ಡಿಪ್ರೆಷನ್‍ನಿಂದ ಬಳಲಿದ್ದ ರಜನಿಗೆ ರಾಜ್ ಗುರುವಾದರು….!

Rajkumar--01

– ಚಿಕ್ಕರಸು

ಬಾಹುಬಲಿಯ ಪ್ರಭಾಸ್ ಬಿಟ್ಟರೆ ಹೊರದೇಶಗಳಲ್ಲಿಯೂ ಕಲಾವಿದನಾಗಿ ಸದ್ದು ಮಾಡಿದ ವ್ಯಕ್ತಿ ಸೂಪರ್ ಸ್ಟಾರ್ ರಜನಿಕಾಂತ್. ರಜನಿಕಾಂತ್ ಎಂದರೆ ಸಾಕು ಕೋಟ್ಯಂತರ ಅಭಿಮಾನಿಗಳಲ್ಲಿ ಮಿಂಚಿನ ಸಂಚಾರ ಉಂಟಾಗುತ್ತದೆ. ಕೋಟಿ ಕೋಟಿ ಅಭಿಮಾನಿಗಳನ್ನು ಸದಾ ಪ್ರಫುಲ್ಲಗೊಳಿಸುವ ಸೂಪರ್ ಸ್ಟಾರ್ ರಜನಿ ಅವರು ಕೂಡ ಒಮ್ಮೆ ಖಿನ್ನತೆಗೊಳಗಾಗಿದ್ದರು. ಅಷ್ಟೇ ಅಲ್ಲ ಚಿತ್ರರಂಗವನ್ನೇ ಬಿಟ್ಟು ಹೋಗಿ ಬಿಡಬೇಕೆಂಬ ನಿರ್ಧಾರವನ್ನು ತೆಗೆದುಕೊಂಡಿದ್ದರು ಎಂದರೆ ನಂಬುತ್ತೀರಾ…?

ನಂಬಲೇಬೇಕು. ಏಕೆಂದರೆ ಇದು ಸತ್ಯ. ಇದೇ ಅಚ್ಚರಿಯ ವಿಷಯವೆಂದರೆ ಇದಕ್ಕಿಂತಲೂ ಅಚ್ಚರಿಯ ಸುದ್ದಿ ಇನ್ನೊಂದಿದೆ. ರಜನಿಕಾಂತ್ ಇಂತಹ ಖಿನ್ನತೆ ಮತ್ತು ಹತಾಶೆ ಸುಳಿಗೆ ಸಿಲುಕಿದಾಗ ಅವರನ್ನು ಕೈ ಹಿಡಿದು ಮೇ¯ಕ್ಕೆತ್ತಿದ್ದು ಯಾರು ಗೊತ್ತೆ? ರಜನಿಕಾಂತ್ ತಮ್ಮ ಬಣ್ಣದ ಬದುಕನ್ನೇ ಬಿಟ್ಟು ಸನ್ಯಾಸಿಯಾಗಲು ಹೊರಟಿದ್ದರು. ಆಗ ಅವರಿಗೆ ಜ್ಞಾನದ ಬೆಳಕು ನೀಡಿ ಅವರನ್ನು ಮಾಮೂಲಿ ಮನುಷ್ಯನನ್ನಾಗಿಸಿದವರು ಬೇರೆ ಯಾರೂ ಅಲ್ಲ. ಕನ್ನಡದ ವರನಟ ಡಾ.ರಾಜ್‍ಕುಮಾರ್.! ಅದು ನಡೆದದ್ದು ಹೀಗೆ… ರಜನಿ ಮಂತ್ರಾಲಯ ಶ್ರೀ ರಾಘವೇಂದ್ರಸ್ವಾಮಿಗಳ ಪರಮ ಭಕ್ತ ಎನ್ನುವುದರಲ್ಲಿ ಎರಡು ಮಾತಿಲ್ಲ. ಇಂತಪ್ಪ ರಜನಿಕಾಂತ್ ತಮ್ಮ 100ನೇ ಚಿತ್ರ ರಾಘವೇಂದ್ರ ಸ್ವಾಮಿಗಳ ಬಗ್ಗೆಯೇ ಇರಬೇಕೆಂಬ ಸಂಕಲ್ಪ ಮಾಡಿದ್ದರು (ಚಿತ್ರದ ನಿರ್ದೇಶಕರು ಎಸ್.ಪಿ. ಮುತ್ತುರಾಮನ್). ಅದು 1985ರ ಸಮಯ. ರಾಘವೇಂದ್ರ ಸ್ವಾಮಿಗಳ ಜೀವನ ಚರಿತ್ರೆ ಸಿನಿಮಾ ಸೆಟ್ಟೇರಿತು. ರಜನಿಯೇ ರಾಘವೇಂದ್ರರ ಪಾತ್ರ ಮಾಡಿದ್ದರು. ರಜನಿಕಾಂತ್ ಮಾಂಸಾಹಾರಿಯಾಗಿದ್ದರೂ ರಾಯರ ಚಿತ್ರ ಮುಗಿಯುವವರೆಗೂ ವ್ರತಧಾರಿಯಾಗಿ ಮಾಂಸಾಹಾರ ಸೇವಿಸದೆ ಕೇವಲ ಒಂದು ಹೊತ್ತು ಶಾಖಾಹಾರ ಸೇವಿಸಿ ಕಾಲ ಹಾಕಿದ್ದರು. ಏಕೆಂದರೆ ಇದು ಅವರ ಅಂತರಂಗದ ದೈವದ ಚಿತ್ರವಾಗಿತ್ತು.

