ತಕ್ಷಣವೇ ಚುನಾವಣೆ ನಡೆದರೆ ರಾಜ್ಯದ 113 ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು : ಸಮೀಕ್ಷೆ

BJP-Rath-Yatra--01

ಬೆಂಗಳೂರು,ಆ.6-ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ರಾಜ್ಯಕ್ಕೆ ಬಂದ ನಂತರ ಮೈಕೊಡವಿ ಆಡಳಿತಾರೂಢ ಕಾಂಗ್ರೆಸ್ ವಿರುದ್ಧ ಬೀದಿಗಿಳಿದಿರುವ ಕಮಲ ಪಡೆಗೆ ಸಂತಸದ ಸುದ್ದಿಯೊಂದು ಹೊರಬಿದ್ದಿದೆ.  2018ರ ವಿಧಾನಸಭೆ ಚುನಾವಣೆಯಲ್ಲಿ ಮಿಷನ್ 150 ಗುರಿಯೊಂದಿಗೆ ಸ್ವಂತ ಬಲದ ಮೇಲೆ ಅಧಿಕಾರ ಹಿಡಿಯಲು ಮುಂದಾಗಿರುವ ಬಿಜೆಪಿ ತಕ್ಷಣವೇ ರಾಜ್ಯದಲ್ಲಿ ಚುನಾವಣೆ ನಡೆದರೆ 113 ಕ್ಷೇತ್ರಗಳಲ್ಲಿ ಗೆಲ್ಲುವ ಮೂಲಕ ಸರಳ ಬಹುಮತ ಬರಲಿದೆ ಎಂದು ಸಮೀಕ್ಷೆಯೊಂದು ಹೇಳಿದೆ.

ದೆಹಲಿ ಮೂಲದ ಸಿಒಪಿಎಸ್(ರಾಜಕೀಯ ಮತ್ತು ಸಾಮಾಜಿಕ ಅಧ್ಯಯನ ಕೇಂದ್ರ) ನಡೆಸಿರುವ ಸಮೀಕ್ಷೆ ಪ್ರಕಾರ ಬಿಜೆಪಿಗೆ 113, ಆಡಳಿತಾರೂಢ ಕಾಂಗ್ರೆಸ್‍ಗೆ 86 ಹಾಗೂ ಜೆಡಿಎಸ್ 25 ಕ್ಷೇತ್ರಗಳಲ್ಲಿ ಗೆಲ್ಲಲಿದೆ ಎಂದು ಹೇಳಿದೆ. ಈ ಹಿಂದೆ ದೇಶದ ವಿವಿಧ ಭಾಗಗಳಲ್ಲಿ ಸಿಒಪಿಎಸ್ ಸಂಸ್ಥೆ ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆಗೂ ಮುನ್ನ ಸಾಕಷ್ಟು ರಾಜ್ಯಗಳಲ್ಲಿ ಸಮೀಕ್ಷೆ ನಡೆಸಿದ್ದು ಫಲಿತಾಂಶ ರುಜುವಾತಾಗಿತ್ತು. ಅನೇಕ ರಾಜಕೀಯ ವಿಶ್ಲೇಷಕರು ಮತ್ತು ಪತ್ರಕರ್ತರು ಕೂಡ ಈ ಸಂಸ್ಥೆ ನೀಡುವ ಯಾವುದೇ ವರದಿಯನ್ನು ನಂಬುತ್ತಾರೆ.

ಇತ್ತೀಚೆಗೆ ನಡೆದ ಉತ್ತರಪ್ರದೇಶ, ಉತ್ತರಾಖಂಡ್‍ನಲ್ಲಿ ಬಿಜೆಪಿ ಅಧಿಕಾರಕ್ಕೆ ಬರುತ್ತದೆ ಎಂದು ಸಂಸ್ಥೆ ಹೇಳಿತ್ತು. ಇದೀಗ ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಲ್ಲಿ ಆಯ್ದ ಮತದಾರರನ್ನು ಸಂದರ್ಶಿಸಿ ಸಮೀಕ್ಷಾ ವರದಿ ತಿಳಿಸಿದೆ.  ಈ ಪ್ರಕಾರ 224 ಕ್ಷೇತ್ರಗಳಲ್ಲಿ ಬಿಜೆಪಿಗೆ 113, ಕಾಂಗ್ರೆಸ್‍ಗೆ 86 ಹಾಗೂ ಜೆಡಿಎಸ್ 25 ಕ್ಷೇತ್ರಗಳಲ್ಲಿ ಮಾತ್ರ ಗೆಲ್ಲುವ ಅವಕಾಶವಿದೆಯಂತೆ. ಆಡಳಿತ ವಿರೋಧಿ ಅಲೆ ಹಾಗೂ ಪ್ರಧಾನಿ ನರೇಂದ್ರ ಮೋದಿ ಮೋಡಿ ಮತದಾರರ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

