ್ದ ಕೆಲವು ಆರೋಪಗಳಿಗೆ ನ್ಯಾಯಾಲಯದಿಂದ ಕ್ಲೀನ್‍ಚೀಟ್ ಸಿಕ್ಕಿದ್ದರೂ ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರು ಆಗಾಗೆ ಜೈಲಿಗೆ ಹೋಗಿ ಬಂದವರೆಂದು ಹಂಗಿಸುತ್ತಾರೆ. ಇದು ಕೆಲವು ಬಾರಿ ಬಿಜೆಪಿಗೆ ಇರುಸುಮುರುಸು ಉಂಟು ಮಾಡುತ್ತದೆ. ಇನ್ನು ರೆಡ್ಡಿ ವಿರುದ್ಧ ಸರಿಸುಮಾರು ಸುಪ್ರೀಂಕೋರ್ಟ್‍ನಿಂದ ಹಿಡಿದು ಕೆಳಹಂತದ ನ್ಯಾಯಾಲಯಗಳಲ್ಲಿ ಒಟ್ಟು 63 ಪ್ರಕರಣಗಳು ದಾಖಲಾಗಿವೆ. ಇದರಲ್ಲಿ ಕೆಲವು ಸೂಕ್ತ ಸಾಕ್ಷಾಧಾರಗಳ ಕೊರತೆಯಿಂದ ರದ್ದು ಗೊಂಡಿರಬಹುದು. ಆದರೆ ಮೀಸಲು ಅರಣ್ಯಪ್ರದೇಶದಲ್ಲಿ ಕಾನೂನುಬಾಹಿರವಾಗಿ ಗಣಿಗಾರಿಕೆ ನಡೆಸಿರುವ ಪ್ರಕರಣ ಸುಪ್ರೀಂಕೋರ್ಟ್‍ನ ಹಸಿರುಪೀಠದಲ್ಲಿ ವಿಚಾರಣೆ ನಡೆಯುತ್ತಿದೆ.ಒಂದು ವೇಳೆ ಪಕ್ಷಕ್ಕೆ ಕರೆತಂದು ರೆಡ್ಡಿ ಮೇಲೆ ದಾಖಲಾಗಿರುವ ಪ್ರಕರಣಗಳು ಸಾಬೀತಾಗಿ ಜೈಲಿಗೆ ಹೋಗುವಂತಾದರೆ ಪಕ್ಷದ ಗತಿ ಏನು ಎಂಬ ಪ್ರಶ್ನೆ ಎಲ್ಲರನ್ನು ಬಿಟ್ಟುಬಿಡದಂತೆ ಕಾಡುತ್ತದೆ. ಈ ಹಿಂದೆ ಆದಾಯಕ್ಕಿಂತ ಹೆಚ್ಚಿನ ಆಸ್ತಿ ಸಂಪಾದಿಸಿದ ಪ್ರಕರಣದಲ್ಲಿ ಸಿಬಿಐ ನ್ಯಾಯಾಲಯ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ದಿ.ಜಯಲಲಿತಾ, ಗೆಳತಿ ಶಶಿಕಲಾ, ಇಳವರಿಸಿ ಹಾಗೂ ಸಾಕುಮಗ ಸುಧಾಕರನ್ ಅವರನ್ನು ಆರೋಪಿಗಳೆಂದು ತೀರ್ಪು ನೀಡಿತ್ತು.

ಕೊನೆಗೆ ಕರ್ನಾಟಕ ಹೈಕೋರ್ಟ್ ಅವರ ಮೇಲಿದ್ದ ಎಲ್ಲ ಪ್ರಕರಣಗಳನ್ನು ರದ್ದುಗೊಳಿಸಿತ್ತು. ಆದರೆ ಇತ್ತೀಚೆಗೆ ಸುಪ್ರೀಂಕೋರ್ಟ್ ಹೈಕೋರ್ಟ್ ಆದೇಶವನ್ನು ರದ್ದುಗೊಳಿಸಿ ಪ್ರಕರಣದ ಆರೋಪಿಗಳಿಗೆ ನಾಲ್ಕು ವರ್ಷ ಜೈಲು ಶಿಕ್ಷೆ ವಿಧಿಸಿತ್ತು. ಹೀಗಾಗಿ ರೆಡ್ಡಿ ಎಂದಿದ್ದರೂ ಪಕ್ಷಕ್ಕೆ ಬಿಸಿ ತುಪ್ಪ ಎಂಬುದು ಬಿಜೆಪಿ ನಾಯಕರಿಗೆ ಮನವರಿಕೆಯಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin