ತಮಿಳುನಾಡಿನಲ್ಲಿ ನಡೆಯುತ್ತಿದೆ ಹೈಡ್ರಾಮಾ, ಚಿನ್ನಮ್ಮ ಸಿಎಂ ಆಗ್ತಾರಾ..?

Sasikala-Natarajan-007

ಚೆನ್ನೈ/ನವದೆಹಲಿ, ಫೆ.6-ತಮಿಳುನಾಡಿನ ನೂತನ ಮುಖ್ಯಮಂತ್ರಿಯಾಗಿ ಚಿನ್ನಮ್ಮ ಖ್ಯಾತಿಯ ಶಶಿಕಲಾ ನಟರಾಜ್ ಪದಗ್ರಹಣ ಮಾಡಲು ವೇದಿಕೆ ಸಕಲ ರೀತಿಯಲ್ಲೂ ಸಜ್ಜುಗೊಂಡಿದ್ದು, ಇಂದು ಸಂಜೆ ಅಧಿಕಾರ ಸ್ವೀಕಾರದ ದಿನಾಂಕ ಬಗ್ಗೆ ಘೋಷಣೆ ಹೊರಬೀಳಲಿದೆ.   ಶಶಿಕಲಾ ಇಂದೇ ಪದಗ್ರಹಣ ಮಾಡಲಿದ್ದಾರೆ ಎಂದು ಹೇಳಲಾಗಿತ್ತಾದರೂ, ಕೆಲವು ಔಪಚಾರಿಕ ಪ್ರಕ್ರಿಯೆಗಳು ಪೂರ್ಣಗೊಳ್ಳಬೇಕಾದ ಕಾರಣ ದಿನಾಂಕ ನಿಗದಿಯಾಗಿಲ್ಲ.   ತಮಿಳುನಾಡು ಹಂಗಾಮಿ ರಾಜ್ಯಪಾಲ ವಿದ್ಯಾಸಾಗರ ರಾವ್ ಇಂದು ದೆಹಲಿಯಲ್ಲಿ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರನ್ನು ಭೇಟಿ ಮಾಡಿ, ತಮಿಳುನಾಡಿನ ವಿದ್ಯಮಾನಗಳ ಬಗ್ಗೆ ವಿವರಿಸಿದರು.

ಇಂದು ಸಂಜೆ ಅವರು ಚೆನ್ನೈಗೆ ವಾಪಸ್ಸಾಗಲಿದ್ಧಾರೆ. ಸಂಜೆ ಎಐಎಡಿಎಂಕೆ ಶಾಸಕರು ರಾಜ್ಯಪಾಲರ ಮುಂದೆ ಪೆರೇಡ್ ನಡೆಸಿ ಶಶಿಕಲಾ ಅವರಿಗೆ ಪಕ್ಷದ ಶಾಸಕರ ಬೆಂಬಲವನ್ನು ಸಾಬೀತು ಮಾಡಲಿದ್ದಾರೆ. ಇದಾದ ನಂತರ ಶಶಿಕಲಾ ಅವರನ್ನು ವಿದ್ಯಾಸಾಗರ ರಾವ್ ಸರ್ಕಾರ ರಚಿಸಲು ಅಹ್ವಾನ ನೀಡಲಿದ್ದಾರೆ. ಇಂದು ರಾತ್ರಿಯೊಳಗೆ ಪದಗ್ರಹಣ ದಿನಾಂಕ ನಿಗದಿಯಾಗಲಿದೆ ಎಂದು ಮೂಲಗಳು ಹೇಳಿವೆ.   ಈ ಹಿನ್ನೆಲೆಯಲ್ಲಿ ಪಕ್ಷದ ಶಾಸಕರಿಗೆ ಸೂಚನೆ ನೀಡಿರುವ ಮುಖಂಡರು ನಾಲ್ಕು ದಿನಗಳ ಕಾಲ ಚೆನ್ನೈನಿಂದ ಹೊರೆಗೆ ಹೋಗದಂತೆ ತಿಳಿಸಲಾಗಿದೆ.

