ತಂಬಾಕು ಬೆಳೆಗಾರರ ಬ್ಯಾರನ್ ಲೈಸನ್ಸ್ ನವೀಕರಣಕ್ಕೆ ಕೊನೆ ಅವಕಾಶ
ಹುಣಸೂರು, ಸೆ.15- ತಂಬಾಕು ಬೆಳೆಗಾರರು ಪಡೆದಿರುವ ಬ್ಯಾರನ್ ಲೈಸನ್ಸ್ ನವೀಕರಣಕ್ಕೆ ಇದೇ ಕೊನೆ ಎಂದು ಸಂಸದ ಪ್ರತಾಪ್ಸಿಂಹ ತಿಳಿಸಿದರು.ತಾಲೂಕು ಕಟ್ಟೆಮಳಲವಾಡಿಯ ತಂಬಾಕು ಹರಾಜು ಮಾರುಕಟ್ಟೆಯಲ್ಲಿ 2016-17ನೇ ಸಾಲಿನ ಹರಾಜು ಪ್ರಕ್ರಿಯೆಗೆ ಶಾಸಕ ಎಚ್.ಪಿ.ಮಂಜುನಾಥ್ರೊಂದಿಗೆ ಚಾಲನೆ ನೀಡಿ ಮಾತನಾಡಿದ ಅವರು, ಈ ಬಾರಿ ರೈತರು ಸಂಕಷ್ಟದಲ್ಲಿದ್ದು, ಸರಾಸರಿ ಬೆಲೆ ನೀಡುವಂತೆ ಕಂಪನಿಗಳಲ್ಲಿ ಮನವಿ ಮಾಡಿದ್ದೇನೆ. ಆದ್ದರಿಂದ ರೈತರು ಆತಂಕಗೊಳ್ಳದೆ ಮಾರುಕಟ್ಟೆಯನ್ನು ಅವಲೋಕಿಸಬೇಕೆಂದು ಮನವಿ ಮಾಡಿದರು.
ಇತರೆಡೆಗಳಿಂದ ಖರೀದಿಸಿರುವ ತಂಬಾಕು ಬ್ಯಾರನ್ ಲೈಸನ್ಸನ್ನು ಅಧಿಕೃತಗೊಳಿಸಲು ಈಗಾಗಲೆ ವಾಣಿಜ್ಯಮಂತ್ರಿ ಹಾಗೂ ತಂಬಾಕು ಮಂಡಳಿ ಅಧ್ಯಕ್ಷರೊಂದಿಗೆ ಚರ್ಚಿಸಲಾಗಿದೆ. ಇತರೆಡೆ ಖರೀದಿಸಿರುವ ಇಂತಹ 150 ಪ್ರಕರಣಗಳಿದ್ದು, ಮಂಡಳಿ ಮೇಲೆ ಒತ್ತಡತಂದು ಸರಿಪಡಿಸುತ್ತೇನೆ. ಇದು ಕಡೆಯ ಅವಕಾಶ ಮಾತ್ರವಾಗಿದ್ದು, ಮುಂದೆ ಖರೀದಿಸಿದಲ್ಲಿ ಯಾವುದೇ ಕಾರಣಕ್ಕೂ ಮಂಡಳಿ ಜವಾಬ್ದಾರಿಯಾಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಶಾಸಕ ಮಂಜುನಾಥ್ ಮಾತನಾಡಿ, ಮಳೆ ಮಾಯವಾಗಿ ಬರಗಾಲದ ಸ್ಥಿತಿ ಬಂದೊದಗಿದೆ, ತಂಬಾಕು ಬೆಳೆಗಾರರು ಸಂಕಷ್ಟದಲ್ಲಿದ್ದಾರೆ. ಅವರ ಶ್ರಮಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ, ಪ್ರತಿವರ್ಷ ತಂಬಾಕು ಬೆಳೆಗಾರರು ಸಂಕಷ್ಟದ ಸ್ಥಿತಿಯನ್ನು ಎದುರಿಸುತ್ತಿದ್ದು, ತಂಬಾಕು ಕಂಪನಿಗಳು ರೈತನ ಹಿತ ದೃಷ್ಠಿಯಿಂದ ಹೆಚ್ಚಿನ ಲಾಭ ನಿರೀಕ್ಷಿಸದೆ ಉತ್ತಮ ಬೆಲೆ ನೀಡುವಂತೆ ಕಂಪನಿಗಳಲ್ಲಿ ಮನವಿ ಮಾಡಿದ್ದೇನೆಂದರು.ತಂಬಾಕು ಮಂಡಳಿ ಹರಾಜು ನಿರ್ದೇಶಕ ಬಿಪಿನ್ ಬಿಹಾರಿಚೌದರಿ, ವಕೀಲ ಯೂಗಾನಂದ ಸದಸ್ಯ ಕಿರಣ್ಕುಮಾರ್, ಮಾಜಿ ಸದಸ್ಯ ಬಿ.ಎನ್.ಜಯರಾಂ, ಜಿಪಂ ಸದಸ್ಯೆ ಸಾವಿತ್ರಮ್ಮಮಂಜು, ತಾಪಂ ಅಧ್ಯಕ್ಷೆ ಪದ್ಮಮ್ಮ, ಐಟಿಸಿ ಕಂಪನಿಯ ರಾಜಶೇಖರ್, ಜಿಪಿಐನ ಶ್ರೀನಿವಾಸರೆಡ್ಡಿ, ಹರಾಜು ಅಧೀಕ್ಷಕರಾದ ಪುರುಶೋತ್ತಮರಾಜೇಅರಸ್, ಕಾಶಿರಾಂನಾಯಕ್, ರಮೇಶ್ ಮತ್ತಿತರರಿದ್ದರು.