ಫ್ಲ್ಯಾಪ್ ಆಯ್ತು ಚಿತ್ರ:

ಇಷ್ಟಾದರೂ ರಜನಿಯ ಅಭಿಮಾನಿಗಳು ಈ ಚಿತ್ರವನ್ನು ಸ್ವೀಕರಿಸಲಿಲ್ಲ. ರಾಯರ ಸಿನಿಮಾ ಸಂಪೂರ್ಣವಾಗಿ ನೆಲಕಚ್ಚಿತು. ತಮ್ಮ ಆರಾಧ್ಯ ದೈವವನ್ನೇ ಕುರಿತ ಅಪಾರ ನಿರೀಕ್ಷೆಯ ಚಿತ್ರ ಬಾಕ್ಸ್ ಆಫೀಸ್‍ನಲ್ಲಿ ಸೋತದ್ದನ್ನು ಕಂಡ ರಜನಿ ಒಮ್ಮೆ ಬೆಚ್ಚಿಬಿದ್ದರು. ಅಲ್ಲಿಂದ ಅವರು ಏಕಾಂಗಿಯಾಗಿ ಅಜ್ಞಾತವಾಸದಲ್ಲೇ ಇರತೊಡಗಿದರು. ಜನಸಂಪರ್ಕ ಕಡಿದುಕೊಂಡರು. ಸಿನಿಮಾಗಳ ವಿಷಯದಲ್ಲಂತೂ ಅವರು ವೈರಾಗ್ಯ ತಾಳಿಬಿಟ್ಟಿದ್ದರು. ಆಯ್ತು, ಇನ್ನು ಈ ಚಿತ್ರರಂಗದ ಸಹವಾಸವೇ ಬೇಡ. ಎಲ್ಲವನ್ನೂ ತೊರೆದು ಸನ್ಯಾಸ ಸ್ವೀಕರಿಸಿ ಹಿಮಾಲಯದ ಕಡೆಗೆ ನಡೆದು ಬಿಡಬೇಕು ಎಂಬ ನಿಶ್ಚಯಕ್ಕೆ ಬಂದುಬಿಟ್ಟರು ರಜನಿ.

ಅನಿರೀಕ್ಷಿತ:

ಕೆಲವು ದಿನ ಕಳೆಯಿತು. ಆಗ ಇದ್ದಕ್ಕಿದ್ದಂತೆಯೇ ಒಂದು ದಿನ ಪವಾಡವೊಂದು ನೆಡದು ಹೋಯಿತು.! ಯಾವುದೋ ಕಾರ್ಯ ನಿಮಿತ್ತ ಚೆನ್ನೈನಲ್ಲಿ ಹೋಗುತ್ತಿದ್ದ ರಜನಿ ಕಣ್ಣಿಗೆ ರಾಜ್‍ಕುಮಾರ್ ಬಿದ್ದರು. ರಾಜ್ ಎಂದರೆ ರಜನಿಗೆ ಇನ್ನಿಲ್ಲದ ಪ್ರೀತಿ, ಗೌರವ. ಪರಸ್ಪರ ಮಾತನಾಡುವಾಗ ರಜನಿಕಾಂತ್ ತನ್ನ ರಾಯರ ಚಿತ್ರ ಫ್ಲ್ಯಾಪ್ ಆದ ಬಗ್ಗೆ ತಿಳಿಸಿದರು. ಆಗ ರಾಜ್‍ಕುಮಾರ್ ನಾನೂ ಕೂಡ ನೀವು ಮಾಡಿರುವ ರಾಘವೇಂದ್ರ ರಾಯರ ಸಿನಿಮಾ ನೋಡಬೇಕು ಎಂದರು. ರಜನಿಕಾಂತ್ ರಾಜ್‍ಗೆ ತಮ್ಮ ಸಿನಿಮಾದ ಒಂದು ಪ್ರತಿ ಕೊಟ್ಟರು. ಅದನ್ನು ವೀಕ್ಷಿಸಿದ ನಂತರ ರಾಜ್ ಹೇಳಿದ್ದಿಷ್ಟು… ಇಲ್ಲ , ನಾನು ರಾಘವೇಂದ್ರ ಸ್ವಾಮಿಗಳ ಪಾತ್ರ ಮಾಡಿದಾಗಲೂ ಹೀಗೆಯೇ ಆಗಿತ್ತು. ಮೊದಲು ಜನ ಅದನ್ನು ಸ್ವೀಕರಿಸಲಿಲ್ಲ. ಚಿತ್ರ ಬಿದ್ದೇ ಹೋಯಿತು ಎಂದು ನಾವೆಲ್ಲ ಭಾವಿಸಿದೆವು. ಆದರೆ ಆ ಗುರುಗಳ ಕರುಣೆಯಿಂದ ಮತ್ತೆ ನಿಧಾನವಾಗಿ ಜನ ರಾಘವೇಂದ್ರ ಸ್ವಾಮಿಗಳ ಸಿನಿಮಾ ನೋಡಲಾರಂಭಿಸಿದರು. ಚಿತ್ರಮಂದಿರಗಳು ಭರ್ತಿಯಾದವು. ಸಿನಿಮಾ ಸಕ್ಸಸ್ ಆಯ್ತು. ಇದೂ ಅಷ್ಟೇ ಎಂದು ಹೇಳಿದರು.