ಕೈ ಹಿಡಿದ ವಿಸ್ತಾರಕ್:

ಇನ್ನು ಬಿಜೆಪಿ ರಾಜ್ಯ ಸರ್ಕಾರದ ವೈಫಲ್ಯಗಳು ಹಾಗೂ ಕೇಂದ್ರ ಸರ್ಕಾರದ ಸಾಧನೆಗಳನ್ನು ಮನೆ ಮನೆಗೆ ತಲುಪಿಸಲು ಕೈಗೊಂಡಿದ್ದ ವಿಸ್ತಾರಕ್ ಕಾರ್ಯಕ್ರಮ ಬಹುತೇಕ ಯಶಸ್ವಿಯಾಗಿದೆ ಎಂಬುದು ಸಮೀಕ್ಷೆಯಿಂದ ರುಜುವಾತಾಗಿದೆ.  ಸುಮಾರು 36 ಸಾವಿರ ಬಿಜೆಪಿಯ ಸ್ವಯಂ ಕಾರ್ಯಕರ್ತರು ನಡೆಸಿದ ಈ ಯೋಜನೆ ಹಳ್ಳಿಯಿಂದ ಗಲ್ಲಿ ಗಲ್ಲಿವರೆಗೂ ಮೋದಿಯವರ ಸಾಧನೆಯನ್ನು ಜನರ ಬಳಿ ಕೊಂಡೊಯ್ಯುವಲ್ಲಿ ಯಶಸ್ವಿಯಾಗಿದೆ.  ಇನ್ನು ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ 39 ದಿನ 17 ಜಿಲ್ಲೆ , 99 ವಿಧಾನಸಭಾ ಕ್ಷೇತ್ರಗಳಲ್ಲಿ ನಡೆಸಿದ ರೈತ ಸಂಪರ್ಕ ಕಾರ್ಯಕ್ರಮವು ಪಕ್ಷಕ್ಕೆ ಆನೆ ಬಲ ತಂದಿದೆ.
ಪಕ್ಷದೊಳಗಿನ ಆಂತರಿಕ ಕಲಹದ ಬಗ್ಗೆ ಜನರು ಅಷ್ಟು ಗಮನಹರಿಸಿಲ್ಲ. ಬದಲಿಗೆ ಮೋದಿ ಅವರ ಭ್ರಷ್ಟಾಚಾರ ರಹಿತ ಆಡಳಿತ ಯಡಿಯೂರಪ್ಪ ಬೆನ್ನಿಗೆ ನಿಂತಿರುವ ವೀರಶೈವ ಮತಗಳು ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ನಿರ್ಣಾಯಕ ಪಾತ್ರ ವಹಿಸಲಿದೆ.

ಪ್ರದೇಶವಾರು:

ಪ್ರದೇಶವಾರು ವಿಭಾಗದಲ್ಲಿ ಬೆಂಗಳೂರಿನ 28 ವಿಧಾನಸಭಾ ಕ್ಷೇತ್ರಗಳ ಪೈಕಿ ಬಿಜೆಪಿ 16ರಿಂದ 18 ಕಾಂಗ್ರೆಸ್ 6ರಿಂದ 8 ಹಾಗೂ ಜೆಡಿಎಸ್ ಎರಡು ಕ್ಷೇತ್ರಗಳಲ್ಲಿ ಗೆಲ್ಲುವ ಸಂಭವವಿದೆ.  ಮೈಸೂರು ವಿಭಾಗದ 37 ವಿಧಾನಸಭಾ ಕ್ಷೇತ್ರಗಳ ಪೈಕಿ ಕಾಂಗ್ರೆಸ್ 21, ಜೆಡಿಎಸ್ 10ರಿಂದ 12 ಹಾಗೂ ಬಿಜೆಪಿ 3ರಿಂದ 5 ಕ್ಷೇತ್ರ ಗೆಲ್ಲುವ ನಿರೀಕ್ಷೆಯಿದೆ. ಈ ಭಾಗದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಾಯಕತ್ವ ಈಗಲೂ ಗಟ್ಟಿಯಾಗಿದೆ ಎಂಬುದು ಮತದಾರರ ಅಭಿಪ್ರಾಯದಿಂದ ವ್ಯಕ್ತವಾಗಿದೆ.

