ತಮಿಳುನಾಡು ರಾಜಕೀಯ ಕ್ಷಿಪ್ರ ಕ್ರಾಂತಿ, ಪನ್ನೀರ್‍ಗೆ ಮತ್ತೆ ಸಿಎಂ ಪಟ್ಟ..? ಮತ್ತೆ ಹೈಡ್ರಾಮಾ ಶುರು..?

Palaniswamy

ಚೆನ್ನೈ, ಏ.18- ಅಚ್ಚರಿಯ ರಾಜಕೀಯ ಬೆಳವಣಿಗೆಗಳಿಗೆ ಹೆಸರಾಗಿರುವ ತಮಿಳುನಾಡಿನಲ್ಲಿ ಇದೀಗ ಜೈಲಿನಲ್ಲಿರುವ ಎಐಎಡಿಎಂಕೆ ಪಕ್ಷದ ನಾಯಕಿ ವಿ.ಶಶಿಕಲಾ ಅವರಿಗೆ ಟಾಂಗ್ ಕೊಟ್ಟು ಮಾಜಿ ಮುಖ್ಯಮಂತ್ರಿ ಒ. ಪನ್ನೀರ್ ಸೆಲ್ವಂ ಬಣದ ಜತೆ ಎಐಎಡಿಎಂಕೆ ವಿಲೀನಕ್ಕೆ ಮುಖ್ಯಮಂತ್ರಿ ಎಡಪ್ಪಾಡಿ ಪಳನಿಸ್ವಾಮಿ ಮುಂದಾಗಿರುವುದು ಒಂದು ರೀತಿಯ ಕ್ಷಿಪ್ರ ರಾಜಕೀಯ ಕ್ರಾಂತಿಗೆ ನಾಂದಿ ಹಾಡಿದಂತಾಗಿದೆ.  ಪ್ರಸ್ತುತ ಮುಖ್ಯಮಂತ್ರಿ ಪಳನಿಸ್ವಾಮಿ ಸೂಚನೆ ಮೇರೆಗೆ ಪನ್ನೀರ್ ಸೆಲ್ವಂ ಅವರ ಜತೆ ಮಾತುಕತೆ ನಡೆಸಲು ಸಚಿವ ಜಯಕುಮಾರ್ ಹಾಗೂ ಅಮ್ಮಾ ಎಐಎಡಿಎಂಕೆ ಪಕ್ಷದ ಅಧ್ಯಕ್ಷ ಸೆಂಗೊಟ್ಟಿಯನ್ ಪ್ರಯತ್ನ ನಡೆಸಿದ್ದಾರೆ.

ಸದ್ಯ ಪನ್ನೀರ್ ಸೆಲ್ವಂ ಅವರು ರಾಜ್ಯದಿಂದ ಹೊರಗಿದ್ದು ಅವರ ಬರುವಿಗಾಗಿ ಮುಖ್ಯಮಂತ್ರಿ ಪಳನಿಸ್ವಾಮಿ, ಸಚಿವರು, ಶಾಸಕರು ಹಾಗೂ ಪಕ್ಷದ ನಾಯಕರು ಕಾಯುತ್ತಿದ್ದಾರೆ. ಸದ್ಯ ಅಮ್ಮಾ ಬಣದ ಶಾಸಕರು ಇಲ್ಲಿನ ಕಡಲ ತೀರದಲ್ಲಿರುವ ಯುದ್ಧ ನೌಕೆಯಲ್ಲಿ ಜಲವಿಹಾರ ನಡೆಸುತ್ತಿದ್ದು, ಮುಖ್ಯಮಂತ್ರಿ ಅವರು ಹಡಗಿನಲ್ಲೇ ಶಾಸಕರ ಜತೆ ಮಾತುಕತೆ ನಡೆಸುವ ಸಾಧ್ಯತೆ ಇದೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಇಬ್ಭಾಗವಾಗಿರುವ ಎಐಎಡಿಎಂಕೆ ಪಕ್ಷವನ್ನು ಒಂದುಗೂಡಿಸುವ ಕುರಿತಂತೆ ಪಕ್ಷದ ಶಾಸಕರು ಮತ್ತು ಇತರ ನಾಯಕರಿಗೆ ಮನವರಿಕೆ ಮಾಡಿಕೊಡುವಂತೆ ಮುಖ್ಯಮಂತ್ರಿ ಪಳನಿಸ್ವಾಮಿ ಅವರು ಸಚಿವ ಜೈ ಕುಮಾರ್, ಎಐಎಡಿಎಂಕೆ ಅಮ್ಮಾ ಬಣದ ಅಧ್ಯಕ್ಷ ಸೆಂಗೊಟ್ಟಿಯನ್ ಅವರಿಗೆ ತಾಕೀತು ಮಾಡಿದ್ದಾರೆ ಎನ್ನಲಾಗಿದೆ.ಪನ್ನೀರ್ ಸೆಲ್ವಂ ಅವರ ಆಗಮನಕ್ಕಾಗಿ ಮುಖ್ಯಮಂತ್ರಿ, ಸಂಪುಟ ಸಚಿವರು ಮತ್ತು ಶಾಸಕರು ಕಾತರದಿಂದ ಕಾಯುತ್ತಿದ್ದಾರೆ. ಪನ್ನೀರ್ ಸೆಲ್ವಂ ಚೆನ್ನೈಗೆ ಬಮದ ತಕ್ಷಣ ಮಾತುಕತೆಗಳು ನಡೆಯಲಿವೆ. ಸಂದರ್ಭ ಬಂದರೆ ಪನ್ನೀರ್ ಸೆಲ್ವಂ ಅವರಿಗೆ ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಡುವುದ್ಕಕೂ ಪಳನಿಸ್ವಾಮಿ ಸಿದ್ಧರಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಇದೇ ವೇಳೆ ಒ.ಪನ್ನೀರ್ ಸೆಲ್ವಂ ಕೂಡ ಪಳನಿಸ್ವಾಮಿ ಪಾಳೆಯದೊಂದಿಗೆ ಮಾತುಕತೆ ನಡೆಸಲು ಸಿದ್ಧರಿದ್ದಾರೆ ಎಂದು ಸಚಿವ ಜೈ ಕುಮಾರ್ ತಿಳಿಸಿದ್ದಾರೆ.

