ತಂಬಾಕು ನಿಯಂತ್ರಣ ತನಿಖಾ ತಂಡ ದಾಳಿ : 42 ಪ್ರಕರಣ ದಾಖಲು
ದಾವಣಗೆರೆ ಆ.25- ಜಿಲ್ಲೆಯ ನಗರ ಪ್ರದೇಶಗಳನ್ನು ಧೂಮಪಾನ ಮುಕ್ತ ನಗರಗಳೆಂದು ಘೋಷಿಸುವ ನಿಟ್ಟಿನಲ್ಲಿ ನಗರದ ವಿವಿಧೆಡೆ ದಾಳಿ ನಡೆಸಿದ ಜಿಲ್ಲಾ ತಂಬಾಕು ನಿಯಂತ್ರಣ ತನಿಖಾ ತಂಡ ಒಟ್ಟು 42 ಪ್ರಕರಣಗಳನ್ನು ದಾಖಲಿಸಿ ದಂಡ ಸಂಗ್ರಹಿಸಿದೆ ಎಂದು ಅಪರ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ತಂಬಾಕು ನಿಯಂತ್ರಣ ಘಟಕದ ಜಿಲ್ಲಾ ನೋಡಲ್ ಅಧಿಕಾರಿ ಇಬ್ರಾಹಿಂ ಮೈಗೂರು ತಿಳಿಸಿದರು. ನಿಯಮಾನುಸಾರ 18 ವರ್ಷದೊಳಗಿನ ಮಕ್ಕಳಿಗೆ ತಂಬಾಕು ಉತ್ಪನ್ನಗಳನ್ನು ಮಾರುವುದು ಹಾಗೂ ಮಾರಾಟ ಮಾಡಿಸುವುದನ್ನು ನಿಷೇಧಿಸಿರುವುದರ ಬಗ್ಗೆ ಶಾಲಾಕಾಲೇಜು, ಶಿಕ್ಷಣ ಸಂಸ್ಥೆಗಳ 100 ಯಾರ್ಡ್ ಅಂತರದಲ್ಲಿ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡದಿರುವುದು ಮತ್ತು ತಂಬಾಕು ಉತ್ಪನ ಪ್ಯಾಕ್ಗಳ ಮೇಲೆ ಎಚ್ಚರಿಕೆ ಚಿನ್ಹೆ ಇಲ್ಲದೆ ಮಾರಾಟ ಮಾಡುವುದನ್ನು ನಿಷೇಧ ಇರುವ ಬಗ್ಗೆ ಮಾಹಿತಿ ನೀಡಿದರು.
ತಂಬಾಕು ನಿಯಂತ್ರಣ ತನಿಖಾ ತಂಡದಲ್ಲಿ ಜಿಲ್ಲಾ ಕ್ಷಯ ರೋಗ ನಿಯಂತ್ರಣಾಧಿಕಾರಿ ಡಾ. ಜಿ.ಡಿ. ರಾಘವನ್, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ಸರೋಜಾಬಾಯಿ, ಮಹಾನಗರ ಪಾಲಿಕೆಯ ಆರೋಗ್ಯ ಮೇಲ್ವಿಚಾರಕ ಯಲ್ಲಪ್ಪ, ಮದನಕುಮಾರ್ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ತ್ರಿಪುಲಾಂಬ, ರಾಜ್ಯ ತಂಬಾಕು ನಿಯಂತ್ರಣ ಘಟಕದ ವಿಭಾಗೀಯ ಸಂಯೋಜಕ ದುಗೇಶ ಎಸ್. ಮಾಚನೂರು, ಆಹಾರ ಮತ್ತು ಸುರಕ್ಷತಾ ಗುಣಮಟ್ಟ ಪ್ರಾಧಿಕಾರದ ಕೊಟ್ರೇಶ್ ಮುಂತಾದವರು ಹಾಜರಿದ್ದರು.