ಕರಾವಳಿ ಪ್ರದೇಶದ ಮೂರು ಜಿಲ್ಲೆಗಳಾದ ದಕ್ಷಿಣ ಕನ್ನಡ, ಉತ್ತರ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಈ ಬಾರಿ ಬಿಜೆಪಿ ಪ್ರಾಬಲ್ಯ ಮೆರೆಯುವ ಸಂಭವವಿದೆ. ಆರ್‍ಎಸ್‍ಎಸ್ ಕಾರ್ಯಕರ್ತರ ಹಲ್ಲೆ , ಕೆಲವು ಮೂಲಭೂತ ಸಂಘಟನೆಗಳ ಸಮಾಜಘಾತುಕ ದುಷ್ಕøತ್ಯಗಳಿಂದ ಹಿಂದು ಮತಗಳ ದೃವೀಕರಣ ಕಮಲ ಪಕ್ಷಕ್ಕೆ ಅನುಕೂಲವಾಗಲಿದೆ.  ಮೂರು ಜಿಲ್ಲೆಗಳ ಒಟ್ಟು 19 ವಿಧಾನಸಭಾ ಕ್ಷೇತ್ರಗಳ ಪೈಕಿ ಬಿಜೆಪಿ 15, ಕಾಂಗ್ರೆಸ್ 4 ಕ್ಷೇತ್ರಗಳಲ್ಲಿ ಬಂದರೆ ಕರಾವಳಿ ಜಿಲ್ಲೆಗಳಲ್ಲಿ ಜೆಡಿಎಸ್ ಖಾತೆ ತೆರೆಯುವ ಸಾಧ್ಯತೆಗಳಿಲ್ಲ ಎಂದು ಸಮೀಕ್ಷೆಯಲ್ಲಿ ಹೇಳಲಾಗಿದೆ.

ಮಲೆನಾಡು ಜಿಲ್ಲೆಗಳಾದ ಮಡಿಕೇರಿ, ಶಿವಮೊಗ್ಗ, ಚಿಕ್ಕಮಗಳೂರು ಹಾಗೂ ಅರೆಮಲೆನಾಡು ದಾವಣಗೆರೆಯಲ್ಲಿ ಬಿಜೆಪಿ ಪ್ರಾಬಲ್ಯ ಮೆರೆದರೆ ಕೆಲವು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಹಾಗೂ ಉಳಿದ ಕೆಲವು ಕಡೆ ಜೆಡಿಎಸ್ ಎರಡು ರಾಷ್ಟ್ರೀಯ ಪಕ್ಷಗಳಿಗೆ ಸಮಬಲ ಪೈಪೋಟಿ  ನೀಡಲಿದೆ.  ಮಡಿಕೇರಿಯ ಎರಡು ಕ್ಷೇತ್ರಗಳಲ್ಲಿ ಕಮಲ ಅರಳಿದರೆ ಚಿಕ್ಕಮಗಳೂರಿನ ಐದು ಕ್ಷೇತ್ರಗಳ ಪೈಕಿ ಬಿಜೆಪಿ 3-4 ಹಾಗೂ ಜೆಡಿಎಸ್‍ಗೆ ಒಂದು ಸ್ಥಾನ ಲಭಿಸಲಿದೆ. ಶಿವಮೊಗ್ಗದ ಏಳು ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ 5 ಹಾಗೂ ಕಾಂಗ್ರೆಸ್ ಮತ್ತು ಜೆಡಿಎಸ್ ಎರಡು ಕ್ಷೇತ್ರಗಳಲ್ಲಿ ಕಮಲ ಕ್ಷೇತ್ರಕ್ಕೆ ಭಾರೀ ಪೈಪೋಟಿ  ನೀಡಲಿದೆ.  ಭದ್ರಾವತಿ ಮತ್ತು ಸೊರಬ ಕ್ಷೇತ್ರಗಳಲ್ಲಿ ಜೆಡಿಎಸ್ ಬಿಜೆಪಿಗೆ ಪೈಪೋಟಿ  ನೀಡಿದರೆ ಸಾಗರ ಹಾಗೂ ತೀರ್ಥಹಳ್ಳಿ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಕಮಲಕ್ಕೆ ಸೆಡ್ಡು ಹೊಡೆಯಲಿದೆ.   ಅರೆಮಲೆನಾಡಿನ ದಾವಣಗೆರೆಯಲ್ಲಿ ಈ ಬಾರಿ ಬಿಜೆಪಿ 5ರಿಂದ 6 ಕ್ಷೇತ್ರಗಳಲ್ಲಿ ಗೆದ್ದರೆ ಕಾಂಗ್ರೆಸ್ ಎರಡು ಕ್ಷೇತ್ರಗಳಲ್ಲಿ ಹಾಗೂ ಜೆಡಿಎಸ್ ಒಂದು ಕ್ಷೇತ್ರದಲ್ಲಿ ಎರಡು ರಾಷ್ಟ್ರೀಯ ಪಕ್ಷಗಳಿಗೆ ಸ್ಪರ್ಧೆವೊಡ್ಡಲಿದೆ.

