ಡಿಜಿಟಲ್ ಇಂಡಿಯಾದಿಂದ ಜನಸಾಮಾನ್ಯರ ಬೇಡಿಕೆಗಳು ಶೀಘ್ರ ನೆರವೇರಲಿವೆ

Spread the love

belagam-9

ಬೆಳಗಾವಿ,ಸೆ.16- ತಂತ್ರಜ್ಞಾನದ ಲಾಭ ಪ್ರತಿಯೊಬ್ಬರಿಗೆ ಸಿಗುವಂತಾಗಲು ಕೇಂದ್ರ ಸರಕಾರ ಡಿಜಿಟಲ್ ಇಂಡಿಯಾ ಯೋಜನೆಯನ್ನು ಜಾರಿಗೆ ತಂದಿದ್ದು ಇದರಿಂದ ಮುಂದಿನ ದಿನಗಳಲ್ಲಿ ಸರಕಾರದ ಕೆಲಸ ಮತ್ತು ಜನಸಾಮಾನ್ಯರ ಬೇಡಿಕೆಗಳು ಶೀಘ್ರವಾಗಿ ನೆರವೇರಲಿವೆ ಎಂದು ಸವದತ್ತಿ ಜಿಲ್ಲಾ ಪಂಚಾಯತ ಸದಸ್ಯರಾದ ಅಜೀಲ .ಕೃ ದೇಸಾಯಿ ತಿಳಿಸಿದರು.ಕೇಂದ್ರ ಸರಕಾರದ ಕ್ಷೇತ್ರ ಪ್ರಚಾರ ನಿರ್ದೇಶನಾಲಯ ಧಾರವಾಡ ಮತ್ತು ವಿಜಯಪುರ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಆರೋಗ್ಯ ಇಲಾಖೆ, ಶಿಕ್ಷಣ ಇಲಾಖೆ, ಬೆಳಗಾವಿ ಮತ್ತು ಗ್ರಾಮ ಪಂಚಾಯತ ಯರಗಟ್ಟಿ ಇವರ ಸಹಯೋಗದೊಂದಿಗೆ ಸವದತ್ತಿ ತಾಲೂಕಿನ ಯರಗಟ್ಟಿ ಗ್ರಾಮದಲ್ಲಿ ಕೇಂದ್ರ ಸರಕಾರದ ವಿವಿಧ ಯೋಜನೆಗಳ ಕುರಿತ ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ರಾಷ್ಟ್ರಪಿತ ಮಹಾತ್ಮಾ ಗಾಂಧಿ ಅವರ ಕನಸನ್ನು ನನಸು ಮಾಡಲು ಜಾರಿಯಲ್ಲಿರುವ ಸ್ವಚ್ಛ ಭಾರತ ಅಭಿಯಾನ ಯೋಜನೆ ಯಶಸ್ವಿಯಾಗಲು ಪ್ರತಿಯೊಬ್ಬರು ಸ್ವಚ್ಛತಾ ಕಾರ್ಯದಲ್ಲಿ ಕೈಜೋಡಿಸಬೇಕು ಎಂದು ಮನವಿ ಮಾಡಿದರು.ಇದೇ ವೇಳೆ, ಹೆಣ್ಣು ರಕ್ಷಿಸಿ ಮತ್ತು ಶಿಕ್ಷಣ ಕೊಡಿಸಿ ಯೋಜನೆ ಕುರಿತು ಮಾತನಾಡಿದ ಸವದತ್ತಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಎಸ್ ಎಲ್ ಭಜಂತ್ರಿ ಅವರು ತಾಲೂಕಿನಲ್ಲಿ ಹೆಣ್ಣು ಮಕ್ಕಳು ಹೆಚ್ಚಿನ ಸಂಖೈಯಲ್ಲಿ ಶಾಲೆಗಳಿಗೆ ದಾಖಲಾಗುತ್ತಿರುವುದು ಹೆಮ್ಮೆಯ ವಿಷಯ ಎಂದರು. ಒಟ್ಟಾರೆ ಶೇಕಡ 49 ರಷ್ಟು ಗಂಡು ಮಕ್ಕಳು ದಾಖಲಾದರೇ, ಹೆಣ್ಣು ಮಕ್ಕಳ ದಾಲಖಾತಿ ಶೇಕಡ 51 ಇರುವುದು ಅಂಕಿ ಅಂಶಗಳಿಂದ ತಿಳಿದಿದೆ ಎಂದರು. ಆದರೂ ಹೆಣ್ಣಿನ ಸ್ಥಿತಿ ಅವಹೇಳನಕಾರಿಯಾಗಿದ್ದು ಇದರ ಸುಧಾರಣೆಗೆ ಪ್ರೊಷಕರು ಹೆಣ್ಣು ಮಕ್ಕಳ ಬಗ್ಗೆ ಜಾಗ್ರತೆವಹಿಸಬೇಕು ಎಂದು ಕರೆ ನೀಡಿದರು.
