ಟಿಪ್ಪು ಬಲವಂತದ ಮತಾಂತರ ಮಾಡಿದ್ದರೆ ಕೊಡುಗು-ಮೈಸೂರು ಭಾಗದಲ್ಲಿ ಮುಸ್ಲಿಮರೇ ಹೆಚ್ಚಿರಬೇಕಿತ್ತು

Banjegere-v-Jayapraksha--02
ಬೆಂಗಳೂರು,ನ.9-ಟಿಪ್ಪು ಸುಲ್ತಾನ್ ಬಲವಂತದ ಮತಾಂತರ ಮಾಡಿದ್ದೇ ಆಗಿದ್ದರೆ ಕೊಡುಗು ಮತ್ತು ಮೈಸೂರು ಭಾಗದಲ್ಲಿ ಹಿಂದೂಗಳಿಗಿಂತ ಮುಸ್ಲಿಮರ ಸಂಖ್ಯೆಯೇ ಹೆಚ್ಚಿರಬೇಕಿತ್ತು. ರಾಜಕೀಯ ಲಾಭಕ್ಕಾಗಿ ಇತಿಹಾಸವನ್ನು ತಿರುಚಿ ಟಿಪ್ಪು ಹೆಸರಿಗೆ ಮಸಿ ಬಳಿಯಲಾಗುತ್ತಿದೆ ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಮಾಜಿ ಅಧ್ಯಕ್ಷ ಡಾ.ಬಂಜಗೆರೆ ಜಯಪ್ರಕಾಶ್ ಆಕ್ರೋಶ ವ್ಯಕ್ತಪಡಿಸಿದರು.  ನಗರದ ಸೆಂಟ್ರಲ್ ಕಾಲೇಜಿನಲ್ಲಿ ದಲಿತ ಸಂಘರ್ಷ ಸಮಿತಿ ಆಯೋಜಿಸಿದ್ದ ಮೈಸೂರು ಹುಲಿ ಟಿಪ್ಪು ಸುಲ್ತಾನ್ ದೇಶ ಪ್ರೇಮಿಯೋ, ರಾಷ್ಟ್ರ ದ್ರೋಹಿಯೋ ವಿಷಯ ಕುರಿತ ಇತಿಹಾಸದ ನೈಜ್ಯ ಅನಾವರಣ ವಿಚಾರಗೋಷ್ಠಿಯ್ನನುದ್ದೇಶಿಸಿ ಮಾತನಾಡಿದ ಅವರು, ಟಿಪ್ಪು ಸುಲ್ತಾನ್ ಬಲವಂತದ ಮತಾಂತರ ಮಾಡುತ್ತಿದ್ದ ಎಂದು ಸಂಘ ಪರಿವಾರದವರು ಆರೋಪಿಸಿದ್ದಾರೆ. ಆದರೆ ಅದು ಸುಳ್ಳು. ಮತಾಂತರ ನಡೆದೇ ಇಲ್ಲ ಎಂಬುದು ಸಾಧ್ಯವಿಲ್ಲ. ಹಿಂದೂ ಧರ್ಮದ ಶೋಷಣೆಯನ್ನು ವಿರೋಧಿಸಿ ಅನ್ಯ ಧರ್ಮಗಳತ್ತ ಬಹಳಷ್ಟು ಮಂದಿ ಹೋಗಿದ್ದಾರೆ. ಆದರೆ ಅದನ್ನು ಟಿಪ್ಪು ಸುಲ್ತಾನ್ ಬಲವಂತವಾಗಿ ಮತಾಂತರ ಮಾಡಿಸಿದ್ದಾರೆ ಎಂದು ಪ್ರಚಾರ ಮಾಡಲಾಗುತ್ತದೆ ಎಂದು ಆರೋಪಿಸಿದರು.

