ತಡೆಗೋಡೆ ದಾಟಲಾಗದೆ ಪರಿತಪಿಸಿದ ಹೆಣ್ಣಾನೆ

Elephant--1

ಹುಣಸೂರು, ಜೂ.8- ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಿಂದ ಆಹಾರ ಅರಸಿ ಹೊರ ಬಂದಿದ್ದ ಕಾಡಾನೆ ಕಾಡಂಚಿನಲ್ಲಿ ನಿರ್ಮಿಸಿದ್ದ ತಡೆಗೋಡೆಯಿಂದಾಗಿ ಕಾಡು ಸೇರಲು ಪರಿಪಾಟಲು ಅನುಭವಿಸಿದ ಘಟನೆ ನಡೆದಿದೆ. ಕಾಡಾನೆಯು ನಾಗರಹೊಳೆ ಉದ್ಯಾನವನದ ಅಂಚಿನ ವೀರನಹೊಸಳ್ಳಿ ವಲಯ ವ್ಯಾಪ್ತಿಯ ಹನಗೋಡು ಹೋಬಳಿಯ ಕೊಳುವಿಗೆ, ಮುದುಗನೂರು ಮಾರ್ಗವಾಗಿ ಹಾದು ಹೋಗಿ ಚಿಕ್ಕ ಹೆಜ್ಜೂರು ಹಾಡಿಗೆ ನುಗ್ಗಿ ಬೈಕೊಂದನ್ನು ಜಖಂಗೊಳಿಸಿದೆ. ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ರೈತರು ಎಚ್ಚೆತ್ತುಕೊಂಡಿದ್ದರಿಂದ ಆನೆ ದಾಳಿಯಿಂದ ಬಚಾವಾಗಿದ್ದಾರೆ. ರಾತ್ರಿ ಲಕ್ಷ್ಮಣ ತೀರ್ಥ ನದಿ ದಾಟಿ ಹೊರ ಬಂದಿರುವ ಹೆಣ್ಣಾನೆಯು ಅಡ್ಡಾಡಿ ದಾರಿಯುದ್ದಕ್ಕೂ ಸಿಕ್ಕ ಬೆಳೆಯನ್ನು ತಿಂದು ಹಾಕಿ ರೈಲ್ವೆ ಹಳಿ ಬೇಲಿ ದಾಟಲಾಗದೆ ಪರಿಪಾಟಲು ಪಟ್ಟಿದೆ.

Bike

ಅಷ್ಟರಲ್ಲಿ ಬೆಳಗಾಗಿದ್ದರಿಂದ ಕಾಡಿನೊಳಗೆ ಹೋಗಲು ಕೊಳುವಿಗೆ-ಮುದುಗನೂರು ಬಳಿ ಅಡ್ಡಾಡುತ್ತಿದ್ದುದನ್ನು ಕಂಡು ಗ್ರಾಮಸ್ಥರು ಜಮಾಯಿಸಿದ್ದರಿಂದ ಗಾಬರಿಗೊಂಡ ಆನೆ ಚಿಕ್ಕಹೆಜ್ಜೂರು ಹಾಡಿಯೊಳಗೆ ನುಗ್ಗಿ ರಮೇಶ್ ಮನೆ ಮುಂದೆ ನಿಲ್ಲಿಸಿದ್ದ ಬೈಕನ್ನು ಜಖಂಗೊಳಿಸಿದೆ.ಹಾಡಿ ಮಂದಿ ಗಾಬರಿಗೊಂಡು ಮನೆ ಸೇರಿಕೊಂಡು ಕೂಗಿಕೊಂಡಿದ್ದರಿಂದ ಆನೆಯು ಕಾಡಂಚಿನ ಕಡೆಗೆ ದೌಡಾಯಿಸಿತಾದರೂ ತಡೆಗೋಡೆ ದಾಟಲಾಗದೆ ಸುತ್ತಮುತ್ತಲಿನಲ್ಲಿ ಓಡಾಡಿ ಭೀತಿ ಹುಟ್ಟಿಸಿತು.

ವಿಷಯ ತಿಳಿದ ವೀರನಹೊಸಳ್ಳಿ ವಲಯ ಅರಣ್ಯಾಧಿಕಾರಿ ಮಧುಸೂಧನ್ ನೇತೃತ್ವದಲ್ಲಿ ಸಿಬ್ಬಂದಿಗಳು ಸ್ಥಳಕ್ಕೆ ದಾವಿಸಿ ಅನೆಯನ್ನು ಕಾಡಿಗಟ್ಟಲು ಕೊಳುವಿಗೆಯ ಶ್ರೀ ರಾಮಲಿಂಗೇಶ್ವರ ದೇವಾಲಯದ ಬಳಿ ಇರುವ ಗೇಟ್ ತೆರೆದು ಪ್ರಯತ್ನಪಟ್ಟರೂ ಆನೆ ಕಾಡು ಸೇರಲು ನಿರಾಕರಿಸಿತು. ಹತ್ತಿರದ ಮತ್ತೊಂದು ಕಡೆ ತಡೆ ಗೋಡೆಯ ಕಂಬಿಗಳನ್ನು ತೆಗೆದು ಜನರ ಸಹಾಯದೊಂದಿಗೆ ಕಡೆಗೂ ಆನೆಯನ್ನು ಕಾಡಿಗಟ್ಟುವಲ್ಲಿ ಸಿಬ್ಬಂದಿ ಯಶಸ್ವಿಯಾದರು.

Sri Raghav

Admin