ಸಮಾಜದಲ್ಲಿ ಹೆಣ್ಣು ಸ್ವಾವಲಂಭಿಯಾಗಿ ಬದುಕುವಂತೆ ಮಾಡಲು ಶಿಕ್ಷಕರ ನೇಮಕಾತಿಯಲ್ಲಿ ಮಹಿಳೆಯರಿಗೆ ಶೇ. 50ರಷ್ಟು ಸ್ಥಾನವನ್ನು ಮೀಸಲಿಡ ಲಾಗಿದೆ. ಇದು ಹೆಣ್ಣು ಪುರುಷರಷ್ಟೇ ಗೌರವಯುತವಾಗಿ ಜೀವನ ನೆಡಸಲು ಸರಕಾರ ನೀಡಿರುವ ಬಹು ದೊಡ್ಡ ಕೊಡುಗೆ ಎಂದು ತಿಳಿಸಿದರು. ಸ್ವಚ್ಛ ಭಾರತ ಅಭಿಯಾನ ಕುರಿತು ಉಪನ್ಯಾಸ ನೀಡಿದ ಸೂತಗಟ್ಟಿ ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿಗಳಾದ ಚಂದ್ರಶೇಖರ ಬಾರ್ಕಿ, ಬಯಲು ಮಲ ವಿಸರ್ಜನೆಯಿಂದ ಸುಮಾರು 2 ಕೋಟಿ ಮಕ್ಕಳು ವಾಂತಿಭೈೀದಿಯಿಂದ ಬಳಲಿ ಸಾವನ್ನಪ್ಪುತ್ತಿದ್ದಾರೆ ಎಂದು ವಿಷಾದಿಸಿದರು. ಇದನ್ನು ತಡೆಯಲು ಸರಕಾರದಿಂದ ಸಿಗುವ ಪ್ರೊ ರೀ ಬಳಸಿ ಎಲ್ಲರೂ ಶೌಚಾಲಯ ನಿರ್ಮಿಸಿ ಬಳಸಬೇಕು ಎಂದರು. ಭೂರಹಿತ ಕಾರ್ಮಿಕರಿಗೂ ಶೌಚಾಲಯ ನಿರ್ಮಿಸಿಕೊಳ್ಳಲು ಪ್ರೊ ರೀ ನೀಡಲಾಗುವು ಎಂದರು.
ಬಯಲು ಮಲ ವಿಸರ್ಜನೆಯಿಂದ ಪ್ರತಿ ಕುಟುಂಬವು ಸರಾಸರಿ ವರ್ಷಕ್ಕೆ ಆರು ಸಾವಿರ ರೂಪಾಯಿಗಳನ್ನು ಆರೋಗ್ಯ ಸಂಬಂಧಿತ ಕಾಯಿಲೆಗಳಿಗೆ ವ್ಯಯಿಸುತ್ತಿದೆ ಎಂದರು. ಇದರಿಂದ ಉಳಿಸುವುದಕ್ಕಿಂತ ಕಳೆದುಕೊಳ್ಳುವುದೇ ಹೆಚ್ಚಾಗಿದೆ. ಆದ್ದರಿಂದ ಸರಕಾರದ ಪ್ರೊ ರೀ ಜತೆಗೆ ಸ್ವಲ್ಪ ಹಣವನ್ನು ಸೇರಿಸಿ ಶೌಚಾಲಯ ನಿರ್ಮಿಸಿಕೊಳ್ಳಬೇಕು ಎಂದು ತಿಳಿ ಹೇಳಿದರು. ಡಿಜಿಟಲ್ ಇಂಡಿಯಾ ಕುರಿತು ಮಾತು ಮುಂದುವರೆಸಿದ ಅವರು ಮಾಹಿತಿ ತಂತ್ರಜ್ಞಾನ ಸಾಧನೆ ಮತ್ತು ಸಂಶೋಧನೆ ಜನಗಳಿಗೆ ಸಿಗುವಂತಾಗಲು ಪ್ರತಿ ಗ್ರಾಮಗಳಿಗೆ ಹೈ ಸ್ಪೀಡ್ ಇಂಟರ್‍ನೆಟ್ ಸೌಲಭ್ಯ ಒದಗಿಸಲಾಗಿದ್ದು ಸರಕಾರಿ ಸೇವೆಗಳು ನಿಖರ ಮತ್ತು ತ್ವರಿತವಾಗಿ ನಡೆಯುತ್ತದೆ ಎಂದರು.