ಟಿಪ್ಪು ಸುಲ್ತಾನ್ ದೇಶದ ಪ್ರಥಮ ಸ್ವಾತಂತ್ರ್ಯ ಹೋರಾಟಗಾರ. ಆತ ಅಧಿಕಾರಕ್ಕೆ ಬರುವ ಮೊದಲು ಮೈಸೂರು ಸಂಸ್ಥಾನ 40 ಸಾವಿರ ಚದರ ಮೈಲಿಯಷ್ಟೇ ಇತ್ತು. ಆತ ರಾಜನಾಗಿ ಕೇರಳ ಸೇರಿ ನಾಲ್ಕು ದಿಕ್ಕಿನಲ್ಲೂ ಮೈಸೂರು ಸಂಸ್ಥಾನವನ್ನು ವಿಸ್ತರಿಸಿದ. ರೇಷ್ಮೆಯನ್ನು ತಂದು ನಾಡಿನ ರೈತರಿಗೆ ಅನುಕೂಲ ಮಾಡಿಕೊಟ್ಟ ಎಂದು ವಿವರಿಸಿದರು.  ಟಿಪ್ಪುವನ್ನು ಹಿಂದೂ ವಿರೋಧಿ ಎಂದು ಆರೋಪಿಸಲಾಗುತ್ತಿದೆ. ಮರಾಠರು ಶೃಂಗೇರಿ ಶಾರದಾ ಪೀಠವನ್ನು ಧ್ವಂಸಗೊಳಿಸಿ ಲೂಟಿ ಮಾಡಿದ್ದರ ಬಗ್ಗೆ ಯಾರೂ ಮಾತನಾಡುವುದಿಲ್ಲ. ಮರಾಠರ ದಾಳಿಯ ನಂತರ ಶೃಂಗೇರಿ ಶ್ರೀಗಳ ಬಳಿ ಕ್ಷಮೆ ಕೇಳಿ ಲೂಟಿಯಾದ ಆಭರಣವನ್ನು ಮಾಡಿಸಿಕೊಟ್ಟು ಮಠವನ್ನು ಜೀರ್ಣೋದ್ದಾರ ಮಾಡಿದ. ಆತ ಧರ್ಮಸಹಿಷ್ಣು ಎಂಬುದಕ್ಕೆ ಹಲವಾರು ಉದಾಹರಣೆ ನೀಡಬಹುದು ಎಂದರು.
ದಲಿತ ಸಂಘರ್ಷ ಸಮಿತಿಯ ರಾಜ್ಯಾಧ್ಯಕ್ಷ ಆರ್.ಮೋಹನ್‍ರಾಜ್ ಮಾತನಾಡಿ,ಟಿಪ್ಪು ಸುಲ್ತಾನ್ ಸಾಮ್ರಾಜ್ಯದ ರಕ್ಷಣೆಗಾಗಿ ಬ್ರಿಟಿಷರ ವಿರುದ್ದ ಹೋರಾಟ ನಡೆಸಿದ. ರಾಕೆಟ್ ತಂತ್ರಜ್ಞಾನವನ್ನು ಪರಿಚಯಿಸಿದ. ಕುಣಿಗಲ್‍ನಲ್ಲಿ ಕುದರೆ ಫಾರಂ ಆರಂಭಿಸಿದ, ದಲಿತರಿಗೆ ಭೂಮಿ ಹಂಚಿಕೆ ಮಾಡಿದ. ಇಂಥ ಹಲವಾರು ಜನಪರ ಯೋಜನೆಗಳನ್ನು ಜಾರಿಗೆ ತಂದ ಟಿಪ್ಪು ಸುಲ್ತಾನ್ ಹೆಸರಿಗೆ ಧಕ್ಕೆ ತರುವ ಪ್ರಯತ್ನ ನಡೆಯುತ್ತಿದೆ ಎಂದು ಆರೋಪಿಸಿದರು.
ವಿಚಾರ ಸಂಕಿರಣದಲ್ಲಿ ಎಸ್‍ಡಿಪಿಐನ ಮುಖಂಡನ ಸಾದತ್, ದಸಂಸದ ರಾಜ್ಯ ಸಂಚಾಲಕ ಪರಶುರಾಮ್, ನೀಲನಾಯಕ್ ಮತ್ತಿತರರು ಇದ್ದರು.

Sri Raghav

Admin