ತಮಿಳುನಾಡಿನಲ್ಲಿ ತೀವ್ರಗೊಂಡ ಜಲ್ಲಿಕಟ್ಟು ಕ್ರಾಂತಿ : ಮೌನ ಮುರಿಯದ ಕೇಂದ್ರ ಸರ್ಕಾರ

Jellikattu-01

ಚೆನ್ನೈ, ಜ.19-ಐದು ನೂರು ವರ್ಷಗಳಷ್ಟು ಹಳೆಯದಾದ ಜಲ್ಲಿಕಲ್ಲು ಕ್ರೀಡೆಗೆ ಸುಪ್ರೀಂಕೋರ್ಟ್ ವಿಧಿಸಿರುವ ನಿರ್ಬಂಧದ ವಿರುದ್ಧ ತಮಿಳುನಾಡಿನಾದ್ಯಂತ ಭುಗಿಲೆದ್ದಿರುವ ಪ್ರತಿಭಟನೆ ಕ್ರಾಂತಿಯ ಸ್ವರೂಪ ಪಡೆದುಕೊಳ್ಳುತ್ತಿದೆ.. ಲಕ್ಷೋಪಲಕ್ಷ ಜನರ ಬೆಂಬಲದೊಂದಿಗೆ ಪ್ರತಿಭಟನೆ ಮುಂದುವರೆದಿದೆ. ಇತ್ತ ಈ ಕುರಿತು ಸುಪ್ರೀಂಕೋರ್ಟ್ ತೀರ್ಪು ಪ್ರಕಟವಾಗುವ ತನಕ ತಟಸ್ಥವಾಗಿರಲು ಕೇಂದ್ರ ಸರ್ಕಾರ ನಿರ್ಧರಿಸಿದ್ದು, ಬಿಕ್ಕಟ್ಟು ಸದ್ಯಕ್ಕೆ ಇತ್ಯರ್ಥವಾಗುವ ಲಕ್ಷಣಗಳು ಗೋಚರಿಸುತ್ತಿಲ್ಲ.  ಇದಲ್ಲದೇ ನಾಳೆ ತಮಿಳುನಾಡು ಬಂದ್‍ಗೆ ಕರೆ ನೀಡಲಾಗಿದ್ದು, ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ದಕ್ಷಿಣ ಭಾರತೀಯ ಚಲನಚಿತ್ರ ಕಲಾವಿದರ ಸಂಘ ಇಂದಿನಿಂದಲೇ ಬಂದ್ ಆಚರಿಸುತ್ತಿದೆ. ಆಲ್ಲದೇ ನಾಳೆ ಕರೆಸಿರುವ ಬಂದ್‍ಗೂ ಚೆನ್ನೈ ಚಲನಚಿತ್ರ ವಾಣಿಜ್ಯ ಮಂಡಳಿ ಸಹ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದ್ದು, ಒಂದು ದಿನ ನಿರಶನ ನಡೆಸಲು ತೀರ್ಮಾನಿಸಿದೆ.

ರಾಜಧಾನಿ ಚೆನ್ನೈನ ಮರೀನಾ ಬೀಚ್‍ನಲ್ಲಿ ಮೊನ್ನೆ ರಾತ್ರಿಯಿಂದ ನಡೆಯುತ್ತಿರುವ ಭಾರೀ ಪ್ರತಿಭಟನೆ ಇಂದು ಸಹ ಮುಂದುವರಿದಿದೆ. ನಿನ್ನೆಯೂ ಅಹೋರಾತ್ರಿ ಧರಣಿ ನಡೆಸಿದ ಪ್ರತಿಭಟನಾಕಾರರು ಜಲ್ಲಿಕಟ್ಟು ಕ್ರೀಡೆಗೆ ಅನುಮತಿ ನೀಡಲೇಬೇಕೆಂದು ಬಿಗಿಪಟ್ಟು ಹಿಡಿದಿದ್ದು, ಹೋರಾಟದ ಕಾವು ಮತ್ತಷ್ಟು ಏರಿದೆ. ಇಂದು ತಮಿಳುನಾಡಿನ ಬಹುತೇಕ ಜಿಲ್ಲೆಗಳ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿಲಾಗಿದ್ದು, ವಿದ್ಯಾರ್ಥಿಗಳು ಪ್ರತಿಭಟನೆಗೆ ಧುಮುಕ್ಕುತ್ತಲೇ ಇದ್ದು ಮರೀನಾ ಬೀಚ್‍ನಲ್ಲಿ ಜನ ಸಾಗರವೇ ನೆರೆದಿದೆ.  ಮೊನ್ನೆ ಬೆಳಗ್ಗೆ ಕೇವಲ 230 ಜನರಿಂದ ಆರಂಭವಾದ ಪ್ರತಿಭಟನೆಗೆ ಸಂಜೆ ಸಾವಿರಾರು ಜನ ಬೆಂಬಲ ವ್ಯಕ್ತಪಡಿಸಿದ್ದರು, ಆನಂತ ಲಕ್ಷೋಪಲಕ್ಷ ಮಂದಿ ಪ್ರತಿಭಟನೆಗೆ ಸೇರ್ಪಡೆಯಾಗುತ್ತಿದ್ದು, ಕ್ರಾಂತಿಯ ಸ್ವರೂಪ ಪಡೆದುಕೊಂಡಿದ್ದು, ಇಡೀ ದೇಶದ ಗಮನಸೆಳೆದಿದೆ.

