ಡಿಸೆಂಬರ್ ಅಂತ್ಯದೊಳಗೆ ಪೇಟಿಎಂಗೆ 20 ಸಾವಿರ ಯುವಕರ ನೇಮಕಾತಿ

Paytm

ಬೆಂಗಳೂರು, ಡಿ.8-ಉದ್ಯಮಿಗಳು ಹಾಗೂ ಜನಸಾಮಾನ್ಯರಿಗೆ ನಗದು ರಹಿತ ವ್ಯವಹಾರ ಮಾಡಲು ಅನುಕೂಲ ಕಲ್ಪಿಸಲು ಪೇಟಿಎಂ ದೇಶಾದ್ಯಂತ 20 ಸಾವಿರ ಯುವಕರನ್ನು ಡಿಸೆಂಬರ್ ಒಳಗೆ ನೇಮಕಾತಿ ಮಾಡಿಕೊಳ್ಳಲಿದೆ ಎಂದು ಸಿಇಒ ವಿಜಯ್‍ಶೇಖರ್ ಶರ್ಮಾ ತಿಳಿಸಿದ್ದಾರೆ. ಖಾಸಗಿ ಹೊಟೇಲ್‍ವೊಂದರಲ್ಲಿ ನಡೆದ ಸಮಾರಂಭದಲ್ಲಿ ಮಾತನಾಡಿದ ಅವರು, 2017ರ ಮಾರ್ಚ್‍ವೊಳಗೆ ಪೇಟಿಎಂ ಒಂದು ಪ್ರತ್ಯೇಕ ಪೇ ಬ್ಯಾಂಕ್‍ನ್ನು ಆರಂಭಿಸಲಿದೆ. ಈ ಮೂಲಕ ಪೇಟಿಎಂ ಎಲ್ಲಾ ವ್ಯವಹಾರಗಳು ಮತ್ತಷ್ಟು ಸುಲಲಿತವಾಗಲಿದೆ ಎಂದು ಹೇಳಿದರು.

ನ.8 ರಂದು ಪ್ರಧಾನಿ ನರೇಂದ್ರ ಮೋದಿಯವರು 500 ಹಾಗೂ 1000 ರೂ. ಮುಖಬೆಲೆಯ ನೋಟುಗಳನ್ನು ರದ್ಧತಿ ಮಾಡಿದ ಹಿನ್ನೆಲೆಯಲ್ಲಿ ನಗದು ರಹಿತ ವ್ಯವಹಾರಕ್ಕೆ ಹೆಚ್ಚಿನ ಅವಕಾಶ ಲಭ್ಯವಾಗಿದೆ. ಈ ಹಿನ್ನೆಲೆಯಲ್ಲಿ ದೇಶಾದ್ಯಂತ ಶಾಖೆ ವಿಸ್ತರಿಸಲು ಪೇಟಿಎಂ ಮುಂದಾಗಿದೆ. 2500ಕ್ಕೂ ಹೆಚ್ಚು ಮೊಬೈಲ್‍ಗಳಲ್ಲಿ ಈ ಅಪ್ಲಿಕೇಷನ್ ಬಳಕೆ ಮಾಡಲಾಗುತ್ತಿದ್ದು, 25 ಸಾವಿರ ಮಂದಿ ಇದರಿಂದ ಲಾಭ ಪಡೆದಿದ್ದಾರೆ. ಮುಂದಿನ ದಿನಗಳಲ್ಲಿ ಇದು ಮತ್ತಷ್ಟು ಜನರಿಗೆ ತಲುಪಲಿದೆ.

ಗ್ರಾಹಕರ ಹಾಗೂ ವರ್ತಕರ ಸುರಕ್ಷತೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿದ್ದು, ಯುಪಿಐ ಸಹಯೋಗದೊಂದಿಗೆ ಆಧಾರ್‍ಲಿಂಕ್ ಮಾಡಿಕೊಂಡು ಸುರಕ್ಷಿತ ವ್ಯವಹಾರ ನಡೆಸಲು ಪೇಟಿಎಂ ಸಿದ್ದವಾಗಿದೆ.  ಪೇಟಿಎಂಗಳು ಕೇವಲ ನಗರ ಪ್ರದೇಶಕ್ಕೆ ಮಾತ್ರ ಸೀಮಿತವಾಗಿಲ್ಲ. ಗ್ರಾಮೀಣ ಪ್ರದೇಶದಲ್ಲೂ ಇದರ ಬಳಕೆ ಹೆಚ್ಚಿದ್ದು, ಆ ಭಾಗಗಳಿಂದಲೂ ಹೆಚ್ಚಿನ ಬೇಡಿಕೆ ಬಂದಿದೆ. ಆದರೆ ಈ ಬಗ್ಗೆ ಕೇಳಿ ಬಂದಿರುವ ಆರೋಪಗಳು ಸರಿಯಲ್ಲ ಎಂದು ಅಭಿಪ್ರಾಯಪಟ್ಟರು.

ಮಣಿಪಾಲ್ ಎಜುಕೇಷನ್‍ಟ್ರಸ್ಟ್‍ನ ಮೋಹನದಾಸ್ ಪೈ ಮಾತನಾಡಿ, ಸ್ಮಾರ್ಟ್‍ಫೋನ್‍ಗಳನ್ನು ಇಂದು ಹಲವರು ಬಳಸುತ್ತಿದ್ದಾರೆ. ಹಾಗಾಗಿ ಆಧುನಿಕ ಜಗತ್ತಿಗೆ ಮುನ್ನಡಿ ಇಟ್ಟಿರುವ ಎಲ್ಲರೂ ಇಂತಹ ವ್ಯವಹಾರಗಳನ್ನು ನಡೆಸಲು ಯಾವುದೇ ತೊಂದರೆಯಾಗುವುದಿಲ್ಲ ಎಂದು ಹೇಳಿದರು.  ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿದ ಯುಐಡಿಎಐನ ಮಾಜಿ ಅಧ್ಯಕ್ಷ ನಂದನ್ ನಿಲೇಕಣಿ ಪೇಟಿಎಂ ನಗದು ರಹಿತ ಸೇವೆಗೆ ಉತ್ತಮ ಅವಕಾಶ ಕಲ್ಪಿಸುತ್ತಿದ್ದು, ಇದರ ಬಳಕೆಯಿಂದ ಗ್ರಾಹಕರಿಗೆ ಹಾಗೂ ಉದ್ಯಮಿಗಳಿಗೆ ಅನುಕೂಲವಾಗಲಿದೆ ಎಂದು ವಿವರಿಸಿದರು.

> ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… :  Eesanje News 24/7 ನ್ಯೂಸ್ ಆ್ಯಪ್ –  Click Here to Download 

Sri Raghav

Admin