ಈ ಜಿಲ್ಲೆಯಲ್ಲಿ 2008ರ ಫಲಿತಾಂಶ ಪುನಾರವರ್ತನೆಯಾಗುವ ಸಂಭವವಿದ್ದು , ಹೊನಾಳಿ, ಚನ್ನಗಿರಿ, ಹರಪನಹಳ್ಳಿ , ಜಗಳೂರು, ದಾವಣಗೆರೆ ಉತ್ತರ ಬಿಜೆಪಿ ಪಾಲಾದರೆ ದಾವಣಗೆರೆ ದಕ್ಷಿಣ , ಹರಿಹರ ಹಾಗೂ ಮಾಯಕೊಂಡ ಕ್ಷೇತ್ರಗಳಲ್ಲಿ ತ್ರಿಕೋನ ಸ್ಪರ್ಧೆ ಏರ್ಪಡಲಿದೆ.

ಬಿಜೆಪಿ ಪ್ರಾಬಲ್ಯ:

ಉತ್ತರ ಕರ್ನಾಟಕದ ಒಟ್ಟು 81 ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಈ ಬಾರಿ ಎಲ್ಲರ ನಿರೀಕ್ಷೆಗಳನ್ನು ತಲೆಕೆಳಗೆ ಮಾಡಿ ಹೆಚ್ಚಿನ ಸ್ಥಾನ ಗಳಿಸುವ ಲಕ್ಷಣಗಳು ಗೋಚರಿಸಿವೆ. ವೀರಶೈವ ಲಿಂಗಾಯಿತ ಪ್ರತ್ಯೇಕ ಧರ್ಮ ಮತದಾರರ ಮೇಲೆ ಗಂಭೀರ ಪರಿಣಾಮ ಬೀರಿಲ್ಲ. ಬದಲಿಗೆ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಈಗಲೂ ಈ ಸಮುದಾಯದ ಜನಪ್ರಿಯ ನಾಯಕನಾಗಿ ಹೊರಹೊಮ್ಮಿದ್ದಾರೆ.   81 ಕ್ಷೇತ್ರಗಳ ಪೈಕಿ ಬಿಜೆಪಿ 50-55, ಕಾಂಗ್ರೆಸ್ 20-25 ಹಾಗೂ ಜೆಡಿಎಸ್ 5-8 ಸ್ಥಾನ ಗಳಿಸುವ ಸಂಭವವಿದೆ. ಹೈದರಾಬಾದ್ ಕರ್ನಾಟಕದಲ್ಲಿ ಕಾಂಗ್ರೆಸ್ ಬಿಜೆಪಿ ನಡುವೆ ಜಿದ್ದಾಜಿದ್ದಿನ ಸಂಭವವಿದ್ದರೆ ಮುಂಬೈ ಕರ್ನಾಟಕದಲ್ಲಿ ಬಿಜೆಪಿ ಭಾರೀ ಮುನ್ನಡೆ ಗಳಿಸುವ ಸಾಧ್ಯತೆ ಇದೆ ಎಂದು ಸಮೀಕ್ಷೆ ಹೇಳಿದೆ.

