ಡಿಸೆಂಬರ್ನಲ್ಲಿ ವಿಧಾನಸಭೆ ಚುನಾವಣೆ ಸಾಧ್ಯತೆ, ಬಿಜೆಪಿ ಸರ್ವಸನ್ನದ್ದ : ಬಿಎಸ್ವೈ
ಕಲಬುರಗಿ, ಜೂ.1-ಈಗಿನ ಲೆಕ್ಕಾಚಾರವನ್ನು ಅವಲೋಕಿಸಿದರೆ ಡಿಸೆಂಬರ್ ತಿಂಗಳಿನಲ್ಲಿ ರಾಜ್ಯ ವಿಧಾನಸಭೆಗೆ ಚುನಾವಣೆ ನಡೆದರೂ ಅಚ್ಚರಿ ಇಲ್ಲ. ಪಕ್ಷ ಈಗಾಗಲೇ ಇದಕ್ಕೆ ಅಗತ್ಯ ಸಿದ್ದತೆಯನ್ನು ಪೂರ್ಣಗೊಳಿಸಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆಡಳಿತಾರೂಢ ಕಾಂಗ್ರೆಸ್ನಲ್ಲಿ ನಡೆಯುತ್ತಿರುವ ವಿದ್ಯಮಾನಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ವಿಧಾನಸಭೆ ಚುನಾವಣೆ ಬಹುತೇಕ ಡಿಸೆಂಬರ್ನಲ್ಲಿ ನಡೆಯುವುದು ಶತಸಿದ್ದ ಎಂದು ಭವಿಷ್ಯ ನುಡಿದರು.
ರಾಜ್ಯದಲ್ಲಿ ಯಾವುದೇ ವೇಳೆ ಚುನಾವಣೆ ನಡೆದರೂ ಅದನ್ನು ಎದುರಿಸಲು ಪಕ್ಷ ಸಮರ್ಥವಾಗಿದೆ. ಈಗಾಗಲೇ ಅಭ್ಯರ್ಥಿಗಳ ಆಯ್ಕೆ ಸಂಬಂಧ ಕಾರ್ಯಕರ್ತರಿಂದ ಅಭಿಪ್ರಾಯವನ್ನು ಪಡೆಯಲಾಗುತ್ತದೆ. ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಪಕ್ಷ ಅಧಿಕಾರಕ್ಕೆ ಬರುವುದು ನೂರಕ್ಕೆ ನೂರಷ್ಟು ಖಚಿತ ಎಂದು ಹೇಳಿದರು. ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಅಭ್ಯರ್ಥಿಗಳ ಕೊರತೆ ಇಲ್ಲ. ಕೆಲವು ಕ್ಷೇತ್ರಗಳಲ್ಲಿ 5ರಿಂದ 10 ಅಭ್ಯರ್ಥಿಗಳಿದ್ದಾರೆ. ಅಂತಿಮವಾಗಿ ವರಿಷ್ಠರು ತೆಗೆದುಕೊಳ್ಳುವ ತೀರ್ಮಾನಕ್ಕೆ ಎಲ್ಲರೂ ಬದ್ದರಾಗಿರಬೇಕೆಂದರು.
ಸಿಎಂ ವಿರುದ್ಧ ವಾಗ್ದಾಳಿ:
ಇದೇ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯನವರ ವಿರುದ್ದ ತಮ್ಮ ವಾಗ್ದಾಳಿ ಮುಂದುರೆಸಿದ ಯಡಿಯೂರಪ್ಪ , ಪ್ರತಿದಿನ ಹೆಸರು ಹೇಳಿದಿದ್ದರೆ ಮುಖ್ಯಮಂತ್ರಿಗೆ ನಿದ್ದೆಯೇ ಬರುವುದಿಲ್ಲ ಎಂದು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು. ಹೋದ ಕಡೆಯಲೆಲ್ಲ ಬಿಜೆಪಿ ಹಾಗೂ ನನ್ನನ್ನೇ ಗುರಿಯಾಗಿಟ್ಟುಕೊಂಡು ಸಿದ್ದರಾಮಯ್ಯನವರು ಟೀಕೆ ಮಾಡುತ್ತಾರೆ. ಕನಿಷ್ಠ ದಿನಕ್ಕೆ ಎರಡು ಬಾರಿಯಾದರೂ ಟೀಕೆ ಮಾಡದಿದ್ದರೆ ಅವರಿಗೆ ನಿದ್ದೆ ಬರುವುದಿಲ್ಲ ಎಂದು ಕಾಣುತ್ತದೆ. ಇನ್ನು ಎಷ್ಟು ದಿನ ಈ ರೀತಿ ಟೀಕೆ ಮಾಡುತ್ತಾರೋ ಮಾಡಲಿ ಎಂದು ಯಡಿಯೂರಪ್ಪ ಅಸಮಾಧಾನ ವ್ಯಕ್ತಪಡಿಸಿದರು.
ಸಹಕಾರ ಸಂಘಗಳಿಂದ ರೈತರು ಪಡೆದಿರುವ ಸಾಲವನ್ನು ರಾಜ್ಯ ಸರ್ಕಾರ ಮನ್ನಾ ಮಾಡಲೇ ಬೇಕು. ಯಾವುದೇ ಕಾರಣಕ್ಕೂ ಕೇಂದ್ರದ ಮೇಲೆ ಗೂಬೆ ಪ್ರಯತ್ನ ಮಾಡಬಾರದು. ಮುಖ್ಯಮಂತ್ರಿಗಳ ಕಿವಿ ಹಿಂಡಿಯಾದರೂ ಸಾಲ ಮನ್ನಾ ಮಾಡಿಸುತ್ತೇವೆ ಎಂದು ಯಡಿಯೂರಪ್ಪ ಹೇಳಿದರು. ರೈತರ ಸಾಲಮನ್ನಾ ಮಾಡದಿದ್ದರೆ ಜುಲೈ ತಿಂಗಳಿನಲ್ಲಿ ಬೆಂಗಳೂರಿನಲ್ಲಿ ಬೃಹತ್ ಸಮಾವೇಶ ನಡೆಸಲಾಗುವುದು. ಈಗಲಾದರೂ ಹಠಮಾರಿ ಧೋರಣೆ ಬಿಟ್ಟು ಸಾಲ ಮನ್ನಾ ಮಾಡಲಿ ಎಂದು ಒತ್ತಾಯಿಸಿದರು.
ರಾಜ್ಯಕ್ಕೆ ಏನು ಬೇಕೋ ಅದನ್ನು ಮಾಡುವುದು ಬಿಟ್ಟು ಸಿದ್ದರಾಮಯ್ಯ ಉಳಿದಿದೆಲ್ಲವನ್ನೂ ಮಾಡುತ್ತಾರೆ. ಕೇಂದ್ರದ ಜೊತೆಯು ಉತ್ತಮ ಸಂಪರ್ಕ ಇಟ್ಟುಕೊಂಡಿಲ್ಲ. ಇದರಿಂದ ರಾಜ್ಯಕ್ಕೆ ಬರಬೇಕಾಗಿದ್ದ ಅನೇಕ ಯೋಜನೆಗಳು ಮತ್ತು ಅನುದಾನವು ಕುಂಠಿತಗೊಂಡಿದೆ ಎಂದು ಕಿಡಿಕಾರಿದರು.
< Eesanje News 24/7 ನ್ಯೂಸ್ ಆ್ಯಪ್ >