ತಮಿಳುನಾಡಿನಲ್ಲಿ ರಾಜಕೀಯಕ್ಕೆ ಎಂಟ್ರಿ ಕೊಟ್ಟ ಜಯಲಲಿತಾ ಕುಟುಂಬದ ಕುಡಿ ದೀಪಾ

Deepa-Jayalalithaa

ಚೆನ್ನೈ, ಜ.17- ಪುರುಚ್ಚಿ ತಲೈವಿ ಜಯಲಲಿತಾ ನಿಧನಾನಂತರ ತಮಿಳುನಾಡಿನಲ್ಲಿ ತಮ್ಮ ಪ್ರಾಬಲ್ಯದ ಹಿಡಿತವನ್ನು ಜಯಾರ ಪರಮಾಪ್ತೆ ಶಶಿಕಲಾ ನಟರಾಜನ್ ಬಿಗಿಗೊಳಿಸುತ್ತಿರುವಾಗಲೇ ಇನ್ನೊಂದು ಮಹತ್ವದ ಬೆಳವಣಿಗೆಯೊಂದರಲ್ಲಿ ಜಯಾ ಕುಟುಂಬದ ಕುಡಿಯೊಂದು ರಾಜಕೀಯ ಎಂಟ್ರಿ ಕೊಡುವ ಮೂಲಕ ಹೊಸ ಸಂಚಲನ ಮೂಡಿಸಿದೆ.  ರಾಜಧಾನಿ ಚೆನ್ನೈನ ಮರೀನಾ ಬೀಚ್‍ನಲ್ಲಿ ಪಕ್ಷದ ಸಂಸ್ಥಾಪಕ ಡಾ.ಎಂ.ಜಿ.ರಾಮಚಂದ್ರನ್ ಮತ್ತು ಜಯಲಲಿತಾ ಅವರ ಸಮಾಧಿಗೆ ಶ್ರದ್ಧಾಂಜಲಿ ಸಲ್ಲಿಸಿ ನಂತರ ನಡೆದ ಬೃಹತ್ ಸಮಾರಂಭವೊಂದರಲ್ಲಿ ಸಾವಿರಾರು ಬೆಂಬಲಿಗರ ಸಮ್ಮುಖದಲ್ಲಿ ದೀಪಾ ತಮ್ಮ ರಾಜಕೀಯ ರಂಗ ಪ್ರವೇಶವನ್ನು ವಿಧ್ಯುಕ್ತವಾಗಿ ಘೋಷಿಸಿದರು.

ಈ ಪ್ರಕಟಣೆ ಹೊರ ಬೀಳುತ್ತಿದ್ದಂತೆ ಅಣ್ಣಾಡಿಎಂಕೆ ಕಾರ್ಯಕರ್ತರು ಮತ್ತು ಶಶಿಕಲಾ ವಿರೋಧಿಗಳು ಪ್ರಚಂಡ ಕರತಾಡನ ಮೊಳಗಿಸುವ ಮೂಲಕ ಹೊಸ ತಲ್ವೈವಿಯನ್ನು ಮುಂದಿನ ರಾಜಕಾರಣದ ಸಂಘರ್ಷಕ್ಕಾಗಿ ಸ್ವಾಗತಿಸಿದರು. ದೀಪಾ ರಾಜಕೀಯ ರಂಗಕ್ಕೆ ಧುಮಿಕಿರುವುದು ಶಶಿಕಲಾ ನಟರಾಜನ್ ಅವರಿಗೆ ನುಂಗಲಾರದ ತುಪ್ಪವಾಗಿ ಪರಿಣಮಿಸಿದೆ. ಇತ್ತೀಚೆಗಷ್ಟೆ ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಂಡ ಶಶಿಕಲಾ ಬೆಂಬಲಿಗರಿಗೂ ಇದು ನುಂಗಲಾರದ ಬಿಸಿ ತುಪ್ಪವಾಗಿ ಪರಿಣಮಿಸಿದೆ.