ರಜನಿಕಾಂತ್‍ಗೆ ಇದು ಸ್ವಲ್ಪ ಮಟ್ಟಿನ ಧೈರ್ಯ ನೀಡಿತ್ತು. ಅಷ್ಟೇ ಅಲ್ಲ, ರಾಜ್ ಯಾವ ಕ್ಷಣದಲ್ಲಿ ಆ ಮಾತು ಹೇಳಿದ್ದರೋ ಗೊತ್ತಿಲ್ಲ. ಆದರೆ ರಜನಿಕಾಂತ್ ಚಿತ್ರ ಮತ್ತೆ ತೆರೆಗೆ ಬಂತು. ಜನ ಮುಗಿಬಿದ್ದು ಸಿನಿಮಾ ನೋಡಿದರು. ಚಿತ್ರ ಗೆದ್ದಿತು. ಇದು ರಜನಿಕಾಂತ್‍ಗೆ ಹೊಸ ಹುಮ್ಮಸ್ಸು ತಂದುಕೊಟ್ಟಿತು. ರಾಯರ ಚಿತ್ರದ ಯಶಸ್ಸಿನ ನಂತರ ರಜನಿಕಾಂತ್ ಹೊಸ ಮನುಷ್ಯರಾದರು. ಅಲ್ಲಿಂದ ಮತ್ತೆ ಅವರು ಹಿಂದಿರುಗಿ ನೋಡಲೇ ಇಲ್ಲ. ಆನಂತರ ಬಂದ ರಜನಿಕಾಂತ್ ಸಿನಿಮಾಗಳು ಎಲ್ಲವೂ ಗಲ್ಲಪೆಟ್ಟಿಗೆಯಲ್ಲಿ ಜಯಭೇರಿ ಬಾರಿಸಿದ ಚಿತ್ರಗಳೇ.

ಮಂತ್ರಾಲಯ ಭೇಟಿ: ಮೇಲೆ ಹೇಳಿದಂತೆ ರಜನಿಕಾಂತ್ ರಾಯರ ಅಂತರಂಗ ಭಕ್ತ. ಆದರೆ ಎಲ್ಲೆಲ್ಲಿಯೂ ದೇವರಿದ್ದಾನೆ ಎಂದು ನಂಬಿದ್ದ ರಜನಿ, ಮನೆಯಲ್ಲೇ ಕುಳಿತು ರಾಯರ ಪ್ರಾರ್ಥನೆ ಮಾಡುತ್ತಿದ್ದರಂತೆ. ಅವರೆಂದೂ ಮಂತ್ರಾಲಯಕ್ಕೆ ಹೋಗಿರಲಿಲ್ಲವಂತೆ.  ಆದರೆ ಒಂದು ದಿನ ರಜನಿ ಕನಸಿನಲ್ಲಿ ಕಾಣಿಸಿಕೊಂಡ ರಾಘವೇಂದ್ರ ಸ್ವಾಮಿಗಳು ಕ್ಷೇತ್ರ ಮಹಾತ್ಮೆ ಬಗ್ಗೆ ತಿಳಿಸಿದರಂತೆ. ಅಂದಿನಿಂದ ರಜನಿ ಮಂತ್ರಾಲಯಕ್ಕೆ ಹೋಗುವ ಪರಿಪಾಠ ಇಟ್ಟುಕೊಂಡರು. ರಜನಿ ಬಗ್ಗೆ ಅನೇಕ ಕಥೆಗಳಿವೆ. ಒಂದು ನೈಜ ಘಟನೆಯನ್ನಿಲ್ಲಿ ಹೇಳಲೇಬೇಕು.

