ತಡೆಗೋಡೆ ಕಾಮಗಾರಿ ಕಳಪೆ : ಆರೋಪ

3

ಮುದ್ದೇಬಿಹಾಳ,ಫೆ.3- ತಾಲೂಕಿನ ಸರೂರ ಗ್ರಾಮದ ಸಮೀಪದಲ್ಲಿರುವ ನಗರ ಪುರಸಭೆಯ ಘನತ್ಯಾಜ್ಯ ವಸ್ತು ಸಂಸ್ಕರಣಾ ಘಟಕದ ತಡೆಗೋಡೆಯನ್ನು ಕಳಪೆಯಾಗಿ ನಿರ್ಮಿಸಲಾಗುತ್ತಿದೆ ಎಂಬ ದೂರುಗಳ ಹಿನ್ನೆಲೆಯಲ್ಲಿ ನಿನ್ನೆ ವಿಜಯಪುರದ ಕ್ಷೇತ್ರ ಅಭಿಯಂತರ ಶಿವರಾಜ ಬಿರಾದಾರ ಕಾಮಗಾರಿಗೆ ಬಳಸುತ್ತಿದ್ದ ಕಟ್ಟಡ ಸಾಮಗ್ರಿಯನ್ನು ಪರೀಕ್ಷಿಸಿದರು.  ಪಟ್ಟಣದಿಂದ ನಾಲ್ಕು ಕಿಮೀ ದೂರದಲ್ಲಿರುವ ಸರೂರ ರಸ್ತೆಯಲ್ಲಿರುವ ಘನತ್ಯಾಜ್ಯ ಸಂಸ್ಕರಣಾ ಘಟಕಕ್ಕೆ ಭೇಟಿ ನೀಡಿ ಕಾಮಗಾರಿ ಸ್ಥಳದಲ್ಲಿ ಹಾಕಿದ್ದ ಮರಳು, ಇಟ್ಟಿಗೆ, ಸಿಮೇಂಟ್‍ನ್ನು ಪರೀಕ್ಷಿಸಿದರು.ಬಳಿಕ ಒಂದಿಷ್ಟು ಮಾದರಿಯನ್ನು ಚೀಲದಲ್ಲಿ ಸಂಗ್ರಹಿಸಿಕೊಂಡರು. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳಪೆ ಕಾಮಗಾರಿ ನಡೆದಿದೆ ಎಂದು ಆರೋಪಿಸಿ ಪುರಸಭೆಎದುರಿಗೆ ಧರಣಿ ನಡೆಸುತ್ತಿದ್ದ ಹಿನ್ನೆಲೆಯಲ್ಲಿ ಇಲ್ಲಿಗೆ ಬಂದಿದ್ದೇನೆ. ಕಾಮಗಾರಿ ಮೇಲ್ನೋಟಕ್ಕೆ ಸರಿಯಾಗಿ ನಡೆದಿದೆ ಎಂದು ಕಾಣಿಸುತ್ತಿದೆ. ಆದರೂ ಕಟ್ಟಡಕ್ಕೆ ಬಳಕೆ ಮಾಡಿರುವ ಸಾಮಗ್ರಿಯ ಮಾದರಿಯನ್ನು ಬೆಂಗಳೂರಿಗೆ ಕಳಿಸಿಕೊಟ್ಟು ತಪಾಸಣೆ ನಡೆಸಲಾಗುತ್ತದೆ.

ವರದಿ ಬಂದ ಬಳಿಕ ಮುಂದಿನ ಕ್ರಮ ಜರುಗಿಸಲಾಗುತ್ತದೆ. ಎಂಟು ದಿನದಲ್ಲಿ ವರದಿ ಬರುವ ಸಾಧ್ಯತೆಗಳಿವೆ ಎಂದು ಅವರು ಹೇಳಿದರು.ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿದ ಬಳಿಕ ಮುಖ್ಯಾಧಿಕಾರಿ ಆರೋಗ್ಯ ವಿಭಾಗದ ಅಧಿಕಾರಿ ಮಾರುತಿ ನಡುವಿನಕೇರಿ ಸುದ್ದಿಗಾರರೊಂದಿಗೆ ಮಾತನಾಡಿ, ಸನ್ 2015-16ನೇ ಸಾಲಿನಲ್ಲಿ 14ನೇ ಹಣಕಾಸು ಯೋಜನೆಯಡಿ 9 ಲಕ್ಷ ರೂ ವೆಚ್ಚದಲ್ಲಿ ಈ ತಡೆಗೋಡೆ ಕಾಮಗಾರಿ ನಿರ್ವಹಿಸಲಾಗುತ್ತಿದೆ. ಪುರಸಭೆ ಎದುರಿಗೆ ಧರಣಿ ನಡೆಸುತ್ತಿದ್ದ ದಲಿತ ಯುವ ಸೇನೆ ಮುಖಂಡ ಪರಶುರಾಮ ಮುರಾಳ ಅವರಿಗೆ ತಡೆಗೋಡೆ ಕಳಪೆ ಎಂದು ಆರೋಪಿಸಿದ ಹಿನ್ನೆಲೆಯಲ್ಲಿ ಅಲ್ಲಿನ ಸಾಮಗ್ರಿಯನ್ನು ತಪಾಸಣೆಗೆ ಕಳಿಸಲಾಗುತ್ತದೆ. ಅಲ್ಲಿಂದ ವರದಿ ಬಂದ ಬಳಿಕ ಮುಂದಿನ ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದ ಹಿನ್ನೆಲೆಯಲ್ಲಿ ಧರಣಿ ಹಿಂದಕ್ಕೆ ಪಡೆದುಕೊಂಡಿದ್ದಾರೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಪುರಸಭೆ ಸದಸ್ಯ ಮಹಿಬೂಬ ಗೊಳಸಂಗಿ ಇದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Sri Raghav

Admin