ಟಿವಿಗಾಗಿ ವಿಷಕುಡಿದು ಆತ್ಮಹತ್ಯೆಗೆ ಯತ್ನಿಸುವ ನಾಟಕವಾಡಿದ ರೈತ, ವೈರಲ್ ಆಯ್ತು ವಿಡಿಯೋ..!

ಬಳ್ಳಾರಿ, ಅ.13– ದೃಶ್ಯ ಮಾಧ್ಯಮವೊಂದರ ಸಿಬ್ಬಂದಿ ಕ್ರಿಮಿನಾಶಕ ಕುಡಿದು ಆತ್ಮಹತ್ಯೆ ಮಾಡಿಕೊಳ್ಳುವ ನಟನೆ ಮಾಡುವಂತೆ ರೈತನೊಬ್ಬನಿಗೆ ಹೇಳಿ ಮೊದಲೇ ಮನನೊಂದಿದ್ದ ರೈತನನ್ನು ಮತ್ತಷ್ಟು ನೋಯುವಂತೆ ಮಾಡಿದ ಘಟನೆ ಬಳ್ಳಾರಿಯ ಕೊರ್ಲಗುಂದಿ ಗ್ರಾಮದಲ್ಲಿ ನಡೆದಿದೆ. ಬೆಳೆ ಒಣಗಿ ನಷ್ಟ ಅನುಭವಿಸಿದ್ದರಿಂದ ಕ್ರಿಮಿನಾಶಕ ಸೇವಿಸಲು ಮುಂದಾಗಿದ್ದ ರೈತನೊಬ್ಬ ನಂತರ ಸುಮ್ಮನಾಗಿದ್ದ. ಸಾಂತ್ವನ ಹೇಳಲು ಬಂದ ರೈತ ಮುಖಂಡರು, ಸ್ಥಳೀಯರು ಹಾಗೂ ಕೆಲವು ದೃಶ್ಯವಾಹಿನಿಗಳ ವರದಿಗಾರರ ಸೂಚನೆ ಮೇರೆಗೆ ಎರಡು-ಮೂರು ಬಾರಿ ಆತ್ಮಹತ್ಯೆಗೆ ಯತ್ನಿಸಿದಂತೆ ನಟಿಸಿದ ವಿಡಿಯೋ  ನಡೆದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ನಿನ್ನೆ ಬೆಳಗ್ಗೆ ಜಮೀನಿಗೆ ಬಂದಿದ್ದ ರೈತ ಕುರುಬೂರು ಕುಮಾರಪ್ಪ ಒಣಗಿದ್ದ ಮೆಣಸಿನಕಾಯಿ ಬೆಳೆ ಕಂಡು ಹತಾಶೆಯಿಂದ ಕ್ರಿಮಿನಾಶಕ ಸೇವಿಸಲು ಮುಂದಾಗಿದ್ದರು. ಆಗ ಸ್ಥಳದಲ್ಲಿದ್ದ ಕುಟುಂಬದ ಸದಸ್ಯರು ಇವರನ್ನು ತಡೆದಿದ್ದರು. ಹಾಳಾದ ಬೆಳೆಯನ್ನು ಟ್ರ್ಯಾಕ್ಟರ್ ಮೂಲಕ ನಾಶಮಾಡುವ ಕೆಲಸವೂ ನಡೆದಿತ್ತು. ಈತ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ಎಂಬ ವಿಷಯ ತಿಳಿದ ರೈತ ಮುಖಂಡರು, ವರದಿಗಾರರು ಸ್ಥಳಕ್ಕೆ ದಾವಿಸಿ ಕ್ರಿಮಿನಾಶಕ ಕುಡಿದಂತೆ ಮತ್ತೊಮ್ಮೆ ನಟಿಸುವಂತೆ ಆತನ ಕೈಗೆ ಕ್ರಿಮಿನಾಶಕದ ಖಾಲಿ ಡಬ್ಬಿ ನೀಡಿ ನಟಿಸಲು ತಿಳಿಸಿ ಅದನ್ನು ತಡೆಯುವಂತೆ ತಾವು ಕೂಡ ನಟನೆ ಮಾಡಿದ್ದಾರೆ.  ಒಮ್ಮೆ ಇದು ಸರಿಯಾಗಿ ಬರದಿದ್ದಾಗ ಮತ್ತೊಮ್ಮೆ ನಟಿಸುವಂತೆ ಸೂಚನೆ ನೀಡಿದ್ದಾರೆ. ಈ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ. ಇಂತಹ ದೃಶ್ಯಗಳು ಬಂದರೆ ನಿಜವಾಗಿಯೂ ಮನನೊಂದು ರೈತ ಆತ್ಮಹತ್ಯೆ ಮಾಡಿಕೊಂಡರೆ ನಂಬಲು ಸಾಧ್ಯವೇ ಎಂಬ ಪ್ರಶ್ನೆ ಉದ್ಭವವಾಗುತ್ತದೆ.

► Follow us on –  Facebook / Twitter  / Google+

Sri Raghav

Admin