ಕಾವೇರಿಯಲ್ಲಿ ಜೆಡಿಎಸ್:

ಇನ್ನು ವಿಧಾನಸಭಾ ಚುನಾವಣೆಯಲ್ಲಿ ಕಿಂಗ್ ಮೇಕರ್ ಸ್ಥಾನಮಾನದ ನಿರೀಕ್ಷೆಯಲ್ಲಿರುವ ಕಾವೇರಿ ಜಲಾಯನ ತೀರಾ ಪ್ರದೇಶಗಳಾದ ರಾಮನಗರ, ಮಂಡ್ಯ, ಬೆಂಗಳೂರು ಗ್ರಾಮಾಂತರ, ಹಾಸನ ಹಾಗೂ ತುಮಕೂರು ಜಿಲ್ಲೆಗಳಲ್ಲಿ ಹೆಚ್ಚಿನ ಸ್ಥಾನ ಗಳಿಸಲಿದೆ.   ಮತ ಗಳಿಕೆಯಲ್ಲಿ ಎರಡು ರಾಷ್ಟ್ರೀಯ ಪಕ್ಷಗಳಿಗೆ ಜೆಡಿಎಸ್ ಸಮಬಲದ ಸ್ಪರ್ಧೆ ಒಡ್ಡಲಿದೆಯಾದರೂ ಸ್ಥಾನ ಗಳಿಕೆಯಲ್ಲಿ ಹಿಂದೆ ಬೀಳಲಿದೆ.  ಕೆಲ ದಿನಗಳ ಹಿಂದೆ ಸಿ4 ಸಂಸ್ಥೆ ನಡೆಸಿದ ಸಮೀಕ್ಷೆಯಲ್ಲಿ ಸ್ಪಷ್ಟ ಬಹುಮತದೊಂದಿಗೆ ಅಧಿಕಾರ ಹಿಡಿಯಲಿದೆ ಎಂದು ಹೇಳಿತ್ತು. ಆದರೆ ಇದೀಗ ಸಿಒಪಿಎಸ್ ಸಂಸ್ಥೆ ನಡೆಸಿರುವ ಸಮೀಕ್ಷೆ ಪ್ರಕಾರ ಕರ್ನಾಟಕದಲ್ಲಿ ಕಮಲ ಸರಳ ಬಹುಮತದೊಂದಿಗೆ ಅಧಿಕಾರ ಹಿಡಿಯಲಿದೆ ಎಂದು ಹೇಳಿದೆ.
ನಾವು ರಾಜ್ಯದ 100ಕ್ಕೂ ಹೆಚ್ಚು ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾರರ ಅಭಿಪ್ರಾಯವನ್ನು ಪಡೆದವು. ಆಡಳಿತಾರೂಢ ಕಾಂಗ್ರೆಸ್‍ನ ಕೆಲವು ಯೋಜನೆಗಳ ಬಗ್ಗೆ ಜನರಿಗೆ ಪರ-ವಿರೋಧವು ಇದೆ. ಭ್ರಷ್ಟಾಚಾರದ ಬಗ್ಗೆ ಜನತೆ ಅಸಮಾಧಾನಗೊಂಡಿರುವುದು ಬರಗಾಲ ನಿರ್ವಹಣೆಯಲ್ಲಿ ಸರ್ಕಾರ ವಿಫಲವಾಗಿರುವುದರ ಬಗ್ಗೆ ಮತದಾರರು ಆಕ್ರೋಶಗೊಂಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಜನಪ್ರಿಯತೆ, ವೀರಶೈವ ಮತಗಳು, ಯಡಿಯೂರಪ್ಪ ಪರ ಇದ್ದರೆ , ಒಕ್ಕಲಿಗ ಮತಗಳು ಜೆಡಿಎಸ್‍ಗೆ ಹಾಗೂ ಕಾಂಗ್ರೆಸ್‍ಗೆ ಅಹಿಂದ ಮತಗಳು ಹೆಚ್ಚಿನ ಪ್ರಮಾಣದಲ್ಲಿ ಲಭಿಸಲಿವೆ. ಈ ಹಿಂದೆ ನಮ್ಮ ಸಂಸ್ಥೆ ನಡೆಸಿದ ಸಮೀಕ್ಷೆ ಖಚಿತವಾಗಿಲ್ಲವಾದರೂ ಫಲಿತಾಂಶಕ್ಕೆ ಹತ್ತಿರವಾದ ಸಮೀಕಷಾ ವರದಿಯನ್ನೇ ನೀಡಿತ್ತು.
– ಯತೀಶ್‍ ಬಾಬು, ಕಾಪ್ಸ್ ಸಂಸ್ಥೆ ಅಧ್ಯಕ್ಷ

Sri Raghav

Admin