ವಿಶೇಷವಾಗಿ ಡಿಜಿಟಲ್ ಲಾಕರ್ ವ್ಯವಸ್ಥೆಯಡಿ ಅಂಕಪಟ್ಟಿಗಳು, ಜನನ ಪ್ರಮಾಣ ಪತ್ರಗಳು ಮತ್ತು ಇನ್ನತರೆ ಎಲ್ಲಾ ದಾಖಲೆಗಳನ್ನು ಸ್ಕ್ಯಾನಿಂಗ್ ಮಾಡಿ ನಂತರ ಅಪ್‍ಲೋಡ್ ಮಾಡಿ ಅಂತರ್ಜಾಲದಲ್ಲಿ ಇಡುವುದರಿಂದ ಸಂಬಂಧಿಸಿದ ಇಲಾಖೆಗಳು ಮತ್ತು ಸಾರ್ವಜನಿಕರು ತಮಗೆ ಬೇಕೆಂದಾಗ ಕಂಪ್ಯೂರ್ ನಲ್ಲಿ ದಾಖಲೆಗಳನ್ನು ಪರಿಶೀಲಿಸಬಹುದು. ಇದರಲ್ಲಿ ವಾಹನ ಚಾಲನ ಪರವಾನಗೆಯನ್ನು ಸಹ ಶೇಖರಿಸಿ ನಂತರ ಪರಿಶೀಲಿಸಬಹುದು ಎಂದು ತಿಳಿಸಿದರು. ಇದರಿಂದ ಎಲ್ಲ ದಾಖಲೆಗಳನ್ನು ಒಂದೇ ಸೂರಿನಡಿ ಪಡೆಯಬಹುದಾಗಿದೆ ಎಂದು ವಿವರಿಸಿದರು. ಬಯೋಮೆಟ್ರಿಕ್ ಹಾಜರಾತಿ ಸಹ ಡಿಜಿಟಲ್ ಇಂಡಿಯಾ ಭಾಗವೇ ಆಗಿದೆ ಎಂದರು.
ಬಹುರಾಷ್ಟ್ರೀಯ ಕಂಪನಿಗಳು ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಸಾವಿರಾರು ಕೋಟಿ ರೂಪಾಯಿ ಬಂಡವಾಳ ಹೂಡಿಕೆ ಮಾಡುತ್ತಿದ್ದು ಇದರಿಂದ ಊದ್ಯೋಗ ಮತ್ತು ಸೇವೆಗಳು ತ್ವರಿತವಾಗಿ ಸಿಗುತ್ತಿವೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಯರಗಟ್ಟಿ ಸಮುದಾಯ ಆರೋಗ್ಯ ಕೇಂದ್ರದ ಕ್ಷೇತ್ರ ಆರೋಗ್ಯ ಅಧಿಕಾರಿ ಅಯ್ ಆರ್ ಗಂಜಿ, ಗ್ರಾಮ ಪಂಚಾಯತ ಸದಸ್ಯರಾದ ಸದಾನಂದ ಹಣಬರ, ಪ್ರಾಥಮಿಕ ಶಾಲೆಯ ಮುಖ್ಯ ಗುರುಗಳಾದ ಎ ಎಮ್ ಬಾಣಾವರ ಯರಗಟ್ಟಿ ಸಹ ಮಾತನಾಡಿದರು.ಸಾಂಸ್ಕೃತಿಕ ಕಾರ್ಯಕ್ರಮದ ಮೂಲಕ ಸಹ ಕೇಂದ್ರದ ಯೋಜನಗಳ ಬಗ್ಗೆ ತಿಳಿವಳಿಕೆ ನೀಡಲಾಯಿತು. ಗ್ರಾಮ ಪಂಚಾಯತ ಅಧ್ಯಕ್ಷರಾದ ಕಸ್ತೂರಿ ಕಡೆಮನಿ ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದರು. ತಾಲೂಕ ಪಂಚಾಯತ್ ಸದಸ್ಯರಾದ ಮಂಜುಳಾ ಕರಿಗೊನ್ನವರ ಯರಗಟ್ಟಿ ಗ್ರಾಮ ಪಂಚಾಯತ ಸರ್ವ ಸದಸ್ಯರು ಹಾಗೂ ಅಂಗನವಾಡಿ ಮೇಲ್ವಿಚಾರಕಿ ಜಿ ಎಮ್ ಮಡಿವಾಳರ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.ಇದಕ್ಕೂ ಮುನ್ನ ಜಾಥಾ ಕಾರ್ಯಕ್ರಮ ನಡೆಯಿತು. ಕ್ಷೇತ್ರ ಪ್ರಚಾರ ನಿರ್ದೇಶನಾಲಯದ ಸಿ.ಕೆ. ಸುರೇಶ್ ಸ್ವಾಗತಿಸಿದರು, ಮುರಳಿ ಕಾರಬಾರಿ ಕಾರ್ಯಕ್ರಮ ನಿರೂಪಿಸಿದರು.

 

 

► Follow us on –  Facebook / Twitter  / Google+

Facebook Comments

Sri Raghav

Admin