ಈ ಮಧ್ಯೆ, ತಮಿಳುನಾಡು ಮುಖ್ಯಮಂತ್ರಿ ಓ. ಪನ್ನೀರ್ ಸೆಲ್ವಂ ಇಂದು ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೈೀಟಿ ಮಾಡಿ ತಮ್ಯ ರಾಜ್ಯದಲ್ಲಿ ಉದ್ಭವಿಸಿರುವ ಪರಿಸ್ಥಿತಿ ಬಗ್ಗೆ ವಿವರಿಸಿದರು.  ನಂ.7 ಲೋಕಕಲ್ಯಾಣ ಮಾರ್ಗದಲ್ಲಿನ ಪ್ರಧಾನಮಂತ್ರಿಯವರ ಅಧಿಕೃತ ನಿವಾಸದಲ್ಲಿ ಮೋದಿ ಅವರನ್ನು ಸೆಲ್ವಂ ಭೈೀಟಿ ಮಾಡಿದರು. ಆದರೆ ಈ ಪ್ರಕರಣ ಸುಪ್ರೀಂಕೋರ್ಟ್‍ನಲ್ಲಿರುವ ಕಾರಣ ಮುಂದಿನ ತೀರ್ಪು ಪ್ರಕಟಗೊಳ್ಳುವವರೆಗೂ ತಟಸ್ಥವಾಗಿರಲು ಕೇಂದ್ರ ಸರ್ಕಾರ ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ.

ಸಂಕ್ರಾಂತಿ (ಪೊಂಗಲ್) ಹಿಂದಿನ ದಿನದಿಂದಲೂ ಸುಪ್ರೀಂಕೋರ್ಟ್ ನಿಲುವನ್ನು ಖಂಡಿಸಿ ಜಲ್ಲಿಕಟ್ಟು ಆಚರಣೆಯ ಕೇಂದ್ರ ಸ್ಥಳ ಮಧುರೈ ಸೇರಿದಂತೆ ತಮಿಳುನಾಡಿನ ವಿವಿಧೆಡೆ ಭಾರೀ ಪ್ರತಿಭಟನೆಗಳು ಮುಂದುವರಿದಿದೆ. ಪೊಲೀಸರೊಂದಿಗೆ ಘರ್ಷಣೆ ಮತ್ತು ಲಾಠಿ ಪ್ರಹಾರಗಳು ನಡೆದು, ಈವರೆಗೆ 450ಕ್ಕೂ ಹೆಚ್ಚು ಮಂದಿ ಬಂಧನಕ್ಕೆ ಒಳಗಾಗಿದ್ದಾರೆ.  ಆದರೆ, ಪ್ರತಿಭಟನೆ ಸಂಕ್ರಾಂತಿ ನಂತರವೂ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ಪ್ರತಿಭಟನೆಗೆ ಸೇರ್ಪಡೆಯಾಗುತ್ತಿರುವ ಯುವಕರು ಮತ್ತು ವಿದ್ಯಾರ್ಥಿಗಳು ದಿನೇ ದಿನೇ ಹೆಚ್ಚಾಗುತ್ತಿದೆ. ಉದ್ರಿಕ್ತ ಗುಂಪನ್ನು ನಿಯಂತ್ರಿಸುವುದು ಪೊಲೀಸರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Sri Raghav

Admin