ಈ ಮಧ್ಯೆ ಎಐಎಡಿಎಂಕೆ ಅಮ್ಮಾ ಪಕ್ಷದ ಅಧ್ಯಕ್ಷ ಸೆಂಗೊಟ್ಟಿಯನ್ ಮುಖ್ಯಮಂತ್ರಿ ಎಡಪ್ಪಾಡಿ ಪಳನಿಸ್ವಾಮಿ ಅವರನ್ನು ಭೇಟಿಯಾಗಿ ಮಹತ್ವದ ಮಾತುಕತೆ ನಡೆಸಿದ್ದಾರೆ. ಪಳನಿಸ್ವಾಮಿ ಅವರು ಎರಡೂ ಬಣಗಳ ವಿಲೀನದ ಅವಶ್ವಕತೆಯ ಬಗ್ಗೆ ಎರಡೂ ಬಣಗಳ ಶಾಸಕರಿಗೆ ಸಂಪೂರ್ಣ ಮಾಹಿತಿ ನೀಡುವಂತೆ ಜಿಲ್ಲಾ ಉಸ್ತುವಾರಿ ಸಚಿವರಿಗೆ ತಿಳಿಸಿದ್ದಾರೆ.  ಪಕ್ಷದಲ್ಲಿ ಪ್ರಭುತ್ವ ಸ್ಥಾಪಿಸಲು ಇನ್ನಿಲ್ಲದ ರಾಜಕಾರಣ ಮಾಡುತ್ತಿದ್ದ ವಿ.ಶಶಿಕಲಾ ಮತ್ತು ಅವರ ಪಟಾಲಮ್ಮನ್ನು ಪಕ್ಷದಿಂದಲೇ ಹೊರಹಾಕುವ ತಂತ್ರವನ್ನು ಪಳನಿಸ್ವಾಮಿ ಮತ್ತು ನಾಯಕರು ರೂಪಿಸಿದ್ದಾರೆ ಎಂಬುದು ಮಹತ್ವ ಪಡೆದುಕೊಂಡಿದೆ. ಇದು ನಿಜವೇ ಆಗಿದ್ದರೆ, ತಮಿಳುನಾಡು ರಾಜಕೀಯದಲ್ಲಿ ಮನ್ನಾರ್‍ಗುಡಿ ಗ್ಯಾಂಗ್‍ನ ರಾಜಕಾರಣ ಇತಿಹಾಸದ ಪುಟ ಸೇರಲಿದೆ.

ಎರಡೆಲೆ ಚಿಹ್ನೆಯನ್ನು ತಾವೇ ಪಡೆದುಕೊಳ್ಳಲು ಚುನಾವಣಾ ಆಯೋಗಕ್ಕೆ ಬಹುಕೋಟಿ ರೂಪಾಯಿಗಳ ಲಂಚ ನೀಡಲು ಪಕ್ಷದ ಉಪ ಪ್ರಧಾನ ಕಾರ್ಯದರ್ಶಿ ಟಿಟಿವಿ ದಿನಕರನ್ ಪ್ರಯತ್ನಿಸಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ದೆಹಲಿ ಅಪರಾಧ ವಿಭಾಗದ ಪೊಲೀಸರು ಅವರ ಬಂಧನಕ್ಕೆ ಸಜ್ಜಾಗುತ್ತಿರುವ ಸುದ್ದಿ ನಿನ್ನೆ ಮಾಧ್ಯಮಗಳಲ್ಲಿ ಪ್ರಕಟವಾಗುತ್ತಿದ್ದಂತೆ ತಮಿಳುನಾಡಿನ ರಾಜಕೀಯದಲ್ಲಿ ತಡರಾತ್ರಿ ಇಂತಹ ಬೆಳವಣಿಗೆಗಳು ಉಂಟಾಗಿವೆ.  ಈ ಎಲ್ಲಾ ಮಹತ್ವದ ಬೆಳವಣಿಗೆಗಳ ಕಾರಣದಿಂದಾಗಿ ಪಕ್ಷದ ಮತ್ತು ಸರ್ಕಾರದ ಗೌರವ ಉಳಿಸಿಕೊಳ್ಳಲು ಎರಡೂ ಬಣಗಳ ನಾಯಕರು ಮುಖ್ಯಮಂತ್ರಿ ಪದವಿಯನ್ನು ಒ.ಪನ್ನೀರ್ ಸೆಲ್ವಂ ಅವರಿಗೆ ಬಿಟ್ಟುಕೊಟ್ಟರೂ ಆಶ್ವರ್ಯವಿಲ್ಲ. ಇನ್ನೂ ಇಂದು ಸಂಜೆ ಒಳಗಾಗಿ ಪನ್ನೀರ್ ಸೆಲ್ವಂ ಮತ್ತು ಪಳನಿಸ್ವಾಮಿ ಭವಿಷ್ಯ ನಿರ್ಧಾರವಾಗಲಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Sri Raghav

Admin