ತಮಿಳುನಾಡು-ಬೆಂಗಳೂರು ನಡುವೆ ಸಾರಿಗೆ ಸೇವೆ ಪುನರಾರಂಭ
ಬೆಂಗಳೂರು, ಸೆ.11- ತಮಿಳುನಾಡಿಗೆ ಕಾವೇರಿ ಕಾವೇರಿ ನೀರು ಬಿಡುವಂತೆ ಸುಪ್ರೀಂಕೋರ್ಟ್ ನೀಡಿದ ಆದೇಶದ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ಆಕ್ರೋಶ ಭುಗಿಲೆದ್ದು ರಾಜ್ಯಾದ್ಯಂತ ಪ್ರತಿಭಟನೆ, ಹಿಂಸಾಚಾರ ನಡೆದ ಕಾರಣ ಕಳೆದ ಎಂಟು ದಿನಗಳಿಂದ ಕರ್ನಾಟಕಕ್ಕೆ ತಮಿಳುನಾಡಿನಿಂದ ಸ್ಥಗಿತಗೊಂಡಿದ್ದ ಸರ್ಕಾರ ಬಸ್ಗಳನ್ನು ಪುನರಾರಂಭ ಮಾಡಲಾಗಿದೆ.
ಇಂದು ಬೆಳಗ್ಗೆಯಿಂದ ಕರ್ನಾಟಕದ ನಾನಾ ಭಾಗಗಳಿಗೆ ತಮಿಳುನಾಡಿನಿಂದ ಬಸ್ಗಳು ಆಗಮಿಸುತ್ತಿವೆ. ಕರ್ನಾಟಕಕ್ಕೆ ಬೆಳಗ್ಗೆಯಿಂದಲೇ ತಮಿಳುನಾಡಿನಿಂದ ಬಸ್ಗಳು ಬರಲಾರಂಭಿಸಿವೆ.
ಕಳೆದ ನಾಲ್ಕೈದು ದಿನಗಳಿಂದ ತಮಿಳುನಾಡು ಬಸ್ಗಳು ಗಡಿ ಭಾಗದಲ್ಲಿಯೇ ನಿಂತಿದ್ದವು. ಇಂದು ಈಗಾಗಲೇ 35ಕ್ಕೂ ಹೆಚ್ಚು ಬಸ್ಗಳು ಬೆಂಗಳೂರು ಪ್ರವೇಶಿಸಿವೆ.
ಗಡಿ ಭಾಗದ ಉದ್ಯೋಗಸ್ಥರು, ಜನ ಮತ್ತು ವ್ಯಾಪಾರಸ್ಥರಿಗೆ ಇದರಿಂದ ಅನುಕೂಲವಾಗಿದೆ. ಬಸ್ಗಳಿಲ್ಲದ ಕಾರಣ ಗಡಿ ಭಾಗದ ಜನರಿಗೆ ತೊಂದರೆ ಉಂಟಾಗಿತ್ತು. ಆದರೆ, ಈಗ ಸುಗಮ ಸಂಚಾರ ನಡೆಯುತ್ತಿದೆ. ನಿತ್ಯ ಸುಮಾರು 700ಕ್ಕೂ ಹೆಚ್ಚು ಸರ್ಕಾರಿ ಬಸ್ಗಳು ತಮಿಳುನಾಡಿನಿಂದ ಬೆಂಗಳೂರಿಗೆ ಬಂದು ಹೋಗುತ್ತಿದ್ದವು.