ಬೆಂಗಳೂರಿನಲ್ಲಿರುವ ರಾಯರ ಮಠವೊಂದಕ್ಕೆ ನಗರದ ಮಹಿಳೆಯೊಬ್ಬರು ಪ್ರತಿದಿನ ಭೇಟಿ ನೀಡುತ್ತಿದ್ದರು. ಅದೇ ರೀತಿ ಒಂದುದಿನ ಮಠಕ್ಕೆ ಅವರು ಬಂದಿದ್ದಾಗ ಗರ್ಭಗುಡಿಯ ಬಾಗಿಲಲ್ಲಿ ಹರಕು ಕಾಷಾಯ ವಸ್ತ್ರ ಧರಿಸಿದ ಗಡ್ಡಧಾರಿ ಸಾಧು ಒಬ್ಬ ಧ್ಯಾನಾಸಕ್ತನಾಗಿ ಕುಳಿತಿದ್ದ. ಈ ಮಹಿಳೆ ಮಠ ಪ್ರದಕ್ಷಿಣೆ ಹಾಕಿ ಬರುವಷ್ಟರಲ್ಲಿ ಈ ಸನ್ಯಾಸಿ ಎದ್ದು ದೇವಸ್ಥಾನದ ಪ್ರಾಂಗಣದಲ್ಲಿ ನಡೆದು ಹೋಗುತ್ತಿದ್ದ. ಬಡತನವೇ ಮೂರ್ತಿವೆತ್ತಂತಿದ್ದ ಅವನನ್ನು ನೋಡಿದ ಮಹಿಳೆ ಕನಿಕರದಿಂದ 10 ರೂ. ನೋಟನ್ನು ತೆಗೆದು ಕೊಟ್ಟಳು. ಅದನ್ನು ಸನ್ಯಾಸಿ ಭಯ-ಭಕ್ತಿಗಳಿಂದ ಸ್ವೀಕರಿಸಿ ಆಕೆಗೆ ಕೈ ಮುಗಿದು ಹೊರಟ. ಆಕೆ ಓಡಿಬಂದು, ಸ್ವಾಮೀ, ನಾನು ನಿಮ್ಮ ಬಟ್ಟೆ ನೋಡಿ ಭಿಕ್ಷುಕರೆಂದು ತಿಳಿದೆ. ನನ್ನದು ತಪ್ಪಾಯ್ತು. ದಯವಿಟ್ಟು ಆ ಹತ್ತು ರೂ. ವಾಪಸ್ ಕೊಡಿ. ನನ್ನನ್ನು ಕ್ಷಮಿಸಿ ಎಂದು ಕೇಳಿಕೊಂಡಳು. ಅಮ್ಮಾ … ಅದು ನಿನ್ನ ತಪ್ಪಲ್ಲ. ವಸ್ತುಸ್ಥಿತಿ ಇರುವುದೇ ಹಾಗೆ. ಆ ಭಗವಂತನು ಸದಾ ನನ್ನನ್ನು ನೀನು ಕೂಡ ಎಲ್ಲರಂತೆ ಸಾಧಾರಣ ಮನುಷ್ಯ ಎಂದು ಎಚ್ಚರಿಸುತ್ತಲೇ ಇರುತ್ತಾನೆ. ನೀನು ನೆಪ ಮಾತ್ರ. ಈ ರೀತಿ ನನಗೆ ಎಚ್ಚರಿಕೆ ನೀಡಲು ಯಾವುದೇ ವ್ಯಕ್ತಿಯ ಮೂಲಕ ದೇವರು ಇಂತಹ ಸಂದರ್ಭ ಸೃಷ್ಟಿಸುತ್ತಾನೆ. ನನ್ನ ಎದುರು ಯಾರೂ ಹೆಚ್ಚಲ್ಲ, ಯಾರೂ ಕಡಿಮೆ ಅಲ್ಲ ಎಂಬುದನ್ನು ಪದೇ ಪದೇ ಆ ಭಗವಂತ ನನಗೆ ಮನವರಿಕೆ ಮಾಡಿಕೊಡುತ್ತಲೇ ಇರುತ್ತಾನೆ. ಅಯ್ಯೋ…. ಮೊದಲೇ ನಾನು ರಜನೀಕಾಂತರನ್ನು ಗುರುತಿಸಲಿಲ್ಲವಲ್ಲ ಅಂತ ಆಕೆಕೈ ಕೈ ಹಿಸುಕಿ ಕೊಂಡರಂತೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Sri Raghav

Admin