ಜಯಲಲಿತಾ ಅವರ ಅಣ್ಣನ ಮಗಳಾದ ದೀಪಾಜಯಕುಮಾರ್ ಇಂದು ಅಧಿಕೃತವಾಗಿ ಎಐಎಡಿಎಂಕೆಗೆ ಸೇರ್ಪಡೆಯಾಗುತ್ತಿದ್ದು, ಇದು ರಾಷ್ಟ್ರಮಟ್ಟದಲ್ಲಿ ಭಾರೀ ಕುತೂಹಲ ಕೆರಳಿಸಿದೆ.
ಇದರಿಂದ ಹೊಸ ಆಶಾಕಿರಣವೊಂದು ಮೂಡಿದೆ ಎಂದೇ ಶಶಿಕಲಾ ವಿರೋಧಿಗಳೂ ಆಗಿರುವ ಎಐಎಡಿಎಂಕೆಯ ಒಂದು ಬಣ ಬಣ್ಣಿಸಿದೆ. ತಮ್ಮ ಸೋದರತ್ತೆ ಜಯಲಲಿತಾರನ್ನೇ ಹೋಲುವ 42 ವರ್ಷದ ದೀಪಾರಿಗೆ ಪಕ್ಷದ ಒಂದು ಬಣ ಭಾರೀ ಬೆಂಬಲ ವ್ಯಕ್ತಪಡಿಸಿದ್ದು, ತಮಿಳುನಾಡಿನ ಭವಿಷ್ಯದ ಉಜ್ವಲ ರಾಜಕಾರಣಿ ಎಂದೇ ಬಿಂಬಿಸಿದೆ. ಕಳೆದ ಕೆಲವು ದಿನಗಳಿಂದ ಜಯಲಲಿತಾ ಮತ್ತು ದೀಪಾ ಅವರ ಚಿತ್ರಗಳಿರುವ ಪೋಸ್ಟರ್‍ಗಳು ತಮಿಳುನಾಡಿನಾದ್ಯಂತ ರಾರಾಜಿಸುತ್ತಿವೆ.

ಜಯಲಲಿತಾ ಅವರ ಸಾವಿಗೆ ಶಶಿಕಲಾ ಅವರೇ ಕಾರಣ ಎಂದು ನೇರವಾಗಿ ಮಾಧ್ಯಮಗಳ ಮುಂದೆ ಆರೋಪಿಸಿದ್ದ ದೀಪಾ, ಕೆಲವು ದಿನಗಳ ಹಿಂದೆಯೇ ರಾಜಕೀಯ ರಂಗ ಪ್ರವೇಶಿಸುವ ಇಂಗಿತ ವ್ಯಕ್ತಪಡಿಸಿದ್ದರು. ತಾವು ರಾಜಕೀಯಕ್ಕೆ ಪ್ರವೇಶಿಸುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ಶಶಿಕಲಾ ಅವರಿಗೆ ನೇರವಾಗಿ ತಿರುಗೇಟು ನೀಡಿದ್ದ ದೀಪಾ, ಈ ಬಗ್ಗೆ ಸಧ್ಯದಲ್ಲೇ ಅಧಿಕೃತ ಘೋಷಣೆ ಹೊರಡಿಸುವುದಾಗಿ ತಿಳಿಸಿದ್ದರು. ಜಯಲಲಿತಾ ಅವರಂತೆಯೇ ಸೀರೆ ತೊಟ್ಟು ಹಾವಭಾವಗಳನ್ನು ಅನುಕರಿಸುವ ದೀಪಾ ಅವರಲ್ಲಿ ನಾವು ಕಳೆದುಕೊಂಡ ಅಮ್ಮನನ್ನು ಕಾಣುತ್ತೇವೆ ಎಂದು ಅಭಿಮಾನಿಗಳು ಹಾಗೂ ಪಕ್ಷದ ಕಾರ್ಯಕರ್ತರು ಹೇಳುತ್ತಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Sri Raghav

Admin