ಶಶಿಕಲಾ ನಟರಾಜನ್ ತಮಿಳುನಾಡಿನ ಸಿಎಂ ಆಗಲು ಅವಕಾಶ ನೀಡದಂತೆ ಪ್ರಧಾನಿಗೆ ಮನವಿ : 

ತಮಿಳುನಾಡಿನ ನೂತನ ಮುಖ್ಯಮಂತ್ರಿಯಾಗಿ ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ವಿ.ಕೆ.ಶಶಿಕಲಾ ನಟರಾಜನ್ ಪದಗ್ರಹಣಕ್ಕೆ ಸಕಲ ಸಿದ್ದತೆಗಳು ನಡೆದಿರುವಾಗಲೇ. ಅವರು ಅಧಿಕಾರ ಸ್ವೀಕಾರಕ್ಕೆ ಅವಕಾಶ ನೀಡಬಾರದೆಂದು ಆಗ್ರಹಿಸಿ ರಾಜ್ಯಸಭಾ ಸದಸ್ಯೆ ಶಶಿಕಲಾ ಪುಷ್ಟಾ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ. ಇದರೊಂದಿಗೆ ಶಶಿಕಲಾದ್ವಯರ ಬದ್ಧ ವೈರತ್ವ ಮತ್ತಷ್ಟು ತೀವ್ರಗೊಂಡಂತಾಗಿದೆ. ಶಶಿಕಲಾ ನಟರಾಜನ್ ತಮಿಳುನಾಡು ಮುಖ್ಯಮಂತ್ರಿಯಾಗಲು ಅರ್ಹರಲ್ಲ. ಅವರ ವಿರುದ್ಧ ಅನೇಕ ಕ್ರಿಮಿನಲ್ ಪ್ರಕರಣಗಳಿವೆ.

ಅವರು ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡಲು ಅವಕಾಶ ನೀಡಿದರೆ ಇದರಿಂದ ನ್ಯಾಯಾಂಗ ನಿಂದನೆಯಾಗುತ್ತದೆ. ಅವರು ಮುಖ್ಯಮಂತ್ರಿಯಾದರೆ ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಸಂಪೂರ್ಣ ಹದಗೆಡಲಿದೆ ಎಂದು ಅವರು ಮನವಿ ಪತ್ರದಲ್ಲಿ ವಿವರಿಸಿದ್ದಾರೆ.  ಈ ಎಲ್ಲ ಕಾರಣಗಳನ್ನೂ ಪರಿಗಣಿಸಿ ಶಶಿಕಲಾ ನಟರಾಜನ್ ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡುವುದಕ್ಕೆ ತಡೆ ನೀಡಬೇಕೆಂದು ಅವರು ಕೋರಿದ್ದಾರೆ.

ಜೈಲು ಸೇರ್ತಾರಾ?

ತಮಿಳುನಾಡಿನ ನಿಯೋಜಿತ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿರುವ ಶಶಿಕಲಾ ನಟರಾಜನ್ ಒಂದರ ಹಿಂದೊಂದರಂತೆ ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ. ಮುಖ್ಯಮಂತ್ರಿಯಾಗಿ ಆಯ್ಕೆಯಾಗುತ್ತಿದ್ದ ಬೆನ್ನಲ್ಲೇ ಅವರ ಪತಿ ನಟರಾಜನ್ ಆಸ್ಪತ್ರೆ ಸೇರಿದ್ದಾರೆ. ಇನ್ನೊಂದೆಡೆ ಅವರು ಎದುರಿಸುತ್ತಿರುವ ಅಕ್ರಮ ಆಸ್ತಿ ಪ್ರಕರಣದ ತೀರ್ಪು ಹೊರಬೀಳಲು ಮುಹೂರ್ತ ನಿಗದಿಯಾಗಿದೆ.  ಮಾಜಿ ಮುಖ್ಯಮಂತ್ರಿ ದಿವಂಗತ ಜೆ. ಜಯಲಲಿತಾ, ಶಶಿಕಲಾ ಮತ್ತು ಇತರ ಇಬ್ಬರ ಮೇಲಿರುವ ಅಕ್ರಮ ಆಸ್ತಿ ಪ್ರಕರಣದ ತೀರ್ಪು ಮುಂದಿನವಾರ ಹೊರಬೀಳಲಿದೆ. ಒಂದು ವೇಳೆ ಸುಪ್ರೀಂ ಶಶಿಕಲಾ ಅವರನ್ನು ಅಪರಾಧಿ ಎಂದು ಪರಿಗಣಿಸಿದ್ದಲ್ಲಿ ಅವರು ಜೈಲು ಸೇರುವುದು ಖಚಿತ. ಹೀಗಾಗಿ ಶಶಿಕಲಾ ಅವರ ರಾಜಕೀಯ ಮಹಾತ್ವಾಕಾಂಕ್ಷೆಯ ಹಾದಿ ದುರ್ಗಮವಾಗಿರುವುದಂತೂ ಸತ್ಯ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Sri Raghav

Admin